ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಡಿಕೆ ಶಿವಕುಮಾರ್ Archives » Dynamic Leader
November 23, 2024
Home Posts tagged ಡಿಕೆ ಶಿವಕುಮಾರ್
ರಾಜ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಮಿಕ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 2022-23 ನೇ ಸಾಲಿನ ಶೈಕ್ಷಣಿಕ ಧನ ಸಹಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಕಾರ್ಮಿಕ ವರ್ಗ ಸಂಪತ್ತನ್ನು ಉತ್ಪಾದಿಸುತ್ತದೆ. ಉಳಿದವರು ಅನುಭವಿಸುತ್ತಾರೆ. ಪ್ರತಿಯೊಬ್ಬರೂ ಉತ್ಪಾದನೆಯಲ್ಲಿ ಪಾಲ್ಗೊಳ್ಳಬೇಕು ಎನ್ನುವ ಉದ್ದೇಶದಿಂದಲೇ ಬಸವಣ್ಣನವರು ಕಾಯಕ ಪದ್ಧತಿಯನ್ನು ಹೇಳಿದರು. ಸಂವಿಧಾನದ ಪ್ರಕಾರ ಪ್ರತಿಯೊಬ್ಬರೂ ಸಮಾಜದ ಸಂಪತ್ತಿನಲ್ಲಿ ಸಮಪಾಲು ಹೊಂದಬೇಕು. ಹೀಗಾಗಿ ನಾವು ಕಾರ್ಮಿಕರ ಮಕ್ಕಳಿಗೆ ಈ ರೀತಿಯ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಇದರಿಂದ ಸಮ ಸಮಾಜದ ಆಶಯಗಳನ್ನು ಜಾರಿಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಶೂದ್ರ ಮತ್ತು ಮಹಿಳೆಯರನ್ನು ಶತ- ಶತಮಾನಗಳ ಕಾಲ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗಿತ್ತು. ಈ ಕಾರಣಕ್ಕೇ ಶೂದ್ರ ವರ್ಗಗಳು ಹಿಂದುಳಿಯುವಂತಾಯಿತು. ಅಸಮಾನತೆ ಹೆಚ್ಚಾಯಿತು. ಈ ಅಸಮಾನತೆಯನ್ನು ಅಳಿಸುವ ಉದ್ದೇಶ ನಮ್ಮ ಸರ್ಕಾರದ್ದು. 9,60,000 ಮಕ್ಕಳಿಗೆ ಕಲ್ಯಾಣ ನಿಧಿ ಮೂಲಕ ಸಹಾಯಧನ ಬಿಡುಗಡೆ ಆಗುತ್ತಿದೆ. ಇದರ ಸದುಪಯೋಗ ಪಡಿಸಿಕೊಂಡು ಶಿಕ್ಷಣವಂತರಾಗಬೇಕು. ಶಿಕ್ಷಣದಿಂದ ಅಸಮಾನತೆ ದೂರ ಮಾಡಬಹುದು ಎಂದರು.

ಸಹಾಯ ಧನ ಪಡೆಯುತ್ತಿರುವ ಇವರೆಲ್ಲರೂ ಅಸಂಘಟಿತ ಕಾರ್ಮಿಕರ ಮಕ್ಕಳು. ಶೇ.83ರಷ್ಟು ಕಾರ್ಮಿಕರು ಇವತ್ತಿಗೂ ಅಸಂಘಟಿತರಾಗಿದ್ದಾರೆ. ದೇಶದಲ್ಲಿ ರೈತ ಸಮುದಾಯವನ್ನು ಬಿಟ್ಟರೆ ಎರಡನೇ ಅತೀ ದೊಡ್ಡ ಸಮುದಾಯ ಕಾರ್ಮಿಕ ಸಮುದಾಯ. ಜಾತಿ-ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಪಟ್ಟಭದ್ರರನ್ನು ನಾವು ದೂರ ಇಡಬೇಕು. ಈ ಪಟ್ಟ ಭದ್ರರು ಸಾಮಾಜಿಕ ನ್ಯಾಯದ ವಿರೋಧಿಗಳು. ಈ ವಿಭಜಕರು ಶೂದ್ರ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮೇಲೆ ಬರುವುದನ್ನು ವಿರೋಧಿಸುತ್ತಾರೆ. ಆದ್ದರಿಂದ ಜಾತಿ-ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವವರನ್ನು ನಾವು ವಿರೋಧಿಸಬೇಕು ಎಂದು ಹೇಳಿದರು.

ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯಿಂದ ನಾವು ಎಲ್ಲಾ ಜಾತಿ-ಧರ್ಮದವರಿಗೆ ಅನುಕೂಲ ಆಗುವ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

ರಾಜ್ಯ

ಬೆಂಗಳೂರು: ಬೆಂಗಳೂರು ಅರಮನೆ ಮೈದಾನದಲ್ಲಿ ನವೆಂಬರ್‌ನಲ್ಲಿ ಹಮ್ಮಿಕೊಂಡಿರುವ ಕಂಬಳ ಓಟದ ಕರೆ ಪೂಜೆ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾಗಿಯಾಗಿ ಭೂಮಿಪೂಜೆ ನೆರವೇರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು “ಕರಾವಳಿ ಭಾಗದ ಸಂಸ್ಕೃತಿ, ವ್ಯಾಪಾರ – ವಹಿವಾಟು, ಅಲ್ಲಿನ ಶಿಕ್ಷಣ, ಹೋಟೆಲ್‌ಗಳು ಎಲ್ಲವೂ ಈ ದೇಶದ ಆಸ್ತಿ. ಅಲ್ಲಿನ ಸಂಸ್ಕೃತಿಯ ಭಾಗವಾಗಿರುವ ಕಂಬಳ ಓಟವು ಬೆಂಗಳೂರಿನಲ್ಲಿ ಜರುಗುತ್ತಿರುವುದು ತುಂಬಾ ಸಂತೋಷದ ವಿಷಯ ಎಂದರು.

ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರು ಈ ಸಂಸ್ಕೃತಿ ಉಳಿಸುವ ಸಲುವಾಗಿ ಒಂದು ಕಚೇರಿ ತೆರೆಯಲು ಜಾಗ ನೀಡುವಂತೆ ಕೇಳಿದ್ದಾರೆ. ಖಂಡಿತವಾಗಿಯೂ ಅವರ ಮನವಿಯನ್ನು ಪರಿಗಣಿಸುತ್ತೇವೆ. ಬೆಂಗಳೂರಿನಲ್ಲಿ ಜರುಗುತ್ತಿರುವ ಐತಿಹಾಸಿಕ ಕಂಬಳಕ್ಕೆ ಸರ್ಕಾರದಿಂದ ಎಷ್ಟು ಸಾಧ್ಯವೋ ಅಷ್ಟು ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ರಾಜಕೀಯ

ಬೆಂಗಳೂರು: ಕಾವೇರಿ ಜಲವಿವಾದ ಕುರಿತಂತೆ ಇಂದು ವಿಧಾನಸೌಧದಲ್ಲಿ ನಡೆದ ಸರ್ವಪಕ್ಷ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತುಗಳು:

ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಸಾಮಾನ್ಯ ವರ್ಷಗಳಲ್ಲಿ 177.25 ಟಿಎಂಸಿ ನೀರು ಬಿಡಬೇಕು. ಆದರೆ ದುರದೃಷ್ಟವಶಾತ್‌ ಸಂಕಷ್ಟ ಹಂಚಿಕೆ ಸೂತ್ರವಿಲ್ಲದ ಕಾರಣ ನಾವು ಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದೇವೆ. ಈ ವರೆಗೆ 99 ಟಿಎಂಸಿ ನೀರು ಕೊಡಬೇಕಾಗಿತ್ತು. 37.7 ಟಿಎಂಸಿ ನೀರು ಬಿಡಲಾಗಿದೆ. ಈಗಲೂ ನೀರು ಬಿಡಲಾಗದೆ ಇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ 70 ಟಿಎಂಸಿ ನೀರು ಬೆಳೆ ಉಳಿಸಿಕೊಳ್ಳಲು ಬೇಕು. 33 ಟಿಎಂಸಿ ಕುಡಿಯುವ ನೀರಿಗಾಗಿ ಬೇಕು. ಜೊತೆಗೆ 3 ಟಿಎಂಸಿ ಕೈಗಾರಿಕೆಗಳಿಗೆ ಬೇಕು. ಆದರೆ ಈಗ ನಾಲ್ಕೂ ಜಲಾಶಯಗಳಿಂದ ಲಭ್ಯವಿರುವುದು 53 ಟಿಎಂಸಿ ನೀರು ಮಾತ್ರ. ಬೆಳೆಗಳಿಗೆ ಕಟ್ಟುನೀರು ಬಿಡಲಾಗುತ್ತಿದೆ. ಇದರಲ್ಲಿ ನಾವು 33 ಟಿಎಂಸಿ ಕುಡಿಯುವ ನೀರಿಗೆ ಹಾಗೂ 3 ಟಿಎಂಸಿ ಕೈಗಾರಿಕೆಗಳಿಗೆ ಒದಗಿಸಬೇಕಾಗುತ್ತದೆ. ಬೆಳೆಗಳಿಗೆ ಸಾಕಾಗುವುದಿಲ್ಲ ಎಂದು ಹೇಳಿದರು.

ಕಾವೇರಿ ನೀರು ನಿರ್ವಹಣಾ ಸಮಿತಿ ನಿನ್ನೆ ಐದು ಸಾವಿರ ಕ್ಯೂಸೆಕ್ಸ್‌ ನೀರು ಬಿಡುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆಯನ್ನು ಕರೆಯಲಾಗಿತ್ತು. ಎಲ್ಲ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಭೆ ಕರೆದಿದ್ದೆವು. ತುರ್ತಾಗಿ ಆಯೋಜನೆಯಾದ ಈ ಸಭೆಗೆ ಕೆಲವರು ಪೂರ್ವನಿರ್ಧಾರಿತ ಕಾರ್ಯಕ್ರಮಗಳ ಕಾರಣ ಗೈರಾಗಿದ್ದಾರೆ. ಕಾವೇರಿ ನೀರು ನಿಯಂತ್ರಣ ಸಮಿತಿಗೆ ಮತ್ತೊಂದು ಅರ್ಜಿ ಸಲ್ಲಿಸಲಾಗುವುದು. ಸುಪ್ರೀಂ ಕೋರ್ಟಿನಲ್ಲಿಯೂ ಅರ್ಜಿ ಸಲ್ಲಿಸಲಾಗುವುದು. ಅಲ್ಲಿಯೂ ವಾಸ್ತವಾಂಶ ತಿಳಿಸುವ ಕೆಲಸ ಮಾಡಲಾಗುವುದು. ಈಗ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವ ಬಗ್ಗೆ ಹಾಗೂ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸುವ ಬಗ್ಗೆ ಉಪ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿ ವಕೀಲರ ತಂಡದೊಂದಿಗೆ ಚರ್ಚಿಸಲಿದ್ದಾರೆ ಎಂಬ ಮಾಹಿತಿಯನ್ನು ನೀಡಿದರು.

ಇದನ್ನೂ ಓದಿ: ನೆಲ, ಜಲ, ಭಾಷೆ ಬಗ್ಗೆ ತಮಿಳುನಾಡಿನವರಿಗೆ ಇರುವ ಬದ್ಧತೆ ನಮ್ಮವರಿಗಿಲ್ಲ; ನಮ್ಮವರಲ್ಲಿ ಉಪೇಕ್ಷೆ, ಉಡಾಫೆ ಹೆಚ್ಚು! – ಹೆಚ್.ಡಿ.ಕುಮಾರಸ್ವಾಮಿ

ಸರ್ವಪಕ್ಷ ನಿಯೋಗ ತೆರಳಲು ಅನುವು ಮಾಡಿಕೊಡುವಂತೆ ಪ್ರಧಾನಮಂತ್ರಿಯವರ ಸಮಯ ಕೇಳಿ ಮತ್ತೊಮ್ಮೆ ಪತ್ರ ಬರೆಯಲಾಗುವುದು. ಸಂಸದರೂ ಹೋರಾಟ ಮಾಡುವ ಭರವಸೆ ನೀಡಿದ್ದಾರೆ. 18 ರಿಂದ ಸಂಸತ್‌ ಅಧಿವೇಶನ ಪ್ರಾರಂಭವಾಗಲಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಹಾಗೂ ಸಂಸದರೊಂದಿಗೆ ದೆಹಲಿಯಲ್ಲಿ ಸಭೆ ನಡೆಸಿ ಚರ್ಚಿಸಿ, ದೇಶದ ಗಮನ ಸೆಳೆಯಲಾಗುವುದು. ಇದಕ್ಕೆ ಎಲ್ಲರೂ ಸಹಮತಿ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ರಾಜಕೀಯ

ತಮಿಳುನಾಡು ಕುರುವೈ ಬೆಳೆಗೆ ಎರಡು ಪಟ್ಟು ನೀರು ಬಳಕೆ ಮಾಡಿದೆ. ನಾಲ್ಕು ಪಟ್ಟು ಕುರುವೈ ಬೆಳೆ ಕ್ಷೇತ್ರ ವಿಸ್ತರಣೆ ಮಾಡಿದೆ. ಕರ್ನಾಟಕ ಸರ್ಕಾರ ಇದನ್ನು ಸಿಡಬ್ಲುಎಂಎದಲ್ಲಿ ಪ್ರತಿಭಟಿಸದೇ ಮತ್ತು ಅವರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿದ ತಕ್ಷಣ ನೀರು ಬಿಟ್ಟಿರುವುದು ಅಕ್ಷಮ್ಯ ಅಪರಾಧ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

“ರಾಜ್ಯದ ರೈತರಿಗೆ ಈ ಮೊದಲು ನೀರು ಬಿಡದೇ ನಮ್ಮ ರಾಜ್ಯದ ರೈತರ ಪಾಲನ್ನು ಡ್ಯಾಂನಲ್ಲಿ ಸ್ಟೋರೇಜ್ ಮಾಡಿ, ರಾಜ್ಯದ ರೈತರಿಗೆ ನೀರು ಕೊಡುವ ತೀರ್ಮಾನ ವಿಳಂಬ ಮಾಡಿ ಈಗ ನಮ್ಮ ರೈತರ ಪಾಲಿನ ನೀರನ್ನು ತಮಿಳುನಾಡಿಗೆ ಹರಿಸುವ ಸ್ಥಿತಿ ನೀವು ತಂದೊಡ್ಡಿದ್ದೀರಿ.

ಇದನ್ನೂ ಓದಿ: ಹುಟ್ಟಿನಿಂದ ಮನುಷ್ಯರು ಎಲ್ಲರೂ ಸಮಾನರು; ಜನರ ನಡುವೆ ತಾರತಮ್ಯ ಮಾಡುವುದು ಅವಮಾನಕರ! – ನಟ ಕಮಲಹಾಸನ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾವೇರಿ ನೀರನ್ನು ಬಿಡಲು ಸಾಧ್ಯವಿಲ್ಲ ಎಂಬ ಹೇಳಿಕೆ ಕೊಟ್ಟ ಮರುದಿನವೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ನೀರಾವರಿ ಇಲಾಖೆ ತಮಿಳುನಾಡಿಗೆ ನೀರು ಬಿಟ್ಟಿರುವುದು, ರಾಜ್ಯದಲ್ಲಿ ಕಾವೇರಿ ನೀರು ನಿರ್ವಹಣೆಯಲ್ಲಿ ಒಮ್ಮತ ಇಲ್ಲ ಹಾಗೂ ನಮ್ಮ ರಾಜ್ಯದ ನೀರಿನ ಪಾಲನ್ನು ರಕ್ಷಣೆ ಮಾಡುವಂತ ಛಲವೂ ಕಾಣಿಸುತ್ತಿಲ್ಲ.

ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಿ, ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಈ ವಿಚಾರದಲ್ಲಿ ರಾಜ್ಯದ ರೈತರ ಹಿತ ಕಾಯಬೇಕು” ಎಂದು ಹೇಳಿದ್ದಾರೆ.

ರಾಜಕೀಯ

ನೈಸ್ ಯೋಜನೆಗೆ ಹೆಚ್.ಡಿ.ದೇವೇಗೌಡ ಅವರೇ ಸಹಿ ಹಾಕಿದ್ದು ಎಂದು ಹೇಳುವ ಮೂಲಕ ತಾವು ಎಸಗಿದ ಅಕ್ರಮಕ್ಕೆ ತೇಪೆ ಹಚ್ಚಲು ಹೊರಟಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು. ಆದರೆ, ಅದೇ ದೇವೇಗೌಡರ ಕಾಲದಲ್ಲಿ ಆಗಿದ್ದ ಮೂಲ ಒಪ್ಪಂದದ ಬಗ್ಗೆ ಅವರದ್ದು ಧ್ಯಾನಸ್ಥ ಮೌನ!! ಯಾಕೆ?? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ನೈಸ್ ರಸ್ತೆಯ ‘ತಿರುಚಿದ ಒಪ್ಪಂದ’ದ ಬಗ್ಗೆಯೂ ಅವರು ಹೇಳಬೇಕಿತ್ತಲ್ಲವೇ? ಬ್ರ್ಯಾಂಡ್ ಬೆಂಗಳೂರು ಟೀಮಿನ ಮುಖ್ಯಸ್ಥರ ಕರಾಮತ್ತಿನ ಬಗ್ಗೆಯೂ ಬೆಳಕು ಚೆಲ್ಲಬೇಕಲ್ಲವೇ? ಅದು ಬಿಟ್ಟು, ಸತ್ಯ ಮರೆಮಾಚಿ ಬರೀ ‘ಸಹಿ’ಯ ಬಗ್ಗೆ ನೀವು ಗೊಣಗಿದ್ದು ಯಾಕೆ? ಸದನ ಸಮಿತಿ ವರದಿಯ ಬಗ್ಗೆಯೂ ಚಕಾರ ಎತ್ತದಿರುವುದು ಯಾಕೋ? ಏನಿದು ಈ ನಿಗೂಢ ಸೋಜಿಗ??

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಉರುಫ್ ನೈಸ್ ರಸ್ತೆ ಯೋಜನೆಗೆ ರಾಜ್ಯ ಸರಕಾರದಿಂದ ನಯಾಪೈಸೆ ಕೊಡುವುದಿಲ್ಲ, ಪೂರ್ಣ ಹೂಡಿಕೆ ಹಣವನ್ನು ಕಂಪನಿಯೇ ಭರಿಸಬೇಕು, ಭೂಸ್ವಾಧೀನವೂ ಸೇರಿ ಸರಕಾರದ ಮೇಲೆ ಯಾವುದೇ ಹೊರೆ ಇರುವಂತಿಲ್ಲ. ಇದು ದೇವೇಗೌಡರ ಕಾಲದಲ್ಲಿ ಆದ ಮೂಲ ಒಪ್ಪಂದದ ಸಾರಾಂಶ. ಹಾಗಾದರೆ, ಈ ಯೋಜನೆ ‘ಸಾರ’ವಾಗಿದ್ದು ಯಾರಿಗೆ?

ಬ್ರ್ಯಾಂಡ್ ಬೆಂಗಳೂರು ಹರಿಕಾರಾಗಲು ಹೊರಟಿರುವ ನೀವು, ‘ತಿರುಚಿದ ಒಪ್ಪಂದ’ದ ಸೂತ್ರಧಾರರನ್ನೇ ಪಕ್ಕದಲ್ಲಿ ಇಟ್ಟುಕೊಂಡಿದ್ದೀರಿ. ತಿರುಚಿದ ಪರಿಣಾಮ ರಾಜ್ಯವು ಕೋರ್ಟ್ ಕಟಕಟೆಯಲ್ಲಿ ನಿಲ್ಲಬೇಕಾಯಿತು. ಸಾವಿರಾರು ಕೋಟಿ ಲೂಟಿಯಾಯಿತು. ಸರಕಾರ & ಜನರ ಸಾವಿರಾರು ಎಕರೆ ಭೂಮಿ ಭೂಗಳ್ಳರ ಪಾಲಾಯಿತು.

ಬ್ರ್ಯಾಂಡ್ ಬೆಂಗಳೂರು ಎಂದರೆ ಬುಲ್ಡೋಜ್ ಬೆಂಗಳೂರಾ? ಇಡೀ ಬೆಂಗಳೂರು ನಗರವನ್ನು ಛಿದ್ರಛಿದ್ರ ಮಾಡಿ ಪೋಗದಸ್ತಾಗಿ ಬುಲ್ಡೋಜ್ ಮಾಡಿ ಕಿಸೆ ತುಂಬಿಸಿಕೊಳ್ಳುವುದಾ? ಕರ್ನಾಟಕವನ್ನು ಕಡಲೇಪುರಿಯಂತೆ ಮುಕ್ಕಿ ತಿನ್ನುವುದಾ?

2014-2 016ರಲ್ಲಿನ ಸದನ ಸಮಿತಿ ವರದಿಯನ್ನು ತಾವು ಓದಿಲ್ಲವೇ? ಅಥವಾ ಅದನ್ನು ಕಸದ ಬುಟ್ಟಿಗೆ ಎಸೆದಿದ್ದೀರಾ? ಕೊಳ್ಳೆ ಹೊಡೆದ ಈಸ್ಟ್ ಇಂಡಿಯಾದಂಥ ಕಂಪನಿ ಜತೆ ಕೈ ಜೋಡಿಸಿದ ನಿಮಗೆ, ದೇವೇಗೌಡರ ಹೆಸರು ಹೇಳುವ ಅರ್ಹತೆ ಇದೆಯಾ? ರಾಜ್ಯದ ಅಭ್ಯುದಯಕ್ಕೆ ಬದುಕನ್ನೇ ಮೀಸಲಿಟ್ಟ ಆ ಹಿರಿಯ ಜೀವದ ಬಗ್ಗೆ ನಾಲಿಗೆ ಜಾರಿ ಬಿಡಲು ನಾಚಿಕೆ ಆಗುವುದಿಲ್ಲವೇ?

ನೈಸ್ ಕರ್ಮವನ್ನೆಲ್ಲ ಒಮ್ಮೆ ಕಣ್ಮುಚ್ಚಿ ನೆನಪು ಮಾಡಿಕೊಳ್ಳಿ. ಅಲ್ಲಿ ನೀವೆಲ್ಲಿ ನಿಲ್ಲುತ್ತಿರಿ ಎಂದು ಊಹಿಸಿಕೊಳ್ಳಿ, ಮಾಡಿದ ಪಾಪಗಳೆಲ್ಲವೂ ಸ್ಲೈಡುಗಳಂತೆ ಪ್ರತ್ಯಕ್ಷವಾಗುತ್ತವೆ. ಗಂಗೆಯಲ್ಲಿ ಸಾವಿರ ಸಲ ಮುಳುಗಿದರೂ ಅಳಿಯದ ಪಾಪವದು.ರಾಜ್ಯವನ್ನೇ ದೋಚಿದ ಖಾಸಗಿ ಕಂಪನಿಗೆ ‘ಪೊಲಿಟಿಕಲ್ ಏಜೆಂಟ್’ ಆಗುವುದಕ್ಕೆ ಅಸಹ್ಯ ಅನಿಸುವುದಿಲ್ಲವೇ?

ನೈಸ್ ಯೋಜನೆ ಯಾರಿಗೆಲ್ಲಾ ಕಾಮಧೇನು, ಕಲ್ಪವೃಕ್ಷವಾಗಿದೆ ನನಗಿಂತ ನಿಮಗೆ ಚೆನ್ನಾಗಿ ಗೊತ್ತು. ಧನಪಿಶಾಚಿ ರಾಜಕಾರಣಿಗಳು, ಮುಖ್ಯ ಕಾರ್ಯದರ್ಶಿ ಮಟ್ಟದವರೂ ಸೇರಿ ಅನೇಕ ಅಧಿಕಾರಿಗಳ ‘ಅನೈತಿಕ ಭ್ರಷ್ಟವ್ಯೂಹ’ ಕರ್ನಾಟಕವನ್ನು ಕಂಡರಿಯದ ರೀತಿಯಲ್ಲಿ ಲೂಟಿ ಮಾಡಿದೆ. ಈ ಲೂಟಿಯ ಕಥೆಯಲ್ಲಿ ನಿಮ್ಮ ಪಾತ್ರವೇನು?

ತಾವು ಈಗ ಫುಲ್ ಬ್ಯುಸಿ, ನಾನು ಬಲ್ಲೆ. ಆದರೂ ಕೊಂಚ ಬಿಡುವು ಮಾಡಿಕೊಳ್ಳಿ, ಸದನ ಸಮಿತಿ ವರದಿಯ ಮೇಲೆ ಕಣ್ಣಾಡಿಸಿ. ದೇವೇಗೌಡರು ಸಿಎಂ ಆಗಿದ್ದ 1995ರ ಅಕ್ಟೋಬರ್, ನವೆಂಬರಿನಲ್ಲಿ ಈ ಯೋಜನೆಗೆ ಸಹಿ ಹಾಕುವ ವೇಳೆ ಇಂದಿನ ಮುಖ್ಯಮಂತ್ರಿಗಳೂ ಅಂದು ಹಣಕಾಸು ಸಚಿವರಾಗಿದ್ದರು.ಅವರಿಗೂ ಸತ್ಯ ಗೊತ್ತಿರುತ್ತದೆ. ಒಮ್ಮೆ ವಿಚಾರಿಸಲು ನಿಮಗೇನು ಸಮಸ್ಯೆ?

ಸದನ ಸಮಿತಿಯ ಕೊನೆ ಪ್ಯಾರಾ ಓದಿಕೊಳ್ಳಿ. ಸಮಿತಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ. ನಿಮಗೆ ಧೈರ್ಯವಿದ್ದರೆ ಸಿಬಿಐ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿ. ನೂರಾ ಮೂವತ್ತೈದು ಸೀಟುಗಳ ಬಹುಮತ ಸರಕಾರ ನಿಮ್ಮದಲ್ಲವೇ? ನುಡಿದಂತೆ ನಡೆಯುವ ಸರಕಾರ ನಿಮ್ಮದಲ್ಲವೇ?? ನೀವು ನುಡಿದಂತೆ ನಡೆಯುವ ಸಮಯ ಬಂದಿದೆ. ನಡೆದು ತೋರಿಸುವಿರಾ? ಎಂದು ಕಿಡಿಕಾರಿದ್ದಾರೆ.

ರಾಜಕೀಯ

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ವಿಧಾನಸೌಧದಲ್ಲಿ ಇಂದು ಹಮ್ಮಿಕೊಂಡಿದ್ದ “ಅನ್ನ ಭಾಗ್ಯ” ಯೋಜನೆಯಡಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿ, ಮಾತನಾಡಿದರು:

“ಅನ್ನಭಾಗ್ಯ ಯೋಜನೆ ಘೋಷಣೆ ಆದ ತಕ್ಷಣ ರಾಜ್ಯಕ್ಕೆ ಅಕ್ಕಿ ಕೊಡುವುದನ್ನು ಬಂದ್ ಮಾಡುವ ಮೂಲಕ, ಕೇಂದ್ರದ ಬಿಜೆಪಿ ಸರ್ಕಾರ ಬಡವರ ವಿರೋಧಿಯಾದ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ. ಅಕ್ಕಿಯನ್ನು ನಮಗೆ ಪುಕ್ಕಟ್ಟೆಯಾಗಿ ಕೊಡುತ್ತಿರಲಿಲ್ಲ; ಕೆಜಿಗೆ 34 ರೂ. ನಮ್ಮಿಂದ ತೆಗೆದುಕೊಳ್ಳುತ್ತಿದ್ದರು.

ಕನ್ನಡ ನಾಡಿನ ಜನರಿಗೆ ಅಕ್ಕಿ ಕೊಡುವುದನ್ನು ಬಂದ್ ಮಾಡಿದ ಕೇಂದ್ರ ಸರ್ಕಾರ, ಬಳಿಕ ಇ-ಹರಾಜು ಮೂಲಕ ಆ ಅಕ್ಕಿಯನ್ನು ಹರಾಜು ಹಾಕಲು ಮುಂದಾಯಿತು. ಆದರೆ, ಈಗ ಇ-ಹರಾಜು ಮೂಲಕ ಅಕ್ಕಿ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನು ನಾವು ಡರ್ಟಿ ಪಾಲಿಟಿಕ್ಸ್ ಅಂತ ಕರೆಯಬೇಕೋ ಬೇಡವೋ? ಇದನ್ನು ಕರ್ನಾಟಕದ ಜನತೆಯ ವಿರುದ್ಧದ ದ್ವೇಷದ ರಾಜಕಾರಣ ಎಂದು ಕರೆಯಬೇಕೋ ಬೇಡವೋ?

4 ಕೋಟಿ 42 ಲಕ್ಷ ಫಲಾನುಭವಿಗಳಿಗೆ ಈಗ ತಲಾ 170 ರೂ. ನೇರವಾಗಿ ಅವರ ಖಾತೆಗೆ ವರ್ಗಾವಣೆ ಆಗುತ್ತಿದೆ. ಬಡವರು, ಮಧ್ಯಮ ವರ್ಗದವರು ಎರಡು ಹೊತ್ತು ಅನ್ನ ತಿಂದರೆ ಬಿಜೆಪಿಗೆ ಯಾಕೆ ಹೊಟ್ಟೆಯುರಿ? ನಾಡಿನ ಜನತೆ ತಮ್ಮ ಖಾತೆಗೆ ಬರುವ ಹಣವನ್ನು ಊಟ, ಆಹಾರಕ್ಕಾಗಿ ಖರ್ಚು ಮಾಡಿ ನೆಮ್ಮದಿಯ ಬದುಕು ನಡೆಸಬೇಕು ಎಂದು ಮನವಿ ಮಾಡುತ್ತೇನೆ” ಎಂದರು.

ರಾಜಕೀಯ

ಡಿ.ಸಿ.ಪ್ರಕಾಶ್ ಸಂಪಾದಕರು

ಇದು ದೇಶಕ್ಕೆ ಮಾದರಿ ಮಾತ್ರವಲ್ಲ ಪ್ರಜಾಸತ್ತಾತ್ಮಕ ಕ್ರಾಂತಿಯೂ ಹೌದು. ದುಡಿಯುವ ಮಹಿಳೆಗೆ ಅದರಲ್ಲೂ ಅಸಂಘಟಿತ ಮಹಿಳಾ ಉದ್ಯೋಗಿಗಳಿಗೆ ಸಿಕ್ಕಿದ ಅಂಗೀಕಾರ; ಇದು ಸಾಮಾಜಿಕ ನ್ಯಾಯಕ್ಕೆ ಸಿಕ್ಕ ಜಯ; ಸರ್ಕಾರ ಮಹಿಳೆಯರಿಗೆ ನೀಡುವ ಗೌರವ; ಸರ್ಕಾರವೇ ನಿಮಗೆ ನನ್ನ ವಂದನೆಗಳು.

ಕಾಂಗ್ರೆಸ್ ನೀಡಿದ 5 ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆಯೇ ಅತ್ಯಂತ ಮಹತ್ವವಾದದ್ದು. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಘೋಷಣೆ ಮತ್ತು ಅದಕ್ಕೆ ನೀಡಿದ ಚಾಲನೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಪರ ಹೊಸ ಅಲೆ ಶುರುವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ಮತ ಚಲಾಯಿಸಿದ ಕೋಟ್ಯಾಂತರ ಕಾರ್ಯಕರ್ತರು ಕೂಡ ಶಕ್ತಿ ಯೋಜನೆಯ ಫಲಾನುಭವಿಯಾಗಿ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಸರ್ಕಾರವನ್ನು ಹೊಗಳುವಂತೆ ಆಗಿದೆ.

ಲಕ್ಷಾಂತರ ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರಿಗೆ ಈ ಯೋಜನೆ ವರದಾನವಾಗಿ ಪರಿಣಮಿಸಿದೆ. ನಗರ ಪ್ರದೇಶಗಳಲ್ಲಿ ಮನೆ ಕೆಲಸ, ಹೌಸ್ ಕೀಪಿಂಗ್ ಮತ್ತು ಸಣ್ಣಪುಟ್ಟ ಕಾರ್ಖಾನೆಗಳಲ್ಲಿ ದಿನಗೂಲಿ ಕೆಲಸ ಮಾಡುವ ಅದೆಷ್ಟೋ ಮಹಿಳೆಯರು, ಮಾಸಿಕ ಬಸ್ ಪಾಸ್ ಮಾಡಲು ಆಗದ ಪರಿಸ್ಥಿತಿಯನ್ನು ಇಂದಿಗೂ ಎದುರಿಸುತ್ತಿದ್ದಾರೆ. ದಿನನಿತ್ಯದ ಬಸ್ ಪ್ರಯಾಣಕ್ಕೆ ಹಣವಿಲ್ಲದೇ ಒದ್ದಾಡುವ ಮಹಿಳೆಯರನ್ನು ಮತ್ತು ಶಾಲಾ ಮಕ್ಕಳನ್ನು ಸ್ಲಂ ಪ್ರದೇಶಗಳಲ್ಲಿ ಇಂದಿಗೂ ಕಾಣಬಹುದು.

ವಿರೋಧ ಪಕ್ಷದ ಬಿಜೆಪಿ ನಾಯಕರು ‘ಉಚಿತ ಬಸ್ ಪ್ರಯಾಣ ಇರಲಿ; ಮೊದಲು ಬಸ್ ಬಿಡಿ’ ಎಂದು ವ್ಯಂಗ್ಯವಾಡುತ್ತಿದ್ದಾರೆ. ‘ಚಲಾಯಿಸಲು ಬಸ್‌ಗಳೇ ಇಲ್ಲ. ಇದರಲ್ಲಿ ಉಚಿತ ಪ್ರಯಾಣ ಮಾಡುವುದು ಎಲ್ಲಿಂದ’ ಎಂಬುದು ಅವರ ವಾದವಾಗಿದೆ. ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ನೀವು, ಈ ನಾಲ್ಕು ವರ್ಷಗಳಿಂದ ಸಾರಿಗೆ ಇಲಾಖೆಯನ್ನು ಯಾವ ಮಟ್ಟಕ್ಕೆ ಇಳಿಸಿದ್ದಿರಿ ಎಂಬುದಕ್ಕೆ ನೀವೇ ಸಾಕ್ಷಿ.

ಸಾರಿಗೆ ನೌಕರರಿಗೆ ಸರಿಯಾಗಿ ಸಂಬಳ ಕೊಡದೆ; ಸಾರಿಗೆ ನೌಕರರ ಪ್ರತಿಭಟನೆಗಳನ್ನು ಹತ್ತಿಕ್ಕಿ; ಸಾರಿಗೆ ಮಹಿಳಾ ನಿರ್ವಾಹಕರನ್ನು ಬೀದಿಗಿಳಿದು ಹೋರಾಡುವಂತೆ ಮಾಡಿ, ಅವರನ್ನು ಗೋಳಾಡಿಸಿದ ನಿಮ್ಮನ್ನು ಜನ ಯಾಕೆ ತಿರಸ್ಕರಿಸಿದ್ದಾರೆ ಎಂಬುದನ್ನು ಪರಾಮರ್ಶೆ ಮಾಡಿಕೊಂಡು, ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿದರೆ, 2024ರ ಸಂಸತ್ ಚುನಾವಣೆಯಲ್ಲಿ ಅನುಕೂಲವಾಗುತ್ತದೆ.

ಕಾಂಗ್ರೆಸ್ ಪಕ್ಷವು ದೇಶದಲ್ಲಿ ಕಳೆದುಕೊಂಡಿದ್ದ ವರ್ಚಸ್ಸನ್ನು ಮರಳಿ ಪಡೆಯುವುದಕ್ಕಾಗಿ ಮತ್ತು 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಬಗ್ಗುಬಡಿಯಲಿಕ್ಕಾಗಿ ಕಾಂಗ್ರೆಸ್ ಸರ್ಕಾರ ಈ ಎಲ್ಲಾ 5 ಗ್ಯಾರಂಟಿಗಳನ್ನು ಜಾರಿ ಮಾಡಿಯೇ ತೀರುತ್ತದೆ. ಅದುಮಾತ್ರವಲ್ಲ, ಈ ಯಶಸ್ಸು ಕಾರ್ಯಕ್ರಮಗಳನ್ನು ಈ ವರ್ಷ ಅಂತ್ಯದಲ್ಲಿ ನಡೆಯಲಿರುವ 4 ವಿಧಾನಸಭಾ ಚುನಾವಣೆಗಳಲ್ಲೂ ಕಾರ್ಯರೂಪಕ್ಕೆ ತರಲು ಕಾಂಗ್ರೆಸ್ ಪಕ್ಷ ಮುಂದಾಗಿದೆ.

ಬಿಜೆಪಿ ರಾಷ್ಟ್ರಮಟ್ಟದಲ್ಲಿ ಬದಲಿ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದೆ. ರಾಷ್ಟ್ರಮಟ್ಟದ ಬಿಜೆಪಿ ನಾಯಕರಿಗೆ 2024ರ ಚುನಾವಣೆಯಲ್ಲಿ ಪಕ್ಷವನ್ನು ಮೂರನೇ ಬಾರಿಗೆ ಅಧಿಕಾರಕ್ಕೆ ತರಬೇಂಬ ಪೀಕಲಾಟ. ತಿಂಗಳು ಕಳೆದರು ಇನ್ನು ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕ ಯಾರು ಎಂಬುದನ್ನು ಹೇಳಲು ಅವರಿಗೆ ಸಾದ್ಯವಾಗುತಿಲ್ಲ. ವರಿಷ್ಟರನ್ನು ಭೇಟಿಯಾಗಿ ಇದರ ಬಗ್ಗೆ ಚರ್ಚಿಸುವ ಧೈರ್ಯವೂ ಇಲ್ಲಿನ ನಾಯಕರಿಗೆ ಇಲ್ಲ.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಸದನದಲ್ಲಿ ಎದುರಿಸುವ ಸಮರ್ಥ ನಾಯಕರ ಕೊರತೆಯೂ ಬಿಜೆಪಿಯಲ್ಲಿ ಎದ್ದು ಕಾಣುತ್ತಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳನ್ನು ವ್ಯಂಗ್ಯ ಮಾಡಿಕೊಂಡು ಓಡಾಡುತ್ತಿದ್ದರೆ, ಕಳೆದ ವಿಧಾನಸಭಾ ಚುನವಣೆಯ ಫಲಿತಾಂಶವೇ 2024ರ ಸಂಸತ್ ಚುನಾವಣೆಯಲ್ಲಿ ಮರುಕಳಿಸುತ್ತದೆ ಎಂಬುದು ಗ್ಯಾರಂಟಿ!

ರಾಜಕೀಯ

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯು ಮೇ 10 ರಂದು ಎಲ್ಲಾ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನಡೆಯಿತು. ಮೇ 13 ರಂದು ಮತ ಎಣಿಕೆ ನಡೆಯಿತು. ಇದರಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಸೋಲಿಸಿ ಬಹುಮತಕ್ಕಿಂತ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗಳಿಸಿತು.

ಈ ಗೆಲುವಿನೊಂದಿಗೆ ಬಿಜೆಪಿಗೆ ದಕ್ಷಿಣ ಭಾರತದ ಬಾಗಿಲು ಸಂಪೂರ್ಣವಾಗಿ ಮುಚ್ಚಿದೆ ಎಂದು ರಾಜಕೀಯ ವಿಮರ್ಶಕರು ಅಭಿಪ್ರಾಯಪಡುತ್ತಿದ್ದಾರೆ. ಮೇಲಾಗಿ ಕರ್ನಾಟಕದಲ್ಲಿ ಬಿಜೆಪಿಯ ಸೋಲು ಇತರ ರಾಜ್ಯಗಳಲ್ಲೂ ಪ್ರತಿಧ್ವನಿಸಲಿದೆ ಎಂದು ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ಹೇಳಿದ್ದವು.

ಈ ಹಿನ್ನಲೆಯಲ್ಲಿ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಬಳಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಇತ್ತೀಚಿನ ಸಮೀಕ್ಷೆಯ ಫಲಿತಾಂಶಗಳು ಹೇಳುತ್ತಿವೆ. ಅಲ್ಲಿ ನಡೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 230 ಸ್ಥಾನಗಳಲ್ಲಿ 114 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು. ನಂತರ ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಅಧಿಕಾರ ಹಿಡಿಯಿತು.

ಆದರೆ ಕಳೆದ ವರ್ಷ 2020ರಲ್ಲಿ 6 ಸಚಿವರು ಸೇರಿದಂತೆ 22 ಶಾಸಕರು ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಇದರ ಪರಿಣಾಮವಾಗಿ ಅಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿ ಬಿಜೆಪಿ ಅಧಿಕಾರಕ್ಕೆ ಬಂತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಅಲ್ಲಿ ಅಸಮಾಧಾನವೇ ಹೆಚ್ಚಾಗಿತ್ತು.

ಸದ್ಯದಲ್ಲೇ ಅಲ್ಲಿ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ, ನವಭಾರತ್ ಸಮಾಚಾರ್ (Navbharat Samachar) ಎಂಬ ಸುದ್ದಿ ಸಂಸ್ಥೆ, ಮಧ್ಯಪ್ರದೇಶದಲ್ಲಿ ಮುಂದಿನ ಸರ್ಕಾರವನ್ನು ಯಾರು ರಚಿಸುತ್ತಾರೆ ಎಂಬುದರ ಕುರಿತು ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ. ಆ ಸಮೀಕ್ಷೆಯಲ್ಲಿ ಬಿಜೆಪಿ ಕೇವಲ 55 ಸ್ಥಾನಗಳನ್ನು ಮಾತ್ರ ಪಡೆಯಲಿದೆ ಮತ್ತು ಕಾಂಗ್ರೆಸ್ ಬಹುಮತಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ.

ಈ ಹಿಂದಿನ ಸಮೀಕ್ಷೆಗಳು ಕೂಡ ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದವು ಎಂಬುದು ಗನಾರ್ಹ.