ಮಾನ್ವಿ ಕಾಂಗ್ರೆಸ್ ನಲ್ಲಿ ಬಿ.ವಿ.ನಾಯಕ ಗದ್ದಲ; ಭಿನ್ನಮತ! » Dynamic Leader
November 22, 2024
ರಾಜಕೀಯ

ಮಾನ್ವಿ ಕಾಂಗ್ರೆಸ್ ನಲ್ಲಿ ಬಿ.ವಿ.ನಾಯಕ ಗದ್ದಲ; ಭಿನ್ನಮತ!

ವರದಿ: ರಾಮು ನೀರಮಾನ್ವಿ

ರಾಯಚೂರು: (ಮಾನ್ವಿ) ರಾಯಚೂರು ಜಿಲ್ಲೆಯಲ್ಲಿ ಬೇಸಿಗೆಯ ಬಿಸಿಲಿನಂತೆ ಬರುವ ವಿಧಾನ ಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದೇ ರೀತಿ ಪ್ರಮುಖ ಪಕ್ಷಗಳ ನಾಯಕರು, ಪಕ್ಷದ ಟಿಕೆಟ್ ಗಾಗಿ ಜಂಗಿ ಕುಸ್ತಿಗೆ ಇಳಿದಿದ್ದಾರೆ. ಎಲ್ಲರೂ, ‘ನಾನೇನು ಕಡಿಮೆಯಿಲ್ಲ; ನಾನೂ ಒಂದು ಕೈ ನೋಡುತ್ತೇನೆ’ ಎನ್ನುವ ಅಹಂನಲ್ಲಿದ್ದಾರೆ. ಕಾಂಗ್ರೆಸ್ ನ ಮೊದಲನೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಯಿತು. ಆದರೆ, ಯಾವುದೇ ಭಿನ್ನಮತ ಕಾಣಿಸಿಕೊಂಡಿಲ್ಲ. ಆದರೆ, ಎರಡನೆಯ ಪಟ್ಟಿ ಬಿಡುಗಡೆ ಅಗಿದ್ದೇ ಅಗಿದ್ದು, ಕಾಂಗ್ರೆಸ್ ನಲ್ಲಿ ಭಿನ್ನಮತ ಮುಗಿಲೆತ್ತರಕ್ಕೆ ಜಿಗಿದಿದೆ. ಇದರಿಂದ ಪಕ್ಷದ ಹೈ ಕಮಾಂಡ್ ಗೆ ತಲೆಬಿಸಿ ಆದಂತಿದೆ. ರಾಜ್ಯದ ಕಾಂಗ್ರೆಸ್ ನಾಯಕರು ಭಿನ್ನಮತ ಶಮನ ಮಾಡಲು ಹರಸಾಹಸ ಪಡುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ, ಲಿಂಗಸುಗೂರು, ಮಸ್ಕಿ, ಸಿಂಧನೂರು, ಮಾನ್ವಿ, ರಾಯಚೂರು ನಗರ, ರಾಯಚೂರು (ಗ್ರಾಮೀಣ) ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬಹಳ ದೊಡ್ಡದಿದೆ. ಮಾನ್ವಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು 1) ಹಂಪಯ್ಯ ನಾಯಕ, 2) ಶರಣಯ್ಯ ನಾಯಕ, 3) ವಸಂತ ನಾಯಕ, 4)ಲಕ್ಷ್ಮಿ ದೇವಿ ನಾಯಕ, 5) ಡಾ.ತನುಶ್ರೀ, 6) ದೇವದುರ್ಗದ ಬಿ.ವಿ.ನಾಯಕ ಇಷ್ಟು ಜನರು ಟಿಕೆಟ್ ಗಾಗಿ ಶತಃ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ರಾಜ ವೆಂಕಟಪ್ಪ ನಾಯಕ

ಇದು ಹೈ ಕಮಾಂಡ್ ಗೆ ದೊಡ್ಡ ತಲೆನೋವಾಗಿದೆ. ಹಂಪಯ್ಯ ನಾಯಕ ಮತ್ತು ಶರಣಯ್ಯ ನಾಯಕರ ಮದ್ಯೆ ಟಿಕೆಟ್ ಗೆ ಪೈಪೋಟಿ ನಡೆಯುತ್ತಿರುವ ಹಿನ್ನಲೆಯಲ್ಲೇ ಪಕ್ಕದ ದೇವದುರ್ಗದ ಬಿ.ವಿ.ನಾಯಕರಿಗೆ ಟಿಕೆಟ್ ಖಚಿತವಾಯಿತು ಎಂಬ ಸುದ್ಧಿ ಹೊರಬಿದ್ದಿದೆ. ಇದರಿಂದ ಕೆರಳಿ ಕೆಂಡವಾದ ಮಾನ್ವಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು, ತಮ್ಮ ಹಿಂಬಾಲಕರ ಸಭೆ ಕರೆದು ಬಿ.ವಿ.ನಾಯಕರ ವಿರುದ್ಧ ಬಹಿರಂಗವಾಗಿ ಕೆಂಡ ಕಾರಿದ್ದಾರೆ. ಬೇರೆ ತಾಲೂಕಿನವರಿಗೆ ಟಿಕೆಟ್ ಕೊಟ್ಟರೆ ಸ್ಥಳೀಯ ನಾಯಕರು ಗಡ್ಡ ಬಿಟ್ಟು ಗುಡ್ಡ ಸೇರಬೇಕಾ..? ಎಂದು ಗುಡುಗು ಹಾಕಿದ್ದಾರೆ. ಅದೇ ಸಮಯದಲ್ಲಿ ಕೆಲವೊಂದು ಕಾರ್ಯಕರ್ತರು ‘ನಾವು ಹಂಪಯ್ಯ ನಾಯಕ, ಬಿ.ವಿ.ನಾಯಕರ ರಾಜಕೀಯ ನೋಡಿದ್ದೇವೆ, ಇವರು ಅಧಿಕಾರ ಇಲ್ಲದಾಗ ಒಂದು ರೀತಿ, ಅಧಿಕಾರ ಸಿಕ್ಕಾಗ ಕಾರ್ಯಕರ್ತರನ್ನು ನಡೆಸಿಕೊಳ್ಳುವುದು ಒಂದು ರೀತಿಯಾಗಿದೆ. ಇವರಿಗೆ ಅಧಿಕಾರ ಸಿಕ್ಕಾಗ ಕಾರ್ಯಕರ್ತರನ್ನು  ಕ್ಯಾರೆ ಅನ್ನುವುದಿಲ್ಲ ಎಂದು ಕಿಡಿಕಾರಿದ್ದಾರೆ. ಇದರ ಫಲವಾಗಿಯೇ 2018ರ ಚುನಾವಣೆಯಲ್ಲಿ ಹಂಪಯ್ಯ ನಾಯಕ ಸೋತು ನಾಲ್ಕನೇ ಸ್ಥಾನಕ್ಕೆ ಹೋಗಿದ್ದು ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಹಂಪಯ್ಯ ನಾಯಕ ಹಾಗೂ ಬಿ.ವಿ.ನಾಯಕ ಇವರಿಬ್ಬರೂ ಬೇಡ, ಇವರಿಬ್ಬರ ರಾಜಕೀಯ ನೋಡಿ ಬೇಸತ್ತಿದ್ದೇವೆ. ಬೇರೆ ಹೊಸ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು.

ಬಿ.ವಿ.ನಾಯಕ

ಇನ್ನೊಂದು ಕಡೆ ಹಂಪಯ್ಯ ನಾಯಕರಿಗೆ ಟಿಕೆಟ್ ಸಿಕ್ಕರೆ, ಡಾ.ತನುಶ್ರೀ ಪಕ್ಷೇತರರಾಗಿ ಸ್ಪರ್ಧಿಸುವುದು ನಿಶ್ಚಿತ. ಹೀಗಿರುವಾಗ ಮತಗಳು ದೃವೀಕರಣವಾಗಿ, ಇಬ್ಬಾಗವಾಗುತ್ತದೆ. ಇದರಿಂದ ಮತ್ತೆ ಜನತಾದಳದ ರಾಜ ವೆಂಕಟಪ್ಪ ನಾಯಕ ಗೆಲ್ಲುವುದು ಸುಲುಭವಾಗುತ್ತದೆ. ಈಗಿನ ಸಂದರ್ಭ ಬೇರೆಯಾದರೂ ಡಾ.ತನುಶ್ರೀ ಪಕ್ಷೇತರರಾಗಿ ಸ್ಪರ್ದಿಸಿದರೆ ಕನಿಷ್ಟ 20 ರಿಂದ 25 ಸಾವಿರ ಮತ ಪಡೆಯುತ್ತಾರೆಂಬ ಲೆಕ್ಕಾಚಾರವಿದೆ. ಹೀಗಿರುವಾಗ ಹಂಪಯ್ಯ ನಾಯಕ ಹಾಗೂ ಶರಣಯ್ಯ ನಾಯಕರ ಗೆಲುವು ಅಷ್ಟು ಸುಲಭವಲ್ಲದ ಮಾತು ಎಂದು ತಾಲ್ಲೂಕು ತುಂಬ ಸುದ್ದಿ ಆಗಿದೆ. ವಲಸಿಗರಾದ ಬಿ.ವಿ.ನಾಯಕರಿಗೆ ಟಿಕೆಟ್ ಕೊಟ್ಟರೆ, ಕಾರ್ಯಕರ್ತರು ಬೇರೆ ಪಕ್ಷಕ್ಕೆ ವಲಸೆ ಹೋಗುತ್ತೆವೆ ಅನ್ನುವ ಸುದ್ದಿ ಗುಟ್ಟಾಗಿ ಉಳಿದಿಲ್ಲ.

ಭಿನ್ನಮತ ಶಮನವಾಗುವುದು ಕನಸಿನ ಮಾತಾಗಿದೆ. ಟಿಕೆಟ್ ವಿಷಯ ಬಹಳ ಶೂಕ್ಷ್ಮವಾಗಿದೆ. ಪಕ್ಷದ ಹೈಕಮಂಡ್ ಸೂಕ್ತ ನಿರ್ದಾರ ತೆಗೆದುಕೊಂಡು ಎಲ್ಲಾ ಕಾರ್ಯಕರ್ತರು ಒಪ್ಪುವಂತ ಸ್ಥಳೀಯ ನಾಯಕರಿಗೆ ಟಿಕೆಟ್ ಕೊಟ್ಟರೆ ನಾವು ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಅಭ್ಯರ್ತಿಯನ್ನು ಗೆಲ್ಲಿಸುತ್ತೇವೆ ಎಂಬುದು ಪಕ್ಷದ ನಿಷ್ಟಾವಂತರ ಕೂಗಾಗಿದೆ.

Related Posts