1977, 1989, 1998 - ಹಿಂದೆ ಆಡಳಿತ ಬದಲಾವಣೆಗೆ ಕಾರಣವಾದ ವಿರೋಧ ಪಕ್ಷದ ಮೈತ್ರಿಗಳು! ಒಂದು ನೋಟ » Dynamic Leader
October 21, 2024
ದೇಶ ರಾಜಕೀಯ

1977, 1989, 1998 – ಹಿಂದೆ ಆಡಳಿತ ಬದಲಾವಣೆಗೆ ಕಾರಣವಾದ ವಿರೋಧ ಪಕ್ಷದ ಮೈತ್ರಿಗಳು! ಒಂದು ನೋಟ

ಡಿ.ಸಿ.ಪ್ರಕಾಶ್

ಬಿಜೆಪಿ ವಿರುದ್ಧ, ಪಕ್ಷಗಳನ್ನು ಒಗ್ಗೂಡಿಸುವ ಹೊಣೆ ಹೊತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಜೂನ್ 23 ರಂದು ಪಕ್ಷದ ಮುಖಂಡರೊಂದಿಗೆ ಪಾಟ್ನಾದಲ್ಲಿ ಸಭೆ ನಡೆಸಿದರು. ಇದರಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ, ತೃಣಮೂಲ ಕಾಂಗ್ರೆಸ್, ಎಡಪಂಥೀಯ ಪಕ್ಷಗಳು, ರಾಷ್ಟ್ರೀಯವಾದಿ ಕಾಂಗ್ರೆಸ್, ಉದ್ಧವ್ ಠಾಕ್ರೆ ಅವರ ಶಿವಸೇನೆ, ಜಾರ್ಖಂಡ್ ಮುಕ್ತಿ ಮೋರ್ಚಾ, ನ್ಯಾಷನಲ್ ಕಾನ್ಫರೆನ್ಸ್‌, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಆಮ್ ಆದ್ಮಿ ಪಕ್ಷದ ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಸುಮಾರು 4 ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ, ವಿರೋಧ ಪಕ್ಷಗಳ ಬಲವರ್ಧನೆ ಕುರಿತು ಚರ್ಚೆ ನಡೆಸಲಾಯಿತು. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಸಭೆಯಲ್ಲಿ ಪಾಲ್ಗೊಂಡ ಮುಖಂಡರ ಒಮ್ಮತದ ಅಭಿಪ್ರಾಯವಾಗಿತ್ತು. ಈ ಹಿನ್ನಲೆಯಲ್ಲಿ, ಭಾರತದ ರಾಜಕೀಯದಲ್ಲಿ ಬದಲಾವಣೆ ತಂದ ಮತ್ತು ಪ್ರಬಲವಾಗಿ ಅಧಿಕಾರದಲ್ಲಿದ್ದ ಸರ್ಕಾರಗಳನ್ನು ಉರುಳಿಸಿದ ವಿರೋಧ ಪಕ್ಷಗಳ ಕುರಿತು ಒಂದು ನೋಟ:

ಜಯಪ್ರಕಾಶ್ ನಾರಾಯಣ್

1975ರಲ್ಲಿ ತುರ್ತು ಪರಿಸ್ಥಿತಿ (Emergency) ಜಾರಿಗೊಳಿಸಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯ ವಿರುದ್ಧ, ವಿರೋಧ ಪಕ್ಷಗಳು ಒಟ್ಟು ಗೂಡಿ ಜನತಾ ಪಕ್ಷವನ್ನು ಆರಂಭಿಸಿದವು. ಇದರ ಬೆನ್ನಲ್ಲೇ 1977ರಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಜನತಾ ಪಕ್ಷ ಸೋಲಿಸಿತು. ನಂತರ ಮೊರಾರ್ಜಿ ದೇಸಾಯಿ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಸ್ವತಂತ್ರ ಭಾರತದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರಕ್ಕೆ ಬೀಜವನ್ನು ಬಿತ್ತಿದವರು ಜಯಪ್ರಕಾಶ್ ನಾರಾಯಣ್. ಆರಂಭದಲ್ಲಿ, ಇಂದಿರಾ ಗಾಂಧಿ ವಿರುದ್ಧ ಅವರು ಪ್ರಾರಂಭಿಸಿದ ಬಿಹಾರ ಚಳವಳಿ, ಜನತಾ ಪಕ್ಷದ ರಚನೆಗೆ ಪ್ರಮುಖ ಕಾರಣವಾಯಿತು ಎಂದು ಹೇಳಲಾಗುತ್ತಿದೆ.

ರಾಜೀವ್ ಗಾಂಧಿಯನ್ನು ಅಧಿಕಾರದಿಂದ ಕೆಳಗಿಳಿಸಲು ಜನತಾ ದಳದ ಸಂಸ್ಥಾಪಕ ವಿ.ಪಿ.ಸಿಂಗ್, ನ್ಯಾಷನಲ್ ಫ್ರಂಟ್ ಎಂಬ ಮೈತ್ರಿಕೂಟವನ್ನು ರಚಿಸಿದರು. ಬೋಪರ್ಸ್ ಹಗರಣದ ಹಿನ್ನೆಲೆಯಲ್ಲಿ ರಚನೆಯಾದ ಮೈತ್ರಿಕೂಟಕ್ಕೆ ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಎನ್.ಟಿ.ರಾಮರಾವ್ ನಾಯಕರಾಗಿ, ವಿ.ಪಿ.ಸಿಂಗ್ ಸಂಘಟಕರಾಗಿದ್ದರು. ಈ ಮೈತ್ರಿಕೂಟ ರಚನೆಗೆ ತಮಿಳುನಾಡಿನ ಡಿಎಂಕೆ ನಾಯಕ ಎಂ.ಕರುಣಾನಿಧಿ ಪ್ರಮುಖ ಪಾತ್ರ ವಹಿಸಿದ್ದರು.

ಎಂ.ಕರುಣಾನಿಧಿ

1989ರಲ್ಲಿ ಅಧಿಕಾರಕ್ಕೆ ಬಂದ ನ್ಯಾಷನಲ್ ಫ್ರಂಟ್ ಗೆ ಬಿಜೆಪಿ ಮತ್ತು ಎಡರಂಗ ಬೆಂಬಲ ನೀಡಿತ್ತು. ವಿ.ಪಿ.ಸಿಂಗ್ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಷನಲ್ ಫ್ರಂಟ್ ಸರ್ಕಾರ ಒಂದು ವರ್ಷವೂ ಉಳಿಯಲಿಲ್ಲ. ಪಕ್ಷದೊಳಗಿನ ಅಧಿಕಾರದ ಕಚ್ಚಾಟ, ಮಂಡಲ್ ಆಯೋಗದ ವಿರುದ್ಧ ಬಿಜೆಪಿಯ ನಿಲುವು, ಮತ್ತು ರಾಮಜನ್ಮ ಭೂಮಿ ಸಮಸ್ಯೆಯಿಂದಾಗಿ ನ್ಯಾಷನಲ್ ಫ್ರಂಟ್ ಸರ್ಕಾರವನ್ನು ಉರುಳಿಸಲಾಯಿತು. ಕಾಂಗ್ರೆಸ್ ವಿರುದ್ಧ ರಚನೆಯಾದ ನ್ಯಾಷನಲ್ ಫ್ರಂಟ್, ಕಾಂಗ್ರೆಸ್ ಬೆಂಬಲದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿತು. ಚಂದ್ರಶೇಖರ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಮತ್ತೆ ಚಂದ್ರಶೇಖರ್ ಆಡಳಿತವನ್ನು ಕಾಂಗ್ರೆಸ್ ಏಳು ತಿಂಗಳಲ್ಲೇ ಉರುಳಿಸಿತು.

ಅದೇ ರೀತಿ 1998ರಲ್ಲಿ ಕಾಂಗ್ರೆಸ್ ವಿರುದ್ಧ ರಚನೆಯಾದ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ, ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿತು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ ಜಯಲಲಿತ ನೇರುತ್ವದ ಎಐಎಡಿಎಂಕೆ ಬೆಂಬಲ ಕಳೆದುಕೊಂಡು ಒಂದೇ ವರ್ಷದಲ್ಲಿ ಸರ್ಕಾರ ಉರುಳಿತು. ನಂತರ, ಡಿಎಂಕೆ ಮತ್ತು ಇತರ ಪಕ್ಷಗಳ ಬೆಂಬಲದೊಂದಿಗೆ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು 1999 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಿತು. ವಾಜಪೇಯಿ ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಪೂರ್ಣ ಅವಧಿಯನ್ನು ಪೂರ್ಣಗೊಳಿಸಿತು.

ಎನ್.ಟಿ.ರಾಮರಾವ್

ವಿರೋಧ ಪಕ್ಷಗಳ ಮೈತ್ರಿಯು ವಿವಿಧ ಅವಧಿಗಳಲ್ಲಿ ವಿಜಯಶಾಲಿಯಾಗಿದ್ದರೂ, ಈಗ ಕೇಂದ್ರದಲ್ಲಿ ಪ್ರಬಲವಾಗಿರುವ ಭಾರತೀಯ ಜನತಾ ಪಕ್ಷದ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ವಿರುದ್ಧ, ವಿರೋಧ ಪಕ್ಷಗಳ ಒಕ್ಕೂಟ ರಚನೆಯ ಪ್ರಯತ್ನ ಫಲ ನೀಡುತ್ತದೆಯೇ ಕಾದು ನೋಡಬೇಕಿದೆ.

Related Posts