ಅಖಂಡ ಭಾರತ VS ಹಿಂದೂ ರಾಷ್ಟ್ರ
ಜೈನಧರ್ಮದ ಭರತನು ಅವಸರ್ಪಿನಿಯ ಮೊದಲ ಚಕ್ರವರ್ತಿ. ಅವನು ಜೈನ ಸನ್ಯಾಸಿ ಮೊದಲ ತೀರ್ಥಂಕರ ರಿಷಭನಾಥನ ಹಿರಿಯ ಮಗ. ಜೈನ ವಿಶ್ವವಿಜ್ಞಾನದ ಪ್ರಕಾರ, ಭಾರತದ ಪ್ರಾಚೀನ ಹೆಸರು ಭಾರತವರ್ಷ ಅಥವಾ ಅವನ ನಂತರ ಭರತ ಅಥವಾ ಭರತ ಭೂಮಿ. ಹಾಗಾಗಿ ಈ ದೇಶವನ್ನು ಭಾರತವೆಂದು ಕರೆಯಲಾಗುತ್ತಿದೆ.
ಭಾರತಕ್ಕೆ ಇಂಡಿಯಾ ಎಂಬ ಹೆಸರನ್ನು ಆಂಗ್ಲರು ನೀಡಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಇಂಡಿಯಾ ಎಂಬುದುಕ್ಕೆ ಬೇರೆಯದೆ ಅರ್ಥವಿದೆ. ಪಂಚಭೂತಗಳೆಂದರೆ ಆಕಾಶ, ಭೂಮಿ, ಅಗ್ನಿ, ಜಲ ಮತ್ತು ವಾಯು. ಈ ಐದು ಮೂಲಭೂತಗಳಿಂದಾಗಿಯೇ ಜಗತ್ತು ಸೃಷ್ಟಿಯಾಗಿದೆ ಎಂದು ನಂಬಿದ ನಮ್ಮ ಪೂರ್ವಜರು ದೇವತೆಗಳ ರಾಜನಾದ ಇಂದ್ರನನ್ನು ಪೂಜಿಸುತ್ತಿದ್ದರು.
ಹಿಂದೂ ಧರ್ಮದ ಪ್ರಕಾರ, ಇಂದ್ರನು ಸ್ವರ್ಗ, ಯುದ್ಧ, ಗುಡುಗು ಮತ್ತು ಚಂಡಮಾರುತದ ದೇವರು. ಸಂಸ್ಕೃತದಲ್ಲಿ ಇಂದು ಎಂದರೆ ‘ಒಂದು ಹನಿ’ ಮತ್ತು ‘ರಾ’ ಎಂದರೆ ಹೊಂದಿರುವುದು; ಆದ್ದರಿಂದ, ಇಂದ್ರ ಎಂದರೆ ಮಳೆ ಹನಿಗಳನ್ನು ಹೊಂದಿರುವವನು ಅಂದರ್ಥವಾಗುತ್ತದೆ. ನಾವು ಜನವರಿ 14 ಮತ್ತು 15 ರಂದು ಆಚರಿಸುತ್ತಿರುವ ಮಕರ ಸಂಕ್ರಾಂತಿ ಅಥವಾ ಪೊಂಗಲ್ ಹಬ್ಬವನ್ನು ಈ ಹಿಂದೆ ನಮ್ಮ ಪೂರ್ವಜರು ಇಂದ್ರ ಹಬ್ಬ ಹೆಸರಿನಲ್ಲಿ ಆಚರಿಸುತ್ತಿದ್ದರು.
ಪ್ರಕೃತಿಯನ್ನು ಆರಾಧಿಸುವುದು ನಮ್ಮ ಸಂಪ್ರದಾಯ; ಹೀಗೆ ಪ್ರಕೃತಿಯೊಂದಿಗೆ ಬೆಸೆದುಹೋಗಿದ್ದ ನಮ್ಮನ್ನು, ಧಾರ್ಮಿಕ ಮತಾಂಧತೆಯನ್ನು ಪ್ರಚೋದಿಸಿ, ನಮ್ಮನ್ನು ವಿಭಜಿಸಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ. ಮನೆ ದೇವರನ್ನು ಪೂಜಿಸುವುದು ಗ್ರಾಮ ದೇವತೆಗಳನ್ನು ಕೊಂಡಾಡಿ ಸಂಬ್ರಮಿಸುವುದೆಲ್ಲವೂ ಮಾಯವಾಗಿ, ಅವನು ಮುಸ್ಲಿಂ, ಇವನು ಕ್ರಿಶ್ಚಿಯನ್ ಎಂದು ನಮ್ಮವರನ್ನೆ ನಾವು ಬೇರೆಯಾಗಿ ನೋಡಿ, ಅವರಿಗೆ ಧಾರ್ಮಿಕವಾಗಿ ಕಿರುಕುಳ ನೀಡುತ್ತಿದ್ದೇವೆ.
ಸನಾತನವಾದಿಗಳು ಅಖಂಡ ಭಾರತ ಎಂದು ಹೇಳುತ್ತಾರೆ. ಮತ್ತೊಂದು ಕಡೆ ಅದನ್ನು ಹಿಂದೂ ರಾಷ್ಟ್ರವೆಂದೂ ಕರೆಯುತ್ತಾರೆ. ಹಾಗಾದರೆ, ಅವರ ದೃಷ್ಟಿಯಲ್ಲಿ ಈ ದೇಶ ಭಾರತವೂ ಹೌದು; ಇಂಡಿಯಾವೂ ಹೌದು. ಆದರೆ, ರಾಜಕೀಯಕ್ಕಾಗಿ ಇಂಡಿಯಾ ಎಂದರೆ, ಅದು ಆಂಗ್ಲರು ನೀಡಿದ ಹೆಸರು ಎಂದು ವಿರೋಧಿಸುತ್ತಿದ್ದಾರೆ.
ಈಗ ನಮ್ಮ ದೇಶದಲ್ಲಿ I.N.D.I.A ಎಂಬ ಹೊಸ ರಾಜಕೀಯ ಪರ್ವ ಶುರುವಾಗಿದೆ. ಹಳೆ UPA ಹೊಸ ಹೆಸರಿನಲ್ಲಿ ಇನ್ನಿಂಗ್ಸ್ ಪ್ರಾರಂಭಿಸಿದೆ. ಈಗ ಎಲ್ಲಾ ಕಡೆ ಇದೆ ಚರ್ಚೆ ನಡೆಯುತ್ತಿದೆ. ಇಂಡಿಯಾ VS ಭಾರತ ಎಂಬ ಹೆಸರಿನಲ್ಲಿ ನೆಟ್ಟಿಗರು ಸಾಮಾಜಿಕ ಜಾಲ ತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಐಂದ್ರಿಯ > ಇಂದ್ರಿಯ > ಇಂದ್ರ > ಇಂದು > ಇಂಡಿಯಾ ಎಂದಾಗಿ ಈಗ ಹಿಂದೂ ಆಗಿದೆ. ನನಗೆ ತಿಳಿದಮಟ್ಟಿಗೆ ಇಂಡಿಯಾ ಎಂಬುದಕ್ಕೆ ಇದುವೇ ಅರ್ಥ. ಜೈನ ಧರ್ಮದ ಭಾರತ ಎಂಬ ಹಳೆಯ ಸಂಪ್ರದಾಯಕ್ಕೂ, ಇಂಡಿಯಾ ಎಂಬ ಹತ್ತಿರದ ಸಂಬಂಧಕ್ಕೂ ಇಷ್ಟೇ ವ್ಯತ್ಯಾಸ.
ಇಂಡಿಯಾ ಎಂಬ ಹೆಸರು ಸಿಂಧೂ ನದಿಯ ಪರ್ಷಿಯನ್ ರೂಪಾಂತರ “ಇಂಡಸ್” ಎಂಬುದರಿಂದ ಬಂದಿದ್ದು ಎಂದು ಹೇಳಿದರೂ, ಇಂಡಸ್ ಎಂಬ ಹೆಸರು ಇಂದ್ರನ ಹೆಸರಿನಿಂದ ಬಂದಿದ್ದು. ಇದನ್ನೇ ಹಿಂದೂಸ್ತಾನ ಎನ್ನುತ್ತೇವೆ. ಆದ್ದರಿಂದ ಮೊದಲಿನವು ಸರಿಯಾಗಿ ಅನ್ವಯಿಸುತ್ತದೆ. ಈಗ ಹೇಳಿ ನಿಮಗೆ ಇಂಡಿಯಾ (I.N.D.I.A) ಬೇಕೆ? ಅಥವಾ ಭಾರತ ಸಾಕೆ?