ಬೆಂಗಳೂರು: ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಂಡೇ ರೈತರಿಗೆ ಅನ್ಯಾಯ ಮಾಡುತ್ತಿರುವುದು ಅತ್ಯಂತ ಖಂಡನಿಯ. ರೈತರ ಫಲವತ್ತಾದ ಭೂಮಿಯನ್ನು ಬಲವಂತದಿಂದ ಭೂಸ್ವಾಧೀನ ಮಾಡಿಕೊಳ್ಳುವ ಕ್ರಮವನ್ನು ಸರ್ಕಾರ ಈ ಕೂಡಲೇ ಕೈಬಿಡಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು ಹಾಗೂ ವಕೀಲರೂ ಆದ ತಾಹೇರ್ ಹುಸೇನ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿವಿಧ ಸಂಘಟನೆಗಳು, ಪ್ರಗತಿಪರ ಚಿಂತಕರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿರುವ ‘ಭೂಮಿ ಸತ್ಯಾಗ್ರಹ’ ಹೋರಾಟಕ್ಕೆ ವೆಲ್ಫೇರ್ ಪಾರ್ಟಿ ವತಿಯಿಂದ ಬೆಂಬಲ ಸೂಚಿಸುತ್ತ ಅವರು ಮಾತನಾಡಿದರು, “ಈ ಹಿಂದೆ ಬಿಜೆಪಿ ಸರ್ಕಾರ ದೇವನಹಳ್ಳಿ ವ್ಯಾಪ್ತಿಯ ರೈತರ ಜಮೀನು ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದಾಗ ರೈತ ಹೋರಾಟ ಆರಂಭವಾಗಿತ್ತು. ಪ್ರತಿಭಟನೆ ನಿರತ ರೈತರನ್ನು ಭೇಟಿ ಮಾಡಿದ ಅಂದಿನ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಎರಡೂವರೆ ವರ್ಷ ಪೂರೈಸಿದರೂ ಭರವಸೆ ಈಡೇರಿಸಿಲ್ಲ. ಇದರ ನಡುವೆ ಭೂ ಸ್ವಾಧೀನಕ್ಕೆ ಮುಂದಾಗಿರುವುದು ಖಂಡನೀಯ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ರೈತರ ಹೋರಾಟದ ಕೂಗು ಸರ್ಕಾರಕ್ಕೆ ಕೇಳಿಸುತ್ತಿಲ್ಲವೇ? ಈ ಸರ್ಕಾರಕ್ಕೆ ಕಿವಿಯಿದ್ದು.. ಕಿವುಡರಂತೆ, ಕಣ್ಣಿದ್ದು.. ಕುರುಡರಂತೆ ವರ್ತಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಮ್ಮ ಭೂಮಿ, ನಮ್ಮ ಹಕ್ಕು ಅಲ್ಲವೇ. ಸರ್ಕಾರದ ಕೈಗಾರಿಕಾ ನೀತಿ ಬದಲಾಗಬೇಕು. ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರು, ನಮಗೆ ಪರ್ಯಾಯವಾಗಿ ಭೂಮಿ ಕೊಡಿ ಎಂದು ಅರ್ಜಿ ಸಲ್ಲಿಸಿದರೂ ಇದುವರೆಗೂ ಭೂಮಿ ಹಂಚಿಕೆ ಮಾಡಿಲ್ಲ. ಸರ್ಕಾರಗಳು ಕಾರ್ಪೊರೇಟ್ ಕಂಪನಿಗಳ ಏಜೆಂಟರಂತೆ ವರ್ತನೆ ಮಾಡುತ್ತಿರುವುದು ಸೂಕ್ತವಲ್ಲ” ಎಂಉ ಕಿಡಿಕಾರಿದರು.
“ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1,777 ಎಕರೆ ಜಮೀನನ್ನು ಸರ್ಕಾರ ಭೂಸ್ವಾಧೀನ ಮಾಡಲು ಮುಂದಾಗಿದೆ. ಭೂಸ್ವಾಧೀನದ ಪ್ರಕ್ರಿಯೆ ವಿರುದ್ಧ ರೈತರು 1,184 ದಿನ ಶಾಂತಿಯುತವಾಗಿ ಹೋರಾಟ ಮಾಡಿದ್ದಾರೆ. ದೇಶಕ್ಕೆ ಅನ್ನ ನೀಡುವ ರೈತರ ಸಮಸ್ಯೆ ಪರಿಹಾರಕ್ಕೆ ಮುಂದಾಗದ ಸರ್ಕಾರವು, ಕೃಷಿ ಭೂಮಿಯನ್ನು ರಿಯಲ್ ಎಸ್ಟೇಟ್ ಧಂಧೆಕೋರರು, ಕಾರ್ಪೋರೇಟ್ ಕಂಪನಿಗಳಿಗೆ ಮಾರಾಟ ಮಾಡಲು ಹುನ್ನಾರ ಮಾಡಿದೆ. ಕೃಷಿ ಭೂಮಿಯನ್ನು ಕಳೆದುಕೊಂಡರೆ, ರೈತರ ಪರಿಸ್ಥಿತಿ ಏನು”? ಎಂದು ಪ್ರಶ್ನಿಸಿದರು.
“ಕೃಷಿ ಆಧಾರಿತ ಕೈಗಾರಿಕೆಗಳು ಆರಂಭವಾಗುತ್ತಿಲ್ಲ. ಸ್ಥಳೀಯರಿಗೆ ಉದ್ಯೋಗ ನೀಡುವ ಬಗ್ಗೆ ಮಾತಿಲ್ಲ. ಭೂಮಿ ನೀಡಿದ ರೈತರಿಗೆ ಪರ್ಯಾಯವಾಗಿ ಭೂಮಿ ನೀಡುವ ಬಗ್ಗೆ ಮಾತಾಡದೇ, ಏಕಾಏಕಿ ರೈತರ ಭೂಮಿಗಳನ್ನು ಸ್ವಾಧೀನ ಮಾಡಿಕೊಳ್ಳಲು ಬಿಡುವುದಿಲ್ಲ” ಎಂದು ತಿಳಿಸಿದರು.