ಒಂದೇ ಭಾಷೆಯನ್ನು ಹೇರಿದರೆ ಹಲವು ದೇಶಗಳು ಹುಟ್ಟುತ್ತವೆ: ಸೀಮಾನ್ ಬಹಿರಂಗ ಹೇಳಿಕೆ!
ಚೆನ್ನೈ: “ಹಲವು ಭಾಷೆಗಳಿದ್ದರೆ ಮಾತ್ರ ಭಾರತ ಒಂದು ದೇಶವಾಗಿರುತ್ತದೆ. ಒಂದೇ ಭಾಷೆಯನ್ನು ಹೇರಿದರೆ ಹಲವು ದೇಶಗಳು ಹುಟ್ಟುತ್ತವೆ. ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ.” ಎಂದು “ನಾಮ್ ತಮಿಳರ್” ಪಕ್ಷದ ನಾಯಕ ಸೀಮಾನ್ ಹೇಳಿದ್ದಾರೆ.
ಚೆನ್ನೈ ಹೈಕೋರ್ಟ್‌ನಲ್ಲಿ ತಮಿಳನ್ನು ವ್ಯಾಜ್ಯ ಭಾಷೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ, ಚೆನ್ನೈನ ಎಗ್ಮೋರ್‌ನಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಸೀಮಾನ್ ಮಾತನಾಡಿದರು.
ಅವರವರ ನೆಲದಲ್ಲಿ, ಅವರವರ ಮಾತೃಭಾಷೆಯಲ್ಲಿ ಮಾತನಾಡುವ ಮತ್ತು ಅದನ್ನು ಪೂಜಿಸುವ ಹಕ್ಕು ಅವರಿಗಿದೆ. ಅದಕ್ಕಾಗಿಯೇ ಭಾಷಾವಾರು ರಾಜ್ಯಗಳನ್ನು ರಚಿಸಲಾಯಿತು. ಈ ಬಗ್ಗೆ ಮಾತನಾಡಿದರೆ ಪ್ರತ್ಯೇಕತಾವಾದದ ಬಗ್ಗೆ ಮಾತನಾಡುತ್ತಿದ್ದೀರಿ ಎನ್ನುತ್ತಾರೆ.
ಈಗ, ನಾನು ಹೇಳುತ್ತೇನೆ. ಹಲವು ಭಾಷೆಗಳಿದ್ದರೆ ಮಾತ್ರ ಭಾರತ ಒಂದೇ ದೇಶವಾಗಿರುತ್ತದೆ. ಒಂದೇ ಭಾಷೆ ಎಂದು ಹೇರಿದರೆ ಹಲವು ದೇಶಗಳು ಹುಟ್ಟುತ್ತವೆ. ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಇದನ್ನು ಅಧಿಕಾರದಲ್ಲಿರುವವರು ಪರಿಗಣನೆಗೆ ತೆಗೆದುಕೊಳ್ಳಬೇಕು.
ನಾವು ವಿಭಜನೆಯ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಹೇಳಿದರೆ; ಅದನ್ನು ಮಾತನಾಡಲು ಪ್ರಚೋಧಿಸುವವರು ಅಧಿಕಾರದ ಚುಕ್ಕಾಣಿಯಲ್ಲಿ ಕುಳಿತಿರುವವರೇ. ಈ ರೀತಿಯ ಹೋರಾಟ ಪ್ರತಿ ವರ್ಷವೂ ನಡೆಯುತ್ತದೆ. ಅಧಿಕಾರೇತರರಿಗೆ ಹೋರಾಟವೊಂದೇ ದಾರಿ. ಅಧಿಕಾರದಲ್ಲಿರುವವರು ಅದನ್ನು ಜಾರಿಗೆ ತರಬೇಕು.
ಡಿಎಂಕೆ 18 ವರ್ಷಗಳ ಕಾಲ ಅಧಿಕಾರದಲ್ಲಿತ್ತು. ಪ್ರತಿಭಾ ಪಾಟೀಲ್ ಮತ್ತು ಪ್ರಣಬ್ ಮುಖರ್ಜಿ ಅವರನ್ನು ರಾಷ್ಟ್ರಪತಿಗಳನ್ನಾಗಿ ಆಯ್ಕೆ ಮಾಡಿತು. ಇಬ್ಬರೂ ಸಹಿ ಹಾಕಿದ್ದರೆ ತಮಿಳಿನಲ್ಲಿ ವ್ಯಾಜ್ಯ ಕಾಯ್ದೆ ಬರುತ್ತಿತ್ತು. ಅಬ್ದುಲ್ ಕಲಾಂ ಅವರ ಬಳಿ ಮನವಿ ಮಾಡಿದ್ದರೆ ಅವರೂ ಸಹ ಸಹಿ ಹಾಕುತ್ತಿದ್ದರು. ಆದರೆ ಸಮಸ್ಯೆ ಮುಗಿಯಬಾರದು ಎಂದು ಭಾವಿಸುತ್ತಾರೆ. ಹೋರಾಟಗಾರನಿಗಿಂತ ಹೋರಾಡಲು ಪ್ರಚೋದಿಸುವವನು ಅಪಾಯಕಾರಿ.
ಅಧಿಕಾರ ಬಹಳ ಬಲಿಷ್ಟವಾದದ್ದು; ಅದನ್ನು ಸಾಧಿಸಿದರೆ ಎಲ್ಲವೂ ಸುಲಭ. ಬೇಕಾದ, ಬಯಸಿದ ಇಲಾಖೆಗಳನ್ನು ಪಡೆದು ಅಧಿಕಾರ ಅನುಭವಿಸಿದವರು ಇಂತಹ ಬೇಡಿಕೆಯನ್ನು ಈಡೇರಿಸಲಿಲ್ಲ ಎಂದು ಕಿಡಿಕಾರಿದರು.