ತಿರುಪತಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತಾಧಿಗಳು ಮುಗಿ ಬೀಳುತ್ತಿದ್ದಾರೆ. ದರ್ಶನ ಪಡೆದು ಸುಸ್ತಾಗಿ ಬರುವ ಭಕ್ತಾಧಿಗಳು, ಲಡ್ಡು ಕೌಂಟರ್ ಗಳಲ್ಲಿ ಬಹಳ ಹೊತ್ತು ಕಾದು ಲಾಡನ್ನು ಪಡೆಯಬೇಕಾದ ಪರಿಸ್ಥಿತಿಯಿದೆ. ಇದನ್ನು ಬಳಸಿಕೊಂಡು ಹೆಚ್ಚುವರಿ ಬೆಲೆಗೆ ಲಾಡುಗಳನ್ನು ಹೊರಗೆ ಮಾರಾಟ ಮಾಡಲಾಗುತ್ತಿದೆ.
ಲಡ್ಡು ತಯಾರಿಸುವ ಘಟಕದಿಂದ ಟ್ರೇಗಳಲ್ಲಿ ಲಡ್ಡುಗಳನ್ನು ಜೋಡಿಸಿ, ಕನ್ವೇಯರ್ ಬೆಲ್ಟ್ ಮೂಲಕ ಪ್ರಸಾದ ಮಾರಾಟ ಕೌಂಟರ್ ಬಳಿ ಸಾಗಿಸಲಾಗುತ್ತದೆ. ಅಲ್ಲಿಂದ ಟ್ರಾಲಿಗಳನ್ನು ಬಳಸಿ ಪ್ರಸಾದ ಕೌಂಟರ್‌ಗಳಿಗೆ ಲಡ್ಡುಗಳನ್ನು ತೆಗೆದುಕೊಂಡು ಹೋಗುತ್ತಾರೆ.
ಈ ಕೆಲಸಕ್ಕೆ ನಿಯೋಜನೆಗೊಂಡಿರುವ ನೌಕರರು, ಮಾರ್ಗ ಮಧ್ಯೆ ಲಡ್ಡುಗಳನ್ನು ಕದ್ದು, ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಗೌಪ್ಯ ಮಾಹಿತಿಯು ದೇವಸ್ತಾನದ ವಿಜಿಲೆನ್ಸ್ ಅಧಿಕಾರಿಗಳಿಗೆ ಲಭಿಸಿತು. ಮಾಹಿತಿ ಮೇರೆಗೆ ದೇವಸ್ಥಾನದ ವಿಜಿಲೆನ್ಸ್ ಅಧಿಕಾರಿಗಳು ಲಡ್ಡು ಸಾಗಾಟದ ಮೇಲೆ ನಿಗಾ ವಹಿಸಿದ್ದರು.
ಆ ವೇಳೆ ದೇವಸ್ಥಾನದ ಐವರು ನೌಕರರು 15 ಟ್ರೇಗಳಲ್ಲಿ ಇಟ್ಟಿದ್ದ 750 ಲಾಡುಗಳನ್ನು ಕದ್ದು, ತೆಗೆದುಕೊಂಡು ಹೋಗುವುದನ್ನು ಕಂಡ ವಿಜಿಲೆನ್ಸ್ ಅಧಿಕಾರಿಗಳು ಅವರನ್ನು ಸುತ್ತುವರಿದು ಹಿಡಿದರು. ಅದಲ್ಲದೇ ಈ ಲಾಡು ಖದೀಮರು ಇದುವರೆಗೂ 35 ಸಾವಿರ ಲಡ್ಡುಗಳನ್ನು ಕದ್ದು ಹೆಚ್ಚುವರಿ ಬೆಲೆಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ದೇವಸ್ಥಾನದ 5 ಜನ ನೌಕರರನ್ನು ಬಂಧಿಸಿರುವ ವಿಜಿಲೆನ್ಸ್ ಅಧಿಕಾರಿಗಳು, ಈ ಘಟನೆಯಲ್ಲಿ ಇನ್ನು ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.