ಮಹಿಳಾ ಕೈದಿಗಳು ಗರ್ಭಧಾರಣೆ ಆಗುತ್ತಿರುವ ವಿಚಾರ: ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಸುಪ್ರೀಂ ಕೋರ್ಟ್!
ದೇಶಾದ್ಯಂತ ಇರುವ ಜೈಲುಗಳಲ್ಲಿ ಮಹಿಳಾ ಕೈದಿಗಳು ಗರ್ಭಧಾರಣೆ ಆಗುತ್ತಿರುವ ವಿಚಾರವನ್ನು ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲು ಮುಂದಾಗಿದೆ.
ಪಶ್ಚಿಮ ಬಂಗಾಳದ ಜೈಲುಗಳಲ್ಲಿ ಮಹಿಳಾ ಕೈದಿಗಳು ದೊಡ್ಡ ಪ್ರಮಾಣದಲ್ಲಿ ಗರ್ಭಧಾರಣೆ ಆಗುತ್ತಿರುವ ವಿಚಾರವನ್ನು ಪ್ರಶ್ನಿಸಿ ಕೊಲ್ಕತ್ತಾ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿವೆ. ಅದರಲ್ಲೂ ಪಶ್ಚಿಮ ಬಂಗಾಳದ ಹಲವು ಕಾರಾಗೃಹಗಳಲ್ಲಿ 196 ಮಕ್ಕಳು ಕಾರಾಗೃಹದಲ್ಲೇ ಹುಟ್ಟಿ ಅಲ್ಲೇ ಬಂಧನದಲ್ಲಿದ್ದಾರೆ. ಆದ್ದರಿಂದ ಮಹಿಳಾ ಕೈದಿಗಳಿರುವ ಜಾಗಕ್ಕೆ, ಪುರುಷ ಜೈಲು ಸಿಬ್ಬಂದಿಗಳ ಪ್ರವೇಶವನ್ನು ನಿಷೇಧಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿರುವಾಗಲೇ ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಇದರಲ್ಲಿ ದೇಶಾದ್ಯಂತ ಜೈಲುಗಳಲ್ಲಿರುವ ಮಹಿಳಾ ಕೈದಿಗಳ ಸ್ಥಿತಿಗತಿ ಸೇರಿದಂತೆ ನಾನಾ ವಿಷಯಗಳ ಕುರಿತು ವಿಚಾರಿಸಲಿದ್ದಾರೆ. ಈ ವಿಷಯದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡಲು ವಕೀಲರಾದ ಗೌರವ್ ಅಗರ್ವಾಲ್ ಮತ್ತು ಕೇಂದ್ರ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರನ್ನು ನೇಮಿಸಲಾಗಿದೆ.
ಅಲ್ಲದೆ ಈ ಗುಂಪಿನಲ್ಲಿ ಕೆಲವು ಮಹಿಳಾ ಜೈಲು ಪೊಲೀಸ್ ಅಧಿಕಾರಿಗಳನ್ನು ಸೇರಿಸಿ ಮುಂದೆ, ಯಾವ ರೀತಿಯ ಸುಧಾರಣೆಗಳನ್ನು ಮಾಡಬಹುದು ಎಂಬುದನ್ನು ಪರಿಶೀಲಿಸುವಂತೆ ಹಾಗೂ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳಿಂದ ಮಾಹಿತಿ ಸಂಗ್ರಹಿಸಿ ದಾಖಲಿಸುವಂತೆಯೂ ಆದೇಶ ನೀಡಿ ಪ್ರಕರಣದ ತನಿಖೆಯನ್ನು ಮುಂದೂಡಿದ್ದಾರೆ.