ನವದೆಹಲಿ: ದೇಶದ ಭದ್ರತೆ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸುದ್ದಿ ಪ್ರಕಟಿಸುವಾಗ ಎಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರ ಮಾಧ್ಯಮಗಳಿಗೆ ಸಲಹೆ ನೀಡಿದೆ.
ಈ ಸಂಬಂಧ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿರುವ ಸುತ್ತೋಲೆಯಲ್ಲಿ,
ದೇಶದ ಹಿತದೃಷ್ಟಿಯಿಂದ, ಎಲ್ಲಾ ಮಾಧ್ಯಮಗಳು, ಸುದ್ದಿ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ದೇಶದ ಭದ್ರತೆ ಮತ್ತು ಭದ್ರತೆಗೆ ಸಂಬಂಧಿತ ಚಟುವಟಿಕೆಗಳ ಕುರಿತು ವರದಿ ಮಾಡುವಾಗ ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ನಿಬಂಧನೆಗಳಿಗೆ ಬದ್ಧವಾಗಿರಬೇಕು.
ಭದ್ರತಾ ಕ್ರಮಗಳು ಅಥವಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಮೂಲಗಳ-ಆಧಾರಿತ (Sources-Based) ಮಾಹಿತಿಯನ್ನು ಆಧರಿಸಿ ಯಾವುದೇ ನೇರ ಪ್ರಸಾರ, ಪ್ರದರ್ಶನ ಅಥವಾ ಸುದ್ದಿ ಬಿಡುಗಡೆ ಮಾಡಬಾರದು. ಮುಂಚಿತವಾಗಿ ಮಾಹಿತಿಯನ್ನು ಬಿಡುಗಡೆ ಮಾಡುವುದು ಶತ್ರುಗಳಿಗೆ ಸಹಾಯವಾಗಬಹುದು.
ಕಾರ್ಗಿಲ್ ಯುದ್ಧ, ಮುಂಬೈ ಭಯೋತ್ಪಾದಕ ದಾಳಿ, ಮತ್ತು ಕಂದಹಾರ್ ವಿಮಾನ ಅಪಹರಣ ಇವೆಲ್ಲವೂ ಸಂಯಮವಿಲ್ಲದೆ ವರದಿಯಾಗಿತ್ತು. ಇದು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅನಿರೀಕ್ಷಿತ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಯಿತು.
ಮಾಧ್ಯಮಗಳು, ಡಿಜಿಟಲ್ ವೇದಿಕೆಗಳು ಮತ್ತು ವ್ಯಕ್ತಿಗಳು ದೇಶದ ಭದ್ರತೆಯನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು.
ಕಾನೂನು ಬಾಧ್ಯತೆಗಳ ಜೊತೆಗೆ, ನಮ್ಮ ಜಂಟಿ ಕ್ರಮಗಳು ಕಾರ್ಯಾಚರಣೆಗಳ ನಿರಂತರತೆಗೆ ಅಥವಾ ನಮ್ಮ ಭದ್ರತಾ ಪಡೆಗಳ ಸುರಕ್ಷತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.
ಭಯೋತ್ಪಾದಕರ ವಿರುದ್ಧದ ಭದ್ರತಾ ಪಡೆಗಳ ಕಾರ್ಯಾಚರಣೆಯನ್ನು ನೇರ ಪ್ರಸಾರ ಮಾಡಬಾರದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈಗಾಗಲೇ ಸಲಹೆ ನೀಡಿದೆ. ಇದನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಮಾಧ್ಯಮಗಳು ದೇಶದ ಹಿತದೃಷ್ಟಿಯಿಂದ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ಮತ್ತು ಭದ್ರತಾ ಪಡೆಗಳ ಚಟುವಟಿಕೆಗಳನ್ನು ನೇರ ಪ್ರಸಾರ ಮಾಡಬಾರದು. ಅಂತಹ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ಸರ್ಕಾರದಿಂದ ನೇಮಕಗೊಂಡ ಅಧಿಕಾರಿ ವಿವರಣೆಯನ್ನು ನೀಡುತ್ತಾರೆ.
ಸಂಬಂಧಪಟ್ಟವರೆಲ್ಲರೂ ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯಿಂದ ಸುದ್ದಿಗಳನ್ನು ಪ್ರಕಟಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.