ಅದಾನಿ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಬೇಕು! ಸುಬ್ರಮಣಿಯನ್ ಸ್ವಾಮಿ.
ಡಿ.ಸಿ.ಪ್ರಕಾಶ್ ಸಂಪಾದಕರು.
ಅದಾನಿ ಸಮೂಹದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆಯು ಇತ್ತೀಚಗೆ ವರದಿಯೊಂದನ್ನು ಪ್ರಕಟಿಸಿತು. ಆ ವರದಿಯಲ್ಲಿ, ‘ಭಾರತೀಯ ಸಂಸ್ಥೆಯಾದ ಅದಾನಿ ಸಮೂಹವು ಕಳಪೆಯಾಗಿ ಷೇರು ನಿರ್ವಹಣೆ ಮಾಡಿರುವುದಕ್ಕೆ ಹಾಗೂ ಖಾತೆಯಲ್ಲಿ ವಂಚನೆ ಮಾಡಿರುವುದಕ್ಕೆ ಅಗತ್ಯವಾದ ಆದಾರಗಳನ್ನು ಸಂಗ್ರಹಿಸಿ, ನಮ್ಮ ಎರಡು ವರ್ಷಗಳ ತನಿಖೆಯ ಫಲಿತಾಂಶಗಳನ್ನು ನಾವು ಪ್ರಸ್ತುತಪಡಿಸುತ್ತಿದ್ದೇವೆ. ಅದಾನಿ ಸಮೂಹದ ಸಂಸ್ಥಾಪಕ ಹಾಗೂ ಅಧ್ಯಕ್ಷ ಗೌತಮ್ ಅದಾನಿ ಕಳೆದ ಮೂರು ವರ್ಷಗಳಲ್ಲಿ 100 ಬಿಲಿಯನ್ ನಿವ್ವಳ ಮೌಲ್ಯವನ್ನು ಸಂಗ್ರಹಿಸಿದ್ದಾರೆ.
ಅದಾನಿ ಸಮೂಹದ ಮಾಜಿ ಹಿರಿಯ ಅಧಿಕಾರಿಗಳು ಸೇರಿದಂತೆ ಡಜನ್‌ಗಟ್ಟಲೆ ಜನರೊಂದಿಗೆ ಮಾತನಾಡುವ ಮೂಲಕ ಸಾವಿರಾರು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಮತ್ತು ಸುಮಾರು ಅರ್ಧ ಡಜನ್ ದೇಶಗಳಿಗೆ ನೇರವಾಗಿ ಭೇಟಿ ನೀಡಿ, ಇದರ ಬಗ್ಗೆ ಸುಧೀರ್ಘವಾಗಿ ಅಧ್ಯಯನ ನಡಸಲಾಗಿದೆ’ ಎಂದು ಹೇಳಿತು.
ಅದಾನಿ ಸಮೂಹವು ಇದ್ನನ್ನು ನಿರಾಕರಿಸಿತು. ಮತ್ತೊಂದೆಡೆ, ಈ ವಿಚಾರದಲ್ಲಿ ಸೂಕ್ತ ತನಿಖೆ ನಡೆಯಬೇಕೆಂದು ಒತ್ತಾಯ ಮಾಡುತ್ತಿರುವ ವಿರೋಧ ಪಕ್ಷಗಳು, ಇದರಲ್ಲಿ ಬಿಜೆಪಿ ಹಾಗೂ ಪ್ರಧಾನಿ ಮೋದಿಗೆ ಸಂಬಂಧವಿದೆ ಎಂದೂ ಆರೋಪಿಸಿತು. ಇದರಿಂದಾಗಿ ಸಂಸತ್ತಿನ ಕಲಾಪಗಳು ನಡೆಯದೆ ಹಲವಾರು ಬಾರಿ ಮುಂದೂಡಲ್ಪಟ್ಟಿತು.
ಈ ನಡುವೆ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಈ ಕುರಿತು ನೀಡಿರುವ ಹೇಳಿಕೆಯಲ್ಲಿ, ‘ಪ್ರಧಾನಿ ನರೇಂದ್ರ ಮೋದಿಯವರು ಅದಾನಿ ಸಮೂಹದ ಎಲ್ಲಾ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಬೇಕು. ಆ ನಂತರ ಆ ಆಸ್ತಿಗಳನ್ನು ಹರಾಜು ಮಾಡಿ, ಆ ಹಣದಿಂದ ಅದಾನಿ ಸಮೂಹದಲ್ಲಿ ಹಣ ಕಳೆದುಕೊಂಡವರಿಗೆ ಸಹಾಯ ಮಾಡಬೇಕು. ಕಾಂಗ್ರೆಸ್ ಪಕ್ಷಕ್ಕೂ ಅದಾನಿಗೂ ಸಂಬಂಧವೇ ಇಲ್ಲ ಎಂಬಂತೆ ಕೆಲವರು ಮಾತನಾಡುತ್ತಿದ್ದಾರೆ. ಆದರೆ ಅನೇಕ ಕಾಂಗ್ರೆಸ್ಸಿಗರು ಅದಾನಿ ಸಂಪರ್ಕದಲ್ಲಿದ್ದಾರೆ ಎಂಬುದು ನನಗೆ ಗೊತ್ತು. ನನಗೆ ಕಾಂಗ್ರೆಸ್ ಬಗ್ಗೆ ಕಾಳಜಿ ಇಲ್ಲ. ಬಿಜೆಪಿಯ ಪ್ರಾಮಾಣಿಕತೆ ನೆಲೆಯೂರಬೇಕೆಂದು ನಾನು ಬಯಸುತ್ತೇನೆ’ ಎಂದು ತಿಳಿಸಿಳಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಅವರಿಗೆ ಸಂಸದ ಸ್ಥಾನ ನೀಡದ ಬಿಜೆಪಿ ಹಾಗೂ ಪ್ರಧಾನಿ ಮೋದಿಯ ವಿರುದ್ಧ ಅಸಮಾಧಾನವಿದೆ. ಆದ್ದರಿಂದ ಅದಾನಿ ವಿಚಾರವನ್ನು ಮೋದಿಯ ತಲೆಗೆ ಕಟ್ಟುತ್ತಿದ್ದಾರೆ. ಎಂದು ಕೆಲವು ಹಿರಿಯ ನಾಯಕರು ಹೇಳುತ್ತಿದ್ದಾರೆ. ಇವರಿಗೆ ನಿಜವಾಗಿಯೂ ಅದಾನಿ ಸಮೂಹದ ಎಲ್ಲಾ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಬೇಕು ಆ ಆಸ್ತಿಗಳನ್ನು ಹರಾಜು ಹಾಕಿ, ಆ ಹಣದಿಂದ ಅದಾನಿ ಸಮೂಹದಲ್ಲಿ ಹಣ ಕಳೆದುಕೊಂಡವರಿಗೆ ಸಹಾಯ ಮಾಡಬೇಕು ಎಂಬ ಮನಸ್ಸಿದ್ದರೆ, ತಾಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ವಿರುದ್ಧ ಪ್ರಕರಣ ದಾಖಲುಮಾಡಿದಂತೆ ಅದಾನಿಯ ವಿರುದ್ಧವೂ ಪ್ರಕರಣ ದಾಖಲು ಮಾಡಬೇಕು. ಆಗ ನಿಜವಾದ ಅಪರಾಧಿ ಯಾರೆಂದು ಜಗತ್ತಿಗೆ ಗೊತ್ತಾಗುತ್ತದೆ. ಮತ್ತು ಸುಬ್ರಮಣಿಯನ್ ಸ್ವಾಮಿಯ ಉದ್ದೇಶವೂ ಈಡೇರುತ್ತದೆ. ಅದನ್ನು ಬಿಟ್ಟು ‘ಪ್ರಧಾನಿ ನರೇಂದ್ರ ಮೋದಿಯವರು ಅದಾನಿ ಸಮೂಹದ ಎಲ್ಲಾ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಬೇಕು ಎಂದು ಹೇಳುವ ಸುಬ್ರಮಣಿಯನ್ ಸ್ವಾಮಿಯ ನಡೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯನ್ನು ಈ ಪ್ರಕರಣದಿಂದ ರಕ್ಷಣೆ ಮಾಡಲಿಕ್ಕಾಗಿಯೆ? ಅಥವಾ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸುವುದಕ್ಕಾಗಿಯೆ? ಎಂದು ಅನುಮಾನ ಮೂಡುತ್ತದೆ.
ಹಿಂಡೆನ್‌ಬರ್ಗ್ ವರದಿಯನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಇದೀಗ ಪ್ರಕಟಿಸಿದೆ. ಸೆಬಿ ಕೂಡ ತನಿಖೆಗೆ ಕರೆ ನೀಡಿದೆ. ಆದ್ದರಿಂದ ಈ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು ಎಂಬುದೇ ನಮ್ಮ ಅಭಿಪ್ರಾಯವಾಗಿದೆ.