ಅಟ್ಟಪ್ಪಾಡಿ ಬುಡಕಟ್ಟು ಜನಾಂಗದ ಮಾನಸಿಕ ಅಸ್ವಸ್ಥ ಯುವಕ ಮಧು ಹತ್ಯೆ ಪ್ರಕರಣದಲ್ಲಿ 14 ಮಂದಿ ತಪ್ಪಿತಸ್ಥರು!
ತಿರುವನಂತಪುರಂ: ಬುಡಕಟ್ಟು ಜನಾಂಗದ ಮಾನಸಿಕ ಅಸ್ವಸ್ಥ ಯುವಕ ಮಧು ಹತ್ಯೆ ಪ್ರಕರಣದಲ್ಲಿ 14 ಮಂದಿ ತಪ್ಪಿತಸ್ಥರು ಎಂದು ವಿಶೇಷ ನ್ಯಾಯಾಲಯ ಇಂದು ತೀರ್ಪು ನೀಡಿದೆ. ಕೇರಳ ರಾಜ್ಯದ ಪಾಲಕ್ಕಾಡ್‌ನ ಅಟ್ಟಪ್ಪಾಡಿ ಕಡುಗುಮನ್ನ ಬುಡಕಟ್ಟು ಗ್ರಾಮದ ಮಲ್ಲನ್ ಅವರ ಪುತ್ರನಾದ ಮಧು, ಮಾನಸಿಕ ಅಸ್ವಸ್ಥನಾಗಿದ್ದು, ಗುಹೆ ಒಂದರಲ್ಲಿ ವಾಸಿಸುತ್ತಿದ್ದನು. 2018 ಫೆಬ್ರವರಿ 22 ರಂದು ಹಸಿವಿನಿಂದ ಬಳಲುತ್ತಿದ್ದ ಮಧು, ಮುಕ್ಕಲಿ ಪ್ರದೇಶದ ಅಂಗಡಿಯೊಂದರಲ್ಲಿ ಆಹಾರ ಕದ್ದನೆಂದು ಹೇಳಿ; ಆತನ ಕೈಕಾಲುಗಳನ್ನು ಕಟ್ಟಿ ನೆಲಕ್ಕೆ ಎಳೆದೊಯ್ದು ಹೊಡೆದು ಕೊಂದ ಘಟನೆ ಕೇರಳದಲ್ಲಿ ಸಂಚಲನ ಮೂಡಿಸಿತ್ತು.
ದೇಹದ ಮೇಲೆ 15 ಕಡೆ ಗಂಭೀರವಾದ ಗಾಯಗಳಾಗಿದ್ದರಿಂದಲೇ ಮಧು ಸಾವನ್ನಪ್ಪಲು ಕಾರಣವಾಯಿತು ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ ಆ ಭಾಗದ ವರ್ತಕರು, ಕಾರು ಚಾಲಕರು ಸೇರಿ ಒಟ್ಟು 16 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಯಿತು. ಇದರಲ್ಲಿ ಪ್ರಥಮ ಅಪರಾಧಿಗಳಾದ ಕಾರು ಚಾಲಕ ಸಂಸುದ್ದೀನ್, ವರ್ತಕನಾದ ಹೀಸೈನ್ ಮತ್ತು ಮುನೀರ್ ಅವರನ್ನು ಮೊದಲ ಮೂರು ಅಪರಾಧಿಗಳಾಗಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ 16 ಜನರ ವಿರುದ್ಧ ಕೊಲೆ, ಆದಿವಾಸಿಗಳ ಮೇಲೆ ಹಲ್ಲೆ ಮುಂತಾದ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ 129 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ.
5 ವರ್ಷಗಳ ಕಾಲ ವಿಚಾರಣೆ ನಡೆಸಲಾದ ಈ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಆರ್.ಎಂ.ರತೀಶ್ ಕುಮಾರ್ ಇಂದು ತೀರ್ಪು ನೀಡಿದರು. ಅಟ್ಟಪಾಡಿ ಮಧು ಹತ್ಯೆ ಪ್ರಕರಣದಲ್ಲಿ 14 ಮಂದಿ ತಪ್ಪಿತಸ್ಥರು ಎಂದು ತೀರ್ಪು ನೀದಲಾಗಿದೆ. ಹುಸೇನ್, ಮರೈಕ್ಕಾರ್, ಶಂಶುದ್ದೀನ್, ರಾಧಾಕೃಷ್ಣನ್, ಅಬೂಬಕ್ಕರ್, ಸಿದ್ದಿಕಿ, ಉಬೈದ್, ನಜೀಬ್, ಜೈಜುಮೋನ್, ಮುನೀರ್, ಸಜೀವ್, ಸತೀಶ್, ಹರೀಶ್ ಮತ್ತು ಬಿಜು ಎಂಬ 14 ಮಂದಿಯನ್ನು ಐಪಿಸಿ 304(2) ಅಡಿಯಲ್ಲಿ ಅಪರಾಧಿಗಳು ಎಂದು ಘೋಷಿಸಲಾಗಿದೆ. ಈ ಪ್ರಕರಣದಲ್ಲಿ ಅನೀಶ್ ಮತ್ತು ಅಬ್ದುಲ್ ಕರೀಂ ಅವರನ್ನು ಖುಲಾಸೆ ಮಾಡಲಾಗಿದೆ. 14 ಆರೋಪಿಗಳಿಗೆ ಶಿಕ್ಷೆಯ ವಿವರವನ್ನು ನಾಳೆ ಪ್ರಕಟಿಸಲಾಗುತ್ತದೆ.