ಇಸ್ಮಾಯಿಲ್ ತಮಟಗಾರರ ಮನೆಯ ಮೇಲಿನ ದಾಳಿಗೆ ಕರ್ನಾಟಕ ಮುಸ್ಲಿಂ ಯುನಿಟಿ ತೀವ್ರ ಖಂಡನೆ!
“ಇಸ್ಮಾಯಿಲ್ ತಮಟಗಾರ ಮೇಲೆ ಈ ಹಿಂದೆಯೂ ಸಹ ಹತ್ಯೆಗೆ ಯತ್ನ ನಡೆದಿದ್ದು, ಇವರ ಹಾಗೂ ಇವರ ಕುಟುಂಬಕ್ಕೆ ಜೀವ ಭಯ ಇರುವುದರಿಂದ ಸೂಕ್ತ ರಕ್ಷಣೆ ಒದಗಿಸಬೇಕು” – ಕರ್ನಾಟಕ ಮುಸ್ಲಿಂ ಯುನಿಟಿ
ಜಾತ್ಯತೀತ ಮುಖಂಡರು, ಹಿರಿಯ ಸಮಾಜ ಸೇವಕರು, ಮುಸ್ಲಿಂ ರಾಜಕೀಯ ನಾಯಕರು ಹಾಗೂ ಧಾರವಾಡದ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷರಾಗಿರುವ ಇಸ್ಮಾಯಿಲ್ ತಮಟಗಾರ ರವರ ಮನೆ ಹಾಗೂ ಕುಟುಂಬಸ್ಥರ ಮೇಲೆ ನಡೆದ ದಾಳಿಯನ್ನು ಕರ್ನಾಟಕ ಮುಸ್ಲಿಂ ಯುನಿಟಿ ತೀವ್ರವಾಗಿ ಖಂಡಿಸಿದೆ.
ಇಂತಹ ಸಮಾಜ ವಿರೋಧಿ ಕೃತ್ಯಗಳನ್ನು ತಡೆಯಲು ಅವಳಿ ನಗರದ ಪೊಲೀಸರು ಮುಂದಾಗಬೇಕು ಎಂದು ಹೇಳಿರುವ ಕರ್ನಾಟಕ ಮುಸ್ಲಿಂ ಯುನಿಟಿ (KMU)ಯ ರಾಜ್ಯಾಧ್ಯಕ್ಷ ಜಬ್ಬಾರ್ ಕಲ್ಬುರ್ಗಿ ಅವರು, “ಇಸ್ಮಾಯಿಲ್ ತಮಟಗಾರರ ಮನೆ ಹಾಗೂ ಕುಟುಂಬಸ್ಥರ ಮೇಲೆ ನಡೆದ ದಾಳಿಯ ಕುರಿತು ಸೂಕ್ತ ಹಾಗೂ ಶೀಘ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಅವಳಿ ನಗರದ ಪೊಲೀಸ್ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
“ಈ ಹಿಂದೆಯೂ ಸಹ ಇವರ ಮೇಲೆ ಹತ್ಯೆಗೆ ಯತ್ನ ನಡೆದಿದ್ದು, ಇವರ ಹಾಗೂ ಇವರ ಕುಟುಂಬಕ್ಕೆ ಜೀವ ಭಯ ಇರುವುದರಿಂದ ಸೂಕ್ತ ರಕ್ಷಣೆ ಒದಗಿಸಬೇಕು” ಎಂದೂ ಹೇಳಿದ್ದಾರೆ.
“ಈ ಕೃತ್ಯ ಮಾಡಿರುವ ಹಾಗೂ ಈ ಕುತಂತ್ರದ ಹಿಂದೆ ಯಾರು ಇದ್ದಾರೆಂಬುದನ್ನು ಪೋಲೀಸರು ತನಿಖೆ ನಡೆಸಿ, ಪತ್ತೆ ಹಚ್ಚಿ, ಸೂಕ್ತ ಕಾನೂನು ಕ್ರಮವನ್ನು ಅತಿ ಶೀಘ್ರವಾಗಿ ಕೈಗೊಳ್ಳಬೇಕು. ಇಲ್ಲವಾದಲ್ಲಿ ಅವಳಿ ನಗರದ ಪೊಲೀಸ್ ಇಲಾಖೆಯ ವಿರುದ್ಧ ರಾಜ್ಯದಾದಂತ್ಯ ಕರ್ನಾಟಕ ಮುಸ್ಲಿಂ ಯುನಿಟಿ (KMU) ಹೋರಾಟ ನಡೆಸಲಿದೆ” ಎಂದು ಹೇಳಿದ್ದಾರೆ.