ಡಿ.ಸುಧಾಕರ್ ಅವರನ್ನು ಕೂಡಲೇ ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ನಾಳೆ ಉಗ್ರ ಪ್ರತಿಭಟನೆ!
ಬೆಂಗಳೂರು: ದಲಿತರ ಭೂಮಿಯನ್ನು ಕಬಳಿಸಿರುವುದಲ್ಲದೆ, ಅವರ ಮೇಲೆ ದೌರ್ಜನ್ಯ ಎಸಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರಾದ ಡಿ.ಸುಧಾಕರ್ ವಿರುದ್ಧ ನಾಳೆ (13.09.2023) ಬೆಳಿಗ್ಗೆ 11.00 ಗಂಟೆಯ ಸಮಯಕ್ಕೆ ಬೆಂಗಳೂರು ನಗರ ಜೆಡಿಎಸ್ ವತಿಯಿಂದ ಉಗ್ರ ಪ್ರತಿಭಟನೆಯನ್ನು ಏರ್ಪಡಿಸಲಾಗಿದೆ.
“ಸೆವೆನ್ ಹಿಲ್ಸ್ ಡೆವಲಪರ್ಸ್ ಮತ್ತು ಟ್ರೇಡರ್ಸ್ ಕಂಪನಿಯ ಪಾಲುದಾರರಾದ ಸಚಿವ ಡಿ.ಸುಧಾಕರ್ ಅವರು ಮೋಸದಿಂದ ಯಲಹಂಕ ಗ್ರಾಮದ ಸರ್ವೇ ನಂಬರ್ 108/1ರ ಜಮೀನು ಕಬಳಿಸಿದ್ದಾರೆ. ಈ ಜಮೀನಿನ ವಿವಾದದ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗಲೇ ಸಚಿವರು ಗುಂಪು ಕಟ್ಟಿಕೊಂಡು ಬಂದು ದೌರ್ಜನ್ಯ ಎಸಗಿದ್ದಾರೆ. ಮನೆಯಲ್ಲಿದ್ದ ತಮ್ಮ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಕುಟುಂಬದ ಮಹಿಳೆಯರನ್ನು ಹೊರಗೆ ಎಳೆದೊಯ್ದು ಜೆಸಿಬಿ ಮೂಲಕ ಮನೆಯನ್ನು ಕೆಡವಿದ್ದಾರೆ” ಎಂದು ಸುಬ್ಬಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕಮಲದ ಹೂವುಗಳಿಂದ ಕೂಡಿದ ಹೊಸ ಸಮವಸ್ತ್ರ!
ಸುಬ್ಬಮ್ಮ ಅವರ ಮಗಳು ಆಶಾ ಮೇಲೂ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಸಚಿವರ ನಡೆಯನ್ನು ಪ್ರಶ್ನೆ ಮಾಡಿದಾಗ ಜಾತಿ ನಿಂದನೆ ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಲಾಗಿದೆ.
ಸುಬ್ಬಮ್ಮ ಹಾಗೂ ಆಶಾ ಎಂಬುವರು ನೀಡಿದ ದೂರು ಆಧರಿಸಿ ಸಚಿವ ಸುಧಾಕರ್, ಶ್ರೀನಿವಾಸ್ ಮತ್ತು ಭಾಗ್ಯಮ್ಮ ಹಾಗೂ ಇತರ 35 ಮಂದಿ ವಿರುದ್ಧ ದಲಿತರ ಮೇಲೆ ದೌರ್ಜನ್ಯ, ವಂಚನೆ, ಹಲ್ಲೆ ಹಾಗೂ ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಸಚಿವ ಡಿ.ಸುಧಾಕರ್ ಅವರು ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾರೆ ಎಂದು ಯಲಹಂಕ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಹಾಗೂ ವ್ಲಾಡಿಮಿರ್ ಪುಟಿನ್ ಭೇಟಿ: ಶಸ್ತ್ರಾಸ್ತ್ರ ಶೃಂಗಸಭೆಯಲ್ಲಿ ಭಾಗವಹಿಸುವಿಕೆ!
ದಲಿತರ ಭೂಮಿಯನ್ನು ಕಬಳಿಸಿರುವುದಲ್ಲದೆ, ಅವರ ಮೇಲೆ ದೌರ್ಜನ್ಯ ಎಸಗಿರುವ ಸಚಿವ ಡಿ.ಸುಧಾಕರ್ ಅವರನ್ನು ಕೂಡಲೇ ಸಂಪುಟದಿಂದ ಕೈ ಬಿಡಬೇಕು ಮತ್ತು ಬಂಧಿಸಬೇಕು ಎಂದು ಒತ್ತಾಯಿಸಿರುವ ಬೆಂಗಳೂರು ನಗರ ಜೆಡಿಎಸ್ ನಾಳೆ ಬೆಳಿಗ್ಗೆ 11.00 ಗಂಟೆಯ ಸಮಯಕ್ಕೆ ಶೇಷಾದ್ರಿ ರಸ್ತೆಯಲ್ಲಿರುವ ಫ್ರೀಡಂ ಪಾರ್ಕ್ ನಲ್ಲಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ಮುಖಂಡರುಗಳು, ಮಾಜಿ ಸಚಿವರು, ಮಾಜಿ ಸಂಸದರು, ಶಾಸಕರು, ಮಾಜಿ ಶಾಸಕರು, ಬಿಬಿಎಂಪಿ ಮಾಜಿ ಸದಸ್ಯರು, ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರ ಅಧ್ಯಕ್ಷರುಗಳು, ವಿವಿಧ ವಿಭಾಗಗಳ ಅಧ್ಯಕ್ಷರುಗಳು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ತಿಳಿಸಿದ್ದಾರೆ.
ಇದನ್ನೂ ಓದಿ: ಸನಾತನದ ವಿರುದ್ಧ ಮಾತನಾಡುವವರ ನಾಲಿಗೆಯನ್ನು ಕಿತ್ತೊಗೆಯಬೇಕು! ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್