ಜೂನ್ 23ರ ವಿರೋಧ ಪಕ್ಷಗಳ ಸಭೆಗೆ ಮುನ್ನ ಬಿಹಾರ ಹಣಕಾಸು ಸಚಿವ ವಿಜಯ್ ಚೌಧರಿ ಸಂಬಂಧಿಕರ ನಿವಾಸದ ಮೇಲೆ ಐಟಿ, ಇಡಿ ದಾಳಿ!
ಬಿಹಾರದ ಹಣಕಾಸು ಸಚಿವ ವಿಜಯ್ ಚೌಧರಿ ಸಂಬಂಧಿಕರು ಹಾಗೂ ರಾಜ್ಯದ ದೊಡ್ಡ ಉದ್ಯಮಿಯೂ ಆಗಿರುವ ಅಜಯ್ ಕುಮಾರ್ ಸಿಂಗ್ ಅವರ ಬೇಗುಸರಾಯ್ ನಿವಾಸದ ಮೇಲೆ ಇಂದು ಇಡಿ, ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಆದಾಯ ತೆರಿಗೆ (ಐಟಿ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ತಂಡಗಳು ಇಂದು (ಜೂನ್ 22) ಬಿಹಾರದ ಹಣಕಾಸು ಸಚಿವ ವಿಜಯ್ ಕುಮಾರ್ ಚೌಧರಿ ಅವರ ಸೋದರಮಾವ ಅಜಯ್ ಕುಮಾರ್ ಸಿಂಗ್ ಅವರ ಬೇಗುಸರಾಯ್ ಪ್ರದೇಶದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿವೆ.
ಅಜಯ್ ಸಿಂಗ್, ಅಲಿಯಾಸ್ ಕರು ಯಾದವ್, ಜೆಡಿಯು ರಾಜ್ಯ ಅಧ್ಯಕ್ಷ ಲಾಲನ್ ಸಿಂಗ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಬೇಗುಸರಾಯ್‌ನ ಶ್ರೀಕೃಷ್ಣ ಪ್ರದೇಶದಲ್ಲಿರುವ ಅಜಯ್‌ಸಿಂಗ್ ನಿವಾಸದ ಮೇಲೆ ಇಂದು ದಾಳಿ ನಡೆಸಲಾಗಿದೆ.
ಐಟಿ ಮತ್ತು ಇಡಿ ಅಧಿಕಾರಿಗಳು ಬೆಳಗ್ಗೆ 6:00 ಗಂಟೆ ಸುಮಾರಿಗೆ ಉದ್ಯಮಿಯಾಗಿರುವ ಅಜಯ್ ಕುಮಾರ್ ಸಿಂಗ್ ಮನೆಗೆ ತಲುಪಿ ದಾಳಿ ನಡೆಸಿದ್ದಾರೆ. ದಾಳಿಯ ನಿಖರ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬೇಗುಸರೈ ಆಡಳಿತ ಮಂಡಳಿಯಿಂದ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಜೂನ್ 23ರ ವಿರೋಧ ಪಕ್ಷಗಳ ಸಭೆಗೆ ಮುನ್ನ ಕೇಂದ್ರದ ನಿರ್ದೇಶನದ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಜೆಡಿಯು ಮೂಲಗಳು ಹೇಳಿವೆ.