ಈಸ್ಟರ್ ಸಂಡೆ ದಾಳಿಗೆ 100 ಮಿಲಿಯನ್ ಪರಿಹಾರ ನೀಡುವಂತೆ ಶ್ರೀಲಂಕಾ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾಗೆ ಆದೇಶ!
ಶ್ರೀಲಂಕಾ: ಶ್ರೀಲಂಕಾ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಮತ್ತು ಇತರರಿಗೆ ಈಸ್ಟರ್ ಭಾನುವಾರದ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.
ಶ್ರೀಲಂಕಾದಲ್ಲಿ ಏಪ್ರಿಲ್ 21, 2019 ರಂದು ನಡೆದ ಭಯೋತ್ಪಾದಕ ಬಾಂಬ್ ದಾಳಿಯಲ್ಲಿ 269 ಜನರು ಸಾವನ್ನಪ್ಪಿದರು ಮತ್ತು 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
2019ರ ಏಪ್ರಿಲ್ 21ರಂದು ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಸಾಕಷ್ಟು ಗುಪ್ತಚರ ಮಾಹಿತಿ ಲಭ್ಯವಿದ್ದರೂ ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಮೂಲಭೂತ ಹಕ್ಕುಗಳ ಅರ್ಜಿಗಳ ತೀರ್ಪು ಇಂದು ಪ್ರಕಟವಾಯಿತು.
ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಹಾಗೂ ಇತರರ ವಿರುದ್ಧ ಸಲ್ಲಿಕೆಯಾಗಿದ್ದ ಮೂಲಭೂತ ಹಕ್ಕುಗಳ ಅರ್ಜಿಗಳ ತೀರ್ಪನ್ನು ಇಂದು ಪ್ರಕಟಿಸುವುದಾಗಿ ಹೈಕೋರ್ಟ್ ಇದೇ ಜನವರಿ 5ರಂದು ಪ್ರಕಟಿಸಿತ್ತು. ಅದರಂತೆ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಪ್ಳಗೊಂಡ ವಿಭಾಗೀಯ ನ್ಯಾಯಪೀಠವು ಇಂದು ತೀರ್ಪು ಪ್ರಕಟಿಸಿತು.
ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಮಾಜಿ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೋ, ಮಾಜಿ ಪೊಲೀಸ್ ಮಹಾನಿರೀಕ್ಷಕ ಪೂಜಿತ್ ಜಯಸುಂದರ, ರಾಷ್ಟ್ರೀಯ ಗುಪ್ತಚರ ವಿಭಾಗದ ಮಾಜಿ ನಿರ್ದೇಶಕ ಸಿಸಿರ ಮೆಂಡಿಸ್ ಮತ್ತು ರಾಜ್ಯ ಗುಪ್ತಚರ ವಿಭಾಗದ ಮಾಜಿ ನಿರ್ದೇಶಕ ನಿಲಂತ ಜಯವರ್ಧನ ಅವರು ಈಸ್ಟರ್ ಭಾನುವಾರದ ದಾಳಿಯನ್ನು ತಡೆಯಲು ವಿಫಲರಾಗಿ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ತೀರ್ಪು ನೀಡಲಾಗಿದೆ. ಅಲ್ಲದೆ ಸಂತ್ರಸ್ತರಿಗೆ ಪರಿಹಾರವನ್ನು ನೀಡುವಂತೆಯೂ ನ್ಯಾಯಾಲಯ ತಮ್ಮ ಆದೇಶದಲ್ಲಿ ಸೂಚಿಸಿದೆ.
ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಗೆ 100 ಮಿಲಿಯನ್, ಮಾಜಿ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೋಗೆ 50 ಮಿಲಿಯನ್, ಮಾಜಿ ಪೊಲೀಸ್ ಮಹಾನಿರೀಕ್ಷಕ ಪೂಜಿತ್ ಜಯಸುಂದರ ಮತ್ತು ರಾಷ್ಟ್ರೀಯ ಗುಪ್ತಚರ ಸೇವೆಯ ಮಾಜಿ ಮುಖ್ಯಸ್ಥ ನೀಲಂತ ಜಯವರ್ಧನ ಅವರಿಗೆ 75 ಮಿಲಿಯನ್ ರೂಪಾಯಿಗಳನ್ನು ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಸಿಸಿರ ಮೆಂಡಿಸ್ ಸಂತ್ರಸ್ತರಿಗೆ 10 ಮಿಲಿಯನ್ ರೂಪಾಯಿ ಪರಿಹಾರ ನೀಡಬೇಕೆಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.