ಡೈನಾಮಿಕ್ ಲೀಡರ್ ನ್ಯೂಸ್, Dynamic Leader - Kannada Online News Portal 24x7 | Latest News in Kannada online | ಕನ್ನಡ ಸುದ್ದಿ
ಫ್ರೀಡಂ ಪಾರ್ಕ್ Archives » Dynamic Leader
November 21, 2024
Home Posts tagged ಫ್ರೀಡಂ ಪಾರ್ಕ್
ಬೆಂಗಳೂರು

ಡಿ.ಸಿ.ಪ್ರಕಾಶ್

ಬೆಂಗಳೂರು: ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ನಗರೇಶ್ವರ ನಾಗೇನಹಳ್ಳಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ಮಿಸಿರುವ ಮನೆಗಳನ್ನು ಮಂಡಳಿಯ ಕಾಯ್ದೆ-ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ಮಾಜಿ ಸಚಿವರು ಹಾಗೂ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೈರತಿ ಬಸವರಾಜು ಅವರು ಆಶ್ರಯ ಸಮಿತಿ ಹೆಸರಿನಲ್ಲಿ ಅಕ್ರಮವಾಗಿ ಇತರ ಅನುಕೂಲಸ್ಥ ವರ್ಗದವರಿಗೆ ಹಂಚಿಕೆ ಮಾಡಲು ಮುಂಗಾಗುತ್ತಿರುವುದನ್ನು ಖಂಡಿಸಿ, ನವಂಬರ್ 4 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಜನಶಕ್ತಿ ವೇದಿಕೆ ಮತ್ತು ಜನಶಕ್ತಿ ಮಹಿಳಾ ವೇದಿಕೆ ಇತರ ಸಂಘ-ಸಂಸ್ಥೆಗಳ ಸಭಾಗಿತ್ವದಲ್ಲಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಂಡಿದೆ. 

ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ನಗರೇಶ್ವರ ನಾಗೇನಹಳ್ಳಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, NURM-BSUP ಯೋಜನೆಯಡಿ 208 ಮನೆಗಳನ್ನು ನಿರ್ಮಿಸಿದ್ದು, ಅದರಲ್ಲಿ 166 ಮನೆಗಳನ್ನು ಮಾತ್ರ 2004ರಲ್ಲಿ ಲಾಟರಿ ಮುಖಾಂತರ ಹಂಚಿಕೆ ಮಾಡಿತ್ತು. ಹಂಚಿಕೆಯಾಗದೆ ಖಾಲಿಯಿದ್ದ 42 ಮನೆಗಳಲ್ಲಿ, ಅಕ್ಕಪಕ್ಕದ ಪ್ರದೇಶಗಳಲ್ಲಿ ವಾಸವಾಗಿದ್ದ ಕೆಲವು ಬಡಕೂಲಿ ಕಾರ್ಮಿಕರು ಅನಧೀಕೃತವಾಗಿ ಬಂದು ಸೇರಿಕೊಂಡು, ನಮ್ಮನ್ನೂ ಸಕ್ರಮಗೊಳಿಸಿ ಹಂಚಿಕೆ ಪತ್ರ ನೀಡಿ ಎಂದು ಸುಮಾರು 9 ವರ್ಷಗಳಿಂದ ಮಂಡಳಿಯೊಂದಿಗೆ ಪತ್ರ ವ್ಯವಹಾರ ನಡೆಸುತ್ತಿದ್ದಾರೆ. 42 ಅನಧೀಕೃತದಾರರನ್ನು ಸಕ್ರಮ ಗೊಳಿಸುವ ಸಲುವಾಗಿ, ಮಂಡಳಿ ಈಗಾಗಲೇ ಅನಧೀಕೃತದಾರರ ಪಟ್ಟಿಯನ್ನೂ ಸಿದ್ದಪಡಿಸಿದೆ.

ವಸತಿ ಸಚಿವ ಬಿ.ಝೆಡ್.ಜಮೀರ್ ಅಹ್ಮದ್ ಖಾನ್

ಈ ಹಿನ್ನೆಲೆಯಲ್ಲಿ, ಸದರಿ ಮನೆಗಳನ್ನು ಘೋಷಿತ ಕೊಳಗೇರಿ ನಿವಾಸಿಗಳಿಗೆ ಹಂಚಿಕೆ ಮಾಡದೆ, ಅನುಕೂಲಸ್ಥ ವರ್ಗದವರಿಗೆ ಹಂಚಿಕೆ ಮಾಡಿರುವುದರ ವಿರುದ್ಧ ಜನಶಕ್ತಿ ವೇದಿಕೆ 2015ರಲ್ಲಿ ಮಾನ್ಯ ಲೋಕಾಯುಕ್ತರಲ್ಲಿ ದೂರು ದಾಖಲಿಸಿದೆ. ಪ್ರಕರಣ ಸಂಖ್ಯೆ: ಕಂಪ್ಲೆಂಟ್/ಲೋಕ್/ಬಿಸಿಡಿ/844/2015. ಸದರಿ ಪ್ರಕರಣಲ್ಲಿ ಮಾನ್ಯ ಲೋಕಾಯುಕ್ತರು, ಫಲಾನುಭವಿಗಳ ಪಟ್ಟಿಗೆ ಅನುಮೋದನೆ ನೀಡಿದ 9 ಜನರನ್ನು ಅಪರಾಧಿಗಳೆಂದು ತೀರ್ಮಾನಿಸಿ ಎಲ್ಲರಿಗೂ ಸಮನ್ಸ್ ಜಾರಿ ಮಾಡಿದ್ದಾರೆ; ಪ್ರಕರಣ ಬಾಕಿಯಿದೆ.

ಮೇಲಿನ 208 ಮನೆಗಳ ಪೈಕಿ, ಹಂಚಿಕೆ ಪಡೆದ 166 ಫಲಾನುಭವಿಗಳಲ್ಲಿ ಬಹುಪಾಲರು ಅನುಕೂಲಸ್ಥ ವರ್ಗದವರಾಗಿರುವುದರಿಂದ ಸದರಿ ಮನೆಗಳಿಗೆ ಯಾರೂ ವಾಸಕ್ಕೆ ಬರುತ್ತಿಲ್ಲ. ರಸ್ತೆ ಅಗಲೀಕರಣದಿಂದ ಮನೆಗಳನ್ನು ಕಳೆದುಕೊಂಡವರೊಂದಿಗೆ ಸೇರಿ ಸುಮಾರು 50 ಕುಟುಂಬಗಳು ಮಾತ್ರ ಇಲ್ಲಿ ವಾಸ ಮಾಡುತ್ತಿವೆ. ಅದರಲ್ಲೂ ಕೆಲವರು ಮನೆಗಳನ್ನು ಬಾಡಿಗೆಗೆ ಬಿಟ್ಟು ಹೊರಗಿನಿಂದ ಹಣ ಪಡೆಯುತ್ತಿದ್ದಾರೆ.

ಮಾಜಿ ಸಚಿವರು ಹಾಗೂ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಶಾಸಕ ಬೈರತಿ ಬಸವರಾಜು

ಮೇಲಿನಂತೆಯೇ ಸದರಿ ಪ್ರದೇಶದಲ್ಲಿ ಮತ್ತೆ PMAY-HFA ಯೋಜನೆಯಡಿ ಕೊಳಗೇರಿ ಮಂಡಳಿ 768 ಮನೆಗಳನ್ನು ನಿರ್ಮಿಸಿದ್ದು, ಅದನ್ನು ಕೂಡ ಕ್ರಮವಾಗಿ ಕೊಳಗೇರಿ ಬಡಜನರಿಗೆ ಹಂಚಿಕೆ ಮಾಡದೆ, ಮಂಡಳಿಯ ಕಾಯ್ದೆ-ಮಾರ್ಗಸೂಚಿಗಳಿಗೆ ವಿರುದ್ಧವಾಗಿ, ಆಶ್ರಯ ಸಮಿತಿಯ ಹೆಸರಿನಲ್ಲಿ ಇತರ ಅನುಕೂಲಸ್ಥ ವರ್ಗದವರಿಗೆ ಹಂಚಿಕೆ ಮಾಡಲು ಮಂಡಳಿ ಮುಂದಾಗಿದೆ. ಈ ಸಂಬಂಧ ಮಾಜಿ ಸಚಿವರು ಹಾಗೂ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೈರತಿ ಬಸವರಾಜು, ಮಂಡಳಿಯ ಆಯುಕ್ತರಾಗಿದ್ದು ಪ್ರಸ್ತುತ ನಿವೃತ್ತಿ ಹೊಂದಿರುವ ಬಿ.ವೆಂಕಟೇಶ್ ಹಾಗೂ  ಬೇರೆಡೆಗೆ ಸ್ಥಳಾಂತರಗೊಂಡಿರುವ ನಂ.2ನೇ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚರಣ್‌ರಾಜ್ ವಿರುದ್ಧವೂ ಲೋಕಾಯುಕ್ತರಲ್ಲಿ ದೂರು ದಾಖಲಾಗಿದೆ. ಪ್ರಕರಣ ಸಂಖ್ಯೆ: ಕಂಪ್ಲೆಂಟ್/ಲೋಕ್/ಬಿಸಿಡಿ/1267/2024. ಆದರೂ ಸದರಿ ಮನೆಗಳನ್ನು ಹಂಚಿಕೆ ಮಾಡಲು ಮಂಡಳಿ ಆತುರ ತೋರಿಸುತ್ತಿದೆ.

ಈ ಮೇಲಿನ ಎಲ್ಲಾ ಅಂಶಗಳನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಬಂಡವಾಳ ಮಾಡಿಕೊಂಡಿರುವ ಸದರಿ ಪ್ರದೇಶದ ನಿವಾಸಿಯಾದ ಕೆ.ಸಿ.ಪವಿತ್ರ ಆತನ ಗಂಡ ಗಿರೀಶ್ ಹಾಗೂ ನಾರಾಯಣಪುರ ಬಿಜೆಪಿ ಮುಖಂಡ ಲೋಕೇಶ್ ಮುಂತಾದವರು ಶಾಸಕರಾದ ಬೈರತಿ ಬಸವರಾಜು ಅವರ ಹೆಸರನ್ನು ಹೇಳಿಕೊಂಡು, ಪ್ರಭಾವ ಬಳಸಿ, ಖಾಲಿ ಬಿದ್ದಿರುವ ಮನೆಗಳನೆಲ್ಲ ಮಾರಾಟ ಮಾಡುತ್ತಿದ್ದಾರೆ. ಮತ್ತು ಬಾಡಿಗೆಗೆ ಕೊಡುತ್ತಿದ್ದಾರೆ. ಇದರ ಬಗ್ಗೆ ಮಂಡಳಿಯಲ್ಲಿ ದೂರು ನೀಡಿದರೂ ಸಂಬಂಧಪಟ್ಟ ಉಪ ವಿಭಾಗದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬದಲಾಗಿ, ಇವರೊಂದಿಗೆ ಸೇರಿಕೊಂಡು ಇವರು ಮಾಡುತ್ತಿರುವ ಅಕ್ರಮಗಳಿಗೆ ಸಹಾಯ ಮಾಡುತ್ತಿದ್ದಾರೆ.

ನಾರಾಯಣಪುರ ಬಿಜೆಪಿ ಮುಖಂಡ ಲೋಕೇಶ್ ಹಾಗೂ ಪವಿತ್ರ ಆತನ ಗಂಡ ಗಿರೀಶ್

ಸದರಿ ಪ್ರದೇಶದಲ್ಲಿ ವಾಸವಾಗಿರುವ 42 ಅನಧೀಕೃತದಾರರ ಮೇಲೆ ದಿನನಿತ್ಯವೂ ಯಾವುದಾದರೂ ಒಂದು ಕಾರಣ ಹೇಳಿ ದಬ್ಬಾಳಿಕೆ ಮಾಡುತ್ತಾ ಅವರಲ್ಲಿನ ಕೆಲವರ ಮನೆಗಳನ್ನು ಬಲವಂತವಾಗಿ ಖಾಲಿ ಮಾಡಿಸಿ ಆ ಮನೆಗಳನ್ನೂ ಮಾರಾಟ ಮಾಡುತ್ತಿದ್ದಾರೆ. ಈ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಇವರ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ್ಲ. ನ್ಯಾಯಾಲಯಕ್ಕೆ ತೆರಳಿ PCR ಹೂಡಿ, FIR ದಾಖಲಿಸಿದರೂ ಶಾಸಕರಾದ ಬೈರತಿ ಬಸವರಾಜು ಅವರ ಪ್ರಭಾವ ಬಳಸಿ, ಬಿ ರಿಪೋರ್ಟ್ ಹಾಕಿ ಪ್ರಕರಣವನ್ನು ಹಿಂದೆಕ್ಕೆ ಪಡೆಯುತ್ತಾರೆ.

ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿದ ಸಮುದಾಯ ಭವನವನ್ನು ಸಂಘದ ಹೆಸರಿನಲ್ಲಿ ಪಡೆದುಕೊಂಡ ಪವಿತ್ರ ಆತನ ಗಂಡ ಗಿರೀಶ್ ಹಾಗೂ ನಾರಾಯಣಪುರ ಲೋಕೇಶ್ ತಮ್ಮ ಸ್ವಂತಕ್ಕೆ-ಸ್ವಾರ್ಥಕ್ಕೆ ಬಳಸಿಕೊಂಡು, ಮಾಡಬಾರದ ಅಕ್ರಮಗಳನ್ನು ಮಾಡುತ್ತಿದ್ದಾರೆ. ಸಮುದಾಯ ಭವನದ ಕೊಠಡಿಗಳನೆಲ್ಲ ಬಾಡಿಗೆಗೆ ನೀಡಿದ್ದಾರೆ. ಒಂದು ಕೊಠಡಿಯ ಕಿಟಕಿಯನ್ನು ಹೊಡೆದು, ಅದಕ್ಕೆ ದೊಡ್ಡ ಬಾಗಿಲನ್ನು ಅಳವಡಿಸಿ, ಚಿಕನ್ ಅಂಗಡಿಗೆ ಬಾಡಿಗೆ ಬಿಟ್ಟಿದ್ದಾರೆ. ಬಲವಂತವಾಗಿ ಖಾಲಿ ಮಾಡಿಸುವ ಮನೆಗಳ ಸಾಮಾನುಗಳನ್ನು ತುಂಬಿಡಲು ಸಭಾಂಗಣವನ್ನು ಗೋಡನ್ ಮಾಡಿಕೊಂಡಿದ್ದಾರೆ. ಅಂಬೇಡ್ಕರ್ ಭಾವಚಿತ್ರವಿರುವ ಜನಶಕ್ತಿ ವೇದಿಕೆಯ ನಾಮಫಲಕವನ್ನು ಬಲವಂತದಿಂದ ಕಿತ್ತು, ಒಂದು ಕೋಣೆಯಲ್ಲಿ ಕಸದ ರಾಶಿಯಂತೆ ಎಸೆದು, ಅಂಬೇಡ್ಕರ್ ಮತ್ತು ದಲಿತರಿಗೆ ಅಪಮಾನ ಮಾಡಿದ್ದಾರೆ. ಒಂದು ಮಳಿಗೆಯಲ್ಲಿ ಪವಿತ್ರ ಮತ್ತು ಆತನ ಗಂಡ ಗಿರೀಶ್ ಚಿಲ್ಲರೆ ಅಂಗಡಿ ತೆರೆದಿದ್ದಾರೆ. ಪಕ್ಕದ ಒಂದು ಮಳಿಗೆಯನ್ನು ಲೋಕೇಶ್ ಕಛೇರಿಯನ್ನಾಗಿ ಮಾಡಿಕೊಂಡು ಇಲ್ಲಿ ಅಕ್ರಮ ವ್ಯವಹಾರ ನಡೆಸುತ್ತಿದ್ದಾರೆ.

ಚಿಕನ್ ಅಂಗಡಿ

ಪವಿತ್ರ ಆತನ ಗಂಡ ಗಿರೀಶ್ ಹಾಗೂ ನಾರಾಯಣಪುರ ಲೋಕೇಶ್, ಮನೆಗಳಿಗೆ ಹಕ್ಕು ಪತ್ರ ಕೊಡಿಸುವುದಾಗಿ ಹೇಳಿ, ಪ್ರತಿ ಮನೆಗೆ 5100 ರೂ.ಗಳನ್ನು ವಸೂಲಿ ಮಾಡಿದ್ದಾರೆ. ಆದರೆ, ಯಾರಿಗೂ ಇದುವರೆಗೆ ಹಂಚಿಕೆ ಪತ್ರ ಕೊಡಿಸಲಿಲ್ಲ. ಇವರು ಸಕಾಲದಲ್ಲಿ ಸಲ್ಲಿಸಿದ್ದ ನೂರಾರು ಅರ್ಜಿಗಳನ್ನು ಮಂಡಳಿ ಈಗಾಗಲೇ ತಿರಸ್ಕರಿಸಿದೆ. ಅದೇ ರೀತಿ ನಗರೇಶ್ವರ ನಾಗೇನಹಳ್ಳಿ ಪ್ರದೇಶದಲ್ಲಿ PMAY-HFA ಯೋಜನೆಯಡಿ ಕೊಳಗೇರಿ ಮಂಡಳಿ ನಿರ್ಮಿಸಿರುವ 768 ಮನೆಗಳಲ್ಲಿ ಮನೆ ಕೊಡಿಸುವುದಾಗಿ ನಂಬಿಸಿ, ಪವಿತ್ರ ಆತನ ಗಂಡ ಗಿರೀಶ್ ಹಾಗೂ ನಾರಾಯಣಪುರ ಲೋಕೇಶ್ ಮುಂತಾದವರು ನೂರಾರು ಜನರಿಂದ ದೊಡ್ಡ ಮಟ್ಟದಲ್ಲಿ ಹಣ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ ಎಂದು ಅಪಾದಿಸಿರುವ ಜನಶಕ್ತಿ ವೇದಿಕೆ,

ಮಾಜಿ ಸಚಿವರು ಹಾಗೂ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೈರತಿ ಬಸವರಾಜು ಅವರೊಂದಿಗೆ ಸೇರಿಕೊಂಡು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಆಶ್ರಯ ಸಮಿತಿಯ ಹೆಸರಿನಲ್ಲಿ, PMAY-HFA ಯೋಜನೆಯಡಿ ನಿರ್ಮಿಸಿರುವ 768 ಕೊಳಗೇರಿ ಮನೆಗಳನ್ನು ಮಂಡಳಿಯ ಕಾಯ್ದೆ-ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಅನುಕೂಲಸ್ಥ ವರ್ಗದವರಿಗೆ ಹಂಚಿಕೆ ಮಾಡಲು, ಅಕ್ರಮವಾಗಿ ತಯಾರಿಸಿರುವ ಫಲಾನುಭವಿಗಳ ಪಟ್ಟಿಯನ್ನು ಕೈಬಿಟ್ಟು, ಸದರಿ ಮನೆಗಳನ್ನು ನಿಜವಾದ ಕೊಳಗೇರಿ ಬಡಜನರಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಬಾಡಿಗೆಗೆ ನೀಡಿರುವ ಸಮುದಾಯ ಭವನದ ಕೊಠಡಿ

ಅದೇ ರೀತಿ, NURM-BSUP ಯೋಜನೆಯಡಿ ನಿರ್ಮಿಸಿ ಹಂಚಿಕೆ ಮಾಡಿರುವ 208 ಮನೆಗಳ ವಿಚಾರದಲ್ಲಿ ಲೋಕಾಯುಕ್ತರ ಅಂತಿಮ ಆದೇಶ ಬರುವವರೆಗೂ 166 ಫಲಾನುಭವಿಗಳಿಗೆ ಹಂಚಿಕೆ ಪತ್ರ ನೀಡುವುದನ್ನು ತಡೆಯಿಡಿಯಬೇಕೆಂಬ ಪ್ರಮುಖವಾದ ಬೇಡಿಕೆಯನ್ನೂ ಮುಂದಿಟ್ಟಿದೆ.

ಪವಿತ್ರ ಆತನ ಗಂಡ ಗಿರೀಶ್ ಹಾಗೂ ನಾರಾಯಣಪುರ ಬಿಜೆಪಿ ಮುಖಂಡ ಲೋಕೇಶ್ ಅವರು ಅಕ್ರಮವಾಗಿ ಕೂಟವನ್ನು ಸೇರಿಸಿಕೊಂಡು, ಮಾರಾಟ ಮಾಡಿರುವ ಮತ್ತು ಬಲವಂತವಾಗಿ ಖಾಲಿಮಾಡಿಸಿರುವ ಮನೆಗಳನ್ನು ಹಾಗೂ ಬಾಡಿಗೆಗೆ ಬಿಟ್ಟಿರುವ ಮನೆಗಳನ್ನು ಈ ಕೂಡಲೇ ತೆರವುಗೊಳಿಸಿ ಸಂಬಂಧಪಟ್ಟವರಿಗೆ ಮರಳಿ ನೀಡಬೇಕು. ಸಮುದಾಯ ಭವನದಲ್ಲಿರುವ ಅಂಗಡಿಗಳನ್ನು ಖಾಲಿ ಮಾಡಿಸಿ, ನಿರ್ವಹಣೆ ಮಾಡಲು ಅದನ್ನು ಅರ್ಹರಿಗೆ ನೀಡಬೇಕು. ಸಮುದಾಯ ಭವನದಲ್ಲಿ ವಾಸವಾಗಿರುವ ಎಲ್ಲರನ್ನೂ ತೆರವುಗೊಳಿಸಿ ಸಾರ್ವಜನಿಕ ಬಳಕೆಗೆ ನೀಡಬೇಕು.

ಗೋಡನ್ ಮಾಡಿಕೊಂಡಿರುವ ಸಮುದಾಯ ಭವನದ ಸಭಾಂಗಣ

ಈ ಕೂಡಲೇ ಪವಿತ್ರ ಆತನ ಗಂಡ ಗಿರೀಶ್ ಹಾಗೂ ನಾರಾಯಣಪುರ ಬಿಜೆಪಿ ಮುಖಂಡ ಲೋಕೇಶ್ ಮುಂತಾದವರನ್ನು ಸಂಘಟಿತ ಅಪರಾಧ, ಬೆದರಿಕೆ, ವಂಚನೆ, ಅತಿಕ್ರಮ ಪ್ರವೇಶ, ಸರ್ಕಾರಿ ಆಸ್ತಿಗಳಿಗೆ ಹಾನಿ ಹಾಗೂ ಎಸ್.ಸಿ/ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆಯಡಿ ಬಂಧಿಸಿ ವಿಚಾರಣೆಗೆ ಒಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಮಾನ್ಯ ವಸತಿ ಸಚಿವರಾದ ಬಿ.ಝೆಡ್.ಜಮೀರ್ ಅಹ್ಮದ್ ಖಾನ್ (B.Z.Zameer Ahmed Khan) ಅವರು ಸೂಚಿಸಬೇಕೆಂದು ಒತ್ತಾಯಿಸಿ, ನವಂಬರ್ 4 ರಂದು ಬೆಳಿಗ್ಗೆ 10.೦೦ ಗಂಟೆಗೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನಾ ಧರಣಿಯನ್ನು ಹಮಿಕೊಳ್ಳಲಾಗಿದೆ.

ಸದರಿ ಪ್ರತಿಭಟನಾ ಧರಣಿಯಲ್ಲಿ, ದಲಿತ ವಿಮೋಚನಾ ಸೇನೆ (DVS) (ರಿ), ಅಖಿಲ ಭಾರತ ಮಾನವ ಹಕ್ಕುಗಳ ಸಂಸ್ಥೆ (AIHRO), ಬೆಂಗಳೂರು ಗುಡಿಸಲು ನಿವಾಸಿಗಳ ಒಕ್ಕೂಟ (BSDF), ಕರ್ನಾಟಕ ಮಹಿಳಾ ಆಟೋ ಡ್ರೈವರ್ಸ್ ಯೂನಿಯನ್ (KWADU), ಅಖಿಲ ಕರ್ನಾಟಕ ದಲಿತ ರಕ್ಷಣಾ ವೇದಿಕೆ (AKDRV) ಹಾಗೂ ಕರ್ನಾಟಕ ಶ್ರಮಿಕ ಮಹಿಳಾ ಸಂಘ (KSMS) ಮುಂತಾದ ಸಂಘಟನೆಗಳು ಭಾಗವಹಿಸಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. 

PMAY-HFA ಮನೆಗಳು

ರಾಜಕೀಯ

ಬೆಂಗಳೂರು: ದಲಿತರ ಭೂಮಿಯನ್ನು ಕಬಳಿಸಿರುವುದಲ್ಲದೆ, ಅವರ ಮೇಲೆ ದೌರ್ಜನ್ಯ ಎಸಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರಾದ ಡಿ.ಸುಧಾಕರ್ ವಿರುದ್ಧ ನಾಳೆ (13.09.2023) ಬೆಳಿಗ್ಗೆ 11.00 ಗಂಟೆಯ ಸಮಯಕ್ಕೆ ಬೆಂಗಳೂರು ನಗರ ಜೆಡಿಎಸ್ ವತಿಯಿಂದ  ಉಗ್ರ ಪ್ರತಿಭಟನೆಯನ್ನು ಏರ್ಪಡಿಸಲಾಗಿದೆ.

“ಸೆವೆನ್‌ ಹಿಲ್ಸ್‌ ಡೆವಲಪರ್ಸ್‌ ಮತ್ತು ಟ್ರೇಡರ್ಸ್‌ ಕಂಪನಿಯ ಪಾಲುದಾರರಾದ ಸಚಿವ ಡಿ.ಸುಧಾಕರ್‌ ಅವರು ಮೋಸದಿಂದ ಯಲಹಂಕ ಗ್ರಾಮದ ಸರ್ವೇ ನಂಬರ್‌ 108/1ರ ಜಮೀನು ಕಬಳಿಸಿದ್ದಾರೆ. ಈ ಜಮೀನಿನ ವಿವಾದದ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗಲೇ ಸಚಿವರು ಗುಂಪು ಕಟ್ಟಿಕೊಂಡು ಬಂದು ದೌರ್ಜನ್ಯ ಎಸಗಿದ್ದಾರೆ. ಮನೆಯಲ್ಲಿದ್ದ ತಮ್ಮ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಕುಟುಂಬದ ಮಹಿಳೆಯರನ್ನು ಹೊರಗೆ ಎಳೆದೊಯ್ದು ಜೆಸಿಬಿ ಮೂಲಕ ಮನೆಯನ್ನು ಕೆಡವಿದ್ದಾರೆ” ಎಂದು ಸುಬ್ಬಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕಮಲದ ಹೂವುಗಳಿಂದ ಕೂಡಿದ ಹೊಸ ಸಮವಸ್ತ್ರ!

ಸುಬ್ಬಮ್ಮ ಅವರ ಮಗಳು ಆಶಾ ಮೇಲೂ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಸಚಿವರ ನಡೆಯನ್ನು ಪ್ರಶ್ನೆ ಮಾಡಿದಾಗ ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಲಾಗಿದೆ.

ಸುಬ್ಬಮ್ಮ ಹಾಗೂ ಆಶಾ ಎಂಬುವರು ನೀಡಿದ ದೂರು ಆಧರಿಸಿ ಸಚಿವ ಸುಧಾಕರ್‌, ಶ್ರೀನಿವಾಸ್‌ ಮತ್ತು ಭಾಗ್ಯಮ್ಮ ಹಾಗೂ ಇತರ 35 ಮಂದಿ ವಿರುದ್ಧ ದಲಿತರ ಮೇಲೆ ದೌರ್ಜನ್ಯ, ವಂಚನೆ, ಹಲ್ಲೆ ಹಾಗೂ ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಸಚಿವ ಡಿ.ಸುಧಾಕರ್‌ ಅವರು ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾರೆ ಎಂದು ಯಲಹಂಕ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಹಾಗೂ ವ್ಲಾಡಿಮಿರ್‌ ಪುಟಿನ್‌ ಭೇಟಿ: ಶಸ್ತ್ರಾಸ್ತ್ರ ಶೃಂಗಸಭೆಯಲ್ಲಿ ಭಾಗವಹಿಸುವಿಕೆ!

ದಲಿತರ ಭೂಮಿಯನ್ನು ಕಬಳಿಸಿರುವುದಲ್ಲದೆ, ಅವರ ಮೇಲೆ ದೌರ್ಜನ್ಯ ಎಸಗಿರುವ ಸಚಿವ ಡಿ.ಸುಧಾಕರ್ ಅವರನ್ನು ಕೂಡಲೇ ಸಂಪುಟದಿಂದ ಕೈ ಬಿಡಬೇಕು ಮತ್ತು ಬಂಧಿಸಬೇಕು ಎಂದು ಒತ್ತಾಯಿಸಿರುವ ಬೆಂಗಳೂರು ನಗರ ಜೆಡಿಎಸ್ ನಾಳೆ ಬೆಳಿಗ್ಗೆ 11.00 ಗಂಟೆಯ ಸಮಯಕ್ಕೆ ಶೇಷಾದ್ರಿ ರಸ್ತೆಯಲ್ಲಿರುವ ಫ್ರೀಡಂ ಪಾರ್ಕ್ ನಲ್ಲಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ಮುಖಂಡರುಗಳು, ಮಾಜಿ ಸಚಿವರು, ಮಾಜಿ ಸಂಸದರು, ಶಾಸಕರು, ಮಾಜಿ ಶಾಸಕರು, ಬಿಬಿಎಂಪಿ ಮಾಜಿ ಸದಸ್ಯರು, ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರ ಅಧ್ಯಕ್ಷರುಗಳು, ವಿವಿಧ ವಿಭಾಗಗಳ ಅಧ್ಯಕ್ಷರುಗಳು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ತಿಳಿಸಿದ್ದಾರೆ.   

ಇದನ್ನೂ ಓದಿ: ಸನಾತನದ ವಿರುದ್ಧ ಮಾತನಾಡುವವರ ನಾಲಿಗೆಯನ್ನು ಕಿತ್ತೊಗೆಯಬೇಕು! ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್