ನೀವು ಯುವಕರ ಆತ್ಮಹತ್ಯೆಯನ್ನು 'ಜೋಕ್' ಎಂದು ಭಾವಿಸುತ್ತೀರಾ?: ಮೋದಿ ಹೇಳಿದ ಕ್ರೂರ ಹಾಸ್ಯ » Dynamic Leader
November 23, 2024
ದೇಶ

ನೀವು ಯುವಕರ ಆತ್ಮಹತ್ಯೆಯನ್ನು ‘ಜೋಕ್’ ಎಂದು ಭಾವಿಸುತ್ತೀರಾ?: ಮೋದಿ ಹೇಳಿದ ಕ್ರೂರ ಹಾಸ್ಯ

ಡಿ.ಸಿ.ಪ್ರಕಾಶ್ ಸಂಪಾದಕರು

ಹಾಸ್ಯ ಪ್ರಜ್ಞೆ ಎಲ್ಲರಿಗೂ ಅಗತ್ಯ; ಹಾಸ್ಯಕ್ಕೆ ಭಾವನೆಗಳನ್ನು ಪರಿವರ್ತಿಸುವ ಶಕ್ತಿ ಇದೆ. ಮಹಾತ್ಮ ಗಾಂಧೀಜಿಯವರು “ನನಗೆ ಹಾಸ್ಯ ಪ್ರಜ್ಞೆ ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ” ಎಂದು ಹೇಳಿದರಂತೆ.

ಆದರೆ ಪ್ರಧಾನಿ ನರೇಂದ್ರ ಮೋದಿಯವರು ಆತ್ಮಹತ್ಯೆಯನ್ನು ತಮಾಷೆ ಎಂಬ ಹೆಸರಿನಲ್ಲಿ ವ್ಯಾಖ್ಯಾನಿಸಿ, ಭಾರತದ ಯುವ ಪೀಳಿಗೆಗೆ ಅವಮಾನ ಮಾಡಿದ್ದಾರೆ. ಹಾಸ್ಯವು ಯಾರ ಹೃದಯವನ್ನೂ ನೋಯಿಸದಂತೆ ಇರಬೇಕು ಎಂಬುದು ಸಾಮಾನ್ಯ ನಿಯಮ.

ಬಿಜೆಪಿ ಪರಿವಾರವನ್ನು ಹೊಗಳುವುದು ಮತ್ತು ಇತರರನ್ನು ನಿಂದಿಸುವುದೇ ವೃತ್ತಿಯನ್ನಾಗಿ ಮಾಡಿಕೊಂಡಿರುವ ರಿಪಬ್ಲಿಕ್ ಟಿವಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಒಬ್ಬ ಪ್ರೊಫೆಸರ್ ಮಗಳು, ‘ನನಗೆ ಬದುಕಲು ಇಷ್ಟವಿಲ್ಲ ಮತ್ತು ನಾನು ಕಂಗಾರಿಯಾ ಸರೋವರಕ್ಕೆ ಹಾರಿ ಸಾಯುತ್ತೇನೆ’ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಳಂತೆ ಮರುದಿನ ಪ್ರಾಧ್ಯಾಪಕರು ಪತ್ರವನ್ನು ನೋಡಿ ಇಷ್ಟು ವರ್ಷ ಹೇಳಿದರೂ , ಅವಳು ಇನ್ನೂ ಕಂಗಾರಿಯಾ ಸರೋವರದ ಹೆಸರನ್ನು ತಪ್ಪಾಗಿಯೇ ಬರೆದಿದ್ದಾಳೆ’ ಎಂದು ಕೋಪಗೊಂಡರೆಂತೆ ಎಂದು ಹಾಸ್ಯ ಮಾಡಿದ್ದಾರೆ. ಈ ರೀತಿಯ ಕ್ರೂರ ಹಾಸ್ಯಕ್ಕೆ ಇದೀಗ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಕರ್ನಾಟಕದ ಕೋಲಾರದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಿರ್ದಿಷ್ಟ ವ್ಯಕ್ತಿಗಳ ಹೆಸರುಗಳು ಒಂದೇ ರೀತಿಯಲ್ಲಿ ಕೊನೆಗೊಳ್ಳುತ್ತದೆ ಎಂದು ಲೇವಡಿ ಮಾಡಿದ್ದ ಕಾರಣಕ್ಕೆ, ಅದನ್ನು ದೊಡ್ಡ ಸಮಸ್ಯೆಯನ್ನಾಗಿ ಮಾಡಿ; ಸೂರತ್‌ನಲ್ಲಿ ಪ್ರಕರಣ ದಾಖಲಿಸಿ; ತಕ್ಷಣ ತನಿಖೆ ನಡೆಸಿ; ಶಿಕ್ಷೆ ವಿಧಿಸಿ; ಅವರ ಸಂಸದ ಸ್ಥಾನವನ್ನೂ ರದ್ದುಪಡಿಸಿ, ಮನೆಯಿಂದ ಹೊರಹಾಕಲಾಯಿತು. ಅಷ್ಟರಮಟ್ಟಿಗೆ ಆಡಳಿತಗಾರರಿಗೆ ‘ಹಾಸ್ಯ ಪ್ರಜ್ಞೆ’ ಹೆಚ್ಚು.

ಭಾರತದಲ್ಲಿ ಯುವಕರ ಆತ್ಮಹತ್ಯೆ ಪ್ರಮಾಣ ಆತಂಕಕಾರಿಯಾಗಿದೆ. ಎನ್‌ಸಿಆರ್‌ಬಿ ಅಂಕಿ ಅಂಶಗಳ ಪ್ರಕಾರ, 2021ರಲ್ಲಿ 1 ಲಕ್ಷದ 64 ಸಾವಿರದ 33 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ತಿಳಿದುಬಂದಿದೆ. 1990ರ ದಶಕದಲ್ಲಿ ಆಧುನಿಕ ಉದಾರೀಕರಣ ನೀತಿಗಳ ಅನುಷ್ಠಾನದ ನಂತರ, ಭಾರತದ ಜನರ ಜೀವನೋಪಾಯಕ್ಕೆ ತೀವ್ರ ತೊಂದರೆಯಾಗಿದೆ.

ಜೀವನದಲ್ಲಿ ಅಭದ್ರತೆ ಇದ್ದಂತೆ ಕಾಣುತ್ತದೆ ಎಂದು ಹದಿಹರೆಯದವರು ತಮ್ಮ ಭಾವನೆಗಳನ್ನು ದಾಖಲಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರ ಅನುಸರಿಸುತ್ತಿರುವ ಆರ್ಥಿಕ ನೀತಿಗಳಿಂದ ನಿರುದ್ಯೋಗ ಹೆಚ್ಚುತ್ತಿದೆ. ವರ್ಷಕ್ಕೆ 2 ಕೋಟಿ ಜನರಿಗೆ ಉದ್ಯೋಗ ನೀಡುವುದಾಗಿ ಹೇಳಿದರು. ಈ ಬಗ್ಗೆ ಕೇಳಿದರೆ ಯುವಕರು ಪಕೋಡ ಮಾರಿ ಬದುಕಬಹುದು ಎಂದು ಸಲಹೆ ನೀಡುತ್ತಾರೆ.

ಭಾರತದಲ್ಲಿ ಯುವಕರು ಅದರಲ್ಲೂ ಯುವತಿಯರೇ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿವಿಧ ಅಂಕಿ ಅಂಶಗಳು ತೋರಿಸುತ್ತಿರುವ ಹಿನ್ನಲೆಯಲ್ಲಿ, ಆತ್ಮಹತ್ಯೆ ಮಾಡಿಕೊಳ್ಳುವವರ ಸ್ಥಿತಿಯನ್ನು ತಮಾಷೆಯಾಗಿ ಪರಿವರ್ತಿಸುವುದು ವಿನೋದವಲ್ಲ. ಅದೊಂದು ಕ್ರೂರ ಹಾಸ್ಯ.

Related Posts