ಮಣಿಪುರದಂತಹ ಗಂಭೀರ ವಿಷಯಗಳತ್ತ ಗಮನ ಹರಿಸಿ: ಅಮಿತ್ ಶಾಗೆ ಖರ್ಗೆ ತಿರುಗೇಟು! » Dynamic Leader
October 22, 2024
ರಾಜಕೀಯ

ಮಣಿಪುರದಂತಹ ಗಂಭೀರ ವಿಷಯಗಳತ್ತ ಗಮನ ಹರಿಸಿ: ಅಮಿತ್ ಶಾಗೆ ಖರ್ಗೆ ತಿರುಗೇಟು!

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಜಸ್ರೊಟಾ (Jasrota) ಪ್ರದೇಶದಲ್ಲಿ ನೆನ್ನೆ ಕಾಂಗ್ರೆಸ್ ನಿಂದ ಚುನಾವಣಾ ಪ್ರಚಾರ ಸಭೆ ನಡೆಯಿತು. ಇದರಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದರು. ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಏಕಾಏಕಿ ಪ್ರಜ್ಞೆ ತಪ್ಪಿದರು. ಸ್ವಲ್ಪಮಟ್ಟಿಗೆ ಕುಸಿದು ಬಿದ್ದ ಅವರನ್ನು ವೇದಿಕೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಓಡಿ ಬಂದು ಎತ್ತಿ ಹಿಡಿದರು. ನಂತರ ಅವರನ್ನು ಆಸನಕ್ಕೆ ಕರೆದೊಯ್ದು ಕುಳಿತುಕೊಳ್ಳುವಂತೆ ಮಾಡಿದರು. ಸ್ವಲ್ಪ ವಿರಾಮದ ನಂತರ ಮತ್ತೆ ಮಾತನಾಡಿದ ಖರ್ಗೆಯವರು ‘ಅಷ್ಟು ಬೇಗ ನಾನು ಸಾಯುವುದಿಲ್ಲ. ಮೋದಿ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವವರೆಗೂ ನಾನು ಬದುಕಿರುತ್ತೇನೆ; ನಾನು ನಿಮಗಾಗಿ ಹೋರಾಡುತ್ತೇನೆ” ಎಂದು ಆವೇಶದಿಂದ ಹೇಳಿದರು.

ಖರ್ಗೆಯವರ ಭಾಷಣವನ್ನು ಅಮಿತ್ ಶಾ ಖಂಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಖರ್ಗೆಯವರ ಹೇಳಿಕೆ ಅವಮಾನಕರ ಮತ್ತು ನಾಚಿಕೆಗೇಡು. ಖರ್ಗೆಯವರ ಮಾತು ಅವರ ಅಸಹ್ಯ ಮತ್ತು ಭಯವನ್ನು ತೋರಿಸುತ್ತದೆ. ಖರ್ಗೆಯವರ ಆರೋಗ್ಯದ ವಿಚಾರವಾಗಿ, ಅವರು ದೀರ್ಘಾಯುಷ್ಯ ಮತ್ತು ಆರೋಗ್ಯವಾಗಿರಲಿ ಎಂದು ಪ್ರಾರ್ಥಿಸುತ್ತೇವೆ. ಅವರು ದೀರ್ಘಕಾಲ ಬದುಕಲಿ, 2047ರಲ್ಲಿ ಅಭಿವೃದ್ಧಿ ಹೊಂದಿದ ಭಾರತ ರೂಪುಗೊಳ್ಳುವವರೆಗೆ ಬದುಕಲಿ’ ಎಂದು ಹೇಳಿದರು. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಅವರು ತಮ್ಮ ಎಕ್ಸ್ ಸೈಟ್‌ನಲ್ಲಿ, ‘ಗೃಹ ಸಚಿವ ಅಮಿತ್ ಶಾ ಅವರು ಮಣಿಪುರ, ಜನಗಣತಿ, ಜಾತಿವಾರು ಜನಗಣತಿ ಮುಂತಾದ ಗಂಭೀರ ವಿಷಯಗಳತ್ತ ಗಮನಹರಿಸಬೇಕು. ನಿಮ್ಮ ಸರ್ಕಾರದ ಅಂಕಿಅಂಶಗಳೇ ನಗರದ ಚರಂಡಿ ಮತ್ತು ಒಳಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಮಿಕರಲ್ಲಿ ಶೇಕಡಾ 92ರಷ್ಟು ದಲಿತರು, ಆದಿವಾಸಿಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದವರು ಎಂದು ತೋರಿಸುತ್ತದೆ.

ದಲಿತರು, ಆದಿವಾಸಿಗಳು, ಹಿಂದುಳಿದವರು, ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರು ಸೇರಿದಂತೆ ಎಲ್ಲ ವರ್ಗದವರು ಯಾವ ಕೆಲಸದ ಮೂಲಕ ತಮ್ಮ ಜೀವನೋಪಾಯವನ್ನು ಗಳಿಸುತ್ತಾರೆ ಎಂಬುದು ಬಹಿರಂಗವಾಗುತ್ತದೆ ಎಂಬುದಕ್ಕಾಗಿಯೇ ಬಿಜೆಪಿ ಜಾತಿವಾರು ಜನಗಣತಿಯನ್ನು ವಿರೋಧಿಸುತ್ತಿದೆ. ಜಾತಿವಾರು ಜನಗಣತಿಗೆ ಕಾಂಗ್ರೆಸ್ ಬದ್ಧವಾಗಿದೆ; ಅದನ್ನು ಮಾಡಿ ಮುಗಿಸೋಣ’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Related Posts