ನವದೆಹಲಿ: ಸಂಸತ್ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿತು. ಇದರಲ್ಲಿ ಬಹುತೇಕ ಸಮೀಕ್ಷೆಗಳು ಆಡಳಿತಾರೂಢ ಬಿಜೆಪಿ ಪರವಾಗಿತ್ತು. ಸಮೀಕ್ಷೆ ನಡೆಸಿದ ಬಹುತೇಕ ಕಂಪೆನಿಗಳು, ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ 300ಕ್ಕೂ ಹೆಚ್ಚು ಸ್ಥಾನಗಳನ್ನು ವಶಪಡಿಸಿಕೊಳ್ಳಲಿದೆ ಎಂದು ಹೇಳಿದರು.
ಇಂಡಿಯಾ ಟುಡೇ ಮತ್ತು ಆಕ್ಸಿಸ್ ಮೈ ಇಂಡಿಯಾ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ, ಬಿ.ಜೆ.ಪಿ ಮೈತ್ರಿಕೂಟವು 361 ರಿಂದ 401 ಸ್ಥಾನಗಳನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿ ಮಾಡಿತ್ತು. ಆದರೆ ಇಂದು ಬಿಡುಗಡೆಯಾದ ಚುನಾವಣಾ ಫಲಿತಾಂಶಗಳು ಚುನಾವಣೋತ್ತರ ಸಮೀಕ್ಷೆಗನ್ನು ಸುಳ್ಳೆಂದು ಸಾಬೀತುಪಡೆಸಿವೆ.
ಮತ ಎಣಿಕೆಯ ಆರಂಭದಿಂದಲೂ ಬಿ.ಜೆ.ಪಿ ಮೈತ್ರಿಕೂಟಕ್ಕೆ ಸವಾಲೆಸೆಯುವ ರೀತಿಯಲ್ಲಿ ಇಂಡಿಯಾ ಮೈತ್ರಿಕೂಟವೂ ಹಲವೆಡೆ ಮುನ್ನಡೆ ಸಾಧಿಸಿವೆ. ಸದ್ಯಕ್ಕೆ ಬಿ.ಜೆ.ಪಿ ಮೈತ್ರಿಕೂಟ 291 ಕ್ಷೇತ್ರಗಳಲ್ಲಿ ಮತ್ತು ಇಂಡಿಯಾ ಮೈತ್ರಿಕೂಟ 234 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ದೆಹಲಿಯಲ್ಲಿ ಸುದ್ದಿಗಾರರನ್ನು ಭೇಟಿ ಮಾಡಿದರು.
ಆಗ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಸಂವಿಧಾನವನ್ನು ರಕ್ಷಿಸಲು ಜನರು ನಮಗೆ ಮತ ನೀಡುತ್ತಾರೆ ಎಂದು ನಾವು ಭಾವಿಸಿದ್ದೆವು. ಬಿಜೆಪಿ ಅಷ್ಟೇ ಅಲ್ಲ ಸಿಬಿಐ, ಜಾರಿ ನಿರ್ದೇಶನಾಲಯದ ವಿರುದ್ಧ ನಿಂತು ಗೆದ್ದಿದ್ದೇವೆ. ಜನರ ತೀರ್ಪು ಸಂವಿಧಾನದ ರಕ್ಷಣೆಗೆ ಸಹಕಾರಿಯಾಗಿದೆ. ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಧ್ವನಿ ಕೇಳುವ ಭರವಸೆ ಇದೆ. ಜನರು ಪ್ರಧಾನಿ ಮೋದಿಯನ್ನು ಕಡೆಗಣಿಸಿದ್ದಾರೆ. ರೈತರು, ಬಡವರು ಮತ್ತು ಪರಿಶಿಷ್ಟ ಪಂಗಡದವರು ಸಂವಿಧಾನವನ್ನು ಉಳಿಸಿದ್ದಾರೆ.
ನಾನು ಎರಡೂ ಕ್ಷೇತ್ರಗಳಲ್ಲಿ ಯಶಸ್ವಿಯಾಗಿದ್ದೇನೆ. ರಾಯ್ಬರೇಲಿ ಮತ್ತು ವಯನಾಡು ಕ್ಷೇತ್ರದ ಜನತೆಗೆ ಧನ್ಯವಾದಗಳು. ವಯನಾಡು, ರಾಯ್ಬರೇಲಿ ಕ್ಷೇತ್ರಗಳಲ್ಲಿ ಯಾವುದನ್ನುರಾಜೀನಾಮೆ ನೀಡಬೇಕು ಎಂಬುದನ್ನು ಇನ್ನು ನಿರ್ಧರಿಸಿಲ್ಲ. ನಾಳೆ ದೆಹಲಿಯಲ್ಲಿ ಇಂಡಿಯಾ ಮೈತ್ರಿ ಪಕ್ಷಗಳ ಸಮಾಲೋಚನಾ ಸಭೆ ನಡೆಯಲಿದೆ. ನಾವು ನಮ್ಮ ಮೈತ್ರಿ ಪಕ್ಷಗಳನ್ನು ಗೌರವಿಸುತ್ತೇವೆ ಮತ್ತು ಅವರನ್ನು ಸಂಪರ್ಕಿಸದೆ ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ.
ನಾಳೆ ನಡೆಯಲಿರುವ ಸಭೆಯಲ್ಲಿ, ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಮತ್ತು ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾ ದಳ ಪಕ್ಷಗಳನ್ನು ಮೈತ್ರಿಕೂಟಕ್ಕೆ ಆಹ್ವಾನಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದರು.