ಪಾಟ್ನಾ: ಬಿಹಾರದ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಮತ್ತು ಅವರ ತಾಯಿಯನ್ನು ಅವಮಾನಿಸಿದ್ದಕ್ಕಾಗಿ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅಸ್ಸಾಂನ ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ, “ರಾಹುಲ್ ಗಾಂಧಿಯವರ ಬಳಿ ಏನಾದರೂ ಸದ್ಭಾವನೆ ಉಳಿದಿದ್ದರೆ ಅವರು ಮೋದಿ, ಅವರ ದಿವಂಗತ ತಾಯಿ ಮತ್ತು ಈ ದೇಶದ ಜನರ ಬಳಿ ಕ್ಷಮೆಯಾಚಿಸಬೇಕು ಎಂದು ನಾನು ಒತ್ತಾಯಿಸಲು ಬಯಸುತ್ತೇನೆ. ದೇವರು ಎಲ್ಲರಿಗೂ ಜ್ಞಾನವನ್ನು ನೀಡಲಿ. ಎರಡು ದಿನಗಳ ಹಿಂದೆ ನಡೆದ ಘಟನೆ ಎಲ್ಲರನ್ನೂ ನೋಯಿಸಿದೆ.
ಖಂಡಿಸುತ್ತೇನೆ
ಬಡ ಕುಟುಂಬದಲ್ಲಿ ವಾಸಿಸುತ್ತಿದ್ದ ಮೋದಿಯವರ ತಾಯಿ ತಮ್ಮ ಮಕ್ಕಳನ್ನು ಮೌಲ್ಯಗಳೊಂದಿಗೆ ಬೆಳೆಸಿ, ತಮ್ಮ ಮಗನನ್ನು ವಿಶ್ವಾಸಾರ್ಹ ನಾಯಕನನ್ನಾಗಿ ಮಾಡಿದ್ದಾರೆ. ಅಂತಹ ಬದುಕಿಗೆ ಅವಹೇಳನಕಾರಿ ಪದಗಳನ್ನು ಬಳಸುವುದನ್ನು ಭಾರತದ ಜನರು ಎಂದಿಗೂ ಸಹಿಸುವುದಿಲ್ಲ. ರಾಜಕೀಯ ಜೀವನದಲ್ಲಿ ಇದಕ್ಕಿಂತ ದೊಡ್ಡ ಪತನ ಇನ್ನೊಂದಿಲ್ಲ, ನಾನು ಇದನ್ನು ಬಲವಾಗಿ ಖಂಡಿಸುತ್ತೇನೆ.
ಪಾದಯಾತ್ರೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ತಾಯಿಯ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸುವ ಮೂಲಕ ಕಾಂಗ್ರೆಸ್ ನಾಯಕರು ಅತ್ಯಂತ ಖಂಡನೀಯ ಕೃತ್ಯ ಎಸಗಿದ್ದಾರೆ. ನಾನು ಅದನ್ನು ಖಂಡಿಸುತ್ತೇನೆ. ಪ್ರತಿಯೊಬ್ಬ ಕಾಂಗ್ರೆಸ್ ನಾಯಕರೂ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ.
ದ್ವೇಷ ಸಂಸ್ಕೃತಿ
ರಾಜಕೀಯದಲ್ಲಿ ದ್ವೇಷ ಸಂಸ್ಕೃತಿಯನ್ನು ಹರಡಲು ಕಾಂಗ್ರೆಸ್ ಕಾರಣವಾಗಿದೆ. ಕಾಂಗ್ರೆಸ್ ನಿಂದನೆಗಳು ಹೆಚ್ಚಾದಷ್ಟೂ ಬಿಜೆಪಿ ಗೆಲ್ಲುತ್ತದೆ. ರಾಹುಲ್ ತಮ್ಮ ಪಾದಯಾತ್ರೆಯ ಮೂಲಕ ಬಿಹಾರದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ” ಎಂದು ಅಮಿತ್ ಶಾ ಹೇಳಿದ್ದಾರೆ.
ಹಿಂಸಾಚಾರ ಏಕೆ?
ಮತಗಳ್ಳತನ ವಿರೋಧಿಸಿ ನಡೆಯುತ್ತಿರುವ ಮತದಾರ ಅಧಿಕಾರ ಯಾತ್ರೆ ಸಮಯದಲ್ಲಿ ಕಾಂಗ್ರೆಸ್ ಧ್ವಜ ಹಿಡಿದ ವ್ಯಕ್ತಿಯೋರ್ವ, ಪ್ರಧಾನಿ ಮೋದಿ ಮತ್ತು ಅವರ ದಿವಂಗತ ತಾಯಿ ಹೀರಾಬೆನ್ ಮೋದಿ ವಿರುದ್ಧ ಅಶ್ಲೀಲ ಪದ ಬಳಸಿದ್ದ ವಿಡಿಯೋ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಧಾನಿ ಮೋದಿ ಮತ್ತು ಅವರ ದಿವಂಗತ ತಾಯಿ ಬಗ್ಗೆ ಅವಾಚ್ಯ ಪದ ಬಳಸಿದ್ದ ಕಾಂಗ್ರೆಸ್ ಕಾರ್ಯಕರ್ತನನ್ನು ಬಂಧಿಸಲಾಗಿದೆ ಎಂದು ದರ್ಭಂಗಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ.