ಡಿ.ಸಿ.ಪ್ರಕಾಶ್ ಸಂಪಾದಕರು.
ಭಾರತದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಹೊಸ ಕಾನೂನನ್ನು ಜಾರಿ ಗೊಳಿಸುತ್ತಾರೆ ಎಂದು ತಾನು ನಂಬಿರುವುದಾಗಿ ವಿಶ್ವ ಹಿಂದೂ ಪರಿಷತ್ ಮಾಜಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.
ಛತ್ತೀಸ್‌ಗಢದ ರಾಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಭಾರತದಲ್ಲಿ ಜನಸಂಖ್ಯೆಯ ಬೆಳವಣಿಗೆಯು ಟೈಂ ಬಾಂಬ್‌ನಂತಿದೆ. ಅದರ ಸ್ಪೋಟ ಮತ್ತು ಅದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಹೊಸ ಕಾನೂನಿನ ಅಗತ್ಯವಿದೆ. ದೇಶದಲ್ಲಿ ಜನಸಂಖ್ಯೆ ಹೆಚ್ಚಾದಂತೆ ನಗರಗಳು ಮತ್ತು ಹಳ್ಳಿಗಳು ಎಂಬ ಭೇದವಿಲ್ಲದೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ತಡೆಯಬೇಕಾದರೆ ಜನಸಂಖ್ಯಾ ನಿಯಂತ್ರಣ ಕಾನೂನು ತರಬೇಕಿದೆ. ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಗೆ ಮುನ್ನವೇ ಜನಸಂಖ್ಯೆಯನ್ನು ನಿಯಂತ್ರಿಸಬಹುದಾದ ಕಾನೂನನ್ನು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜಾರಿಗೊಳಿಸುತ್ತಾರೆ ಎಂದು ನಾನು ನಂಬಿದ್ದೇನೆ.
ಈ ಕ್ರಮಗಳು ಹಿಂದೂಗಳನ್ನು ಮಾತ್ರವಲ್ಲದೆ ಭವಿಷ್ಯದಲ್ಲಿ ಬಿಜೆಪಿಯ ಮತಗಳನ್ನೂ ಸಹ ರಕ್ಷಿಸುತ್ತದೆ. ಭಾರತ ಈಗಾಗಲೇ ಹಿಂದೂ ರಾಷ್ಟ್ರವಾಗಿದೆ. ಅದನ್ನು ನಾವು ಹಿಂದೂ ರಾಜಕೀಯ ರಾಷ್ಟ್ರವಾಗಿ ಮರುಸ್ಥಾಪಿಸಲು ಬಯಸುತ್ತೇವೆ. ಭಾರತವು ಹಿಂದೂ ಬಹುಸಂಖ್ಯಾತ ರಾಷ್ಟ್ರ, ಭಾರತದಲ್ಲಿ ಎಲ್ಲಿಯೂ ಹಿಂದೂಗಳು ಅಸುರಕ್ಷಿತರಾಗಲು ನಾವು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.
ಚೀನಾ:
ಜನಸಂಖ್ಯೆ ನಿಯಂತ್ರಣ ಕಾನೂನಿಗೆ ಒತ್ತಾಯಿಸುವ ಮೊದಲು ವಿಶ್ವ ಹಿಂದೂ ಪರಿಷತ್ ಮಾಜಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಒಮ್ಮೆ ಚೀನಾ ದೇಶದ ಇಂದಿನ ಪರಿಸ್ಥಿತಿಯನ್ನು ಗಮನಿಸಬೇಕು. ಬಿಬಿಸಿಯ ವರದಿಯ ಪ್ರಕಾರ, ಚೀನಾದ ಜನಸಂಖ್ಯೆಯು 60 ವರ್ಷಗಳಲ್ಲಿ ಮೊದಲ ಬಾರಿಗೆ ಕುಸಿತವನ್ನು ಖಂಡಿದೆ. ರಾಷ್ಟ್ರೀಯ ಮಕ್ಕಳ ಜನನ ಪ್ರಮಾಣ ಹಿಂದೆಂದೂ ಇಲ್ಲದಂತೆ ಪ್ರತಿ ಸಾವಿರ ಜನರಿಗೆ 6.77ಕ್ಕೆ ಇಳಿಕೆಯಾಗಿದೆ. 2022ರಲ್ಲಿ ಚೀನಾದ ಜನಸಂಖ್ಯೆ 141.18 ಕೋಟಿ. ಇದು ಹಿಂದಿನ ವರ್ಷ 2021ಕ್ಕೆ ಹೋಲಿಸಿದರೆ 8.5 ಲಕ್ಷ ಕಡಿಮೆಯಾಗಿದೆ.
ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಲು ಚೀನಾ ಸರ್ಕಾರವು ಅಳವಡಿಸಿಕೊಂಡ ನೀತಿಗಳಿಂದಾಗಿ ಅಲ್ಲಿ ಜನನ ಪ್ರಮಾಣವು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಲೇ ಇದೆ. ಮಂಗಳವಾರ ಚೀನಾದ ನ್ಯಾಷನಲ್ ಬ್ಯೂರೊ ಆಫ್ ಸ್ಟ್ಯಾಟಿಸ್ಟಿಕ್ಸ್ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, 2021 ರಲ್ಲಿ ಶೇ.7.52 ರಷ್ಟಿದ್ದ ಮಕ್ಕಳ ಜನನ ಪ್ರಮಾಣವು 2022ರಲ್ಲಿ ಇಳಿಮುಖವಾಗಿದೆ. ಇದಕ್ಕೂ ಮೊದಲು ಚೀನಾ ಸರ್ಕಾರ ನೀಡಿದ ಅಂಕಿ ಅಂಶಗಳು ಚೀನಾದಲ್ಲಿ ಜನಸಂಖ್ಯೆ ಬಿಕ್ಕಟ್ಟು ಎದುರಾಗಬವುದು ಎಂದಿದೆ. ದೀರ್ಘಾವಧಿಯ ಆಧಾರದ ಮೇಲೆ ನೋಡುವುದಾದರೆ, ಚೀನಾದ ಕಾರ್ಮಿಕ ಶಕ್ತಿ ಕುಗ್ಗಲಿದೆ. ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಾದಂತೆ, ಆರೋಗ್ಯ ಮತ್ತು ಔಷಧದಂತಹ ಇತರ ಸಾಮಾಜಿಕ ಭದ್ರತಾ ಯೋಜನೆಗಳ ಮೇಲಿನ ಹೊರೆ ಹೆಚ್ಚಾಗುತ್ತದೆ.
‘ಈ ಪ್ರವೃತ್ತಿ ಮುಂದುವರಿಯುತ್ತದೆ ಮತ್ತು ಕೊರೋನಾ ದುರಂತದ ನಂತರ ಇನ್ನಷ್ಟು ಹದಗೆಡಬಹುದು’ ಎಂದು ಆರ್ಥಿಕ ಗುಪ್ತಚರ ಸೇವೆಯ ಮುಖ್ಯ ಅರ್ಥಶಾಸ್ತ್ರಜ್ಞ ಯು ಕ್ಸು ಹೇಳಿದ್ದಾರೆ. 2023ರಲ್ಲಿ ಚೀನಾದ ಜನಸಂಖ್ಯೆಯು ಮತ್ತಷ್ಟು ಕುಸಿಯುತ್ತದೆ ಎಂದು ನಂಬುವ ತಜ್ಞರಲ್ಲಿ ಅವರೂ ಒಬ್ಬರು. ‘ಯುವಕರ ನಿರುದ್ಯೋಗ ಸಮಸ್ಯೆ ಮತ್ತು ನಿರೀಕ್ಷಿತ ಆದಾಯದ ಕೊರತೆಯು ಮದುವೆ ಮತ್ತು ಮಕ್ಕಳಂತಹ ಭವಿಷ್ಯದ ಯೋಜನೆಗಳನ್ನು ಮುಂದೂಡುತ್ತಿದೆ. ಇದು ಮಗುವಿನ ಜನನವನ್ನು ಕಡಿಮೆ ಮಾಡುತ್ತದೆ’,ಎಂದೂ ಅವರು ಹೇಳಿದ್ದಾರೆ.
ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಲು 1979ರಲ್ಲಿ ಪರಿಚಯಿಸಲಾದ ವಿವಾದಾತ್ಮಕ ‘ಒಂದು ಕುಟುಂಬ ಒಂದು ಮಗು’ ಕಾರ್ಯಕ್ರಮದಿಂದಾಗಿ ಚೀನಾದ ಪ್ರಸ್ತುತ ಜನಸಂಖ್ಯೆ ಕುಸಿತವನ್ನು ಖಂಡಿದೆ. ಈ ನೀತಿಯನ್ನು ಉಲ್ಲಂಘಿಸಿದ ಕುಟುಂಬಗಳಿಗೆ ದಂಡ ವಿಧಿಸಲಾಯಿತು; ಅತಿರೇಕದಲ್ಲಿ ಕೆಲಸವನ್ನೂ ಕಿತ್ತುಕೊಳ್ಳಲಾಯಿತು.ನಂತರ ‘ಒಂದು ಕುಟುಂಬ ಒಂದು ಮಗು’ ಎಂಬ ನೀತಿಯನ್ನು ಚೀನಾ ಸರ್ಕಾರವು 2016ರಲ್ಲಿ ರದ್ದುಗೊಳಿಸಿತು. ಮತ್ತು ದಂಪತಿಗಳು 2 ಮಕ್ಕಳನ್ನು ಹೊಂದಲು ಅವಕಾಶವನ್ನೂ ಕಲ್ಪಿಸಿಕೊಟ್ಟಿತು. ಇತ್ತೀಚಿನ ವರ್ಷಗಳಲ್ಲಿ ಇಳಿಮುಖವಾಗುತ್ತಿರುವ ಜನನ ಪ್ರಮಾಣವನ್ನು ನಿಗ್ರಹಿಸುವ ಸಲುವಾಗಿ ಚೀನಾ ಸರ್ಕಾರವು ತೆರಿಗೆ ವಿನಾಯಿತಿಗಳು, ಮಾತೃತ್ವ ಆರೈಕೆ ಮತ್ತು ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಲು ಪ್ರೋತ್ಸಾಹವನ್ನೂ ನೀಡುತ್ತಿದೆ.
ಆದರೂ ಚೀನಾ ಸರ್ಕಾರದ ಪ್ರಯತ್ನಗಳು ಫಲ ನೀಡುತ್ತಿಲ್ಲ. ಹೀಗಾಗಿ ಮಕ್ಕಳ ಜನನ ಪ್ರಮಾಣ ಹೆಚ್ಚಾಗುತ್ತಿಲ್ಲ. ಮಕ್ಕಳನ್ನು ಹೆರುವುದನ್ನು ಉತ್ತೇಜಿಸುವ ಸರ್ಕಾರದ ಪ್ರಕಟಣೆಗಳಲ್ಲಿ, ಮಕ್ಕಳ ಆರೈಕೆ ಸೇರಿದಂತೆ ಕೆಲಸ ಮಾಡುವ ಮಹಿಳೆಯರ ಹೊರೆಯನ್ನು ಕಡಿಮೆ ಮಾಡುವ ಹಾಗೂ ಮಗುವಿನ ಶಿಕ್ಷಣವನ್ನು ಬೆಂಬಲಿಸುವ ಯಾವುದೇ ಕ್ರಮಗಳಿಲ್ಲದಿರುವುದು ಇದಕ್ಕೆ ಕಾರಣವೆಂಬುದು ತಜ್ಞರ ಅಬಿಪ್ರಾಯವಾಗಿದೆ. ಆದರೆ ಜನಸಂಖ್ಯೆಯ ಬಿಕ್ಕಟ್ಟನ್ನು ಎದುರಿಸಲು ಚೀನಾ ಸಾಕಷ್ಟು ಮಾನವ ಸಂಪನ್ಮೂಲ ಮತ್ತು ಸಮಯವನ್ನು ಹೊಂದಿದೆ ಎಂದು ಹೇಳುತ್ತಿದೆ. ಮಕ್ಕಳ ಜನನ ಪ್ರಮಾಣ ಹೆಚ್ಚಾಗದೆ ಹೀಗೆ ಮುಂದುವರಿಯುತ್ತಿದ್ದರೆ, ಮುಂದಿನ ದಿನಗಳಲ್ಲಿ ಚೀನಾ ಬಹುದೊಡ್ಡ ಅನಾಹುತವನ್ನು ಎದುರಿಸಬೇಕಾಗುತ್ತದೆ.
ಸಂಘಪರಿವಾರ:
ವಿಶ್ವ ಹಿಂದೂ ಪರಿಷತ್ ಮಾಜಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಮಾತಿನಂತೆ ಹಿಂದೂಗಳನ್ನು ಮಾತ್ರವಲ್ಲದೆ ಭವಿಷ್ಯದಲ್ಲಿ ಬಿಜೆಪಿಯ ಮತಗಳನ್ನೂ ರಕ್ಷಣೆ ಮಾಡಲಿಕ್ಕಾಗಿ ಜನಸಂಖ್ಯಾ ನಿಯಂತ್ರಣ ಕಾನೂನನ್ನು ತಂದು ಚೀನಾ ಎದುರಿಸುತ್ತಿರುವ ಸಂಕಷ್ಟವನ್ನು ಭವಿಷ್ಯದಲ್ಲಿ ಭಾರತವೂ ಎದುರಿಸಬೇಕೆ? ಕೇಂದ್ರ-ರಾಜ್ಯ ಸರ್ಕಾರಗಳಲ್ಲಿ, ಸಾರ್ವಜನಿಕ ಉದ್ದಿಮೆಗಳಲ್ಲಿ ಖಾಲಿಯಿರುವ ಉದ್ದೆಗಳನ್ನು ಭರ್ತಿ ಮಾಡಲು ಸರ್ಕಾರಗಳು ಮುಂದಾಗುತ್ತಿಲ್ಲ. ಹೊಸದಾಗಿ ಉದ್ಯೋಗಗಳು ಸೃಷ್ಠಿ ಯಾಗುತ್ತಿಲ್ಲ. ದಿನದಿಂದ ದಿನಕ್ಕೆ ನಿರುದ್ಯೋಗದ ಸಮಸ್ಯೆ ಮಿತಿಮೀರುತ್ತಿದೆ. ತಳ ಸಮುದಾಯದ ವಿದ್ಯಾವಂತರು ಸ್ವಯಂ ಉದ್ಯೋಗ, ಸಣ್ಣ ವ್ಯಾಪಾರ ಅಥವಾ ಖಾಸಗಿ ವಲಯವನ್ನು ಅವಲಂಬಿಸಬೇಕಾದ ಪರಿಸ್ಥಿತಿಗೆ ನೂಕಲ್ಪಟ್ಟಿದ್ದಾರೆ. ದೇಶದಲ್ಲಿ ಬಡತನ ಜೀವಂತವಾಗಿರುವುದಕ್ಕೆ ಉಚಿತ ಪಡಿತರ ವಿತರಣೆಯೇ ಸಾಕ್ಷಿ. ಅಸ್ಪೃಶ್ಯತೆ ಇನ್ನೂ ಜೀವಂತವಿದೆ. ದಲಿತ ದೌರ್ಜನ್ಯ ಕಡಿಮೆಯಾಗುತ್ತಿಲ್ಲ. ಅಲ್ಪಸಂಖ್ಯಾತರ ಹಕ್ಕುಗಳು ಕಸಿದುಕೊಳ್ಳಲಾಗುತ್ತಿದೆ. ಮಹಿಳೆಯರಿಗೆ ಸುರಕ್ಷತೆ ಇಲ್ಲ. ಮಹಿಳೆ ಮೇಲಿನ ಅತ್ಯಾಚಾರ ಕಡಿಮೆಯಾಗುತ್ತಿಲ್ಲ. ಇದೆಲ್ಲದರ ಬಗ್ಗೆ ಅಕ್ಕರೆಯಿಲ್ಲದವರು ಜನಸಂಖ್ಯಾ ನಿಯಂತ್ರಣ ಕಾನೂನನ್ನು ತರಲು ಹೊರಟಿರುವುದು ಅಪಹಾಸ್ಯ.
ಡಾ.ತೋಳ್.ತಿರುಮಾವಳವನ್: ಎಂ.ಪಿ.
ಕೋಲಾರ ಜಿಲ್ಲೆ ಮಾಲೂರಿನ ಹೋಂಡಾ ಕ್ರೀಡಾಂಗಣದಲ್ಲಿ ಸ್ಯಾಮ್ ಆಡಿಯೋಸ್ ವತಿಯಿಂದ ಹಮ್ಮಿಕೊಂಡಿದ್ದ ದೇಶದ ಮೊಟ್ಟ ಮೊದಲ ಬಾಬ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಬರಹಗಳು ಹಾಗೂ ಭಾಷಣಗಳ ಮೊದಲ ಸಂಪುಟದ ಧ್ವನಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ “ವಿಡುದಲೈ ಚಿರುತೈಗಳ್” ಪಕ್ಷದ ನಾಯಕ ಹಾಗೂ ತಮಿಳುನಾಡಿನ ಶಿವಗಂಗೈ ಸಂಸದ ಡಾ.ತೋಳ್.ತಿರುಮಾವಳವನ್, ‘ಭಾರತ ದೇಶ ಇಂದು ಅಪಾಯದಲ್ಲಿದೆ. ಸಾಮಾಜಿಕ ನ್ಯಾಯವನ್ನು ಕಾಪಾಡಬೇಕಾದ ಸಂವಿಧಾನವೂ ಅಪಾಯದಲ್ಲಿದೆ. ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಸಂವಿಧಾನ ರಕ್ಷಣೆ ಮಾಡಲು ಈ ದೇಶದ ಬಹುಸಂಖ್ಯಾತ ಅಹಿಂದ ಸಮುದಾಯಗಳು ಹಾಗೂ ಪ್ರಜಾಪ್ರಭುತ್ವ ಪ್ರತಿಪಾದಕರು ಅನಿವಾರ್ಯವಾಗಿ ಇಂದು ಒಂದಾಗಬೇಕು’ ಸಂವಿಧಾನ ಅಪಾಯದಲ್ಲಿರುವ ಕಾರಣ ಸಾಮಾಜಿಕ ನ್ಯಾಯವೂ ಅಪಾಯದಲ್ಲಿದೆ ಎಂದರು. ತಿರುಮಾವಳವನ್ ಮಾತು ನಮಗೆ ಅರ್ಥವಾಗಿದ್ದರೆ ಅದುವೇ ಸತ್ಯ.