ಡಿ.ಸಿ.ಪ್ರಕಾಶ್
ಮಂಗಳವಾರ (ಏಪ್ರಿಲ್ 22) ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ 28 ಜನರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸಾವನ್ನಪ್ಪಿರುವುದು ಆಘಾತವನ್ನು ಉಂಟು ಮಾಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಬೇಸಿಗೆ ಪ್ರವಾಸೋದ್ಯಮ ಆರಂಭವಾಗಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಬೆಟ್ಟದಲ್ಲಿ ದಟ್ಟವಾದ ಕಾಡುಗಳು, ಸ್ಪಷ್ಟವಾದ ತೊರೆಗಳು ಮತ್ತು ವಿಶಾಲವಾದ ಹುಲ್ಲುಗಾವಲುಗಳು ಇರುವುದರಿಂದ ಈ ಪ್ರದೇಶವನ್ನು ‘ಮಿನಿ ಸ್ವಿಟ್ಜರ್ಲೆಂಡ್’ ಎಂದು ಕರೆಯಲಾಗುತ್ತದೆ. ಇದರಿಂದ ಪಹಲ್ಗಾಮ್ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಇಲ್ಲಿನ ಬೈಸರನ್ ಕಣಿವೆ ಪ್ರದೇಶಕ್ಕೆ ವಾಹನಗಳಿಂದ ಹೋಗಲು ಸಾದ್ಯವಿಲ್ಲ. ಕಾಲ್ನಡಿಗೆಯಲ್ಲಿ ಅಥವಾ ಕುದುರೆಯ ಮೂಲಕ ಮಾತ್ರ ತಲುಪಬಹುದು.
ಇಲ್ಲಿಗೆ ಭೇಟಿ ನೀಡಿದ್ದ ಕೆಲ ಪ್ರವಾಸಿಗರನ್ನು ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸೇನಾ ಸಮವಸ್ತ್ರದಲ್ಲಿದ್ದ ಭಯೋತ್ಪಾದಕರು ಸುತ್ತುವರಿದು ಗುಂಡಿನ ದಾಳಿ ನಡೆಸಿದ್ದಾರೆ. ಬಯಲು ಪ್ರದೇಶವಾದ್ದರಿಂದ ಪ್ರವಾಸಿಗರು ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಈ ದಾಳಿಯಲ್ಲಿ ವಿದೇಶಿ ಪ್ರವಾಸಿಗರು ಸೇರಿದಂತೆ 28 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಇದು ಉಗ್ರರ ಯೋಜಿತ ದಾಳಿಯಂತೆ ಕಾಣುತ್ತಿದೆ. ಉಗ್ರರ ದಾಳಿ ನಡೆದ ಸ್ಥಳಕ್ಕೆ ಭದ್ರತಾ ಪಡೆಗಳು ದೌಡಾಯಿಸಿದ್ದು, ಶೋಧ ಕಾರ್ಯ ಆರಂಭಿಸಿವೆ. ಸ್ಥಳೀಯರು ಕುದುರೆಗಳ ಸಹಾಯದಿಂದ ಗಾಯಾಳುಗಳನ್ನು ರಕ್ಷಿಸಿದ್ದಾರೆ. ನಂತರ ಸೇನಾ ಹೆಲಿಕಾಪ್ಟರ್‌ಗಳನ್ನು ರವಾನಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
2019ರಲ್ಲಿ ಕಾಶ್ಮೀರದ ಪುಲ್ವಾಮಾ ಪ್ರದೇಶದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 47 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಆ ಬಳಿಕ ಉಗ್ರರು ನಡೆಸಿದ ಅತಿ ದೊಡ್ಡ ದಾಳಿ ಇದಾಗಿದೆ. ಅಮೆರಿಕಾದ ಉಪಾಧ್ಯಕ್ಷ ಜೆ.ಡಿ.ವಾನ್ಸ್ ಭಾರತ ಪ್ರವಾಸದಲ್ಲಿರುವಾಗ ನಡೆದಿರುವ ದಾಳಿ ಆಘಾತಕ್ಕೆ ಕಾರಣವಾಗಿದೆ.
ಕಾಶ್ಮೀರದಲ್ಲಿ ಈ ವರ್ಷದ ಅಮರನಾಥ ಯಾತ್ರೆ ಜುಲೈ 3 ರಂದು ಆರಂಭವಾಗಲಿದೆ. ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಮತ್ತು ಗಂದರ್ಬಾಲ್ ಜಿಲ್ಲೆಯ ಬಲ್ಟಾಲ್ ಮೂಲಕ ಯಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಈ ದಾಳಿಯು ಅಮರನಾಥ ಯಾತ್ರೆಯ ಭದ್ರತೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಸೇನಾ ಸಮವಸ್ತ್ರದಲ್ಲಿ ಬಂದ ಉಗ್ರರು, ಪ್ರವಾಸಿಗರನ್ನು ಯಾವುದೇ ದಯೆಯಿಲ್ಲದೆ ಅತ್ಯಂತ ಕ್ರೂರವಾಗಿ ಗುಂಡಿಕ್ಕಿ ಕೊಲ್ಲುವುದೆಲ್ಲವೂ ಭಯೋತ್ಪಾದನೆಯ ಪರಮಾವಧಿ. ಭಾರತೀಯ ನಾಗರಿಕರಿಗೆ ಭದ್ರತೆ ಒದಗಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ಭದ್ರತಾ ನೀತಿಯನ್ನು ಕೂಡ ಈ ಸಂದರ್ಭದಲ್ಲಿ ಖಂಡಿಸಬೇಕಾಗಿದೆ.
ಇಂತಹ ದುರಂತ ಪರಿಸ್ಥಿತಿಯಲ್ಲೂ ‘ಹಿಂದೂಗಳ ಮೇಲೆ ಉಗ್ರರ ದಾಳಿ’ ಎಂದು ಹೇಳಿಕೊಂಡು, ಕೂಗಾಡುತ್ತಿರುವ ಕೋಮುವಾದಿ ಪಕ್ಷಗಳ ಮುಖಂಡರುಗಳಿಗೆ ಮತ್ತು ಅದರ ತತ್ವ-ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಿರುವ ಕೆಲವೊಂದು ಮಾಧ್ಯಮಗಳಿಗೆ ನಾಚಿಕೆಯಾಗಬೇಕು.