ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
Rain Archives » Dynamic Leader
October 23, 2024
Home Posts tagged Rain
ಬೆಂಗಳೂರು

ವರದಿ ಮತ್ತು ಫೋಟೋ: ಪ್ರತಿಬನ್, ಕಮ್ಮನಹಳ್ಳಿ

ಬೆಂಗಳೂರು: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಕೊತ್ತನೂರು, ಕೆ.ನಾರಾಯಣಪುರ, ಬೈರತಿ ಹಾಗೂ ಗೆದ್ದಲಹಳ್ಳಿ ಸುತ್ತಮುತ್ತ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಸ್ತೆಗಳೆಲ್ಲವೂ ಜಲಾವೃತಗೊಂಡು ಜನ ಪರದಾಡುವಂತೆ ಆಗಿದೆ. ರಸ್ತೆಗಳೇ ಕಾಣುತ್ತಿಲ್ಲ. ಎಲ್ಲೆಡೆಯೂ ನೀರು ತುಂಬಿದ್ದು, ರಸ್ತೆ ಎಲ್ಲಿದೆ… ಗುಂಡಿಗಳು ಎಲ್ಲಿದೆ ಎಂದು ತಿಳಿಯಲೂ ಆಗುತ್ತಿಲ್ಲ. ಕತ್ತಲೆಯಲ್ಲಿ… ಗಾಬರಿಯಿಂದ… ರಸ್ತೆಯನ್ನು ಹಾದು ಹೋಗಬೇಕಾದ ಸನ್ನಿವೇಶ ಎದುರಾಗಿದೆ.

ರಸ್ತೆ ಅಗಲೀಕರಣ, ಅಲ್ಲಲ್ಲಿ ಬಾಯ್ ತೆರೆದಿರುವ ರಸ್ತೆ ಗುಂಡಿಗಳು, ವಿಪರೀತವಾದ ಜನಸಂದಣಿ, ವಾಹನಗಳ ದಟ್ಟನೆ ಇವುಗಳಿಂದ ಸಿಲುಕಿಂಕೊಂಡ ಸ್ಥಳೀಯರ ಬವಣೆ ಹೇಳತೀರದು. ಹೆಣ್ಣೂರು ಕ್ರಾಸ್ ನಿಂದ ಕೊತ್ತನೂರುವರೆಗೆ ಇದೇ ಗೋಳು. ರಸ್ತೆ ಅಗಲೀಕರಣದ ಹೆಸರಿನಲ್ಲಿ ವರ್ಷಾನುಗಟ್ಟಲೇ ನಡೆಯುತ್ತಿರುವ ನಿಧಾನಗತಿಯ ಕಾಮಗಾರಿಗಳಿಂದಲೇ ಇಂತಹ ರದ್ಧಾಂತ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ತಲುಪಬೇಕಾದ ಪ್ರಯಾಣಿಕರು ಪರದಾಡುತ್ತಿರುವುದು ಗಮನಾರ್ಹ.

ರಾಜಕೀಯ

ನವದೆಹಲಿ: ಕನ್ನಡ ನಾಡು, ನುಡಿ, ಜಲ, ಸಂಸ್ಕೃತಿ ಕಾಪಾಡುವ ವಿಚಾರದಲ್ಲಿ ಪಕ್ಷ ರಾಜಕಾರಣ ಪಕ್ಕಕ್ಕಿಟ್ಟು ನಾವೆಲ್ಲಾ ಒಂದು ಧ್ವನಿಯಾಗಿ ಗಟ್ಟಿ ನಿಲ್ಲಬೇಕು ಎಂದು ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ಸಂಬಂಧ ದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರ ಸಚಿವರು, ಸರ್ವ ಪಕ್ಷದ ಸಂಸತ್ ಸದಸ್ಯರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.  

“ಸಂಕಷ್ಟ ಸೂತ್ರ ಸಿದ್ಧವಾಗದೇ ಇರುವುದರಿಂದ ಕಾವೇರಿ ನೀರು ಹಂಚಿಕೆ ಎನ್ನುವುದು ನಮ್ಮ ರಾಜ್ಯಕ್ಕೆ ಕ್ಲಿಷ್ಟಕರವಾಗಿ ಪರಿಣಮಿಸಿದೆ. ನೀರು ಬಿಡಬಾರದು ಎನ್ನುವ ಪ್ರಶ್ನೆ ಅಲ್ಲ. ಬಿಡಲು ನಮ್ಮಲ್ಲಿ ನೀರೇ ಇಲ್ಲ. ಕುಡಿಯುವ ನೀರಿಗೆ 33 ಟಿಎಂಸಿ, ಬೆಳೆ ರಕ್ಷಣೆಗೆ 70 ಟಿಎಂಸಿ, ಕೈಗಾರಿಕೆಗಳಿಗೆ 3 ಟಿಎಂಸಿ ಸೇರಿ ಒಟ್ಟು 106 ಟಿಎಂಸಿ ನೀರು ನಮಗೆ ಅನಿವಾರ್ಯವಾಗಿ ಬೇಕಿದೆ. ಈಗ ನಮ್ಮ ಬಳಿ ಇರುವುದು 53 ಟಿಎಂಸಿ ನೀರು ಮಾತ್ರ. ಹೀಗಾಗಿ ತಮಿಳುನಾಡಿಗೆ ಬಿಡಲು ನೀರೇ ಇಲ್ಲ. ನಮಗೆ ಆಗಸ್ಟ್ ಬಳಿಕ ಮಳೆ ಬರಲ್ಲ. ತಮಿಳುನಾಡಿಗೆ ಆಗಸ್ಟ್ ಬಳಿಕ ಮಳೆ ಬರುತ್ತದೆ. ಅಲ್ಲಿ ಅಂತರ್ಜಲ ಕೂಡ ಹೆಚ್ಚಿದೆ. ಆದ್ದರಿಂದ ನಾವು ಹೆಚ್ಚು ಸಂಕಷ್ಟದಲ್ಲಿದ್ದೇವೆ.

ಇದನ್ನೂ ಓದಿ: ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳಯರಿಗೆ ಶೇ.33 ಮೀಸಲಾತಿ: 7 ವರ್ಷ ಕಾಯಬೇಕು?

ವಾಸ್ತವ ಪರಿಸ್ಥಿತಿಯನ್ನು ನಮ್ಮ ಕಾನೂನು ತಂಡ ಮತ್ತು ತಜ್ಞರು ಹಾಗೂ ಅಧಿಕಾರಿಗಳ ತಂಡ CWMC ಎದುರು ಸಮರ್ಥವಾಗಿ ವಾದ ಮಂಡಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ 108.4 ಟಿಎಂಸಿ ನೀರನ್ನು ನಾವು ಬಿಡಬೇಕಿತ್ತು. ಆದರೆ ನಾವು ಬಿಟ್ಟಿರುವುದು 39.8 ಟಿಎಂಸಿ ನೀರು ಮಾತ್ರ. ಇಂಥಾ ಪರಿಸ್ಥಿತಿ ಎದುರಾದಾಗ ಸಮರ್ಥವಾಗಿ ಜನರ ಹಿತ ಕಾಪಾಡಲು ಮೇಕೆದಾಟು ನಮಗೆ ಅನಿವಾರ್ಯ.

ಆದ್ದರಿಂದ ನಮ್ಮ ನೀರನ್ನು, ನಮ್ಮ ಜಾಗದಲ್ಲಿ ಬಳಸಿಕೊಳ್ಳಲು, ಸಂಗ್ರಹಿಸಿಕೊಳ್ಳಲು, ವಿದ್ಯುತ್ ಉತ್ಪಾದಿಸಿಕೊಳ್ಳಲು ಮೇಕೆದಾಟು ನಮಗೆ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಇಂಥಾ ಪರಿಸ್ಥಿತಿಗೆ ಮೇಕೆದಾಟು ಪರಿಹಾರ ಆಗುತ್ತದೆ. ಈಗಾಗಲೇ ನಾವು ಕೇಂದ್ರ ನೀರಾವರಿ ಸಚಿವರಿಗೆ ಎರಡು ಬಾರಿ ಪತ್ರ ಬರೆದು ಪರಿಸ್ಥಿತಿಯನ್ನು ಸಮಗ್ರವಾಗಿ ವಿವರಿಸಿದ್ದೇವೆ. ಸರ್ವಪಕ್ಷ ನಿಯೋಗದೊಂದಿಗೆ ಭೇಟಿ ಮಾಡಲು ಕೇಂದ್ರದ ಜಲ ಶಕ್ತಿ ಸಚಿವರು ಹಾಗೂ ಪ್ರಧಾನಿ ಅವರ ಸಮಯ ಕೇಳಿದ್ದೇವೆ. ಹೀಗಾಗಿ ಮುಂದೆ ನಾವು ಇಡಬೇಕಾದ ಹೆಜ್ಜೆಗಳ ಕುರಿತು ವೈಜ್ಞಾನಿಕ ಸಂಗತಿಗಳ ಆಧಾರದಲ್ಲಿ ಚರ್ಚಿಸಬೇಕು” ಎಂದು ಹೇಳಿದ್ದಾರೆ.  

ರಾಜಕೀಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವಿಡಿಯೋ ಸಂವಾದ ನಡೆಸಿ, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

ರಾಜ್ಯದ ಕೆಲವು ಭಾಗದಲ್ಲಿ ಮಳೆ, ಬಿತ್ತನೆ, ಜೂನ್‌ನಲ್ಲಿ ಮುಂಗಾರು ಪ್ರಾರಂಭವಾಗುತ್ತದೆ. ಏಪ್ರಿಲ್‌ ತಿಂಗಳಿನಲ್ಲಿಯೇ ಪ್ರಿ-ಮಾನ್ಸೂನ್‌ ಮಳೆ ಪ್ರಾರಂಭವಾಗಿದೆ. ಭಾರಿ ಮಳೆ, ಗಾಳಿಯಿಂದ ಮರಗಳು ಬಿದ್ದು ಹೋಗಿವೆ. ಸಿಡಿಲು, ಆಲಿಕಲ್ಲು ಮಳೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ, ಅನಾಹುತಗಳಾಗಿವೆ. ಇಂತಹ ಅನಾಹುತಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.

ನಿಮ್ಮ ಬಳಿ ಅನುದಾನ ಲಭ್ಯವಿದೆ. ಅಗತ್ಯವಿದ್ದರೆ ಕೇಳಬೇಕು. ಪರಿಹಾರ ಕ್ರಮ ಕೈಗೊಳ್ಳಲು ತೊಂದರೆ ಇಲ್ಲ. ಕೃಷಿ ಅಧಿಕಾರಿಗಳು ಬಿತ್ತನೆ ಚಟುವಟಿಕೆಗೆ ಅಗತ್ಯವಿರುವ ಬೀಜ, ಗೊಬ್ಬರ, ಕೀಟನಾಶಕಗಳನ್ನು ಒದಗಿಸಬೇಕು. ಹಾವೇರಿ ಗೋಲಿಬಾರಿನಂತಹ ಘಟನೆ ಮರುಕಳಿಸಬಾರದು.

ಮಳೆ ಬಂದು ಮರಗಳು ಬಿದ್ದುಹೋದರೆ ಕೂಡಲೇ ತೆರವುಗೊಳಿಸಬೇಕು. ವಿದ್ಯುಚ್ಚಕ್ತಿ ಕಂಬಗಳು ಬಿದ್ದು ಹೋದರೆ, ಟ್ರಾನ್‌ಫಾರ್ಮರ್‌ ಹಾಳಾಗಿದ್ದರೆ, ಸೇತುವೆಗಳು ಹಾಳಾಗಿದ್ದರೆ, ಶಾಲಾ ಕೊಠಡಿಗಳು ಶಿಥಿಲ ಆಗಿದ್ದರೆ ಈಗಲೇ ಅನಾಹುತ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮುನ್ನೆಚ್ಚರಿಕೆ ತೆಗೆದುಕೊಂಡರೆ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ.

ಕಚೇರಿಯಲ್ಲೇ ಕುಳಿತು ಕೆಲಸ ಮಾಡಿದರೆ ಆಗದು. ಫೀಲ್ಡ್‌ ಗೆ ಹೋಗಬೇಕು. ಕುಳಿತಲ್ಲೇ ಕುಳಿತು ಪರಿಣಾಮಕಾರಿಯಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದು. ಅದಕ್ಕೇ ಮುಂಚಿತವಾಗಿ ಸಭೆ ಕರೆಯಲಾಗಿದೆ. ಯಾವುದೇ ಕಾರಣಕ್ಕೂ ಕರ್ತವ್ಯಲೋಪ ಆಗಬಾರದು. ಬೇಜವಾಬ್ದಾರಿತನದಿಂದ ಅನಾಹುತಗಳಾದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇನೆ. ನೆಪ ಹೇಳಿಕೊಂಡು ಪರಿಹಾರ ಕ್ರಮ ವಿಳಂಬ ಮಾಡುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಲೋಪ ಆಗಬಾರದು.

ಜಿಲ್ಲಾಧಿಕಾರಿಗಳು, ಸಿಇಓಗಳದ್ದು ಜವಾಬ್ದಾರಿಯುತ ಸ್ಥಾನ. ಜೊತೆಗೆ ಪೊಲೀಸ್‌ ವರಿಷ್ಠಾಧಿಕಾರಿಗಳ ಹೊಣೆಯೂ ಪ್ರಮುಖವಾದದ್ದು. ಕರ್ನಾಟಕದ ಜನತೆ ಬದಲಾವಣೆ ಬಯಸಿದ್ದಾರೆ. ಆಲಸ್ಯ ಬಿಟ್ಟು ಕೆಲಸ ಮಾಡಬೇಕು. ಕಾರಣ, ಬಹಳ ಜನ ಜಿಲ್ಲಾಧಿಕಾರಿಗಳು ತಾಲ್ಲೂಕುಗಳಿಗೆ ಭೇಟಿ ನೀಡಿರುವುದಿಲ್ಲ. ಇನ್ನು ಮುಂದೆ ಇಂತಹುದಕ್ಕೆ ಅವಕಾಶವಿಲ್ಲ. ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಕ್ಷೇತ್ರ ಭೇಟಿ ಮಾಡಬೇಕು.

ಕಳೆದ ಕೆಲವು ವರ್ಷಗಳಿಂದ ಪ್ರವಾಹ ನೋಡುತ್ತಾ ಇದ್ದೀರಿ. ಹವಾಮಾನ ಇಲಾಖೆ ಸಂಪರ್ಕ-ಮುನ್ಸೂಚನೆ ಅರಿತು ಕೆಲಸ ಮಾಡಿ. ಪ್ರವಾಹ ನಿಯಂತ್ರಣಕ್ಕೆ ಅಗತ್ಯ ಸಲಕರಣೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ. ಪ್ರವಾಹ ಬರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಿ. ಬೆಳೆಹಾನಿ ಮಾಹಿತಿ ಇರಬೇಕು. ಅನುದಾನ ಅಗತ್ಯವಿದ್ದಲ್ಲಿ ಮನವಿ ಸಲ್ಲಿಸಿ ಬಿಡುಗಡೆ ಮಾಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು

ಬೆಂಗಳೂರು: ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಭೇಟಿನೀಡಿ ಬೆಂಗಳೂರಿನ ಕೆ.ಆರ್.ವೃತ್ತದ ಅಂಡರ್ ಪಾಸ್ ಬಳಿ ಮಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ 23 ವರ್ಷದ ಭಾನುರೇಖಾ ಅವರ ಕುಟುಂಬದವರನ್ನು ಭೇಟಿಮಾಡಿ ಸಾಂತ್ವನ ಹೇಳಿದರು. ಇದೇ ವೇಳೆ ದುರ್ಘಟನೆಯಲ್ಲಿ ಸಾವನ್ನಪ್ಪಿದ ಯುವತಿಯ ಕುಟುಂಬಕ್ಕೆ ರೂ. 5 ಲಕ್ಷ ಪರಿಹಾರ ಹಾಗೂ ಅಸ್ವಸ್ಥಗೊಂಡಿರುವ ಎಲ್ಲರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದರು.

ಅಂಡರ್ ಪಾಸ್ ಗಳಿಂದ ನೀರು ಹೊರಹೋಗುವ ಚರಂಡಿಗಳು ಹೂಳು ತುಂಬಿರುವುದರಿಂದ ಏಕಾಏಕಿ ಮಳೆ ಸುರಿದಾಗ ನೀರು ಸಂಗ್ರಹಗೊಂಡು ಇಂಥ ಅವಘಡಕ್ಕೆ ಕಾರಣವಾಗುತ್ತಿದೆ. ನಗರದಲ್ಲಿ ಮಳೆ ನೀರು ಸಂಗ್ರಹಗೊಳ್ಳುವ ಎಲ್ಲಾ ಅಂಡರ್ ಪಾಸ್ ಗಳನ್ನು ಗುರುತಿಸಿ ಸರಿಪಡಿಸಲಾಗುವುದು ಹಾಗೂ ಕಾಲುವೆ ಒತ್ತುವರಿಯನ್ನು ತೆರವು ಮಾಡಿ ನೀರಿನ ಸರಾಗ ಹರಿವಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಮಳೆನೀರಿಗೆ ಸಿಲುಕಿ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ ಸಾವು: ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೋಂಡ ಹೆಚ್.ಡಿ.ಕುಮಾರಸ್ವಾಮಿ.

https://twitter.com/CMofKarnataka/status/1660266705476784128?s=20

ಬೆಂಗಳೂರು

ಬೆಂಗಳೂರು: “ಬೆಂಗಳೂರು ನಗರದಲ್ಲಿ ಇಂದು ಸುರಿದ ಭಾರೀ ಮಳೆಯಿಂದ ಕೆ.ಆರ್.ವೃತ್ತದ ಅಂಡರ್ ಪಾಸ್ ನಲ್ಲಿ ಮಳೆನೀರಿಗೆ ಸಿಲುಕಿ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ ಎಂಬ ಯುವತಿ ಸಾವನ್ನಪ್ಪಿರುವ ಸುದ್ದಿ ತಿಳಿದು ತೀವ್ರ ಆಘಾತವಾಯಿತು. ರಭಸ ಮಳೆಯ ಮುನ್ನೆಚ್ಚರಿಕೆ ಇದ್ದರೂ ಬಿಬಿಎಂಪಿ ಆಡಳಿತ ಎಚ್ಚೆತ್ತುಕೊಳ್ಳದೇ ಇರುವುದು ನಿರ್ಲಕ್ಷ್ಯದ ಪರಮಾವಧಿ” ಎಂದು ಹೆಚ್.ಡಿ.ಕುಮಾರಸ್ವಾಮಿ ಬಿಬಿಎಂಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

“ಅಂಡರ್ ಪಾಸ್ ಗಳಲ್ಲಿ ಕಸಕಡ್ಡಿ ತೆಗೆದು ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಬೇಕಾಗಿದ್ದ ಪಾಲಿಕೆ, ಮೈಮರೆತು ಕರ್ತವ್ಯಲೋಪ ಎಸಗಿದೆ. ಪ್ರತೀಸಲವೂ ಮಳೆ ಬಂದಾಗ ಅವಾಂತರ, ಪ್ರಾಣಹಾನಿ ಸಂಭವಿಸಿದ ಮೇಲೆ ಪಾಲಿಕೆ ಎಚ್ಚೆತ್ತುಕೊಳ್ಳುತ್ತದೆ, ಯಾಕೆ? ಮಳೆ ಬಂದರೆ ಜನರು ಸಾಯಲೇಬೇಕೆ?

ಭಾರೀ ಮಳೆ ಸುರಿಯುತ್ತಿದ್ದ ಅಪಾಯದ ಸಮಯದಲ್ಲಿ ವಾಹನ ಚಾಲಕರು ಅತ್ಯಂತ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು. ಅಂಡರ್ ಪಾಸ್ ನಲ್ಲಿ ನೀರು ತುಂಬಿಕೊಂಡಿದ್ದನ್ನು ಕಂಡ ಮೇಲೂ ಚಾಲಕ ಕಾರನ್ನು ಅಂಡರ್ ಪಾಸ್ ಮೂಲಕ ಚಾಲನೆ ಮಾಡಬಾರದಿತ್ತು. ಸಂಚಾರಿ ಪೊಲೀಸರು ಮೊದಲೇ ಮುನ್ನೆಚ್ಚರಿಕೆ ನೀಡಬೇಕಿತ್ತು.

 

ಬಿಬಿಎಂಪಿ ಅಧಿಕಾರಿಗಳು ಕೂಡಲೇ ನಗರದ ಉದ್ದಗಲಕ್ಕೂ ಎಲ್ಲಾ ಅಂಡರ್ ಪಾಸ್ ಗಳನ್ನು ವಿಸ್ತೃತವಾಗಿ ಪರಿಶೀಲಿಸಿ, ಕಸಕಡ್ಡಿ ವಿಲೇವಾರಿ ಮಾಡಿಸಿ ಮಳೆನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು. ಇನ್ನೊಂದು ಪ್ರಾಣನಷ್ಟವೂ ಆಗುವುದಕ್ಕೆ ಅವಕಾಶ ನೀಡಬಾರದು.

ಮೃತ ನತದೃಷ್ಟ ಯುವತಿ ಕುಟುಂಬಕ್ಕೆ ಪರಿಹಾರ ನೀಡಿರುವುದು ಸ್ವಾಗತಾರ್ಹ. ಆದರೆ, ಇಂತಹ ದುರಂತಗಳು ಮರುಕಳಿಸದಂತೆ ರಾಜ್ಯ ಕಾಂಗ್ರೆಸ್ ಸರಕಾರ ಶಾಶ್ವತ ಪರಿಹಾರ ರೂಪಿಸಬೇಕು. ಅಂಡರ್ ಪಾಸ್, ರಸ್ತೆ, ಚರಂಡಿ, ಒಳಚರಂಡಿಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು ಎನ್ನುವುದು ನನ್ನ ಆಗ್ರಹ” ಎಂದು ಹೇಳಿದ್ದಾರೆ.