ಮಳೆಯ ಅಬ್ಬರಕ್ಕೆ ನಲುಗಿದ ಕೊತ್ತನೂರು, ಕೆ.ನಾರಾಯಣಪುರ, ಬೈರತಿ, ಗೆದ್ದಲಹಳ್ಳಿ ಹಾಗೂ ಸುತ್ತಮುತ್ತ ಪ್ರದೇಶಗಳು!
ವರದಿ ಮತ್ತು ಫೋಟೋ: ಪ್ರತಿಬನ್, ಕಮ್ಮನಹಳ್ಳಿ
ಬೆಂಗಳೂರು: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಕೊತ್ತನೂರು, ಕೆ.ನಾರಾಯಣಪುರ, ಬೈರತಿ ಹಾಗೂ ಗೆದ್ದಲಹಳ್ಳಿ ಸುತ್ತಮುತ್ತ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಸ್ತೆಗಳೆಲ್ಲವೂ ಜಲಾವೃತಗೊಂಡು ಜನ ಪರದಾಡುವಂತೆ ಆಗಿದೆ. ರಸ್ತೆಗಳೇ ಕಾಣುತ್ತಿಲ್ಲ. ಎಲ್ಲೆಡೆಯೂ ನೀರು ತುಂಬಿದ್ದು, ರಸ್ತೆ ಎಲ್ಲಿದೆ… ಗುಂಡಿಗಳು ಎಲ್ಲಿದೆ ಎಂದು ತಿಳಿಯಲೂ ಆಗುತ್ತಿಲ್ಲ. ಕತ್ತಲೆಯಲ್ಲಿ… ಗಾಬರಿಯಿಂದ… ರಸ್ತೆಯನ್ನು ಹಾದು ಹೋಗಬೇಕಾದ ಸನ್ನಿವೇಶ ಎದುರಾಗಿದೆ.
ರಸ್ತೆ ಅಗಲೀಕರಣ, ಅಲ್ಲಲ್ಲಿ ಬಾಯ್ ತೆರೆದಿರುವ ರಸ್ತೆ ಗುಂಡಿಗಳು, ವಿಪರೀತವಾದ ಜನಸಂದಣಿ, ವಾಹನಗಳ ದಟ್ಟನೆ ಇವುಗಳಿಂದ ಸಿಲುಕಿಂಕೊಂಡ ಸ್ಥಳೀಯರ ಬವಣೆ ಹೇಳತೀರದು. ಹೆಣ್ಣೂರು ಕ್ರಾಸ್ ನಿಂದ ಕೊತ್ತನೂರುವರೆಗೆ ಇದೇ ಗೋಳು. ರಸ್ತೆ ಅಗಲೀಕರಣದ ಹೆಸರಿನಲ್ಲಿ ವರ್ಷಾನುಗಟ್ಟಲೇ ನಡೆಯುತ್ತಿರುವ ನಿಧಾನಗತಿಯ ಕಾಮಗಾರಿಗಳಿಂದಲೇ ಇಂತಹ ರದ್ಧಾಂತ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ತಲುಪಬೇಕಾದ ಪ್ರಯಾಣಿಕರು ಪರದಾಡುತ್ತಿರುವುದು ಗಮನಾರ್ಹ.