ನವದೆಹಲಿ: ಗಲಭೆಯಿಂದ ತೀವ್ರವಾಗಿ ಹಾನಿಗೊಳಗಾದ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಅವರು ಕೇವಲ 3 ಗಂಟೆಗಳ ಕಾಲ ಅಲ್ಲಿ ತಂಗಿದ್ದರು ಎಂಬುದು ಹಾಸ್ಯಾಸ್ಪದ ಎಂದು ಹೇಳಿದ್ದಾರೆ.
ಈ ಕುರಿತು ಅವರು ಪ್ರಕಟಿಸಿರುವ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ, “ಮಣಿಪುರದಲ್ಲಿ ಕೇವಲ 3 ಗಂಟೆಗಳ ಕಾಲ ಇದ್ದದ್ದು ಕರುಣೆಯಲ್ಲ – ಅದೊಂದು ಪ್ರಹಸನ, ಗುರುತಿಗಾಗಿ ಮಾಡುವ ಪ್ರಯಾಣ, ಗಾಯಗೊಂಡ ಜನರಿಗೆ ಮಾಡುವ ದೊಡ್ಡ ಅವಮಾನ. ಸುರಚಂದ್ಪುರ ಮತ್ತು ಇಂಫಾಲ್ನಲ್ಲಿ ನೀವು ನಡೆಸಿದ ರೋಡ್ಶೋ, ಪರಿಹಾರ ಶಿಬಿರಗಳಲ್ಲಿರುವ ಜನರ ಕೂಗು ಕೇಳಿ ತಪ್ಪಿಸಿಕೊಳ್ಳಲು ಮಾಡುವ ಹೇಡಿತನದ ತಂತ್ರವಾಗಿದೆ.
ಮಣಿಪುರದಲ್ಲಿ 864 ದಿನಗಳು ಹಿಂಸಾಚಾರ ನಡೆದಿತ್ತು. 300 ಜನರು ಸಾವನ್ನಪ್ಪಿದರು. 67,000 ಜನರು ಸ್ಥಳಾಂತರಗೊಂಡರು ಮತ್ತು 1,500 ಜನರು ಗಾಯಗೊಂಡರು. ಈ ಅವಧಿಯಲ್ಲಿ ನೀವು 46 ವಿದೇಶಗಳಿಗೆ ಪ್ರಯಾಣಿಸಿದ್ದೀರಿ. ಆದರೆ ನೀವು ತಮ್ಮ ಸಹಾನುಭೂತಿ ವ್ಯಕ್ತಪಡಿಸಲು ಎಂದಿಗೂ ತಮ್ಮ ದೇಶದ ಜನರನ್ನು ಭೇಟಿ ಮಾಡಲಿಲ್ಲ. ನೀವು ಕೊನೆಯ ಬಾರಿಗೆ ಮಣಿಪುರಕ್ಕೆ ಬಂದಿದ್ದು 2022ರ ಜನವರಿಯಲ್ಲಿ-ಚುನಾವಣೆಗಾಗಿ.
ನಿಮ್ಮ ಡಬಲ್ ಎಂಜಿನ್ಗಳು ಮಣಿಪುರದ ಮುಗ್ಧ ಜನರ ಜೀವನವನ್ನು ಧ್ವಂಸಗೊಳಿಸಿವೆ. ನೀವು ಮತ್ತು ಅಮಿತ್ ಶಾ ಎಲ್ಲಾ ಸಮುದಾಯಗಳಿಗೆ ದ್ರೋಹ ಬಗೆದಿದ್ದೀರಿ. ರಾಷ್ಟ್ರಪತಿ ಆಳ್ವಿಕೆ ಹೇರುವ ಮೂಲಕ, ನೀವು ತನಿಖೆಯಿಂದ ರಕ್ಷಣೆ ಪಡೆದುಕೊಂಡಿದ್ದೀರಿ. ಆದರೆ, ಹಿಂಸಾಚಾರ ಇನ್ನೂ ಮುಂದುವರೆದಿದೆ.
ಮಣಿಪುರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಬಿಜೆಪಿಯದ್ದಾಗಿತ್ತು. ಈಗ ಕೇಂದ್ರ ಸರ್ಕಾರ ಮತ್ತೆ ಎಡವುತ್ತಿದೆ. ನಿಮ್ಮ ಸರ್ಕಾರವು ರಾಷ್ಟ್ರೀಯ ಭದ್ರತೆ ಮತ್ತು ಗಡಿ ಗಸ್ತುಗೆ ಜವಾಬ್ದಾರವಾಗಿದೆ ಎಂಬುದನ್ನು ನೀವು ಮರೆಯಬಾರದು. ನಿಮ್ಮ ಸಣ್ಣ ಪ್ರವಾಸದ ಮೂಲಕ ನೀವು ವ್ಯಕ್ತಪಡಿಸಿದ್ದು ವಿಷಾದವೂ ಅಲ್ಲ, ತಪ್ಪಿತಸ್ಥ ಭಾವನೆಯೂ ಅಲ್ಲ. ನೀವು ನಿಮಗಾಗಿ ಒಂದು ಭವ್ಯ ಸ್ವಾಗತ ಕೂಟವನ್ನು ಆಯೋಜಿಸಿದ್ದೀರಿ. ಇದು ಬಳಲುತ್ತಿರುವವರ ಗಾಯಗಳಿಗೆ ಭಾರೀ ಹೊಡೆತವಾಗಿದೆ. ನಿಮ್ಮ ಸ್ವಂತ ಮಾತುಗಳಲ್ಲಿ ನಾನು ನಿಮ್ಮನ್ನು ಕೇಳುತ್ತೇನೆ, ನಿಮ್ಮ ರಾಜ ಧರ್ಮ ಎಲ್ಲಿದೆ?” ಎಂದು ಖರ್ಗೆ ಹೇಳಿದ್ದಾರೆ.