Hema Committee Report: ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯ ಪೀಠ; ನಟರಾದ ಮುಖೇಶ್, ಎಡವೇಲ ಬಾಬುಗೆ ನಿರೀಕ್ಷಣಾ ಜಾಮೀನು! » Dynamic Leader
October 22, 2024
ಸಿನಿಮಾ

Hema Committee Report: ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯ ಪೀಠ; ನಟರಾದ ಮುಖೇಶ್, ಎಡವೇಲ ಬಾಬುಗೆ ನಿರೀಕ್ಷಣಾ ಜಾಮೀನು!

ಹೇಮಾ ಸಮಿತಿ ವರದಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ವಿಶೇಷ ನ್ಯಾಯ ಪೀಠವನ್ನು ರಚಿಸಲಾಗಿದೆ ಎಂದು ಕೇರಳ ಹೈಕೋರ್ಟ್ ತಿಳಿಸಿದೆ.

ವಿಶೇಷ ನ್ಯಾಯ ಪೀಠವನ್ನು ರಚಿಸಲು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮೊಹಮ್ಮದ್ ಮುಷ್ತಾಕ್ ಅವರು ಕಳೆದ 29 ರಂದು ಆದೇಶಿಸಿದ್ದಾರೆ ಎಂದು ಕೇರಳ ಹೈಕೋರ್ಟ್ ರಿಜಿಸ್ಟ್ರಾರ್ ಇಲಾಖೆ ಮಾಹಿತಿ ನೀಡಿದೆ. ಅದರಂತೆ ನ್ಯಾಯಾಧೀಶರಾದ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ಸಿ.ಎಸ್.ಸುಧಾ ಅವರನ್ನೊಳಗೊಂಡ ವಿಶೇಷ ನ್ಯಾಯಪೀಠವು ಹೇಮಾ ಕಮಿಟಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಶಕ್ತಿ ಅರ್ಜಿಯ ವಿಚಾರಣೆ ನಡೆಸಲಿದೆ ಎಂದು ತಿಳಿಸಲಾಗಿದೆ.

ಕೇರಳದಲ್ಲಿ ಕಳೆದ 2017ರಲ್ಲಿ ನಟಿಯೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ನಂತರ ಹೇಮಾ ಕಮಿಟಿಯನ್ನು ಸ್ಥಾಪಿಸಲಾಯಿತು. ಇದರ ವರದಿಯು ಇತ್ತೀಚೆಗೆ ಪ್ರಕಟವಾದ ನಂತರ ವಿವಿಧ ಮಲಯಾಳಂ ನಟರು ಮತ್ತು ನಿರ್ದೇಶಕರ ಮೇಲೆ ಲೈಂಗಿಕ ದೌರ್ಜನ್ಯಗಳ ಆರೋಪಗಳು ಕೇಳಿಬರುತ್ತಿವೆ. ಈ ಕುರಿತು ವಿಚಾರಣೆ ನಡೆಸುವುದಕ್ಕೆ 7 ಸದಸ್ಯರ ವಿಶೇಷ ತನಿಖಾ ತಂಡವನ್ನು ಕೇರಳ ಸರ್ಕಾರ ಕಳೆದ 25 ರಂದು ಸ್ಥಾಪಿಸಿದೆ.

ಏತನ್ಮಧ್ಯೆ, ಲೈಂಗಿಕ ಕಿರುಕುಳ ಆರೋಪದಲ್ಲಿ ಮಲಯಾಳಂ ನಟರಾದ ಮುಖೇಶ್ ಮತ್ತು ಎಡವೇಲ ಬಾಬು ಅವರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನಟ ಹಾಗೂ ಶಾಸಕ ಮುಖೇಶ್ ವಿರುದ್ಧ ನಟಿಯೊಬ್ಬರು ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೂರು ದಾಖಲಿಸಿದ್ದರು.

ಅದರ ಆಧಾರದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ, ಪ್ರಾಸಿಕ್ಯೂಷನ್ ವಿರುದ್ಧ ಮುಖೇಶ್ ಎರ್ನಾಕುಲಂ ಪ್ರಿನ್ಸಿಪಲ್ ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಗೆ ಬಂದಾಗ, ತಮ್ಮ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ ಎಂದು ಮುಖೇಶ್ ವಾದಿಸಿದ್ದರು.

ತರುವಾಯ, ನ್ಯಾಯಾಧೀಶರು ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರು. ಅದೇ ರೀತಿ ಲೈಂಗಿಕ ಆರೋಪದಲ್ಲಿ ನಟ ಎಡವೇಲ ಬಾಬು ಅವರಿಗೂ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಮಲಯಾಳಂ ಚಿತ್ರರಂಗದಲ್ಲಿ ಅನೇಕ ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಹೇಮಾ ಸಮಿತಿ ವರದಿ ಸಲ್ಲಿಸಿದ್ದು, ಅದರ ಆಧಾರದ ಮೇಲೆ ತನಿಖೆ ನಡೆಯುತ್ತಿದೆ.

Related Posts