ಬಿಜೆಪಿಯಲ್ಲಿ ವಯೋಮಿತಿ: ಪ್ರಧಾನಿ ಮೋದಿ, ಕೇಂದ್ರ ಸಚಿವ ರಾಜನಾಥ್ ಸಿಂಗ್‌ಗೆ ವಿನಾಯಿತಿ?
ಡಿ.ಸಿ.ಪ್ರಕಾಶ್ ಸಂಪಾದಕರು
ಎಲ್.ಕೆ.ಅಡ್ವಾಣಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರನ್ನು 75 ವಯಸ್ಸಿನ ನಂತರ ” ಮಾರ್ಗದರ್ಶಕ್ ಮಂಡಲ್ ” ಎಂದು ಕರೆಯಲ್ಪಡುವ ಸ್ಟೀರಿಂಗ್ ಸಮಿತಿಗೆ ನೇಮಿಸಲಾಗಿತ್ತು. ಈ ನಿಯಮದಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ವಿನಾಯಿತಿ ಸಿಗುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ.
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಈಗ 73 ವರ್ಷ ವಯಸ್ಸಾಗಿದೆ. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಪ್ರಧಾನಿಯಾದಾಗ, ಮೋದಿ ಅವರು 78 ವರ್ಷ ವಯಸ್ಸಿನವರೆಗೆ ಅಧಿಕಾರದಲ್ಲಿ ಉಳಿಯಬೇಕಾಗುತ್ತಾದೆ. ಹಾಗಾಗಿ ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರಂತೆ 75 ವರ್ಷ ವಯಸ್ಸಿನ ನಂತರ ನಿವೃತ್ತಿಯಾಗಬೇಕು ಎಂದು ಬಲವಂತಮಾಡದೇ ಮೋದಿಯೇ ಪೂರ್ಣಾವಧಿಯವರೆಗೆ ಪ್ರಧಾನಿಯಾಗಿ ಮುಂದುವರಿಯಲು ಬಿಜೆಪಿ ತನ್ನ ನಿಲುವನ್ನು ಬದಲಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಪ್ರಧಾನಿ ಮೋದಿಯವರ ಹೆಸರಿನಲ್ಲಿ ಬಿಜೆಪಿ ದೇಶಾದ್ಯಂತ ಮತಗಳನ್ನು ಸಂಗ್ರಹಿಸುತ್ತಿದ್ದು, ಅವರು ನೇತೃತ್ವ ವಹಿಸಿಕೊಂಡ ನಂತರವೇ ವಿವಿಧ ಚುನಾವಣೆಗಳಲ್ಲಿ ಪಕ್ಷವು ಗೆಲುವು ಸಾಧಿಸುತ್ತಿದೆ ಎಂದು ಬಿಜೆಪಿ ನಾಯಕರು ಗಮನಸೆಳೆದಿದ್ದಾರೆ. ಆದ್ದರಿಂದ ಅವರಿಗೆ 75 ವಯಸ್ಸಿನ ನಿಯಮದಿಂದ ವಿನಾಯಿತಿ ಕಡ್ಡಾಯವೆಂದು ಪರಿಗಣಿಸಲಾಗಿದೆ.
ಇದೇ ವೇಳೆ, ಮೋದಿ ಅವರು ಸ್ಟೀರಿಂಗ್ ಕಮಿಟಿಗೆ ಹೋಗಬೇಕು ಎಂದು ಹಿರಿಯ ನಾಯಕರು ಒಮ್ಮತದ ಅಭಿಪ್ರಾಯ ಮಂಡಿಸಿದರೆ ಅರ್ಧದಷ್ಟು ಅವಧಿಗೆ ಮತ್ತೊಂದು ಪ್ರಧಾನಿಯನ್ನು ನೇಮಿಸಬಹುದು ಎಂದೂ ಹೇಳಲಾಗುತ್ತಿದೆ. ಆದರೆ ಚುನಾವಣೆ ಹಿನ್ನೆಲೆಯಲ್ಲಿ ಈ ಬಗ್ಗೆ ಯಾವುದೇ ಚರ್ಚೆಗೆ ಅವಕಾಶವಿಲ್ಲ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದಾರೆ.
ನರೇಂದ್ರ ಮೋದಿಯಷ್ಟೇ ಅಲ್ಲ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವಯಸ್ಸು ಏರಿದ್ದರೂ ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಆಯ್ಕೆಯಾಗಿದ್ದಾರೆ. 72 ವರ್ಷದ ರಾಜನಾಥ್ ಸಿಂಗ್ ಅವರು ಲಕ್ನೋದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಘೋಷಿಸಿದೆ.
ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಸಚಿವರಾದರೆ 77ರ ತನಕ ಅಧಿಕಾರದಲ್ಲಿ ಮುಂದುವರಿಯಬಹುದು. ಇದನ್ನು ಇತರ ಭಾರತೀಯ ಜನತಾ ಪಕ್ಷದ ನಾಯಕರು ಒಪ್ಪಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆಯೂ ಮೋದಿ ಮತ್ತು ರಾಜನಾಥ್ ಸಿಂಗ್ ಅವರ ಆಯ್ಕೆಯಿಂದಾಗಿ ಉದ್ಭವಿಸಿದೆ.
ಈ ಹಿಂದೆ ಕಲ್‍ರಾಜ್ ಮಿಶ್ರಾ ಅವರಂತಹ ಕೇಂದ್ರ ಸಚಿವರು ತಮ್ಮ 75ನೇ ವಯಸ್ಸಿನಲ್ಲಿ ರಾಜೀನಾಮೆ ನೀಡಿದ್ದರು ಎಂದು ಬಿಜೆಪಿಗರು ಗಮನಸೆಳೆದಿದ್ದಾರೆ. ಅದೇ ರೀತಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ವಯಸ್ಸು 75 ದಾಟುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಆನಂದಿಬೆನ್ ಪಟೇಲ್ ಕೂಡ ಇದೇ ರೀತಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ನಂತರ ರಾಜ್ಯಪಾಲರಾಗಿ ನೇಮಕವಾದರು.
ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಮಾತ್ರ ಹೊರಬಿದ್ದಿದ್ದು, ಮುಂದಿನ ಪಟ್ಟಿಗಳಲ್ಲಿ 70 ದಾಟಿದ ಹಿರಿಯ ನಾಯಕರಿಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ದಿಸಲು ಬಿಜೆಪಿ ಅವಕಾಶ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕು. ಮತ್ತು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಅಧಿಕಾರಕ್ಕೆ ಬಂದು, ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ, ಪೂರ್ಣಾವಧಿಯವರೆಗೂ ಅಧಿಕಾರದಲ್ಲಿ ಮುಂದುವರಿಯುತ್ತಾರೆಯೇ ಎಂಬುದು ಅನುಮಾನವೇ ಎಂದು ಬಿಜೆಪಿಯಲ್ಲೇ ಗುಸುಗುಸು ಮಾತನಾಡಿಕೊಳ್ಳುತ್ತಿದ್ದಾರೆ.