ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು 26 ಅಮಾಯಕ ಜನರನ್ನು ಕೊಂದಿದ್ದಕ್ಕೆ ಪ್ರತೀಕಾರವಾಗಿ, ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಮಧ್ಯರಾತ್ರಿ ದಾಳಿ ನಡೆಸಿತು.
ಈ ದಾಳಿಗಳಿಗೆ ಸಂಬಂಧಿಸಿದ ಅಧಿಕೃತ ಮಾಧ್ಯಮ ಗೋಷ್ಠಿಯಲ್ಲಿ, ಮೊದಲ ಬಾರಿಗೆ ಇಬ್ಬರು ಮಹಿಳಾ ಮಿಲಿಟರಿ ಅಧಿಕಾರಿಗಳು ಭಾಗವಹಿಸಿ ವಿವರಣೆಗಳನ್ನು ನೀಡಿದರು. ಆಪರೇಷನ್ ಸಿಂಧೂರ್ (Operation Sindoor) ಅನ್ನು ಹೇಗೆ ಕಾರ್ಯಗತಗೊಳಿಸಲಾಯಿತು ಎಂಬುದನ್ನು ವಾಯುಪಡೆಯ ಕರ್ನಲ್ ಸೋಫಿಯಾ ಖುರೇಷಿ (Karnal Sofia Qureshi) ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ (Vyomika Singh) ವಿವರಿಸಿದರು. ಇದರ ಬೆನ್ನಲ್ಲೇ, ಇಬ್ಬರು ಮಹಿಳಾ ಸೇನಾ ಅಧಿಕಾರಿಗಳು ಅಂತರ್ಜಾಲದಲ್ಲಿ ವೈರಲ್ ಆದರು.
ಈ ಹಿನ್ನೆಲೆಯಲ್ಲಿ, ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಪಹಲ್ಗಾಮ್ ದಾಳಿಕೋರರ ಸಹೋದರಿ ಎಂದು ಉಲ್ಲೇಖಿಸಿರುವ ಮಧ್ಯಪ್ರದೇಶದ ಬಿಜೆಪಿ ಸಚಿವ ಕುನ್ವರ್ ವಿಜಯ್ ಶಾ (Kunwar Vijay Shah) ಅವರ ಹೇಳಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಕುನ್ವರ್ ವಿಜಯ್ ಶಾ, “ಪಹಲ್ಗಾಮ್‌ನಲ್ಲಿ ನಮ್ಮ ಹೆಣ್ಣುಮಕ್ಕಳ ಹಣೆಯ ಮೇಲಿನ ಕುಂಕುಮವನ್ನು ನಾಶಪಡಿಸಿದವರಿಗೆ, ಅವರ ಸಹೋದರಿಯರ ಮೂಲಕವೇ ಪಾಠ ಕಲಿಸಿದ್ದೇವೆ” ಎಂದು ಹೇಳಿದ್ದಾರೆ.
ಕರ್ನಲ್ ಸೋಫಿಯಾ ಖುರೇಷಿ ಅವರನ್ನು ಭಯೋತ್ಪಾದಕರ ಸಹೋದರಿ ಎಂದು ಬಿಜೆಪಿ ಸಚಿವರು ಕರೆದಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ಗುಜರಾತ್‌ನ ಕರ್ನಲ್ ಸೋಫಿಯಾ ಖುರೇಷಿ (35) ಭಾರತೀಯ ಸೇನೆಯ ಸಿಗ್ನಲ್ ಕಾರ್ಪ್ಸ್‌ನಲ್ಲಿ ಅಧಿಕಾರಿಯಾಗಿದ್ದಾರೆ. 1999ರಲ್ಲಿ ಅಧಿಕಾರಿಗಳ ತರಬೇತಿ ಅಕಾಡೆಮಿಯಿಂದ ಪದವಿ ಪಡೆದು ಸೇನೆಗೆ ನೇಮಕಗೊಂಡ ನಂತರ, ಅವರು ದಂಗೆ ನಿಗ್ರಹ ಕಾರ್ಯಾಚರಣೆಗಳು ಸೇರಿದಂತೆ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸೋಫಿಯಾಳ ಅಜ್ಜ ಮತ್ತು ತಂದೆ ಮಿಲಿಟರಿಯಲ್ಲಿದ್ದವರು.
ಸೋಫಿಯಾ ಖುರೇಷಿ ಅವರು ಯಾಂತ್ರೀಕೃತ ಪದಾತಿ ದಳದ (Mechanised Infantry Regiment) ಅಧಿಕಾರಿಯನ್ನು ವಿವಾಹವಾಗಿದ್ದಾರೆ. ಹೀಗಾಗಿ ಸೋಫಿಯಾ ಸಂಪೂರ್ಣ ಸೇನಾ ಕುಟುಂಬದ ಹಿನ್ನೆಲೆಯನ್ನು ಹೊಂದಿದ್ದಾರೆ ಎಂಬುದು ಗಮನಾರ್ಹ.