ರಾಜಪಕ್ಸೆ ಸಹೋದರರು ಕೆನಡಾ ಪ್ರವೇಶಿಸಲು ನಿಷೇಧ! ವಿದೇಶಾಂಗ ಸಚಿವೆ ಮೆಲಾನಿ ಜೋಲಿ.
ಡಿ.ಸಿ.ಪ್ರಕಾಶ್, ಸಂಪಾದಕರು
ಎಲ್‌ಟಿಟಿಇ ವಿರುದ್ಧ ಶ್ರೀಲಂಕಾ ಸರ್ಕಾರ ನಡೆಸಿದ ಯುದ್ಧದ ಸಂದರ್ಭದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಮಹಿಂದ ರಾಜಪಕ್ಸೆ ಸೇರಿದಂತೆ ನಾಲ್ವರು ಕೆನಡಾ ಪ್ರವೇಶಿಸುವುದನ್ನು ಕೆನಡಾ ಸರ್ಕಾರ ನಿಷೇಧಿಸಿದೆ. 1983 ರಿಂದ 2009 ರವರೆಗೆ ಎಲ್‌ಟಿಟಿಇ ಮತ್ತು ಶ್ರೀಲಂಕಾ ಸರ್ಕಾರದ ನಡುವೆ ಸಶಸ್ತ್ರ ಯುದ್ಧ ನಡೆದಿತ್ತು. 2009ರಲ್ಲಿ ಶ್ರೀಲಂಕಾ ಸರ್ಕಾರವು ಎಲ್‌ಟಿಟಿಇ ನಾಯಕ ಪ್ರಭಾಕರನ್ ಯುದ್ಧದ ಉತ್ತುಂಗದ ಸಮಯದಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟರು ಎಂದು ಘೋಷಿಸಿತು.
‘ಯುದ್ಧದ ಸಮಯದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಮಹಿಂದ ರಾಜಪಕ್ಸೆ ಭಾಗಿಯಾಗಿದ್ದಾರೆ ಎಂದು ಅನೇಕ ಮಾನವ ಹಕ್ಕುಗಳ ಆಯೋಗಗಳು ಶ್ರೀಲಂಕಾ ಸರ್ಕಾರವನ್ನು ಆರೋಪಿಸಿತ್ತು. ಈ ಹಿನ್ನಲೆಯಲ್ಲಿ ಕೆನಡಾದ ವಿಶೇಷ ಆರ್ಥಿಕ ಕ್ರಮಗಳ ಕಾಯ್ದೆಯಡಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಭಾಗಿಯಾಗಿರುವ ಮಹಿಂದ ರಾಜಪಕ್ಸೆ ಸೇರಿದಂತೆ ನಾಲ್ವರ ಪ್ರವೇಶಕ್ಕೆ ಕೆನಡಾ ಸರ್ಕಾರ ನಿರ್ಬಂಧಗಳನ್ನು ವಿಧಿಸಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲಾನಿ ಜೋಲಿ ನಿನ್ನೆ ಘೋಷಿಸಿದ್ದಾರೆ.
‘ಮತ್ತು ವಿಶೇಷ ಆರ್ಥಿಕ ಕ್ರಮಗಳ ಕಾಯಿದೆಯಡಿ, ಅವರ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಮತ್ತು ಪೌರತ್ವ ಹಾಗೂ ನಿರಾಶ್ರಿತರ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಕೆನಡಾಕ್ಕೆ ಪ್ರವೇಶಿಸದಂತೆ ಅವರನ್ನು ನಿರ್ಬಂಧಿಸಬಹುದು’ ಎಂದು ಮೆಲಾನಿ ಜೋಲಿ ಹೇಳಿದರು.
ಶ್ರೀಲಂಕಾದಲ್ಲಿ ಪ್ರಸ್ತುತ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಜನರು ನರಳುತ್ತಿರುವುದನ್ನು ಮತ್ತು ಆಡಳಿತಗಾರರು ಪಲಾಯನ ಮಾಡುತ್ತಿರುವುದನ್ನು ಈ ಜಗತ್ತೆ ವಿಶ್ಮಯದಿಂದ ನೋಡಿದೆ. ಈ ಪರಿಸ್ಥಿತಿಯಲ್ಲಿ ಕೆನಡಾ ಸರ್ಕಾರದ ಈ ಘೋಷಣೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
‘ಕೆನಡಾ ಸರ್ಕಾರವು ಶ್ರೀಲಂಕಾವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಕಳೆದ ನಾಲ್ಕು ದಶಕಗಳಿಂದಲೂ ಶ್ರೀಲಂಕಾದ ಜನರು ಸಶಸ್ತ್ರ ಸಂಘರ್ಷಗಳು, ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಿಂದಾಗಿ ಅಪಾರವಾಗಿ ಬಳಲುತ್ತಿದ್ದಾರೆ. ಶ್ರೀಲಂಕಾದಲ್ಲಿ ಶಾಂತಿ, ಸೌಹಾರ್ದತೆ ಮತ್ತು ನ್ಯಾಯವನ್ನು ಕಾಪಾಡಲು ಕೆನಡಾ ಬದ್ಧವಾಗಿದೆ’.
‘ಅಂತರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವವರ ವಿರುದ್ಧ ಅಂತಾರಾಷ್ಟ್ರೀಯ ಶಿಕ್ಷೆಯನ್ನು ತರಲು ಕೆನಡಾ ಇಂದು ನಿರ್ಣಾಯಕ ಕ್ರಮ ಕೈಗೊಂಡಿದೆ. ದೇಶೀಯ ಬಿಕ್ಕಟ್ಟನ್ನು ಪರಿಹರಿಸಲು ಅಂತಾರಾಷ್ಟ್ರೀಯ ನೆರವಿನ ಮೂಲಕ ಶಾಂತಿ ಮತ್ತು ಅಭಿವೃದ್ಧಿಗೆ ಶ್ರೀಲಂಕಾದ ಮಾರ್ಗವನ್ನು ಬೆಂಬಲಿಸಲು ಕೆನಡಾ ಸಿದ್ಧವಾಗಿದೆ’. ಎಂದು ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಹೇಳಿದ್ದಾರೆ.