ನವದೆಹಲಿ: ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಪಟೂರ್ ಮುನ್ಸಿಪಲ್ ಕೌನ್ಸಿಲ್ ಕಟ್ಟಡದ ನಾಮಫಲಕದಲ್ಲಿ ಉರ್ದು ಬಳಕೆಯನ್ನು ವಿರೋಧಿಸಿ ಮಾಜಿ ಕೌನ್ಸಿಲರ್ ಒಬ್ಬರು ಅರ್ಜಿ ಸಲ್ಲಿಸಿದ್ದರು.
“ನಮ್ಮ ತಪ್ಪು ಕಲ್ಪನೆಗಳು, ಒಂದು ಭಾಷೆಯ ವಿರುದ್ಧ ನಮ್ಮ ತಪ್ಪು ಆಲೋಚನೆಗಳನ್ನು ಸಹ ವಾಸ್ತವದ ವಿರುದ್ಧ ಪರೀಕ್ಷಿಸಬೇಕು. ನಮ್ಮ ರಾಷ್ಟ್ರದ ದೊಡ್ಡ ವೈವಿಧ್ಯತೆ, ನಮ್ಮ ಶಕ್ತಿ ಎಂದಿಗೂ ನಮ್ಮ ದೌರ್ಬಲ್ಯವಾಗಲು ಸಾಧ್ಯವಿಲ್ಲ. ಉರ್ದು ಮತ್ತು ಎಲ್ಲಾ ಭಾಷೆಗಳೊಂದಿಗೂ ಸ್ನೇಹ ಬೆಳೆಸೋಣ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. “ಉರ್ದು ಭಾರತಕ್ಕೆ ಪರಕೀಯ ಎಂಬುದು ತಪ್ಪು ಕಲ್ಪನೆ” ಎಂದು ಹೇಳಿರುವ ನ್ಯಾಯಾಲಯ, “ಉರ್ದು ಈ ನೆಲದಲ್ಲಿ ಹುಟ್ಟಿದ ಭಾಷೆ” ಎಂದೂ ಹೇಳಿದೆ.
ನ್ಯಾಯಮೂರ್ತಿ ಧುಲಿಯಾ ಉರ್ದು ಮತ್ತು ಭಾಷೆಗಳ ಪರಿಕಲ್ಪನೆಗಳನ್ನು ವಿವರಿಸಿದರು. “ಭಾಷೆ ಎಂಬುದು ಧರ್ಮವಲ್ಲ. ಭಾಷೆ ಒಂದು ಸಮುದಾಯಕ್ಕೆ, ಒಂದು ದೇಶಕ್ಕೆ, ಒಂದು ಜನಸಮೂಹಕ್ಕೆ ಸೇರಿದ್ದು; ಒಂದು ಧರ್ಮಕ್ಕ ಅಲ್ಲ. ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ. “ಭಾಷೆ ಎಂದರೆ ಸಂಸ್ಕೃತಿ. ಒಂದು ಸಮಾಜ ಮತ್ತು ಅದರ ಜನರ ನಾಗರಿಕ ಪ್ರಗತಿಯನ್ನು ಅಳೆಯುವ ಮಾನದಂಡವಾಗಿ ಭಾಷೆಯಿದೆ.
ಭಾಷೆ ಕಲಿಕೆಗೆ ಸಾಧನವಾಗುವ ಮೊದಲು, ಅದರ ಆರಂಭಿಕ ಮತ್ತು ಪ್ರಾಥಮಿಕ ಉದ್ದೇಶ ಯಾವಾಗಲೂ ಸಂವಹನವಾಗಿರುತ್ತದೆ” ಎಂದು ನ್ಯಾಯಮೂರ್ತಿ ಥುಲಿಯಾ ಹೇಳಿದರು. “ಇಲ್ಲಿ ಉರ್ದು ಬಳಸುವ ಉದ್ದೇಶ ಕೇವಲ ಸಂವಹನಕ್ಕಾಗಿಯೇ. ಪುರಸಭೆಯು ಮಾಡಬೇಕಾಗಿದ್ದೆಲ್ಲವೂ ಒಂದು ಉಪಯುಕ್ತ ಸಂವಹನ ಮಾರ್ಗವನ್ನು ಸ್ಥಾಪಿಸುವುದಷ್ಟೆ. ಬಾಂಬೆ ಹೈಕೋರ್ಟ್ ಒತ್ತಿ ಹೇಳಿದಂತೆ ಇದು ಭಾಷೆಯ ಮೂಲ ಉದ್ದೇಶವಾಗಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಉರ್ದು ಭಾಷೆಯು ಭಾರತದಲ್ಲಿ ಹೆಚ್ಚು ಮಾತನಾಡುವ 6ನೇ ಅಧಿಕೃತ ಭಾಷೆಯಾಗಿದೆ. ವಾಸ್ತವವಾಗಿ, ನಮ್ಮ ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನಸಂಖ್ಯೆಯ ಒಂದು ಭಾಗವು ಇದನ್ನು ಮಾತನಾಡುತ್ತದೆ.
“ಮರಾಠಿ ಮತ್ತು ಹಿಂದಿಯಂತೆ ಉರ್ದು ಕೂಡ ಇಂಡೋ-ಆರ್ಯನ್ ಭಾಷೆಯಾಗಿರುವುದರಿಂದ ಈ ಕಲ್ಪನೆ ತಪ್ಪಾಗಿದೆ ಎಂದು ನಾವು ಭಯಪಡುತ್ತೇವೆ. ಇದು ಈ ನೆಲದಲ್ಲಿ ಹುಟ್ಟಿದ ಭಾಷೆಯಾಗಿದೆ. ವೈವಿಧ್ಯಮಯ ಸಾಂಸ್ಕೃತಿಕ ಹಿನ್ನೆಲೆಯ ಜನರ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಪರಸ್ಪರ ಸಂವಹನ ನಡೆಸುವ ಅಗತ್ಯದಿಂದಾಗಿ ಉರ್ದು ಬೆಳೆದು ಪ್ರವರ್ಧಮಾನಕ್ಕೆ ಬಂದಿತು. ಇದು ಶತಮಾನಗಳಿಂದ ಹೆಸರಾಂತ ಕವಿಗಳ ಆದ್ಯತೆಯ ಭಾಷೆಯೂ ಆಗಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.