ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ: ನಿತೀಶ್ ಕುಮಾರ್ ನೇತೃತ್ವದ ಜೆಡಿಯು ನಿರ್ಣಯ!
ಪಾಟ್ನಾ: ಕೇಂದ್ರ ಸರ್ಕಾರ ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಅಥವಾ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂದು ಸಂಯುಕ್ತ ಜನತಾ ದಳ (ಜೆಡಿಯು) ನಿರ್ಣಯ ಅಂಗೀಕರಿಸಿದೆ.
ಹೊಸದಾಗಿ ಆಯ್ಕೆಯಾದ ಲೋಕಸಭೆಯಲ್ಲಿ ಸಂಯುಕ್ತ ಜನತಾದಳದಿಂದ 12 ಸಂಸದರಿದ್ದಾರೆ. ಅವರು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಭಾಗವಾಗಿದ್ದಾರೆ. ಇಂದು (ಜೂನ್ 29) ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಂಯುಕ್ತ ಜನತಾದಳದ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಕೇಂದ್ರ ಸಚಿವರು, ಸಂಯುಕ್ತ ಜನತಾದಳ ಮುಖಂಡರು ಸೇರಿದಂತೆ ಪಕ್ಷದ ಎಲ್ಲ ಸಂಸದರು ಉಪಸ್ಥಿತರಿದ್ದರು. ಸಭೆಯಲ್ಲಿ ಕೇಂದ್ರ ಸರ್ಕಾರ ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಅಥವಾ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು. ಆಡಳಿತಾರೂಢ ಎನ್ ಡಿಎ ಸರ್ಕಾರಕ್ಕೆ ಸಂಯುಕ್ತ ಜನತಾದಳ ಬೆಂಬಲ ನೀಡುತ್ತಿರುವುದರಿಂದ ಕೇಂದ್ರ ಸರ್ಕಾರ ಬೇಡಿಕೆ ಈಡೇರಿಸುವುದೇ? ಎಂಬುದನ್ನು ಕಾದುನೋಡಬೇಕಾಗಿದೆ.