ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Patna Meeting Archives » Dynamic Leader
October 23, 2024
Home Posts tagged Patna Meeting
ದೇಶ ರಾಜಕೀಯ

ಮುಂಬೈ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆಯ ಬೇಕಿದ್ದ ವಿಪಕ್ಷ ನಾಯಕರ ಸಭೆಯನ್ನು, ಜುಲೈ 13 ಮತ್ತು 14 ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ. ಶಿಮ್ಲಾದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ, ಸಭೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಆಡಳಿತಾರೂಢ ಬಿಜೆಪಿ ವಿರುದ್ಧ ಎಲ್ಲಾ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಿ, ಆಡಳಿತ ಪಕ್ಷದ ವಿರುದ್ಧ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಜೂನ್ 23 ರಂದು ಪಾಟ್ನಾದಲ್ಲಿ ಪ್ರತಿಪಕ್ಷ ನಾಯಕರ ಸಭೆ ಕರೆಯಲಾಗಿತ್ತು.

ಆ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಎಂ.ಕೆ.ಸ್ಟಾಲಿನ್, ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್, ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಸೇರಿದಂತೆ 16 ವಿರೋಧ ಪಕ್ಷಗಳ ಮುಖಂಡರುಗಳು ಭಾಗವಹಿಸಿದ್ದರು. ಈ ಸಭೆಯ ಕೊನೆಯಲ್ಲಿ, ಮುಂದಿನ ಸಭೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆಯಲಿದೆ ಎಂದು ಘೋಷಿಸಲಾಗಿತ್ತು.

ಈ ಹಿನ್ನಲೆಯಲ್ಲಿ, ರಾಷ್ಟ್ರೀಯವಾದಿ ಕಾಂಗ್ರೆಸ್ ಅಧ್ಯಕ್ಷ ಶರದ್ ಪವಾರ್, “ಪಾಟ್ನಾದಲ್ಲಿ ನಡೆದ ಪ್ರತಿಪಕ್ಷ ನಾಯಕರ ಸಭೆಯಿಂದ ಪ್ರಧಾನಿ ಮೋದಿ ಅಸ್ತವ್ಯಸ್ತರಾಗಿ ಕಾಣುತ್ತಿದ್ದಾರೆ. ವಿರೋಧ ಪಕ್ಷದ ನಾಯಕರ ಮುಂದಿನ ಸಭೆ ಜುಲೈ 13 ಮತ್ತು 14 ರಂದು ಕರ್ನಾಟಕದ ಬೆಂಗಳೂರಿನಲ್ಲಿ ನಡೆಯಲಿದೆ” ಎಂದು ಹೇಳಿದ್ದಾರೆ.

ಹಿಮಾಚಲ ಪ್ರದೇಶ ಶಿಮ್ಲಾದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ, ಸಭೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ದೇಶ ರಾಜಕೀಯ

ಜುಲೈ 10-12ರ ನಡುವೆ ಮುಂದಿನ ಹಂತದ ವಿಪಕ್ಷ ನಾಯಕರ ಚರ್ಚೆ ನಡೆಯಲಿರುವ ಶಿಮ್ಲಾ ಸಭೆಯಲ್ಲಿ ಪಿಡಿಎಗೆ (Patriotic Democratic Alliance) ಅಂತಿಮ ರೂಪ ನೀಡಲಾಗುವುದು.

ಪ್ರಸ್ತಾವಿತ ವಿರೋಧ ಪಕ್ಷದ ಹೆಸರು ‘ದೇಶಭಕ್ತಿಯ ಪ್ರಜಾಸತ್ತಾತ್ಮಕ ಒಕ್ಕೂಟ’ ಅಥವಾ PDA ಆಗಿರಬಹುದು ಮತ್ತು ಮುಂದಿನ ತಿಂಗಳು ಶಿಮ್ಲಾದಲ್ಲಿ ನಡೆಯುವ ವಿರೋಧ ಪಕ್ಷಗಳ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿದು ಬಂದಿದೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಅವರು ಶನಿವಾರ ಪಾಟ್ನಾದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಈ ಕುರಿತು ಪ್ರತಿಪಾದಿಸಿದರು ಎಂದು ಹೇಳಲಾಗುತ್ತಿದೆ. ಶಿಮ್ಲಾ ಸಭೆಯಲ್ಲಿ ಪಿಡಿಎಗೆ ಅಂತಿಮ ರೂಪ ನೀಡಲಾಗುವುದು ಎಂದು ಅವರು ಹೇಳಿದಾರೆ. ಜುಲೈ 10-12 ರ ನಡುವೆ ಪ್ರತಿಪಕ್ಷ ನಾಯಕರ ಮುಂದಿನ ಹಂತದ ಚರ್ಚೆ ನಡೆಯಲಿದೆ.

ಡಿ.ರಾಜಾ ಅವರು, ಭಾನುವಾರ ಮೈತ್ರಿಯ ಹೆಸರು ‘ಪಿಡಿಎ’ ಆಗಿರಬಹುದು ಎಂದು ಹೇಳಿದ್ದಾರೆ. ಆದರೆ, ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಒತ್ತಿ ಹೇಳಿದರು. ಹೊಸ ಮೈತ್ರಿಯನ್ನು ಪೇಟ್ರಿಯಾಟಿಕ್ ಡೆಮಾಕ್ರಟಿಕ್ ಅಲೈಯನ್ಸ್ (ಪಿಡಿಎ) ಎಂದು ಹೆಸರಿಸಬಹುದು ಎಂದು ನಾವು ಹೇಳಬಹುದು. ಅದರ ಬಗ್ಗೆ ನಾವು ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಎನ್‌ಡಿಎಯನ್ನು ಸೋಲಿಸುವುದು ನಮ್ಮ ಪ್ರಾಥಮಿಕ ಉದ್ದೇಶವಾಗಿದೆ ಮತ್ತು ಎಲ್ಲಾ ವಿರೋಧ ಪಕ್ಷಗಳಿಗೆ ಅದರ ಬಗ್ಗೆ ಸ್ಪಷ್ಟತೆ ಇದೆ ಎಂದು ಅವರು ಹೇಳಿದರು.

ಪ್ರಸ್ತಾವಿತ ವೇದಿಕೆಗೆ ಬರುವ ವಿರೋಧ ಪಕ್ಷಗಳು ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಸಿದ್ಧಾಂತವನ್ನು ಹೊಂದಿರುತ್ತವೆ ಮತ್ತು ಹೊಸ ವೇದಿಕೆಯ ಹೆಸರು ಅದರ ಪ್ರತಿಬಿಂಬವನ್ನು ಹೊಂದಿರುತ್ತದೆ ಎಂದು ರಾಜಾ ಹೇಳಿದ್ದಾರೆ. “ತಮಿಳುನಾಡಿನಲ್ಲಿ ಸೆಕ್ಯುಲರ್ ಡೆಮಾಕ್ರಟಿಕ್ ಫ್ರಂಟ್ ಇದೆ. ಆದರೆ, ಬಿಹಾರದಲ್ಲಿ ಮಹಾಘಟಬಂಧನ್ ಇದೆ. ಆದ್ದರಿಂದ, ಸಂಯೋಜಿತ ವಿರೋಧವಾಗಿ ನಿಮ್ಮ ಬದ್ಧತೆಯನ್ನು ಹಂಚಿಕೊಳ್ಳುವ ಹೆಸರನ್ನು ನಾವು ಹೊಂದಿದ್ದೇವೆ ”ಎಂದು ಅವರು ಹೇಳಿದ್ದಾರೆ.

2004ರಲ್ಲಿ, ಸಾರ್ವತ್ರಿಕ ಚುನಾವಣೆಯ ನಂತರ, ಕಾಂಗ್ರೆಸ್, ಎಡ ಮತ್ತು ಇತರ ಪ್ರಾದೇಶಿಕ ಪಕ್ಷಗಳು ಕೇಂದ್ರದಲ್ಲಿ ಸರ್ಕಾರ ರಚಿಸಲು ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಅನ್ನು ರಚಿಸಿಕೊಳ್ಳಲಾಯಿತು. ಬಿಹಾರದಲ್ಲಿ, ಆರ್‌ಜೆಡಿ-ಜೆಡಿ(ಯು), ಕಾಂಗ್ರೆಸ್ ಮತ್ತು ಎಡಪಕ್ಷಗಳು 2015ರ ವಿಧಾನಸಭಾ ಚುನಾವಣೆಯ ಮೊದಲು ಮಹಾ ಮೈತ್ರಿ ಅಥವಾ ಮಹಾಘಟಬಂಧನ್ ಅನ್ನು ರಚಿಸಿ ಒಟ್ಟಿಗೆ ಸೇರಿಕೊಂಡವು.

ಡಿ.ರಾಜಾ ಅವರ ಘೋಷಣೆ, ಪಾಟ್ನಾ ಸಭೆಯ ಒಂದು ದಿನದ ನಂತರ ಹೊರ ಬರುತ್ತಿದೆ, ಪ್ರಸ್ತಾವಿತ ವೇದಿಕೆಗೆ ಔಪಚಾರಿಕ ರೂಪ ನೀಡುವ ಕಸರತ್ತು ಈಗಾಗಲೇ ಮುಂದುವರೆದಿದೆ. ಮತ್ತು ಶಿಮ್ಲಾ ಸಭೆಯು ಅದರ ರಚನೆ ಮತ್ತು ವಿವಿಧ ಕ್ಷೇತ್ರಗಳ ನಡುವೆ ಸೀಟು ಹಂಚಿಕೆಯ ವಿವಿಧ ಅಂಶಗಳ ಮೇಲೆ ಮುದ್ರೆ ಹಾಕುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಪ್ರಾಸಂಗಿಕವಾಗಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಪ್ರತಿಪಕ್ಷಗಳ ಸಭೆಯ ನಂತರ ಜಂಟಿ ಪತ್ರಿಕಾಗೋಷ್ಠಿಯ ತಮ್ಮ ಭಾಷಣದಲ್ಲಿ “ಅವರೆಲ್ಲರೂ ದೇಶದ ಪ್ರಜೆಗಳಾಗಿರುವುದರಿಂದ ಅವರನ್ನು ‘ವಿರೋಧ ಪಕ್ಷದವರು’ ಎಂದು ಕರೆಯಬಾರದು ಅವರನ್ನು ‘ದೇಶಭಕ್ತರು’ ಎಂದು ಕರೆಯಬೇಕು” ಎಂದು ಒತ್ತಾಯಿಸಿದ್ದರು.

ದೇಶ ರಾಜಕೀಯ

ಡಿ.ಸಿ.ಪ್ರಕಾಶ್

ಬಿಜೆಪಿ ವಿರುದ್ಧ, ಪಕ್ಷಗಳನ್ನು ಒಗ್ಗೂಡಿಸುವ ಹೊಣೆ ಹೊತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಜೂನ್ 23 ರಂದು ಪಕ್ಷದ ಮುಖಂಡರೊಂದಿಗೆ ಪಾಟ್ನಾದಲ್ಲಿ ಸಭೆ ನಡೆಸಿದರು. ಇದರಲ್ಲಿ ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ, ತೃಣಮೂಲ ಕಾಂಗ್ರೆಸ್, ಎಡಪಂಥೀಯ ಪಕ್ಷಗಳು, ರಾಷ್ಟ್ರೀಯವಾದಿ ಕಾಂಗ್ರೆಸ್, ಉದ್ಧವ್ ಠಾಕ್ರೆ ಅವರ ಶಿವಸೇನೆ, ಜಾರ್ಖಂಡ್ ಮುಕ್ತಿ ಮೋರ್ಚಾ, ನ್ಯಾಷನಲ್ ಕಾನ್ಫರೆನ್ಸ್‌, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಆಮ್ ಆದ್ಮಿ ಪಕ್ಷದ ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಸುಮಾರು 4 ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ, ವಿರೋಧ ಪಕ್ಷಗಳ ಬಲವರ್ಧನೆ ಕುರಿತು ಚರ್ಚೆ ನಡೆಸಲಾಯಿತು. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಸಭೆಯಲ್ಲಿ ಪಾಲ್ಗೊಂಡ ಮುಖಂಡರ ಒಮ್ಮತದ ಅಭಿಪ್ರಾಯವಾಗಿತ್ತು. ಈ ಹಿನ್ನಲೆಯಲ್ಲಿ, ಭಾರತದ ರಾಜಕೀಯದಲ್ಲಿ ಬದಲಾವಣೆ ತಂದ ಮತ್ತು ಪ್ರಬಲವಾಗಿ ಅಧಿಕಾರದಲ್ಲಿದ್ದ ಸರ್ಕಾರಗಳನ್ನು ಉರುಳಿಸಿದ ವಿರೋಧ ಪಕ್ಷಗಳ ಕುರಿತು ಒಂದು ನೋಟ:

ಜಯಪ್ರಕಾಶ್ ನಾರಾಯಣ್

1975ರಲ್ಲಿ ತುರ್ತು ಪರಿಸ್ಥಿತಿ (Emergency) ಜಾರಿಗೊಳಿಸಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯ ವಿರುದ್ಧ, ವಿರೋಧ ಪಕ್ಷಗಳು ಒಟ್ಟು ಗೂಡಿ ಜನತಾ ಪಕ್ಷವನ್ನು ಆರಂಭಿಸಿದವು. ಇದರ ಬೆನ್ನಲ್ಲೇ 1977ರಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಜನತಾ ಪಕ್ಷ ಸೋಲಿಸಿತು. ನಂತರ ಮೊರಾರ್ಜಿ ದೇಸಾಯಿ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಸ್ವತಂತ್ರ ಭಾರತದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರಕ್ಕೆ ಬೀಜವನ್ನು ಬಿತ್ತಿದವರು ಜಯಪ್ರಕಾಶ್ ನಾರಾಯಣ್. ಆರಂಭದಲ್ಲಿ, ಇಂದಿರಾ ಗಾಂಧಿ ವಿರುದ್ಧ ಅವರು ಪ್ರಾರಂಭಿಸಿದ ಬಿಹಾರ ಚಳವಳಿ, ಜನತಾ ಪಕ್ಷದ ರಚನೆಗೆ ಪ್ರಮುಖ ಕಾರಣವಾಯಿತು ಎಂದು ಹೇಳಲಾಗುತ್ತಿದೆ.

ರಾಜೀವ್ ಗಾಂಧಿಯನ್ನು ಅಧಿಕಾರದಿಂದ ಕೆಳಗಿಳಿಸಲು ಜನತಾ ದಳದ ಸಂಸ್ಥಾಪಕ ವಿ.ಪಿ.ಸಿಂಗ್, ನ್ಯಾಷನಲ್ ಫ್ರಂಟ್ ಎಂಬ ಮೈತ್ರಿಕೂಟವನ್ನು ರಚಿಸಿದರು. ಬೋಪರ್ಸ್ ಹಗರಣದ ಹಿನ್ನೆಲೆಯಲ್ಲಿ ರಚನೆಯಾದ ಮೈತ್ರಿಕೂಟಕ್ಕೆ ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಎನ್.ಟಿ.ರಾಮರಾವ್ ನಾಯಕರಾಗಿ, ವಿ.ಪಿ.ಸಿಂಗ್ ಸಂಘಟಕರಾಗಿದ್ದರು. ಈ ಮೈತ್ರಿಕೂಟ ರಚನೆಗೆ ತಮಿಳುನಾಡಿನ ಡಿಎಂಕೆ ನಾಯಕ ಎಂ.ಕರುಣಾನಿಧಿ ಪ್ರಮುಖ ಪಾತ್ರ ವಹಿಸಿದ್ದರು.

ಎಂ.ಕರುಣಾನಿಧಿ

1989ರಲ್ಲಿ ಅಧಿಕಾರಕ್ಕೆ ಬಂದ ನ್ಯಾಷನಲ್ ಫ್ರಂಟ್ ಗೆ ಬಿಜೆಪಿ ಮತ್ತು ಎಡರಂಗ ಬೆಂಬಲ ನೀಡಿತ್ತು. ವಿ.ಪಿ.ಸಿಂಗ್ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಷನಲ್ ಫ್ರಂಟ್ ಸರ್ಕಾರ ಒಂದು ವರ್ಷವೂ ಉಳಿಯಲಿಲ್ಲ. ಪಕ್ಷದೊಳಗಿನ ಅಧಿಕಾರದ ಕಚ್ಚಾಟ, ಮಂಡಲ್ ಆಯೋಗದ ವಿರುದ್ಧ ಬಿಜೆಪಿಯ ನಿಲುವು, ಮತ್ತು ರಾಮಜನ್ಮ ಭೂಮಿ ಸಮಸ್ಯೆಯಿಂದಾಗಿ ನ್ಯಾಷನಲ್ ಫ್ರಂಟ್ ಸರ್ಕಾರವನ್ನು ಉರುಳಿಸಲಾಯಿತು. ಕಾಂಗ್ರೆಸ್ ವಿರುದ್ಧ ರಚನೆಯಾದ ನ್ಯಾಷನಲ್ ಫ್ರಂಟ್, ಕಾಂಗ್ರೆಸ್ ಬೆಂಬಲದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿತು. ಚಂದ್ರಶೇಖರ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಮತ್ತೆ ಚಂದ್ರಶೇಖರ್ ಆಡಳಿತವನ್ನು ಕಾಂಗ್ರೆಸ್ ಏಳು ತಿಂಗಳಲ್ಲೇ ಉರುಳಿಸಿತು.

ಅದೇ ರೀತಿ 1998ರಲ್ಲಿ ಕಾಂಗ್ರೆಸ್ ವಿರುದ್ಧ ರಚನೆಯಾದ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ, ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿತು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ ಜಯಲಲಿತ ನೇರುತ್ವದ ಎಐಎಡಿಎಂಕೆ ಬೆಂಬಲ ಕಳೆದುಕೊಂಡು ಒಂದೇ ವರ್ಷದಲ್ಲಿ ಸರ್ಕಾರ ಉರುಳಿತು. ನಂತರ, ಡಿಎಂಕೆ ಮತ್ತು ಇತರ ಪಕ್ಷಗಳ ಬೆಂಬಲದೊಂದಿಗೆ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು 1999 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಿತು. ವಾಜಪೇಯಿ ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಪೂರ್ಣ ಅವಧಿಯನ್ನು ಪೂರ್ಣಗೊಳಿಸಿತು.

ಎನ್.ಟಿ.ರಾಮರಾವ್

ವಿರೋಧ ಪಕ್ಷಗಳ ಮೈತ್ರಿಯು ವಿವಿಧ ಅವಧಿಗಳಲ್ಲಿ ವಿಜಯಶಾಲಿಯಾಗಿದ್ದರೂ, ಈಗ ಕೇಂದ್ರದಲ್ಲಿ ಪ್ರಬಲವಾಗಿರುವ ಭಾರತೀಯ ಜನತಾ ಪಕ್ಷದ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ವಿರುದ್ಧ, ವಿರೋಧ ಪಕ್ಷಗಳ ಒಕ್ಕೂಟ ರಚನೆಯ ಪ್ರಯತ್ನ ಫಲ ನೀಡುತ್ತದೆಯೇ ಕಾದು ನೋಡಬೇಕಿದೆ.

ದೇಶ ರಾಜಕೀಯ

ಚೆನ್ನೈ:ರಾಜ್ಯದಲ್ಲಿ ಯಾವ ಪಕ್ಷಕ್ಕೆ ಪ್ರಭಾವವಿದೆಯೋ ಆ ಪಕ್ಷದ ನೇತೃತ್ವದಲ್ಲಿ ಮೈತ್ರಿ ಮಾಡಿಕೊಳ್ಳಬೇಕು ಎಂದು ವಿರೋಧ ಪಕ್ಷಗಳ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ.

ಬಿಹಾರ ರಾಜ್ಯದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಭಾಗವಹಿಸಿ, ಚೆನ್ನೈಗೆ ಹಿಂತಿರುಗಿದ ಮುಖ್ಯಮಂತ್ರಿ ಸ್ಟಾಲಿನ್ ಹೇಳಿದರು: “ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದು ನನಗೆ ಅತೀವ ಸಂತೋಷ ಮತ್ತು ಭರವಸೆಯನ್ನು ನೀಡಿದೆ. ಪಾಟ್ನಾ ಸಭೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚಿಸಿದ್ದೇವೆ.

ಭಾರತದ ಪ್ರಜಾಪ್ರಭುತ್ವ, ಜಾತ್ಯತೀತತೆಯನ್ನು ಉಳಿಸಲು ಬಿಜೆಪಿ ಮತ್ತೆ ಸರ್ಕಾರ ರಚಿಸಬಾರದು ಎಂಬುದುಕ್ಕಾಗಿಯೇ ಈ ಸಭೆಯನ್ನು ಆಯೋಜಿಸಲಾಗಿತ್ತು. ಬಿಜೆಪಿಯನ್ನು ಸೋಲಿಸುವುದೇ ಎಲ್ಲ ಪಕ್ಷಗಳ ಒಂದೇ ಗುರಿಯಾಗಿದೆ. ರಾಜಕೀಯ ಪಕ್ಷಗಳ ನಡುವೆ ಕನಿಷ್ಠ ಕಾರ್ಯಕ್ರಮ ರೂಪಿಸುವಂತೆ ಒತ್ತಾಯಿಸಿದ್ದೇನೆ.

ಬಿಜೆಪಿಯನ್ನು ಸೋಲಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಪ್ರಸ್ತುತ ಪರಿಸ್ಥಿತಿಯು ಅದಕ್ಕೆ ಅವಕಾಶ ಮಾಡಿಕೊಟ್ಟಿದೆ. ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದುಕೊಂಡಿದ್ದೇವು ಅದು ಈಗ ಪಾಟ್ನಾದಲ್ಲಿ ನೆರವೇರಿದೆ.

ಮೈತ್ರಿ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಕ್ಷೇತ್ರ ಹಂಚಿಕೊಳ್ಳಬಹುದು. ಕ್ಷೇತ್ರ ಹಂಚಿಕೆ ಸಾಧ್ಯವಾಗದಿದ್ದರೆ ಸಾಮಾನ್ಯ ಅಭ್ಯರ್ಥಿಯನ್ನು ಘೋಷಿಸಬಹುದು ಎಂದು ತೀರ್ಮಾನಿಸಲಾಗಿದೆ. ಮೈತ್ರಿ ರಚನೆಗೆ ಸಂಬಂಧಿಸಿದಂತೆ ಪಕ್ಷಗಳ ನಡುವೆ 7 ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದ್ದೇವೆ.

ರಾಜ್ಯದಲ್ಲಿ ಯಾವ ಪಕ್ಷಕ್ಕೆ ಪ್ರಭಾವವಿದೆಯೋ ಆ ಪಕ್ಷದ ನಾಯಕತ್ವದಲ್ಲಿ ಮೈತ್ರಿ ರಚನೆಯಾಗಬೇಕು ಎಂದು ಒತ್ತಾಯಿಸಲಾಗಿದೆ. ಪಾಟ್ನಾ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ” ಎಂದರು.

ದೇಶ ರಾಜಕೀಯ

ಇಂದು ಬಿಹಾರದ ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಸಮಾಲೋಚನಾ ಸಭೆ ಮುಕ್ತಾಯವಾಗಿದೆ. ಜೆಡಿಯು ಅಧ್ಯಕ್ಷ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಸುಮಾರು 4 ಗಂಟೆಗಳ ಕಾಲ ಸಮಾಲೋಚನೆ ಸಭೆ ನಡೆಯಿತು.

ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಕೆ.ಸಿ.ವೇಣುಗೋಪಾಲ್, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಹಾಗೂ ಟಿ.ಆರ್.ಬಾಲು, ರಾಷ್ಟ್ರೀಯವಾದಿ ಕಾಂಗ್ರೆಸ್ ಅಧ್ಯಕ್ಷ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್‌ನ ಉಮರ್ ಅಬ್ದುಲ್ಲಾ,  ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕಿ ಮೆಹಬೂಬಾ ಮುಫ್ತಿ, ರಾಷ್ಟ್ರೀಯ ಜನತಾ ದಳದ ನಾಯಕ ಲಾಲು ಪ್ರಸಾದ್ ಯಾದವ್ ಹಾಗೂ ತೇಜಸ್ವಿ ಯಾದವ್, ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕ ಡಿ.ರಾಜಾ, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಸೀತಾರಾಂ ಯೆಚೂರಿ, ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಅಧ್ಯಕ್ಷ ಉದ್ಧವ್ ಠಾಕ್ರೆ,  ಜಾರ್ಖಂಡ್ ಮುಕ್ತಿ ಮೋರ್ಚಾ ಅಧ್ಯಕ್ಷ ಹೇಮಂತ್ ಸೊರೆನ್ ಸೇರಿದಂತೆ 15ಕ್ಕೂ ಹೆಚ್ಚು ವಿರೋಧ ಪಕ್ಷದ ನಾಯಕರು ಭಾಗವಹಿಸಿದ್ದರು.

ಸಮಾಲೋಚನಾ ಸಭೆಯ ನಂತರ, ವಿರೋಧ ಪಕ್ಷಗಳ ನಾಯಕರು ಜಂಟಿಯಾಗಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಭಾರತ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಮಾತನಾಡಿ, “ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಲಾಯಿತು. ಬಿಜೆಪಿಯ ಕಳೆದ 9 ವರ್ಷಗಳ ಆಡಳಿತ ಅನಾಹುತಕ್ಕೆ ಕಾರಣವಾಗಿದೆ. ಬಿಜೆಪಿ ಆಡಳಿತದಲ್ಲಿ ದೇಶದ ಪ್ರಜಾಪ್ರಭುತ್ವ ಮತ್ತು ಸಮಾಜ ದುರಂತವಾಗಿದೆ. ಮೋದಿ ನೇತೃತ್ವದ ಸರ್ಕಾರ ದೊಡ್ಡ ಉದ್ಯಮಿಗಳ ಪರವಾಗಿ ನಾಚಿಕೆಯಿಲ್ಲದೆ ಕೆಲಸ ಮಾಡುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ದೇಶದಲ್ಲಿ ಪ್ರಜಾಪ್ರಭುತ್ವ ಕಣ್ಮರೆಯಾಗುತ್ತದೆ. ಬಿಜೆಪಿಯನ್ನು ಸೋಲಿಸಲೇಬೇಕು ಎಂದು ವಿರೋಧ ಪಕ್ಷಗಳು ತೀರ್ಮಾನಿಸಿವೆ” ಎಂದರು.

ಮಲ್ಲಿಕಾರ್ಜುನ ಖರ್ಗೆ: “ಜಾತ್ಯತೀತ ಪಕ್ಷದ ನಾಯಕರ ಮುಂದಿನ ಸಭೆ ಜುಲೈ 12 ರಂದು ಶಿಮ್ಲಾದಲ್ಲಿ ನಡೆಯಲಿದೆ. ಸಭೆಯಲ್ಲಿ ರಾಜ್ಯಗಳ ಪ್ರಮುಖ ನಾಯಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪ್ರಾದೇಶಿಕ ಪಕ್ಷಗಳ ವಿಲೀನದ ಬಗ್ಗೆಯೂ ಚರ್ಚಿಸಿದ್ದೇವೆ” ಎಂದರು.

ರಾಹುಲ್ ಗಾಂಧಿ: ” ಬಿಜೆಪಿ ಮತ್ತು ಆರ್‌ಎಸ್‌ಎಸ್ ದೇಶದ ರಚನೆಯನ್ನು ಹಾಳು ಮಾಡುತ್ತಿವೆ. ನಮ್ಮ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾವು ಸಿದ್ಧಾಂತದಲ್ಲಿ ಒಂದಾಗಿದ್ದೇವೆ” ಎಂದರು.

ಮಮತಾ ಬ್ಯಾನರ್ಜಿ: “ಬಿಹಾರದಲ್ಲಿನ ಗೊಂದಲವೇ ವಿರೋಧ ಪಕ್ಷಗಳು ಒಗ್ಗೂಡಲು ಕಾರಣ. ಸಿಬಿಐ ಹಾಗೂ ಇಡಿಯನ್ನು ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಎಲ್ಲದಕ್ಕೂ ಕೇಂದ್ರ ಸರ್ಕಾರದ ಬಳಿ ಹೋರಾಡಬೇಕಿದೆ. ಕೇಂದ್ರ ಸರ್ಕಾರ ಯಾವುದೇ ವಿಷಯದ ಬಗ್ಗೆ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸುವುದಿಲ್ಲ. ನಾವು ಒಗ್ಗಟ್ಟಾಗಿದ್ದೇವೆ; ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಮುಂದಿನ ಸಭೆಯಲ್ಲಿ ಬಿಜೆಪಿಯನ್ನು ಸೋಲಿಸುವ ಬಗ್ಗೆ ವಿವರವಾಗಿ ಚರ್ಚಿಸುತ್ತೇವೆ. ಇತಿಹಾಸ ಇಲ್ಲಿಂದ ಆರಂಭವಾಗುತ್ತದೆ. ಇತಿಹಾಸ ಬದಲಿಸುವ ಬಿಜೆಪಿಯ ಪ್ರಯತ್ನವನ್ನು ಒಗ್ಗಟ್ಟಾಗಿ ಎದುರಿಸೋಣ. ಈ ಬಾರಿಯೂ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಗೆದ್ದರೆ ಅದು ಭಾರತದ ಕೊನೆಯ ಸಾರ್ವತ್ರಿಕ ಚುನಾವಣೆಯಾಗಲಿದೆ” ಎಂದರು.

ಮೆಹಬೂಬಾ ಮುಫ್ತಿ: “ದೇಶದ ಜಾತ್ಯತೀತ ಸ್ವರೂಪದ ಮೇಲೆ ದಾಳಿ ನಡೆಯುತ್ತಿದೆ. ಗಾಂಧಿಯನ್ನು ಬೆಂಬಲಿಸೋಣ; ಗೋಡ್ಸೆಯನ್ನು ಅಲ್ಲ” ಎಂದು ಹೇಳಿದರು.

ವಿರೋಧ ಪಕ್ಷದ ನಾಯಕರ ಮುಂದಿನ ಸಭೆ ಜುಲೈ 12 ರಂದು ಶಿಮ್ಲಾದಲ್ಲಿ ನಡೆಯಲಿದೆ. ಈ ಸಭೆಗೆ ಕಾಂಗ್ರೆಸ್ ನೇತೃತ್ವ ವಹಿಸಲಿದೆ ಎಂದು ತಿಳಿದು ಬಂದಿದೆ.