ಬಿಹಾರದಲ್ಲಿ ಪರಿಶಿಷ್ಟರ 21 ಗುಡಿಸಲುಗಳಿಗೆ ಬೆಂಕಿ; 15 ಜನ ಬಂಧನ: ಪ್ರತಿಪಕ್ಷಗಳು ಖಂಡನೆ! » Dynamic Leader
November 22, 2024
ದೇಶ

ಬಿಹಾರದಲ್ಲಿ ಪರಿಶಿಷ್ಟರ 21 ಗುಡಿಸಲುಗಳಿಗೆ ಬೆಂಕಿ; 15 ಜನ ಬಂಧನ: ಪ್ರತಿಪಕ್ಷಗಳು ಖಂಡನೆ!

ನವಾಡ: ಬಿಹಾರದ ನವಾಡ ಜಿಲ್ಲೆಯಲ್ಲಿ ಪರಿಶಿಷ್ಟರ ವಸತಿ ಪ್ರದೇಶದಲ್ಲಿ 21 ಗುಡಿಸಲುಗಳು ಬೆಂಕಿಗೆ ಆಹುತಿಯಾದ ಘಟನೆಗೆ ಸಂಬಂಧಿಸಿದಂತೆ 15 ಜನರನ್ನು ಬಂಧಿಸಲಾಗಿದೆ ಎಂದು ರಾಜ್ಯದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಈ ಕ್ರೂರ ಘಟನೆಯು ಬಿಹಾರದಲ್ಲಿ ನಡೆಯುತ್ತಿರುವ ‘ಜಂಗಲ್ ರಾಜ್‌’ಗೆ ಮತ್ತೊಂದು ಪುರಾವೆಯಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದೆ.

ಮುಫಾಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹಾದಲಿತ್ ತೋಲಾ ಪ್ರದೇಶದಲ್ಲಿ ಬುಧವಾರ ರಾತ್ರಿ ನಡೆದ ಅಗ್ನಿಸ್ಪರ್ಶ ಘಟನೆಯು ಜಮೀನು ವಿವಾದದಿಂದಾಗಿ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಾವಡ ಜಿಲ್ಲಾಧಿಕಾರಿ ಅಶುತೋಷ್ ಕುಮಾರ್ ವರ್ಮಾ, “ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಇಲಾಖೆ 15 ಮಂದಿಯನ್ನು ಬಂಧಿಸಿದೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

ಮಹಾದಲಿತ್ ತೋಲಾ ಪ್ರದೇಶದಲ್ಲಿ ಗುಂಪೊಂದು 21 ಮನೆಗಳಿಗೆ ಬೆಂಕಿ ಹಚ್ಚಿದೆ. ಕೆಲವು ಮನೆಗಳು ಅರ್ಧ ಸುಟ್ಟಿವೆ. ಎಷ್ಟು ಮನೆಗಳಿಗೆ ಹಾನಿಯಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿಗಾಗಿ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ನಿರಾಶ್ರಿತರಿಗೆ ಆಹಾರ, ನೀರು ಸೇರಿದಂತೆ ಪರಿಹಾರ ಸಾಮಗ್ರಿಗಳನ್ನು ಒದಗಿಸಲಾಗಿದೆ. ಸಂತ್ರಸ್ತರಿಗೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗಿದೆ. ಜಾನುವಾರುಗಳನ್ನು ಸುಟ್ಟು ಹಾಕಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ” ಎಂದು ಹೇಳಿದರು.

ಈ ಅಗ್ನಿಸ್ಪರ್ಶ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ನವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಧಿಮಾನ್ “ಸಂಜೆ 7 ಗಂಟೆಗೆ, ಮಹಾದಲಿತ್ ತೋಲಾದಲ್ಲಿ ಬೆಂಕಿ ಅಪಘಾತ ನಡೆದಿದೆ ಎಂದು ಪೊಲೀಸರಿಗೆ ಕರೆ ಬಂದಿತ್ತು. ಪೊಲೀಸರು ಅಗ್ನಿಶಾಮಕ ದಳದೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಜಮೀನು ವಿವಾದದಿಂದ ಬೆಂಕಿ ಹಚ್ಚಿರುವ ಘಟನೆ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ” ಎಂದರು. ಬೆಂಕಿ ಅನಾಹುತ ನಡೆದಾಗ ಗುಂಡೇಟಿನ ಸದ್ದು ಕೇಳಿತ್ತು ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಜಂಗಲ್ ರಾಜ್ – ಪ್ರತಿಪಕ್ಷಗಳ ಆರೋಪ:
ನವಾಡ ಬೆಂಕಿ ಅವಘಡದ ಘಟನೆಗೆ ಸಂಬಂಧಿಸಿದಂತೆ ಬಿಹಾರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಪರಿಶಿಷ್ಟರ ಮೇಲಿನ ಅನ್ಯಾಯ ಮುಂದುವರಿದಿದೆ ಎಂಬುದಕ್ಕೆ ಇದು ‘ಜಂಗಲ್ ರಾಜ್’ ದರ್ಬಾರ್‌ಗೆ ಮತ್ತೊಂದು ಪುರಾವೆಯಾಗಿದೆ ಎಂದು ಆರೋಪಿಸಿದೆ.

Related Posts