ಅಸ್ಥಿರ ಪಾಕಿಸ್ತಾನ ಅಪಾಯಕಾರಿ: ಫಾರೂಕ್ ಅಬ್ದುಲ್ಲಾ ಅಭಿಪ್ರಾಯ! » Dynamic Leader
October 22, 2024
ದೇಶ

ಅಸ್ಥಿರ ಪಾಕಿಸ್ತಾನ ಅಪಾಯಕಾರಿ: ಫಾರೂಕ್ ಅಬ್ದುಲ್ಲಾ ಅಭಿಪ್ರಾಯ!

ಶ್ರೀನಗರ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿರುವ ಹಿನ್ನಲೆಯಲ್ಲಿ, ದೇಶದಲ್ಲಿ ಅವರ ಬೆಂಬಲಿಗರು ತೀವ್ರ ರೀತಿಯ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಕಲ್ಲು ತೂರಾಟದಂತಹ ಘಟನೆಗಳಿಂದ ಹಲವೆಡೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ‘ಅಸ್ಥಿರ ಪಾಕಿಸ್ತಾನ ನಮಗೆ ಅಪಾಯಕಾರಿ’ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ‘ರೇಂಜರ್ಸ್’ ಎಂದು ಕರೆಯಲ್ಪಡುವ ಗಡಿ ಭದ್ರತಾ ಪಡೆಗಳು ನ್ಯಾಯಾಲಯದ ಕಿಟಕಿಯನ್ನು ಒಡೆದು ಒಳಗೆ ಪ್ರವೇಶಿಸಿ ಕ್ಷಿಪ್ರವಾಗಿ ಬಂಧಿಸಿತು. ಇದರಿಂದ ಕೆರಳಿದ ಇಮ್ರಾನ್ ಬೆಂಬಲಿಗರು, ದೇಶದ ಸೇನೆ ಹಾಗೂ ಐಎಸ್‌ಐ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಏಕಾಏಕಿ ಸೇನಾ ಪ್ರಧಾನ ಕಚೇರಿಯ ಮುಖ್ಯ ದ್ವಾರವನ್ನು ಮುರಿದು ಒಳ ಪ್ರವೇಶಿಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯನ್ನು ನಿಯಂತ್ರಿಸಲು ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಲಾಗಿದೆ. ಇದರಿಂದ ಅಲ್ಲಿ ಕೋಲಾಹಲ ಉಂಟಾಗಿತ್ತು.

ಈ ನಿಟ್ಟಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು, “ಅಸ್ಥಿರ ಪಾಕಿಸ್ತಾನ ನಮಗೆ ಅಪಾಯಕಾರಿಯಾಗಿದೆ, ನಮ್ಮ ಉಪಖಂಡದಲ್ಲಿರುವ ದೇಶವು ಶಾಂತಿಯುತ ಮತ್ತು ಸ್ಥಿರವಾಗಿರಬೇಕು. ಆ ದೇಶವು ಚೆನ್ನಾಗಿರಬೇಕೆಂದು ನಾನು ಬಯಸುತ್ತೇನೆ. ನಮ್ಮ ನೆರೆಯ ದೇಶದವರು ಉತ್ತಮ ಮತ್ತು ಶಾಂತಿಯುತ ಜೀವನವನ್ನು ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದರು.

Related Posts