ಡಿ.ಸಿ.ಪ್ರಕಾಶ್
ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವಾನ್ಸ್ ಭಾರತಕ್ಕೆ ಆಗಮಿಸಿದ್ದಾರೆ. ಭಾರತದ ಪ್ರಧಾನಿ ಮೋದಿ ಅವರು ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದರು. ವಿಶ್ವದ ಗಮನ ಭಾರತದತ್ತ ನೆಟ್ಟಿತ್ತು. ಈ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರೂರ ದಾಳಿ ನಡೆದಿತ್ತು.
ಪಹಲ್ಗಾಮ್ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣವಾಗಿದೆ. ಭಾರತದ ವಿವಿಧ ಭಾಗಗಳಿಂದ ಬಂದಿದ್ದ ಪ್ರವಾಸಿಗರು, ವಿಶ್ರಾಂತಿಯ ಮನಸ್ಥಿತಿಯಲ್ಲಿದ್ದ ಆ ಕ್ಷಣಲ್ಲಿ, ಹಠಾತ್ತಾಗಿ ಬಂದಿಳಿದ ಗುಂಪೊಂದು ಮನಬಂದಂತೆ ಗುಂಡು ಹಾರಿಸಿತು. ಈ ಘಟನೆಯಲ್ಲಿ 25ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದೇಶವು ಪ್ರಕ್ಷುಬ್ಧವಾಗಿದೆ. ವಿಶ್ವ ನಾಯಕರು ಈ ದಾಳಿಯನ್ನು ಖಂಡಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿದ್ದ ಪ್ರಧಾನಿ ಮೋದಿ ಅವರು ತಕ್ಷಣವೇ ತಮ್ಮ ಪ್ರವಾಸವನ್ನು ರದ್ದುಪಡಿಸಿ ಭಾರತಕ್ಕೆ ಮರಳಿದ್ದರು. ಅದೇ ಸಮಯದಲ್ಲಿ, ‘ಈ ದಾಳಿಗೆ ನಾವೇ ಹೊಣೆ. ಎಂದು ಭಯೋತ್ಪಾದಕ ಗುಂಪೊಂದು ಹೊಣೆ ಹೊತ್ತುಕೊಂಡಿದೆ’ ಎಂದು ಗುಪ್ತಚರ ಅಧಿಕಾರಿಗಳು ಹೇಳುತ್ತಾರೆ.
ಈ ರೀತಿ ಒಂದೇ ದಿನದಲ್ಲಿ ಇಡೀ ದೇಶವನ್ನೇ ತಲ್ಲಣಗೊಳಿಸಿದೆ ಎನ್ನಲಾದ ಭಯೋತ್ಪಾದಕ ಗುಂಪು ಇದನ್ನು ಹೇಗೆ ಮಾಡಿತು? ಗುಪ್ತಚರ ಅಧಿಕಾರಿ ಮತ್ತು ಭಾರತೀಯ ನೌಕಾಪಡೆಯ ಅಧಿಕಾರಿಯನ್ನು ಉಗ್ರರು ಕೊಲ್ಲುತ್ತಿದ್ದರೆ, ಭಾರತದ ಗುಪ್ತಚರ ಏನು ಮಾಡುತಿತ್ತು? ಯಾರು ಇವರು?
ಆರ್ಟಿಕಲ್ 370-ದಾಳಿಗಳು
ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಭಾರತೀಯ ಸಂವಿಧಾನದ 370ನೇ ವಿಧಿಯನ್ನು ಆಗಸ್ಟ್ 5, 2019 ರಂದು ರದ್ದುಗೊಳಿಸಲಾಯಿತು. ಬಹುತೇಕ ವಿರೋಧ ಪಕ್ಷಗಳು ಇದನ್ನು ವಿರೋಧಿಸಿದವು. ಕೆಲವು ಪಕ್ಷಗಳು, ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಅಥವಾ ವಿರೋಧಿಸಲು ತತ್ತರಿಸಿತು. ಈ ತೆರವು ಅಸಿಂಧು ಎಂದು ಘೋಷಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳು ದಾಖಲಾಗಿದ್ದವು.(370ನೇ ವಿಧಿಯನ್ನು ರದ್ದುಗೊಳಿಸಿದ್ದು ಸರಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು) ಅದೇ ಸಮಯದಲ್ಲಿ, ಈ ವಿಧಿಯನ್ನು ರದ್ದುಗೊಳಿಸಿರುವುದರ ವಿರುದ್ಧ ಕಾಶ್ಮೀರದಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಇದರಿಂದ ಕೇಂದ್ರ ಸರ್ಕಾರವು ಪ್ರತಿಭಟನೆಯೊಂದಿಗೆ ವಿವಿಧ ಪ್ರತಿಕ್ರಿಯೆಗಳನ್ನು ಎದುರಿಸುವಂತಾಯಿತು. ಅವುಗಳಲ್ಲಿ ಪ್ರಮುಖವಾದದ್ದು ಅಕ್ಟೋಬರ್ 2019ರಲ್ಲಿ ಪ್ರಾರಂಭವಾದ The Resistance Front (TRF) ಎಂಬ ಸಂಘಟನೆ.
ಯಾರು ಇವರು?
ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರಿದ್ದಾ ಅಥವಾ ಪಾಕಿಸ್ತಾನಕ್ಕೆ ಸೇರಿದ್ದಾ? ಎಂಬ ರಾಜಕೀಯ ಸಂಘರ್ಷದ ಪ್ರತಿಕ್ರಿಯೆಗಳೇ ಜಮ್ಮು ಮತ್ತು ಕಾಶ್ಮೀರದ ಸುತ್ತಲೂ ನಡೆಯುತ್ತಿರುವ ಹಿಂಸಾಚಾರ ಮತ್ತು ದಾಳಿಗಳಿಗೆ ಕಾರಣ. ಸೂರ್ಯನನ್ನು ನೋಡಲು ದೀಪದ ಅವಶ್ಯಕತೆಯಿಲ್ಲ ಎಂಬಂತೆ, ಪಾಕಿಸ್ತಾನದಿಂದ ಕಾರ್ಯಾಚರಿಸುತ್ತಿರುವ ವಿವಿಧ ಭಯೋತ್ಪಾದಕ ಗುಂಪುಗಳು ಇದರ ಹಿಂದೆ ಇವೆ ಎಂಬುದನ್ನು ವಿವರಿಸುವ ಅಗತ್ಯವಿಲ್ಲ. ಅವುಗಳಲ್ಲಿ ಪ್ರಮುಖವಾದದ್ದು ಲಷ್ಕರ್-ಎ-ತೈಬಾ (LeT) ಎಂಬ ಭಯೋತ್ಪಾದಕ ಸಂಘಟನೆಯೇ.
ಶೇಖ್ ಸಜ್ಜದ್ ಗುಲ್ ನೇತೃತ್ವದಲ್ಲಿ, ಲಷ್ಕರ್-ಎ-ತೈಬಾ ಸಂಘಟನೆಯ ನೆರಳಾಗಿ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಎಂಬ ಭಯೋತ್ಪಾದಕ ಗುಂಪು ರೂಪುಗೊಂಡಿತ್ತು. ಈ ಭಯೋತ್ಪಾದಕ ಗುಂಪನ್ನು ಆರಂಭದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್-ಎ-ತೈಬಾದ ಕಾರ್ಯಕರ್ತರೊಂದಿಗೆ ರಚಿಸಲಾಗಿದೆ ಎಂದು ಹೇಳಲಾಗುತ್ತದೆ.
ಶೇಖ್ ಸಜ್ಜದ್ ಗುಲ್
ಅಕ್ಟೋಬರ್ 10, 1974 ರಂದು ಶ್ರೀನಗರದಲ್ಲಿ ಜನಿಸಿದ ಶೇಖ್ ಸಜ್ಜದ್ ಗುಲ್ ಅವರು ಲಷ್ಕರ್-ಎ-ತೈಬಾದೊಂದಿಗೆ ಸಂಬಂಧ ಹೊಂದಿದ್ದು, ಗೃಹ ಸಚಿವಾಲಯದ ಪ್ರಕಟಣೆಯ ಪ್ರಕಾರ, TRF ಕಮಾಂಡರ್ ಶೇಖ್ ಸಜ್ಜದ್ ಗುಲ್ ಅವರನ್ನು 2022ರಲ್ಲಿ UAPA ಅಡಿಯಲ್ಲಿ ಭಯೋತ್ಪಾದಕ ಎಂದು ಘೋಷಿಸಲಾಯಿತು.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ದಾಳಿಗಳಿಗೆ, ಅದರಲ್ಲೂ ನಿರ್ಧಿಷ್ಟವಾಗಿ ಇತ್ತೀಚಿನ ಪಹಲ್ಗಾಮ್ ದಾಳಿಗೆ ಲಷ್ಕರ್-ಎ-ತೈಬಾದ ಟಾಪ್ ಕಮಾಂಡರ್ ಸೈಫುಲ್ಲಾ ಕಸೂರಿ ಮತ್ತು ಖಾಲಿದ್ ಜೊತೆಗೆ ಈತ ಕೂಡ ಸಂಚಿನಲ್ಲಿ ಭಾಗಿಯಾಗಿದ್ದಾನೆ ಎಂದು ಗುಪ್ತಚರ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿವೆ.
ಹೆಸರಿನ ಕಾರಣ
ಲಷ್ಕರ್ ಮತ್ತು ಜೈಶ್-ಎ-ಮೊಹಮ್ಮದ್ ಹೆಸರುಗಳು ಧಾರ್ಮಿಕ ಅರ್ಥವನ್ನು ಹೊಂದಿದ್ದು, ಹಾಗಾಗಿ ಆ ಹೆಸರುಗಳನ್ನು ಕೈಬಿಡಬೇಕು ಎಂದು ಪಾಕಿಸ್ತಾನ ಮನವಿ ಮಾಡಿತ್ತು. ಹಾಗಾಗಿ ‘ಪ್ರತಿರೋಧ’ವನ್ನು ಸೂಚಿಸಲು The Resistance Front ಎಂಬ ಹೊಸ ಹೆಸರನ್ನು ಸೂಚಿಸಿದ್ದಾರೆ ಎನ್ನಲಾಗಿದೆ. ಆ ಹೆಸರನ್ನು ಲಷ್ಕರ್-ಎ-ತೈಬಾ ಸ್ವೀಕರಿಸಲಿಲ್ಲ. ಅದೇ ಸಮಯದಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಮಾನ್ಯ ಹೆಸರಿನಲ್ಲಿ ಸಂಘಟನೆಯನ್ನು ಅಭಿವೃದ್ಧಿಪಡಿಸುವುದು ಸೂಕ್ತವೆಂದು ತೋರುವ ಕಾರಣ, The Resistance Front ಎಂಬ ಹೆಸರಿನಲ್ಲಿ ಗುಂಪನ್ನು ರಚಿಸಲಾಗಿತ್ತು ಎಂದು ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದುವೇ ಮೊದಲ ಎಚ್ಚರಿಕೆ
ಪುಲ್ವಾಮಾ ದಾಳಿಯ ನಂತರ ಭಾರತವನ್ನು ಸ್ತಬ್ಧಗೊಳಿಸಿರುವ ಪ್ರಮುಖ ದಾಳಿಯೆಂದರೆ ಅದು ಈ ಪಹಲ್ಗಾಮ್ ದಾಳಿಯೆ ಆಗಿದೆ. ಆರ್ಟಿಕಲ್ 370 ರದ್ದಾದ ನಂತರ ಕಾಶ್ಮೀರಕ್ಕೆ ಪ್ರವಾಸಿಗರ ಆಗಮನದಲ್ಲಿ ಹೆಚ್ಚಳವಾಗಿದೆ ಎಂದು ಹೇಳಲಾಗುತ್ತದೆ. ಇದನ್ನು ಸೂಚಿಸಿ, TRF ಮೇ 30, 2019 ರಂದು ಹೊರಡಿಸಿರುವ ಹೇಳಿಕೆಯಲ್ಲಿ, ‘ಕಾಶ್ಮೀರಕ್ಕೆ ನೆಲೆಸುವ ಉದ್ದೇಶದಿಂದ ಬರುವ ಯಾವುದೇ ಭಾರತೀಯನನ್ನು ನಾಗರಿಕನಾಗಿ ಅಲ್ಲ, ಆರ್‌ಎಸ್‌ಎಸ್‌ನ ಏಜೆಂಟ್ ಎಂದೇ ಪರಿಗಣಿಸಲಾಗುವುದು. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬಹಿರಂಗವಾಗಿ ಘೋಷಿಸುತ್ತೇವೆ’ ಎಂದು ಮೊದಲ ಎಚ್ಚರಿಕೆ ನೀಡಿದ್ದರು.
ಈ ದಾಳಿಗೂ ಮುನ್ನ ಪ್ರಕಟಿಸಿದ್ದಾರೆ ಎಂದು ಹೇಳಲಾಗುತ್ತಿರುವ ಹೇಳಿಕೆಯಲ್ಲಿ, ‘ಜಮ್ಮು ಮತ್ತು ಕಾಶ್ಮೀರದಲ್ಲಿ ಅನಿವಾಸಿಗಳಿಗೆ 85 ಸಾವಿರಕ್ಕೂ ಹೆಚ್ಚು ನಿವಾಸ ಪರವಾನಗಿಗಳನ್ನು ನೀಡಲಾಗಿದೆ. ಇದು ಭಾರತೀಯ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ (IIOJK) ಜನಸಂಖ್ಯಾ ಬದಲಾವಣೆಗೆ ದಾರಿ ಮಾಡಿಕೊಡುತ್ತದೆ.
ಹೊರಗಿರುವವರು ಪ್ರವಾಸಿಗರಂತೆ ಬಂದು ಇಲ್ಲಿ ಪೋಸು ಕೊಡುತ್ತಾರೆ, ಅಪಾರ್ಟ್‌ಮೆಂಟ್‌ಗಳನ್ನು ಪಡೆದುಕೊಂಡು ನಂತರ ಈ ಭೂಮಿ ತಮ್ಮದೆಂಬಂತೆ ವರ್ತಿಸುತ್ತಾರೆ. ಇದರ ಪರಿಣಾಮವಾಗಿ, ಅಕ್ರಮವಾಗಿ ನೆಲಸಲು ಬರಲು ಪ್ರಯತ್ನಿಸುವವರ ಮೇಲೆ ಹಿಂಸಾಚಾರವನ್ನು ನಿರ್ದೇಶಿಸಲಾಗುತ್ತದೆ’ ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
‘TRFನ ಪ್ರತಿಯೊಂದು ಅಭಿಯಾನವು ಕಾಶ್ಮೀರವನ್ನು ಭಾರತದೊಂದಿಗೆ ಸಂಯೋಜಿಸುವ ಪ್ರಯತ್ನಗಳನ್ನು ತಡೆಯುವ ಗುರಿಯನ್ನು ಹೊಂದಿದೆ’ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ.
ಹಿಂಸೆಯ ಇತಿಹಾಸ!
ಏಪ್ರಿಲ್ 1, 2020 ರಂದು ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಬಳಿಯ ಗಡಿ ನಿಯಂತ್ರಣ ರೇಖೆಯಲ್ಲಿ (LoC) ಪ್ರಾರಂಭವಾದ ಸಶಸ್ತ್ರ ಸಂಘರ್ಷ ನಾಲ್ಕು ದಿನಗಳ ಕಾಲ ನಡೆಯಿತು. ಈ ಸಶಸ್ತ್ರ ದಾಳಿಯನ್ನು TRFನ ಮೊದಲ ದಾಳಿ ಎಂದು ಉಲ್ಲೇಖಿಸಲಾಗುತ್ತದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಐದು ದಿನಗಳ ಕಾಲ ಉಭಯ ಪಕ್ಷಗಳ ನಡುವೆ ನಡೆದ ಕಾಳಗದಲ್ಲಿ ಸೇನಾ ವಿಶೇಷ ಪಡೆ ಅಧಿಕಾರಿ (JCO) ಸೇರಿದಂತೆ ಐವರು ಯೋಧರು ಹುತಾತ್ಮರಾದರು. ಅದನ್ನು ಅನುಸರಿಸಿ, ಕಾಲಕಾಲಕ್ಕೆ ಸಣ್ಣ ಪ್ರಮಾಣದಲ್ಲಿ ದಾಳಿಗಳು ನಡೆಯುತ್ತಲೇ ಇದ್ದವು.
TRF ಹಿಂಸೆ-ನಿಷೇಧ!
TRF ತನ್ನ ಬೆಂಬಲಿಗರನ್ನು ಒಟ್ಟುಗೂಡಿಸಲು ಮತ್ತು ತನ್ನ ಉಗ್ರಗಾಮಿ ಗುಂಪಿಗೆ ಯುವಕರನ್ನು ಸೇರಿಸಿಕೊಳ್ಳಲು ಸಾಮಾಜಿಕ ಮಾಧ್ಯಮವನ್ನು ಬಳಸಲಾರಂಭಿಸಿತು. ಅದನ್ನು ಅನುಸರಿಸಿ, ‘ಜಮ್ಮು ಮತ್ತು ಕಾಶ್ಮೀರಕ್ಕೆ ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳ ಕಳ್ಳಸಾಗಣೆ, ಭಯೋತ್ಪಾದಕ ಗುಂಪುಗಳಿಗೆ ನೇಮಕಾತಿ’ ಮುಂತಾದ ಆರೋಪಗಳನ್ನು ಆಧರಿಸಿ, ಜನವರಿ 2023ರಲ್ಲಿ, ಗೃಹ ಸಚಿವಾಲಯವು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿಯಲ್ಲಿ TRF ಅನ್ನು “ಭಯೋತ್ಪಾದಕ ಸಂಘಟನೆ” ಎಂದು ಘೋಷಿಸಿ ನಿಷೇಧಿಸಿತು.
ಹೊಣೆಗಾರಿಕೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನಂತಹ ವಿವಿಧ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಗುಪ್ತಚರ ವರದಿಗಳು ಸೂಚಿಸುತ್ತವೆ. ಆದರೆ, ಜಮ್ಮು ಮತ್ತು ಕಾಶ್ಮೀರದಾದ್ಯಂತ ವಿವಿಧ ದಾಳಿಗಳು ನಡೆದಿದ್ದರೂ, ಟಿಆರ್‌ಎಫ್ ಮಾತ್ರ 2020 ರಿಂದ ಹೊಣೆಗಾರಿಕೆಯನ್ನು ವಹಿಸಿಕೊಳ್ಳುತ್ತಿದೆ ಎಂದು ವರದಿಗಳು ಸೂಚಿಸುತ್ತವೆ. ಅಕ್ಟೋಬರ್ 2024ರಲ್ಲಿ ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ನಿರ್ಮಾಣ ಸ್ಥಳದ ಮೇಲೆ ದಾಳಿ ಮಾಡಲಾಯಿತು. ಇದರ ಪರಿಣಾಮ, ಸ್ಥಳೀಯ ವೈದ್ಯ ಮತ್ತು ಆರು ವಲಸೆ ಕಾರ್ಮಿಕರ ಹತ್ಯೆಗೆ ಕಾರಣವಾಯಿತು.
ಈ ದಾಳಿಗೆ ಕೂಡ, ನಿಷೇಧಿತ ಸಂಘಟನೆ ಟಿಆರ್‌ಎಫ್ ಜವಾಬ್ದಾರಿ ವಹಿಸಿಕೊಂಡಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರು, ಭದ್ರತಾ ಪಡೆಗಳು ಮತ್ತು ರಾಜಕೀಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಹಲವಾರು ದಾಳಿಗಳ ಹೊಣೆಗಾರಿಕೆಯನ್ನು ಸಹ ಈ ಭಯೋತ್ಪಾದಕ ಸಂಘಟನೆಯೇ ಹೊತ್ತುಕೊಂಡಿದೆ. ಅದೇ ರೀತಿ ಇತ್ತೀಚೆಗೆ ನಡೆದ ಪಹಲ್ಗಾಮ್ ದಾಳಿಯ ಹೊಣೆಯನ್ನೂ ಈ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿದೆ ಎಂದು ಭಾರತೀಯ ಗುಪ್ತಚರ ಅಧಿಕಾರಿಗಳು ಹೇಳುತ್ತಿದ್ದಾರೆ.