ನವದೆಹಲಿ: “ಪ್ರಧಾನಿ ನರೇಂದ್ರ ಮೋದಿ ಘೋಷಣೆ ಕೂಗುವ ಕಲೆಯಲ್ಲಿ ಪರಿಣತಿ ಹೊಂದಿದ್ದಾರೆ, ಆದರೆ ಅವರು ಯಾವುದೇ ಪರಿಹಾರಗಳನ್ನು ನೀಡಿಲ್ಲ” ಎಂದು ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಈ ಕುರಿತು, ಅವರು ‘ಎಕ್ಸ್’ ಜಾಲತಾಣದಲ್ಲಿ ಪ್ರಕಟಿಸಿರುವ ಪೋಸ್ಟ್‌ನಲ್ಲಿ, “ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ‘ಮೇಕ್ ಇನ್ ಇಂಡಿಯಾ’ ಉಪಕ್ರಮವು ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಖಾನೆಗಳ ಭರವಸೆ ನೀಡಿತ್ತು. ಆದರೆ, ಇಂದು ದೇಶದಲ್ಲಿ ಉತ್ಪಾದನೆ ಏಕೆ ಕಡಿಮೆಯಾಗಿದೆ? ನಿರುದ್ಯೋಗ ಏಕೆ ಹೆಚ್ಚಾಗಿದೆ? ಚೀನಾದಿಂದ ಆಮದು ಏಕೆ ದ್ವಿಗುಣಗೊಂಡಿದೆ?” ಎಂದು ಪ್ರಶ್ನಿಸಿದ್ದಾರೆ.
“ಪ್ರಧಾನಿ ಮೋದಿ ಘೋಷಣೆ ಕೂಗುವ ಕಲೆಯಲ್ಲಿ ಪರಿಣತಿ ಹೊಂದಿದ್ದಾರೆ, ಆದರೆ ಪರಿಹಾರಗಳನ್ನು ಕಂಡುಕೊಳ್ಳುವುದರಲ್ಲಿ ಅಲ್ಲ. ಆರ್ಥಿಕವಾಗಿ, 2014 ರಿಂದ ನಮ್ಮ ಉತ್ಪಾದನೆಯು ಶೇಕಡಾ 14 ರಷ್ಟು ಕುಸಿದಿದೆ. ಸರ್ಕಾರವು ಆಮದುಗಳಲ್ಲಿ ಮಾತ್ರ ಆಸಕ್ತಿ ಹೊಂದಿದೆ. ದೇಶೀಯ ಕಂಪನಿಗಳನ್ನು ಉತ್ತೇಜಿಸುವಲ್ಲಿ ಅಲ್ಲ. ಹೆಚ್ಚಿದ ಆಮದುಗಳಿಂದ ಚೀನಾ ಲಾಭ ಪಡೆಯುತ್ತದೆ” ಎಂದು ಹೇಳಿದ್ದಾರೆ.
“ಭಾರತಕ್ಕೆ ಬೇಕಾಗಿರುವುದು ಪ್ರಾಮಾಣಿಕ ಸುಧಾರಣೆಗಳು ಮತ್ತು ಆರ್ಥಿಕ ಬೆಂಬಲದ ಮೂಲಕ ಲಕ್ಷಾಂತರ ಉತ್ಪಾದಕರಿಗೆ ಸಬಲೀಕರಣ ನೀಡುವ ಮೂಲಭೂತ ಬದಲಾವಣೆ. ನಾವು ಇತರರಿಗೆ ಮಾರುಕಟ್ಟೆಯಾಗುವುದನ್ನು ನಿಲ್ಲಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ನಾವು ದೈಹಿಕ ಶ್ರಮವನ್ನು ಗೌರವಿಸಲು ಪ್ರಾರಂಭಿಸುವವರೆಗೆ, ಬೀದಿಗಳಲ್ಲಿ ಗಂಟೆಗಟ್ಟಲೆ ನಿಂತು ಕೆಲಸ ಮಾಡುವ ಮತ್ತು ವ್ಯಾಪಾರ ಮಾಡುವ ಜನರನ್ನು ನಾವು ಗೌರವಿಸುವುದಿಲ್ಲ. ಮತ್ತು ಇದರ ಕೇಂದ್ರ ಬಿಂದುವಾಗಿ ‘ಜಾತಿ’ಯ ಪರಿಕಲ್ಪನೆ ಇದೆ. ಇದನ್ನು ನಾವು ಬಹಿರಂಗವಾಗಿ ಹೇಳಬೇಕು. ಭಾರತೀಯ ಸಮಾಜವು ಅಧಿಕಾರವನ್ನು ಹೇಗೆ ಹಂಚಿಕೊಳ್ಳುತ್ತದೆ, ಭಾರತೀಯ ಸಮಾಜವು ಗೌರವವನ್ನು ಹೇಗೆ ಹಂಚಿಕೊಳ್ಳುತ್ತದೆ ಎಂಬುದನ್ನು ನಾವು ನಿಖರವಾಗಿ ಅರ್ಥಮಾಡಿಕೊಳ್ಳಬೇಕು.” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.