ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಸಾರ ಮಾಡಿದ್ದ ಮಾಧ್ಯಮಗಳ ವಿರುದ್ಧ ಕ್ರಮ ಕೋರಿ ಸಲ್ಲಿಸಲಾದ ಮನವಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್!
ನವದೆಹಲಿ: ಲೋಕಸಭೆ ಚುನಾವಣೆಯ ಅಂತಿಮ ಹಂತ ಮುಗಿದ ತಕ್ಷಣ ಚುನಾವಣೋತ್ತರ ಸಮೀಕ್ಷೆ (Exit Poll)ಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಮಾಧ್ಯಮ ಸಂಸ್ಥೆಗಳು ಮತ್ತು ಅವರ ಸಹವರ್ತಿಗ ವಿರುದ್ಧ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಇಂದು (ಶುಕ್ರವಾರ) ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, ಪಿಐಎಲ್ ಅನ್ನು “ರಾಜಕೀಯ ಹಿತಾಸಕ್ತಿ ಮೊಕದ್ದಮೆ” ಎಂದು ಬಣ್ಣಿಸಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.
ನ್ಯಾಯಾಲಯ, ”ಈಗಾಗಲೇ ಸರ್ಕಾರ ಆಯ್ಕೆಯಾಗಿದೆ. ಚುನಾವಣೆಯ ಸಮಯದಲ್ಲಿ ಏನಾಗುತ್ತದೆ ಎಂಬ ಕಥೆಯನ್ನು ಈಗ ಮುಗಿಸಿಕೊಂಡು, ಈಗ ನಾವು ದೇಶದಲ್ಲಿ ಆಡಳಿತವನ್ನು ಪ್ರಾರಂಭಿಸೋಣ. ಚುನಾವಣಾ ಆಯೋಗ ಅದನ್ನು ನಿಭಾಯಿಸುತ್ತದೆ. ನಾವು ಚುನಾವಣಾ ಆಯೋಗವನ್ನು ನಡೆಸುವುದಿಲ್ಲ. ಇದು ರಾಜಕೀಯ ಹಿತಾಸಕ್ತಿ ಮೊಕದ್ದಮೆಯಾಗಿರುವುದು ಸ್ಪಷ್ಟ.ಹಾಗಾಗಿ ಪ್ರಕರಣವನ್ನು ವಜಾಗೊಳಿಸಲಾಗಿದೆ” ಎಂದು ತಿಳೀಸಿದೆ.
ಜೂನ್ 1 ರಂದು ಕೊನೆಯ ಹಂತದ ಚುನಾವಣೆಯ ನಂತರ ತಕ್ಷಣವೇ ಎಕ್ಸಿಟ್ ಪೋಲ್‌ಗಳನ್ನು ಚರ್ಚಿಸುವ ಮೂಲಕ ಮಾಧ್ಯಮ ಸಂಸ್ಥೆಗಳು ಹೂಡಿಕೆದಾರರ ಮೇಲೆ ಪ್ರಭಾವ ಬೀರಿವೆ. ಇದು ಷೇರು ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಕೆಗೆ ಕಾರಣವಾಯಿತು ಎಂದು ಅರ್ಜಿದಾರರಾದ ವಕೀಲ ಬಿ.ಎಲ್.ಜೈನ್ ಆರೋಪಿಸಿದ್ದರು. ಆದಾಗ್ಯೂ, ಜೂನ್ 4 ರಂದು ನಿಜವಾದ ಫಲಿತಾಂಶಗಳು ಪ್ರಕಟವಾದಾಗ, ಮಾರುಕಟ್ಟೆಯು ಕುಸಿಯಿತು, ಇದರ ಪರಿಣಾಮವಾಗಿ ಸಾಮಾನ್ಯ ಹೂಡಿಕೆದಾರರಿಗೆ 31 ಲಕ್ಷ ಕೋಟಿ ರೂ. ನಷ್ಟವಾಗಿದೆ.
ವಕೀಲ ವರುಣ್ ಠಾಕೂರ್ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ, ಎಲೆಕ್ಟ್ರಾನಿಕ್ ಮಾಧ್ಯಮಗಳ ಚುನಾವಣೋತ್ತರ ಸಮೀಕ್ಷೆಗಳು ಮತ್ತು ಚರ್ಚೆಗಳ ಪ್ರಸಾರವು ಕೆಲವು ರಾಜಕೀಯ ಪಕ್ಷಗಳ ಪರವಾಗಿ ಅಥವಾ ವಿರುದ್ಧವಾಗಿ ಪಕ್ಷಪಾತ ಮತ್ತು ಪೂರ್ವಾಗ್ರಹ ಪೀಡಿತವಾಗಿದೆ ಎಂದು ಹೇಳಲಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆ, 1951 ಮತ್ತು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಹಲವಾರು ಮಾಧ್ಯಮ ಸಂಸ್ಥೆಗಳ ವಿರುದ್ಧ ಸಿಬಿಐ, ಇಡಿ, ಸಿಬಿಡಿಟಿ, ಸೆಬಿ ಮತ್ತು ಎಸ್‌ಎಫ್‌ಐಒ ಸೇರಿದಂತೆ ವಿವಿಧ ಏಜೆನ್ಸಿಗಳಿಂದ ತನಿಖೆಗೆ ಅದು ಕೋರಿತ್ತು.