ಅಶ್ವಿನಿ ಬಸವರಾಜು ಕಂಠದಲ್ಲಿ "ದೇವ ದೇವ ಮಹದೇವ" ಡಾ.ವಿ.ನಾಗೇಂದ್ರ ಪ್ರಸಾದ್ ಮೆಚ್ಚುಗೆ! » Dynamic Leader
October 22, 2024
ದೇಶ ರಾಜ್ಯ

ಅಶ್ವಿನಿ ಬಸವರಾಜು ಕಂಠದಲ್ಲಿ “ದೇವ ದೇವ ಮಹದೇವ” ಡಾ.ವಿ.ನಾಗೇಂದ್ರ ಪ್ರಸಾದ್ ಮೆಚ್ಚುಗೆ!

ಅರುಣ್ ಜಿ.,

ಒಬ್ಬೊಬ್ಬರಿಗೆ ಒಂದೊಂದು ಕ್ಷೇತ್ರದಲ್ಲಿ ಆಸಕ್ತಿ ಇರುತ್ತದೆ. ತಮ್ಮಿಷ್ಟದ ವಿಭಾಗದಲ್ಲಿ ಸಾಧಿಸಿ, ಹೆಸರು ಮಾಡಬೇಕು ಎನ್ನುವ ತುಡಿತವಿರುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಹೆಸರು ಗಳಿಸಿ, ವೇಯ್ಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್ ಕ್ರೀಡೆಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ, ಬೆಂಗಳೂರಿನ ಸ್ಟ್ರಾಂಗೆಸ್ಟ್ ವುಮೆನ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದವರು, ಕ್ರೀಡಾ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿ, ಮೆಡಲ್ ಗಳನ್ನು ಪಡೆದಿದ್ದವರು ಅಶ್ವಿನಿ ಬಸವರಾಜು.

ಅಥ್ಲೆಟಿಕ್ ನಲ್ಲಿ ಸಾಧನೆಯ ಮೆಟ್ಟಿಲೇರುವ ಹೊತ್ತಿಗೆ ಅಶ್ವಿನಿ ಮನಸ್ಸಿನಲ್ಲಿ ತಾನು ಹಾಡುಗಾರ್ತಿಯಾಗಬೇಕು ಎನ್ನುವ ಬಯಕೆ ಚಿಗುರೊಡೆದಿತ್ತು. ಅಜ್ಜಿ ಯಶೋಧಾ ಜೊತೆ ಪೂಜಾ ಕಾರ್ಯಕ್ರಮಗಳಲ್ಲಿ ಕೂತು ಸಾಯಿಬಾಬಾ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಕ್ರಮೇಣ ಸಂಗೀತದ ಗುಂಗು ಹತ್ತಿತ್ತು. ತಮ್ಮದೇ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿ ‘ಮರೆಯುವೆನು ನಿನಗಾಗಿ’ ಎನ್ನುವ ಆಲ್ಬಂ ಸಾಂಗ್ ಅನ್ನು ಹೊರತಂದಿದ್ದರು. ನಂತರ ಮತ್ತೊಂದು ಫೀಲಿಂಗ್ ಸಾಂಗ್ ಕೂಡಾ ಲೋಕಾರ್ಪಣೆಗೊಂಡಿತು. ಇವೆಲ್ಲದರ ಜೊತೆಗೆ ಸಂಗೀತ ಗುರು ಚಂದ್ರಕಾಂತ್ ಅವರ ಬಳಿ ಹಿಂದೂಸ್ತಾನಿ ಸಂಗೀತ ಕಲಿಯುತ್ತಿದ್ದ ಅಶ್ವಿನಿ ಬಸವರಾಜು ಈ ಬಾರಿ ಹೊಸದೊಂದು ಪ್ರಯತ್ನ ಮಾಡಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದರು. ಈ ನಿಟ್ಟಿನಲ್ಲಿ ಶುರುವಾಗಿದ್ದು ‘ದೇವ ದೇವ ಮಹದೇವ’ ಹಾಡು.

ಜನಪದ ಶೈಲಿಯ ಈ ಹಾಡಿಗೆ ಮಯೂರ್ ಅಂಬೆಕಲ್ಲು ಸಂಗೀತ, ಮಯೂರ್ ನೈಗ ಸಾಹಿತ್ಯವಿದೆ. ಮಹದೇಶ್ವರ ಬೆಟ್ಟದಲ್ಲಿ ಈ ವಿಡಿಯೋ ಆಲ್ಬಂ ಅನ್ನು ಚಿತ್ರೀಕರಿಸಲಾಗಿದೆ. ಶಿವರಾತ್ರಿಯ ಈ ಸುಸಂದರ್ಭದಲ್ಲಿ ದೇವ ದೇವ ಮಹದೇವ ಹಾಡನ್ನು ಖ್ಯಾತ ಚಿತ್ರಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್ ಬಿಡುಗಡೆ ಮಾಡಿದ್ದಾರೆ. ‘ಭಕ್ತಿಗೀತೆ ಕ್ಷೇತ್ರದಲ್ಲಿ ಹೊಸ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ದೇವ ದೇವ ಮಹದೇವ ಹಾಡಿನ ಮೂಲಕ ಮಹದೇಶ್ವರನ ಖಂಡಕಾವ್ಯವನ್ನು, ಮಹಾಪುರುಷನ ಇತಿಹಾಸವನ್ನು ಒಂದೇ ಹಿಡಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಅಶ್ವಿನಿ ಅವರ ಧ್ವನಿಯನ್ನು ಕೇಳುತ್ತಿದ್ದರೆ ಅವರಿಗೆ ಉತ್ತಮ ಭವಿಷ್ಯವಿದೆ ಅನ್ನೋದು ಗೊತ್ತಾಗುತ್ತದೆ’ ಎಂದಿದ್ದಾರೆ ನಾಗೇಂದ್ರ ಪ್ರಸಾದ್.

ಬೆಂಗಳೂರಿನ ರಾಮಸಂದ್ರ ಗ್ರಾಮದಲ್ಲಿ ಹುಟ್ಟಿ ಬೆಳೆದು, ಸೇಂಟ್ ಫಿಲೋಮಿನಾ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿ, ಶೇಷಾದ್ರಿಪುರಂ ವಿದ್ಯಾ ಸಂಸ್ಥೆಯಲ್ಲಿ ಉನ್ನತ ಶಿಕ್ಷಣ ಪಡೆದು, ಪ್ರಸ್ತುತ  ಹೆಸರಾಂತ  ಐಟಿ ಕಂಪನಿಯಲ್ಲಿ ಉದ್ಯೋಗಕ್ಕಿರುವ ಅಶ್ವಿನಿ ಬಸವರಾಜು ಅವರಿಗೆ ಗಾಯಕಿಯಾಗಿಯೇ ಪೂರ್ಣ ಪ್ರಮಾಣದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಬಯಕೆಯಿದೆ. ಬಹುಶಃ ದೇವ ದೇವ ಮಹದೇವ ಆಲ್ಬಂ ಸಾಂಗ್ ಇವರ ಅಪೇಕ್ಷೆಯನ್ನು ಈಡೇರಿಸಬಹುದು.

Related Posts