ಗಿರೀಶ್ ಕುಮಾರ್, ಯಾದಗಿರಿ
ಯಾದಗಿರಿ: ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಂ ಸಮುದಾಯದ ವಕ್ಫ್ ಆಸ್ತಿಯನ್ನು ಕಬಳಿಸಲು ಕೇಂದ್ರ ಸರಕಾರ ಮಾಡಿದ ಇದೊಂದು ಕುತಂತ್ರವಾಗಿದೆ ಎಂದು ಜಂಟಿ ಕ್ರಿಯಾ ಸಮಿತಿಯ ವಹೀದಮೀಯಾ ಅವರು ಹೇಳಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು “ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಂ ಸಮುದಾಯದ ಧಾರ್ಮಿಕ ಆಚರಣೆಗಳು ಹಾಗೂ ಅವರ ವೈಯಕ್ತಿಕ ಕಾನೂನುಗಳಿಗೆ ಧಕ್ಕೆ ಉಂಟು ಮಾಡುವುದಾಗಿದೆ. ಕೇಂದ್ರ ಸರ್ಕಾರವು ಸಮುದಾಯವನ್ನು ಇಕ್ಕಟ್ಟಿಗೆ ಸಿಲುಕಿಸಿ ವಕ್ಫ್ ಆಸ್ತಿಯನ್ನು ಲಪಟಾಯಿಸುವಂತಾಗಿದೆ” ಎಂದು ಹೇಳಿದರು.
“ವಕ್ಫ್ ಆಸ್ತಿಯು ಸಾವಿರಾರು ವರ್ಷಗಳ ಧಾರ್ಮಿಕ ಇತಿಹಾಸವನ್ನು ಹೊಂದಿದೆ. ವಕ್ಫ್ ಆಸ್ತಿ ಮುಸ್ಲಿಂ ಸಮುದಾಯದ ವ್ಯಕ್ತಿಗಳಿಂದ ದಾನದ ರೂಪದಲ್ಲಿ ಹರಿದು ಬಂದ ಆಸ್ತಿಯಾಗಿದೆ. ಯಾವುದೇ ಸರ್ಕಾರದ ಅಥವಾ ಇತರ ಸಮುದಾಯದ ಆಸ್ತಿಯಲ್ಲ. ಇದನ್ನು ಮಸೀದಿಗಳು, ಖಬರಸ್ತಾನ, ದರ್ಗಾ, ಅಶೂರಖಾನಾ ಶಾಲೆಗಳು ಇದಕ್ಕಾಗಿ ಬಳಸಲಾಗುತ್ತದೆ.
ಈ ಆಸ್ತಿಯಿಂದ ಬರುವ ಹಣವನ್ನು ಸಮುದಾಯದ ಬಡಜನ ಉದ್ದಾರ ಹಾಗೂ ಇತರ ಸಮಾಜದ ಒಳಿತಿಗಾಗಿ ಬಳಸಲಾಗುತ್ತದೆ. ಆದರೆ ವಕ್ಫ್ ಆಸ್ತಿಯನ್ನು ಮಾರುವಂತಿಲ್ಲ. ಹಾಗೂ ದಾನದ ರೂಪದಲ್ಲೂ ಇತರರಿಗೆ ನೀಡುವಂತಿಲ್ಲ. ಹಾಗಾಗಿ, ಈ ಆಸ್ತಿಯು ಮುಸ್ಲಿಂ ಸಮುದಾಯದ ಧಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಉತ್ತಮ ರೀತಿಯಲ್ಲಿ ಬಳಕೆಯಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಹೊಸ ತಿದ್ದುಪಡಿ ಮಸೂದೆಯಿಂದ, ಸರಕಾರವು ಎಲ್ಲಾ ಹಂತದ ಜವಾಬ್ದಾರಿಗಳು ಹಾಗೂ ಅಧಿಕಾರವನ್ನು ವಕ್ಫ್ ಮಂಡಳಿಯಿಂದ ಕಿತ್ತುಕೊಂಡು, ಅಧಿಕಾರದಲ್ಲಿ ಹಸ್ತಕ್ಷೇಪವನ್ನು ಮಾಡಿ ನಿರಂಕುಶ ಆಡಳಿತ ನಡೆಸುವ ಹುನ್ನಾರ ಮಾಡುತ್ತಿದೆ. ಇದು ಸಂವಿಧಾನ ವಿರೋಧಿ ಮಸೂದೆಯಾಗಿದೆ. ಮತ್ತು ಸಂವಿಧಾನಕ್ಕೆ ಮಾರಕವಾಗಿದೆ” ಎಂದರು.
“ಈ ಮಸೂದೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ನಾಳೆ ಸಾಂಕೇತಿಕವಾಗಿ ಒಂದು ದಿನದ ಧರಣಿ ಸತ್ಯಾಗ್ರಹವನ್ನು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಹಮ್ಮಿಕೊಳ್ಳಲಾಗಿದ್ದು, ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಗುವುದು” ಎಂದು ಹೇಳಿದರು.
ಪತ್ರಿಕಾ ಘೋಷ್ಠಿಯಲ್ಲಿ, ಉಪಾಧ್ಯಕ್ಷರಾದ ಜಿಲಾನಿಸಾಬ್ ಅಪಘಾನ, ಅಲಹಜ್ ಗುಲಾಮ ಮಹಿಬೂಬಸಾಬ, ಎಸ್.ಮುಪ್ತಿ ಮುನೀರ ಅಹಮದಸಾಬ, ಸ್ವಾಲೆ ಅಲ್ ಹಾಜರಿ, ಮನಸೂರ ಅಪಘಾನ, ಇರ್ಪಾನ ಬಾದಲ್, ಡಾ.ರಫೀಕ್ ಸೌದಾಗರ, ಜಿ.ಹಫೀಜ್ ಪಟೇಲ್, ಖಾಜಿ ಇಂತಿಯಾಜುದ್ದೀನ್, ಅಬ್ದುಲ್ ರಜಾಕ್, ಸದ್ದಾಂ ಹುಸೇನ್, ಸೇರಿದಂತೆ ಅನೇಕರು ಇದ್ದರು.