ಬಿಜೆಪಿ ಪಟ್ಟಿ ಬಿಡುಗಡೆ; ಬಂಡಾಯವೇ ಎಲ್ಲಾ ಕಡೆ! » Dynamic Leader
November 24, 2024
ರಾಜಕೀಯ

ಬಿಜೆಪಿ ಪಟ್ಟಿ ಬಿಡುಗಡೆ; ಬಂಡಾಯವೇ ಎಲ್ಲಾ ಕಡೆ!

ಡಿ.ಸಿ.ಪ್ರಕಾಶ್ ಸಂಪಾದಕರು

ಬಹು ನಿರೀಕ್ಷಿತ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನೆನ್ನೆ ರಾತ್ರಿ 9 ಗಂಟೆಯ ವೇಳೆಗೆ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯದ 189 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಪಟ್ಟಿಯಲ್ಲಿ 52 ಹೊಸ ತಲೆಮಾರಿನ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗಿದೆ. ಮತ್ತು 9 ವೈದ್ಯರಿಗೆ, ನಿವೃತ್ತ ಐಎಸ್ಎಸ್, ಐಪಿಎಸ್ ಗಳಿಗೆ ಟಿಕೆಟ್ ನೀಡಲಾಗಿದೆ. 32 ಒಬಿಸಿಗಳಿಗೆ ಟಿಕೆಟ್ ನೀಡಲಾಗಿದೆ  ಎಂಬ ಸುಳಿವನ್ನು ಸುದ್ದಿಗೋಷ್ಠಿಯಲ್ಲಿ ನೀಡಿದರು. ಇತ್ತೀಚೆಗಷ್ಟೇ ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಗೆ ಟಿಕೆಟ್ ಘೋಷಿಸಲಾಗಿದೆ.

ಬೆಂಗಳೂರಿನ ಯಲಹಂಕ-ಎಸ್.ಆರ್.ವಿಶ್ವನಾಥ್, ಕೆ.ಆರ್.ಪುರ-ಬಿ.ಎ.ಬಸವರಾಜ, ಬ್ಯಾಟರಾಯನಪುರ-ತಮ್ಮೇಶ್ ಗೌಡ, ಯಶವಂತಪುರ-ಎಸ್.ಟಿ.ಸೋಮಶೇಖರ್, ರಾಜರಾಜೇಶ್ವರಿನಗರ-ಮುನಿರತ್ನ ನಾಯ್ಡು, ದಾಸರಹಳ್ಳಿ-ಎಸ್.ಮುನಿರಾಜು, ಮಹಾಲಕ್ಷ್ಮಿ ಲೇಔಟ್-ಕೆ.ಗೋಪಾಲಯ್ಯ, ಮಲ್ಲೇಶ್ವರಂ-ಡಾ.ಸಿ.ಎಸ್.ಅಶ್ವಥ್ ನಾರಾಯಣ್, ಪುಲಕೇಶಿನಗರ (ಎಸ್.ಸಿ) ಮುರಳಿ, ಸರ್ವಜ್ಞನಗರ-ಪದ್ಮನಾಭರೆಡ್ಡಿ, ಸಿ.ವಿ.ರಾಮನ್ ನಗರ (ಎಸ್.ಸಿ) ಎಸ್.ರಘು, ಶಿವಾಜಿನಗರ-ಎನ್.ಚಂದ್ರ, ಶಾಂತಿನಗರ-ಶಿವಕುಮಾರ್, ಗಾಂಧಿನಗರ-ಎ.ಅರ್.ಸಪ್ತಗಿರಿ ಗೌಡ, ರಾಜಾಜಿನಗರ-ಎಸ್.ಸುರೇಶ್ ಕುಮಾರ್, ವಿಜಯನಗರ-ಹೆಚ್.ರವೀಂದ್ರ, ಚಾಮರಾಜಪೇಟೆ-ಭಾಸ್ಕರ್ ರಾವ್ (ನಿವೃತ್ತಿ), ಚಿಕ್ಕಪೇಟೆ-ಉದಯ್ ಗರುಡಾಚಾರ್, ಬಸವನಗುಡಿ-ರವಿ ಸುಬ್ರಮಣ್ಯ, ಪದ್ಮನಾಭನಗರ-ಆರ್.ಅಶೋಕ್, ಬಿಟಿಎಂ ಲೇಔಟ್-ಶ್ರೀಧರ್ ರೆಡ್ಡಿ, ಜಯನಗರ-ಸಿ.ಕೆ.ರಾಮಮೂರ್ತಿ, ಬೊಮ್ಮನಹಳ್ಳಿ-ಸತೀಶ್ ರೆಡ್ಡಿ, ಬೆಂಗಳೂರು ದಕ್ಷಿಣ-ಎಂ.ಕೃಷ್ಣಪ್ಪ ಮುಂತಾದವರಿಗೆ ಮೊದಲ ಪಟ್ಟಿಯಲ್ಲೇ ಹೆಸರನ್ನು ಘೋಷಿಸಲಾಗಿದೆ.

ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಮಯ್ಯ

ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಪದ್ಮನಾಭನಗರ ಕ್ಷೇತ್ರದೊಂದಿಗೆ ಕನಕಪುರ ಕ್ಷೇತ್ರವನ್ನೂ ನೀಡಲಾಗಿದೆ. ಇದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕ್ಷೇತ್ರ, ಅದೇ ರೀತಿ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಚಾಮರಾಜನಗರ ಕ್ಷೇತ್ರದೊಂದಿಗೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸ್ಪರ್ದಿಸಲಿರುವ ವರುಣ ಕ್ಷೇತ್ರವನ್ನೂ ನೀಡಲಾಗಿದೆ. 

ಆರ್.ಅಶೋಕ್ ಮತ್ತು ವಿ.ಸೋಮಣ್ಣ

52 ಹೊಸ ತಲೆಮಾರಿಗೆ ಟಿಕೆಟ್ ನೀಡಲಾಗಿದೆ. ಅದೇ ಸಂದರ್ಭದಲ್ಲಿ ಪಕ್ಷ ಕಟ್ಟಿದ ಹಿರಿಯರನ್ನು ಕೈಬಿಡಲಾಗಿದೆ. ಆರ್.ಅಶೋಕ್ ಅವರನ್ನು ಡಿ.ಕೆ.ಶಿವಕುಮಾರ್ ವಿರುದ್ಧ ಹಾಗೂ ವಿ.ಸೋಮಣ್ಣ ಅವರನ್ನು ಸಿದ್ದರಾಮಯ್ಯನವರ ವಿರುದ್ಧ ಎತ್ತಿಕಟ್ಟಲಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂಬುದು ಜನರ ಅಭಿಪ್ರಾಯವಾಗಿದೆ. ‘ಬಿಜೆಪಿಗೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರನ್ನು ಕಂಡರೆ ಭಯ’ ಎಂಬುದನ್ನೇ ಇದು ಎತ್ತಿ ತೋರಿಸುತ್ತಿದೆ. ಕನಕಪುರ ಮತ್ತು ವರುಣ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲ್ಲುವ ವಿಶ್ವಾಸ ಇದ್ದರೆ ಆರ್.ಅಶೋಕ್ ಹಾಗೂ ವಿ.ಸೋಮಣ್ಣ ಅವರನ್ನು ಎರಡೆರಡುಕಡೆ ನಿಲ್ಲಿಸದೇ ನೇರವಾಗಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನ ವಿರುದ್ಧ ಸ್ಪರ್ದಿಸುವಂತೆ ಮಾಡಬಹುದಿತ್ತು. ಆಗ ಬಿಜೆಪಿಯ ಗೆತ್ತನ್ನು ಎಲ್ಲರೂ ಕೊಂಡಾಡಿರುತ್ತಾರೆ.

ಜಗದೀಶ್ ಶೆಟ್ಟರ್

ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಓಟಕ್ಕೆ ಕಡಿವಾಣ ಹಾಕಲಿಕ್ಕಾಗಿ ಅಥವಾ ಅವರನ್ನು ಡಿಸ್ಟರ್ಬ್ ಮಾಡಲಿಕ್ಕಾಗಿ ಅಥವಾ ಅವರ ವಿರುದ್ಧ ಸೇಡು ತೀರಿಸಿಕೊಳ್ಳಲಿಕ್ಕಾಗಿ ಬಿಜೆಪಿ ಈ ತಂತ್ರವನ್ನು ಅನುಸರಿಸಿದೆ ಎಂದು ಹೇಳಿಕೊಂಡಾರೂ ‘ಈ ಎರಡೂ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಅನುಕೂಲ ಮಾಡಲಿಕ್ಕಾಗಿಯೇ ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡು ಈ ರೀತಿಯ ತಂತ್ರವನ್ನು ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ಪ್ರಚಾರವನ್ನು ಕೈಗೆತ್ತಿಕೊಂಡರೆ, ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯ ಜೊತೆಗೆ ಜೆಡಿಎಸ್ ಗೂ ಹೆಚ್ಚಿನ ರೀತಿಯಲ್ಲಿ ಹಾನಿಯಾಗುತ್ತದೆ. ಮತ್ತು ಆರ್.ಅಶೋಕ್ ಹಾಗೂ ವಿ.ಸೋಮಣ್ಣ ಅವರನ್ನು ಎರಡೆರಡು ಕಡೆ ಅಲೆದಾಡಿಸಿ ಸೋಲಿಸುವಂತೆ ಮಾಡಲು ಬಿಜೆಪಿ ಪಕ್ಷ ಏನಾದರೂ ಕುತಂತ್ರ ಮಾಡಿದೆಯೇ ಎಂಬುದನ್ನು ಮೇ 13 ರಂದು ಬರುವ ಫಲಿತಾಂಶವೇ ಹೇಳಬೇಕು. ಆರ್.ಆಶೋಕ್ ನೆನ್ನೆ ಸುದ್ದಿಗಾರರೊಂದಿಗೆ ಮಾತನಾಡುವಾಗ, “ನಾನು ಪಕ್ಷದ ಶಿಸ್ತಿನ ಸಿಪಾಯಿ; ಪಕ್ಷ ಸೂಚಿಸುವುದನ್ನು ಪಾಲಿಸುತ್ತೇನೆ” ಎಂದರು. ಆದರೆ, ವಿ.ಸೋಮಣ್ಣ ಪಾಳಯದಲ್ಲಿ ಅಸಮಧಾನವಿದೆ.

ಲಕ್ಷ್ಮಣ ಸವದಿ

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಮಾಜಿ ಸಚಿವ ಆರ್.ಶಂಕರ್, ಮಾಜಿ ಮೀನುಗಾರಿಕೆ ಸಚಿವ ಎಸ್.ಅಂಗಾರ, ಶಾಸಕರುಗಳಾದ ಸಂಜೀವ್ ಮಠಂದೂರು, ಲಾಲಾಜಿ ಮೆಂಡನ್, ರಘುಪತಿ ಭಟ್, ಗೂಳಿಹಟ್ಟಿ ಶೇಖರ್, ಅನಿಲ್ ಬೆನಕ, ಮಹದೇವಪ್ಪ ಯಾದವಾಡ, ರಾಮಪ್ಪ ಲಮಾಣಿ ಮುಂತಾದವರಿಗೆ ಟಿಕೆಟ್ ಕೈತಪ್ಪಿಸಲಾಗಿದೆ. ಇವರೆಲ್ಲರ ಬಂಡಾಯವನ್ನು ಬಿಜೆಪಿ ಹೇಗೆ ಸರಿಮಾಡುತ್ತದೆ ಎಂಬುದು ಕುತೂಹಲ. ಮತ್ತು ಬಿಜೆಪಿಯ ಬಂಡಾಯವನ್ನು ವಿರೋಧ ಪಕ್ಷಗಳು ಯಾವ ರೀತಿ ಬಳಕೆ ಮಾಡಿಕೊಳ್ಳುತ್ತದೆ ಎಂಬುದನ್ನು ಕಾದು ನೋಡೋಣ. Karnataka assembly elections: BJP’s first list has 8 women, 52 new faces, 8 social activists. In this list, tickets have been given to Lingayat-51, Vokkalinga-41, Kuruba-7, SC-30, ST-16 and 32 from the OBC community.

Related Posts