ಬಿಜೆಪಿ ಬೀ ಟೀಂ ಎಂದು ಮೂದಲಿಸುವ ಕಾಂಗ್ರೆಸ್ಸಿಗೆ ಸ್ವತಃ ತಾನೇ ಪ್ರಾದೇಶಿಕ ಪಕ್ಷಗಳ ಬಾಲಂಗೋಚಿ ಎನ್ನುವುದು ಮರೆತಿದೆ! ಜೆಡಿಎಸ್ » Dynamic Leader
October 31, 2024
ರಾಜಕೀಯ

ಬಿಜೆಪಿ ಬೀ ಟೀಂ ಎಂದು ಮೂದಲಿಸುವ ಕಾಂಗ್ರೆಸ್ಸಿಗೆ ಸ್ವತಃ ತಾನೇ ಪ್ರಾದೇಶಿಕ ಪಕ್ಷಗಳ ಬಾಲಂಗೋಚಿ ಎನ್ನುವುದು ಮರೆತಿದೆ! ಜೆಡಿಎಸ್

ಬೆಂಗಳೂರು: ‘ಬಾಳೆಗೊಂದು ಏಟು, ಬಾಳಿಗೊಂದು ಮಾತು’ ಎನ್ನುವ ಮಾತಿದೆ. ಸುಳ್ಳುಪೊಳ್ಳುಗಳ ಸೌಧದ ಮೇಲೆ ನಿಂತಿರುವ ಕಾಂಗ್ರೆಸ್ ಪಕ್ಷಕ್ಕೆ ಅಸತ್ಯವೇ ಅಷ್ಟೈಶ್ವರ್ಯ! ಆತ್ಮವಂಚನೆಯೇ ಅಧಿಕಾರದ ಮೂಲ ಬಂಡವಾಳ!! ಮೂರ್ಖರಿಗೆ ಎಷ್ಟು ಹೇಳಿದರೂ ಅಷ್ಟೇ, ಅರ್ಥವೇ ಆಗುವುದಿಲ್ಲ ಎಂದು ಜೆಡಿಎಸ್ ಪಕ್ಷ ಕಾಂಗ್ರೆಸನ್ನು ತರಾಟೆಗೆ ತೆಗೆದುಕೊಂಡಿದೆ.

ಹೆಚ್.ಡಿ.ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆಯಲ್ಲಿ ಪಕ್ಷ ವಿಸರ್ಜನೆ ಮಾತು ಹೇಳಿದ್ದು ನಿಜ. “ನನಗೆ ಬಹುಮತದ ಸರಕಾರ ಕೊಟ್ಟರೆ 5 ವರ್ಷದಲ್ಲಿ ಪಂಚರತ್ನಗಳನ್ನು ಜಾರಿ ಮಾಡುವೆ. ಮಾತು ತಪ್ಪಿದರೆ ಮತ್ತೆಂದೂ ಬಾರಿ ಮತ ಕೇಳಲು ಬರುವುದಿಲ್ಲ, ಪಕ್ಷವನ್ನೇ ವಿಸರ್ಜಿಸುತ್ತೇನೆ” ಎಂದಿದ್ದರು. ಈ ಹೇಳಿಕೆಯ ವಿಡಿಯೋ, ಸುದ್ದಿಗಳಿವೆ ಗಮನಿಸಬಹುದು.

ಕಾಂಗ್ರೆಸ್ ಪಕ್ಷಕ್ಕೆ ಈ ಪರಿಯ ಅಜ್ಞಾನವೇ? ಪರಮಾಶ್ಚರ್ಯ!! ವರ್ಷದ ಕೂಳಿನ ಪಂಚರತ್ನಗಳಿಗೂ, ಒಪ್ಪೊತ್ತಿನ ಹರುಷದ ನಕಲಿ ಗ್ಯಾರಂಟಿಗಳಿಗೂ ಹೋಲಿಕೆಯೇ? ಎಲ್ಲರಿಗೂ ಫ್ರೀ ಫ್ರೀ ಎಂದು ಹೇಳಿ ಪಂಗನಾಮ ಹಾಕಿದ್ದು ಗೊತ್ತಿಲ್ಲದ ಸಂಗತಿಯೇ? ಎಲ್ಲಾ ಕಾಲದಲ್ಲಿಯೂ ಟೋಪಿ ಹಾಕಬಹುದು ಎನ್ನುವ ಅಹಂಕಾರವೇ?

ಇದನ್ನೂ ಓದಿ: ದೀಪಾವಳಿಯಂದು 2 ಗಂಟೆಗಳ ಕಾಲ ಮಾತ್ರ ಪಟಾಕಿ ಸಿಡಿಸಬಹುದು: ಸುಪ್ರೀಂ ಕೋರ್ಟ್

ಕೆಟ್ಟ ದಾರಿಯಲ್ಲಿ ಅಧಿಕಾರ ಹಿಡಿಯುವುದು ಕಾಂಗ್ರೆಸ್ ಚಾಳಿ. ಶೆಟ್ಟರ್, ಸವದಿಯಂಥ ಬಿಜೆಪಿಗರನ್ನು ಬಲೆಬೀಸಿ ಬಿಗಿದಪ್ಪಿಕೊಂಡ ಹಸ್ತಪಕ್ಷಕ್ಕೆ, ಮೈಯ್ಯೆಲ್ಲಾ ಉರಿ ಹತ್ತಿಕೊಂಡಿದೆ. ಸ್ವಇಚ್ಛೆಯಿಂದಲೇ ಉರಿ ಇಟ್ಟುಕೊಂಡರೆ ಹೊಣೆ ಯಾರು? ಬಹುಶಃ,ಅಂಗೈಲಿ ಕೇಶವೇಕೆ ಬೆಳೆಯುತ್ತಿಲ್ಲವೆಂದು ಕೈಕೈ ಉಜ್ಜಿಕೊಳ್ಳುತ್ತಿದೆಯಾ ಕಾಂಗ್ರೆಸ್?

ಜೆಡಿಎಸ್‌ ಬಿಜೆಪಿ ಬಾಗಿಲಿಗೆ ಪದೇಪದೆ ಹೋಗುತ್ತದೆಂದು ಹಲ್ಲು ಗಿಂಜುವ ಕಾಂಗ್ರೆಸ್ಸಿಗರಿಗೆ; ಅದೇ ಬಿಜೆಪಿ ಜತೆ ಅಧಿಕಾರ ಅನುಭವಿಸಿದ ನಿತೀಶ್‌ ಕುಮಾರ್‌, ಮಮತಾ ಬ್ಯಾನರ್ಜಿ, ಸ್ಟಾಲಿನ್, ಉದ್ಧವಠಾಕ್ರೆ ಮನೆಗಳ ಸುತ್ತ ಗಿರಕಿ ಹೊಡೆಯಲು ಸಂಕೋಚವಿಲ್ಲ! ಗಂಗೆಯಲ್ಲಿ ಮಿಂದರೆ ಕಾಗೆ ಕೋಗಿಲೆ ಆಗುತ್ತದೆಯೇ ಕಾಮಾಲೆ ಕಣ್ಣಿನ ಕಾಂಗ್ರೆಸ್ಸಿಗರೇ?

ಪ್ರಜಾಪ್ರಭುತ್ವದಲ್ಲಿ ಮೈತ್ರಿ, ಹೊಂದಾಣಿಕೆ ಸಾಮಾನ್ಯ. ಆಯಾ ಸಂದರ್ಭಕ್ಕೆ ತಕ್ಕಂತೆ ಮೈತ್ರಿ ಆಗುತ್ತದೆ. ದೇಶ ವಿದೇಶದಲ್ಲೂ ಇದ್ದದ್ದೇ. ಆದರೆ, ನಮ್ಮ ಪಕ್ಷವನ್ನು ಬಿಜೆಪಿ ಬೀ ಟೀಂ ಎಂದು ಮೂದಲಿಸುವ ಕಾಂಗ್ರೆಸ್ಸಿಗೆ, ಸ್ವತಃ ತಾನೇ ಪ್ರಾದೇಶಿಕ ಪಕ್ಷಗಳ ಬಾಲಂಗೋಚಿ ಎನ್ನುವುದು ಮರೆತಿದೆ. ದುರದೃಷ್ಟಕ್ಕೆ ಇಂಥ ಜಾಣರೋಗಕ್ಕೆ ಮದ್ದಿಲ್ಲ!! ಎಂದು ಹೇಳಿದೆ.

Related Posts