Part-2: ಕರ್ನಾಟಕದ ಮದರಸಗಳಲ್ಲಿ ಕನ್ನಡ ಕಲಿಕೆಯ ದಾಳಿ: ನವೀನ್ ಸೂರಿಂಜೆಯವರ ಎರಡನೇಯ ಲೇಖನಕ್ಕೆ ಪ್ರತಿಕ್ರಿಯೆ! » Dynamic Leader
January 15, 2025
ರಾಜ್ಯ ಶಿಕ್ಷಣ

Part-2: ಕರ್ನಾಟಕದ ಮದರಸಗಳಲ್ಲಿ ಕನ್ನಡ ಕಲಿಕೆಯ ದಾಳಿ: ನವೀನ್ ಸೂರಿಂಜೆಯವರ ಎರಡನೇಯ ಲೇಖನಕ್ಕೆ ಪ್ರತಿಕ್ರಿಯೆ!

ಭಾಗ:2

ಕಾಂ.ನವೀನ್ ಸೂರಿಂಜೆ ಅವರೇ, ನೀವು ಅಥವಾ ಈಗಿನ ‘ಕನ್ನಡ ಅಭಿವೃದ್ಧಿ ಪ್ರಾಧಿಕಾರದ – ಮದರಸಗಳಲ್ಲಿ ಕನ್ನಡಕಲಿಕೆ’  ನಿಲುವನ್ನು ಒಪ್ಪದಿರುವ ಎಡಪಂತಿಯ ಅಥವಾ ಜಾತ್ಯತೀತ ಕಾಂಗ್ರೆಸ್ಸಿಗರ ಗಮನಕ್ಕೆ ಈ ಒಂದು ಪ್ರತಿಕ್ರಿಯೆ!

ನವೀನ್ ಸೂರಿಂಜೆಯ ಅಭಿಪ್ರಾಯ: ಮದರಸಾದಲ್ಲಿ ‘ಕನ್ನಡ ಕಲಿಕೆ’ ಎಂಬ ಸರ್ಕಾರಿ ಕಾರ್ಯಕ್ರಮ ಯೋಜನೆಯನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರ ಏಕೆ ಕೈಬಿಟ್ಟಿತ್ತು ಎಂಬುದನ್ನು ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆಯವರು ಸ್ಪಷ್ಟವಾಗಿ ಹೇಳಬೇಕಿತ್ತು.

ಖಾಸಿಂ ಸಾಬ್ ಅವರ ಪ್ರತಿಕ್ರಿಯೆ: ಕೈ ಬಿಟ್ಟಿದ್ದಕ್ಕೆ ಕಾರಣ ಹಾಳಾಗಿ ಹೋಗಲಿ. ಮದರಸಾದಲ್ಲಿ ‘ಕನ್ನಡ ಕಲಿಕೆ’ ಎಂಬ ಸರ್ಕಾರಿ ಕಾರ್ಯಕ್ರಮ ಯೋಜನೆಯನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರ ಯಾಕೆ ಕೈಗೆತ್ತಿಕೊಂಡಿತು. ಈ ಕಾನ್ಸೆಪ್ಟ್, ಪ್ಲಾನ್ ಯೋಜನೆ ಪ್ರಾಧಿಕಾರಕ್ಕೆ ಬಂದಿದ್ದಾದರು ಯಾವಾಗ? ಹೇಗೆ? ಯಾರು ಈ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು. ಅಲ್ಲದೆ, ಈ ಯೋಜನೆಯನ್ನು ಕೈಬಿಡುವ ಮೊದಲು ಇದರ ಕುರಿತು ಸೌಜನ್ಯಕ್ಕಾದರೂ ಒಂದಷ್ಟು ಮುಸ್ಲಿಂ ಸಮುದಾಯದ ಪ್ರತಿನಿದಿಗಳ ಜೊತೆ ಚರ್ಚೆ, ಸಂವಾದ ನಡೆಸಬಹುಗಾಗಿತ್ತು. ಇದನ್ನು ಪ್ರಾಧಿಕಾರ ಮಾಡಲಿಲ್ಲ. ಇದು ತಪ್ಪಲ್ಲವೇ?

ನಿಮ್ಮ ಅಭಿಪ್ರಾಯ: “ವಿರೋಧ ಪ್ರಕಟವಾದ್ದರಿಂದ ಆ ವಿಷಯವನ್ನು ಕೈ ಬಿಡಲಾಗಿದೆ.”

ನಮ್ಮ ಪ್ರತಿಕ್ರಿಯೆ: ಇಂತಹ ಆರ್ಥ ಪೂರ್ಣ, ಮುಸ್ಲಿಂ ಸಮುದಾಯಕ್ಕೆ ಕನಿಷ್ಠ ಈ ಒಂದು ಕ್ಷೇತ್ರದಲ್ಲಾದರೂ ನ್ಯಾಯ, ಅವಕಾಶ ಸಿಗಬಹುದಾದ ಈ  ಯೋಜನೆಯನ್ನು ಖಂಡಿತವಾಗಿಯೂ ‘ಸಾಮಾಜಿಕ ನ್ಯಾಯ’ ಬಯಸುವ ಮುಸ್ಲಿಮರು ವಿರೋಧಿಸುತ್ತಿರಲಿಲ್ಲ. ಅಂದಹಾಗೆ ನಿಜವಾಗಿಯೂ ಇದಕ್ಕೆ ವಿರೋಧ ಪ್ರಕಟವಾಯಿತ? ಇದನ್ನು ವಿರೋಧಿಸಿದ ಒಂದಷ್ಟು ಮುಸ್ಲಿಂ ಸಂಘ / ಸಂಸ್ಥೆ / ಜಮಾಮ್ / ಗುಂಪು/ ಬರಹಗಾರರ / ಬುದ್ಧಿಜೀವಿಗಳ ಹೆಸರುಗಳನ್ನು ಹೇಳಿ? ಏಕೆಂದರೆ, ನಾನು ಸಹ ಒಬ್ಬ ಕರ್ನಾಟಕದ ಮುಸ್ಲಿಂ ಸೋಶಿಯಲ್ ಆಕ್ಟಿವಿಸ್ಟ್, ನಾನು ವಿರೋಧ ಮಾಡಲಿಲ್ಲ. ನನ್ನಂತಹ ನೂರಾರು ಕನ್ನಡಿಗ ಮುಸ್ಲಿಂ ಸುಮುದಾಯ ಪ್ರತಿನಿಧಿಗಳು ಈ ಪ್ರಾಧಿಕಾರದ ನಿಲುವಿನ ಪರವಾಗಿದ್ದೆವು. ಕೊನೆಗೂ ಇಂತಹ ಒಂದು ಮುಸ್ಲಿಮರ ಸಾಮಾಜಿಕ ನ್ಯಾಯದ ಸಣ್ಣ ಮಟ್ಟದ ಆಪರ್ಚೂನಿಟಿಯನ್ನು ಪ್ರಾಧಿಕಾರ ಮಿಸ್ ಮಾಡಿದೆ.

ನಿಮ್ಮ ಅಭಿಪ್ರಾಯ: “ಇದು ಅತಿಯಾಯ್ತು. ಕನ್ನಡ ಕಲಿಯುವುದಕ್ಕೂ ಮುಸ್ಲೀಮರ ವಿರೋಧವೇ?” ಎಂಬ ಪ್ರಶ್ನೆ / ಹೊಸ ಆರೋಪವನ್ನು ಮುಸ್ಲಿಮರು ಎದುರಿಸಬೇಕಾಗುತ್ತದೆ.

ನಮ್ಮ ಪ್ರತಿಕ್ರಿಯೆ: ಇದು ಒಂದು ಭೂತ. ಇಂತಹ ನೂರಾರು ಭೂತ, ಬೊಂಬೆಗಳನ್ನು ಕರ್ನಾಟಕದ ಜಾತ್ಯತೀತ / ಜನಪರ / ಪ್ರಗತಿಪರ / ಕ್ರಾಂತಿಕಾರಿ ಸಂಘಟನೆಗಳು ಮುಸ್ಲಿಮರಿಗೆ ನೀಡಿವೆ. ಇಲ್ಲೂ ಕೂಡು ಅದೇ ಮತ್ತೆ ಪರಿವರ್ತನೆಯಾಗಿದೆ. ಇಂತಹವುಗಳು ಬೇಡ. ಇಂತಹ ನಾಡಪರ ಯೋಜನೆಗಳಿಗೂ “ಮುಸ್ಲಿಮರ ವಿರೋಧವೇ?” ಅನ್ನುವ ಕೋಮುವಾದಿಗಳ ಪ್ರಶ್ನೆಗೆ ನಿಮ್ಮ ಈ ಗುಮಾನಿ ಸರಿಯಾಗಿದೆ. ಇದರ ನಡುವೆ ಒಂದಷ್ಟು ತಾಳ್ಮೆಯಿಂದ ಜಾತ್ಯತೀತ ಮನಸ್ಥರು ಒಂದನ್ನು ಯೋಚಿಸಬೇಕಿತ್ತು. ಮುಸ್ಲಿಮರ ಸ್ವಂತ ಅಭಿಪ್ರಾಯಗಳನ್ನು ಪಡೆಯದೆ ಇದರ ಸಾದಕ – ಬಾದಕಗಳ ನಿರ್ಣಯ, ಅಂಗಿಕಾರ, ತಿರಸ್ಕಾರಗಳನ್ನು ಮಾಡುವುದು ‘ಆರೋಗ್ಯಕರ ಸಮಾಜದ ಬುದ್ದಿಜೀವಿ’ಗಳ ಲಕ್ಷಣವಲ್ಲ. ಜೊತೆಗೆ, ಇಂತಹ ‘ಹೊಸ ಆರೋಪ’ಗಳು ಅಥವಾ ‘ಹಳೆಯ ಆರೋಪ’ಗಳು ಕರ್ನಾಟಕದ ಮುಸ್ಲಿಮರಿಗೆ ಹೊಸದಲ್ಲ. ಇಂತಹ ಕಲ್ಪಿತ ವಿರೋಧಿ – ಶತೃತ್ವಗಳು ಹೊರತಾಗಿಯೂ ನಾಡಿನ ಮುಸ್ಲಿಮರು ಅಭಿವೃದ್ಧಿ, ಸಮಾನ ಪಾಲು, ಸಮಾನ ಭಾಗವಹಿಸುವಿಕೆಗಳ ಕುರಿತು ಹೆಚ್ಚು ಚಿಂತಿತರಾಗಿದ್ದಾರೆ.

ನಿಮ್ಮ ಅಭಿಪ್ರಾಯ: ಮದರಸದಲ್ಲಿ ಸರ್ಕಾರಿ ಪ್ರಾಯೋಜಿತ ಕನ್ನಡ ಕಲಿಕಾ ಕಾರ್ಯಕ್ರಮವು ಈ ಕೆಳಕಂಡ ಅಪಾಯ / ಅಪ್ರಸ್ತುತೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಪ್ರಾಧಿಕಾರವು ಕಾರ್ಯಕ್ರಮವನ್ನು ರದ್ದುಗೊಳಿಸಿದೆ ಎಂದು ನಾವು ಭಾವಿಸುತ್ತೇವೆ.

ನಮ್ಮ ಪ್ರತಿಕ್ರಿಯೆ: ಅಪಾಯ / ಅಪ್ರಸ್ತುತೆಗಳನ್ನು ಎದುರಿಸಬೇಕಾಗುತ್ತದೆ ಅಂತ ಹೇಳಿದ್ದೀರಿ. ಯಾರಿಗೆ ಆಪಾಯ? ಹೇಗೆ?  ಮದರಸಗಳಲ್ಲಿ ಕನ್ನಡಕಲಿಕೆಯಿಂದ ಮುಸ್ಲಿಂ ಸಮುದಾಯಕ್ಕೆ, ಈ ಮಕ್ಕಳ ಭವಿಷ್ಯದಲ್ಲಿ ಆಗಬಹುದಾದ ಬದಲಾವಣೆ, ಸಿಗಬಹುದಾದ ಅವಕಾಶಗಳ ಕುರಿತು ನಿಮಗೂ ಜೊತೆಗೆ ಪ್ರಾಧಿಕಾರದ ಅಧ್ಯಕ್ಷರ ಗಮನಕ್ಕೂ ಇಲ್ಲ ಅಂತ ಕಾಣುತ್ತೆ. ಕರ್ನಾಟಕದ ಮದರಸಗಳಲ್ಲಿ ಕನ್ನಡ ಕಲಿಸಬಾರದೆ…!? ಇದು ಸಹ ಒಂದು ರೀತಿಯ ಸರ್ಕಾರದ ಪಾಲಿದಾರಿಕೆಯಲ್ಲಿನ ವಂಚನೆಯಲ್ಲವೇ?

ಇದನ್ನೂ ಓದಿ: Part-1: ಕರ್ನಾಟಕದ ಮದರಸಗಳಲ್ಲಿ ಕನ್ನಡ ಕಲಿಸಬಾರದೆ..!? – ಖಾಸಿಂ ಸಾಬ್ ಎ.

ನವೀನ್ ಸೂರಿಂಜೆ.., ನಾನು ಇಷ್ಟು ಹೇಳಿದ ನಂತರ ನೀವು ನೀಡಿದ ಎಂಟು ಕಾರಣ – ಸಮರ್ಥನೆಗಳಿಗೆ ನಾನು ಉತ್ತರಿಸುವುದು ಅಪ್ರಸ್ತುತ ಎಂಬುದು ನನ್ನ ಭಾವನೆ. ಅಲ್ಲದೆ, ಕರ್ನಾಟಕದ ಮದರಸಗಳು ಮೊದಲು ಅಧಿಕೃತವಾಗಿ ದಾಖಲಾಗಬೇಕು(ನೋಂದಣಿ ). ಅಲ್ಲಿ ಓದಿದ ವಿದ್ಯಾರ್ಥಿಗಳ ಅಂಕ ಪಟ್ಟಿ (Marks Card) ಎಲ್ಲಾ ಸರ್ಕಾರಿ ಉದ್ಯೋಗಗಳಿಗೆ ಅನ್ವಯವಾಗಬೇಕು. ಕರ್ನಾಟಕ ಮದರಸಗಳ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಬೇಕು. ಮದರಸಗಳ ಆಧುನೀಕರಣದ ಜೊತೆಗೆ ಪಠ್ಯ ಪುಸ್ತಕಗಳನ್ನು ಸರ್ಕಾರವೇ ನಿರ್ಧರಿಸಬೇಕು ಎಂಬುದು ನನ್ನ ಅಭಿಪ್ರಾಯ.

ಮುಸ್ಲಿಂ ವಿರೋಧಿ ಕೋಮುಶಕ್ತಿಗಳು ಮದರಸ ಮೇಲೆ ಸವಾರಿ ಮಾಡುವುದು ಇದು ಮೊದಲಲ್ಲ; ಕೊನೆಯೂ ಅಲ್ಲ. ಕೋಮುವಾದಿ ಬುದ್ದಿಗೆ ತನ್ನ ಅಜೆಂಡ ಜಾರಿಗೊಳಿಸಲು ನೆಪಗಳೇ ಬೇಕಾಗಿಲ್ಲ. 2b ಮುಸ್ಲಿಂ ಒಬಿಸಿ ಮೀಸಲಾತಿಯನ್ನು ಯಾವುದೆ ಪೂರ್ವ ಯೋಜನೆ ಇಲ್ಲದೆಯೆ ಒಂದೇ ದಿನದಲ್ಲಿ ಕಿತ್ತುಕೊಂಡವರಿಗೆ ಮದರಸ ಒಂದು ಲೆಕ್ಕವಲ್ಲ. ಕೋಮುವಾದಿಗಳು ಮುಂದೊಂದುದಿನ ಇದನ್ನು ದುರ್ಬಳಕೆಮಾಡಿ ಕೊಂಡಿಯಾರು ಎಂಬ ಗುಮಾನಿಗಳಿಗೆ ಯಡೆಮಾಡಿಕೊಟ್ಟರೆ ಬಹುಶಃ ಮುಸ್ಲಿಂ ಸಮುದಾಯ ನಾಡಿನಲ್ಲಿ ಸಾಮಾಜಿಕ ನ್ಯಾಯ – ಸಮಪಾಲು ವಡೆಯುವುದು ಅಸಾಧ್ಯ. ಕೋಮುವಾದಿಗಳು ಸಹ ಇದನ್ನೇ ಬಯಸುತ್ತಿದ್ದಾರೆ, ಸರ್ಕಾರದ ನಿಗಮ / ಮಂಡಳಿ / ಪ್ರಾಧಿಕಾರಗಳು ಸಹ ಪರೋಕ್ಷವಾಗಿ ಈ ನೀತಿಗಳ ಜಾರಿಯಲ್ಲಿಯೇ ಇವೆ.

ಸಾಧ್ಯವಾದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ತಂಡವು ಕರ್ನಾಟಕದ ಮದರಸಗಳ ಕುರಿತು ಸಮೀಕ್ಷೆ ನಡೆಸಿ ಕನ್ನಡ ಕಲಿಕೆಯ ಅಗತ್ಯ, ಭವಿಷ್ಯದ ಉದ್ಯೋಗಗಳ ಆದ್ಯತೆ, ಸಾಧ್ಯತೆ, ಈ ಮೂಲಕ ಅವಕಾಶಗಳ ಕುರಿತು ಒಂದು ಸಮಗ್ರ ಅಧ್ಯಯನ ನಡೆಸಲಿ. ಆ ಬಳಿಕ ನಿರ್ಧಾರ ಕೈಗೊಳ್ಳಲಿ. ಅದು ಬಿಟ್ಟು ಏಕಾ-ಏಕಿ ಮದರಸಗಳಲ್ಲಿ ಕಡ್ಡಾಯ ಕನ್ನಡ ಕಲಿಕೆ ಆದೇಶ ಜಾರಿ, ಇದರ ಬೆನ್ನಲ್ಲೆ ಈ ಆದೇಶವನ್ನು ಹಿಂಪಡೆದದ್ದು, ಇಂತಹ ಊಹಾ-ಪೋಹ ಚಲ್ಲಾಟಗಳು, ಕಲ್ಪಿತ ಸತ್ಯ-ಸುಳ್ಳುಗಳ ಆಧಾರದ ಯೋಜನೆಗಳನ್ನು ಹಮ್ಮಿಕೊಳ್ಳುವುದು ಬೇಡ.

ಮೊದಲು ಸಮೀಕ್ಷೆ ನಡೆಸಿ ಅದರ ಆಧಾರದ ಮೇಲೆ ಮದರಸಗಳಲ್ಲಿ ಕನ್ನಡ ಕಲಿಕೆಯ ಅಗತ್ಯವೋ, ಬೇಡವೋ ಎಂಬುದನ್ನು ನಿರ್ಧರಿಸಬೇಕು. ಸಂಸ್ಕೃತ, ಕ್ರಿಶ್ಚಿಯನ್, ಬುದ್ಧಿಸ್ಟ್ ಇತರೆ ಧಾರ್ಮಿಕ ಶಾಲೆಗಳಲ್ಲಿ  ಕನ್ನಡವನ್ನು ಕಲಿಸಲಾಗುತ್ತಿದೆಯೇ? ಇಂಗ್ಲಿಷ್ ಮೀಡಿಯಂ ಶಾಲೆಗಳಲ್ಲಿ ಕನ್ನಡ ಕಲಿಸ್ತಾರಾ? ಎಂಬ ವಿಷಯಗಳು, ಮದರಸದಲ್ಲಿ ಕನ್ನಡ ಕಲಿಸಬಾರದು ಎಂಬುದಕ್ಕೆ ಆಧಾರವಾಗಬಾರದು. ಇಲ್ಲೆಲ್ಲಾ ಕನ್ನಡ ಕಲಿಸಲಾಗುತ್ತೋ ಇಲ್ಲವೋ ಎಂಬುದನ್ನು ನೋಡಿಕೊಂಡು ಮದರಸದಲ್ಲಿ ಕಲಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸುವುದು ಸರಿಯಲ್ಲ.

ಇಂಗ್ಲಿಷ್ ಮಾಧ್ಯಮಗಳ ಹಾವಳಿಯಿಂದ ಕನ್ನಡ ಕಲಿಕೆ ದುಸ್ತರವಾಗಿರುವ ಈ ಕಾಲಘಟ್ಟದಲ್ಲಿ, ಮುಸ್ಲಿಂ ಸಮುದಾಯದ ಮಕ್ಕಳಿಗೆ ಕನ್ನಡ ದಕ್ಕುವುದರಿಂದ ಲಾಭ ಹೆಚ್ಚು. ಈ ಮಕ್ಕಳು ಇಂಗ್ಲಿಷ್ ಅಥವಾ ಉರ್ದು ಮೀಡಿಯಂ ಶಾಲೆಗೆ ಹೋದರೂ ಕನ್ನಡ ಪ್ಲಸ್ ಆಗಿ ಅವರಿಗೆ ದಕ್ಕುತ್ತದೆ. ಮದರಸದಲ್ಲಿ ಕನ್ನಡ ಕಲಿಸಬೇಡಿ ಎನ್ನುವುದಕ್ಕಿಂತ ಕನ್ನಡ ಮೀಡಿಯಂನಲ್ಲಿ ಕಲಿತವರಿಗೆ ಉದ್ಯೋಗದಲ್ಲಿ ಆದ್ಯತೆ ಸಿಗುವಂತೆ, ಮದರಸದಲ್ಲಿ ಕನ್ನಡ ಕಲಿತ ಮಕ್ಕಳಿಗೆ ಉದ್ಯೋಗಗಳಲ್ಲಿ ಆದ್ಯತೆಗಳನ್ನು ಕಲ್ಪಿಸಲು ಸಾಧ್ಯವೆ ಎಂಬ ನಿಟ್ಟಿನ ಆರೋಗ್ಯಕರ ಚಿಂತನೆ ಹೆಚ್ಚು ಉತ್ತಮ ವಾಗಬಹುದು.

ಮದರಸದಲ್ಲಿ ಕನ್ನಡ ಕಲಿಯುವುದರಿಂದ ಮುಸ್ಲಿಮರಿಗೆ ಕನ್ನಡ ಬರುವುದಿಲ್ಲ ಎಂಬ ಸಂದೇಹ ಹೋಗುತ್ತದೆ ಅಂತಲೋ ಅಥವಾ ಮುಂದೆ ಕೋಮುವಾದಿ ಪಕ್ಷಗಳು ಅಧಿಕಾರಕ್ಕೆ ಬಂದರೆ ಮದರಸಗಳ ಮೇಲೆ ಸವಾರಿ ಮಾಡಲು ಅವಕಾಶ ನೀಡಿದಂತ್ತಾಗುತ್ತದೆ ಎಂದು ಊಹಿಸಿಕೊಂಡು ಕರ್ನಾಟಕದ ಮದರಸಗಳಲ್ಲಿ ಕನ್ನಡ ಕಲಿಕೆ ವಿರೋಧಿಸುವುದು ಸೂಕ್ತವಲ್ಲ. ಅಲ್ಲದೆ ಇಂತಹ ಭಯದ ಗುಮಾನಿಗಳಿಂದ ಮುಸ್ಲಿಮರಿಗೆ ಸಿಗಬಹುದಾದ ಇಂತಹ ಕಿಂಚಿತ್ತು ಅವಕಾಶಗಳನ್ನು ಸಹ ಕಸಿದು ಕೊಳ್ಳುವುದು ಬೇಡ.

• ಖಾಸಿಂ ಸಾಬ್, ಬೆಂಗಳೂರು.

Related Posts