ಕರ್ನಾಟಕ ಬಿಜೆಪಿಗೆ ನೂತನ ಸಾರಥಿ: ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಯಡಿಯೂರಪ್ಪ ನೇಮಕ; ಉತ್ತಮ ಆಯ್ಕೆ.! » Dynamic Leader
October 31, 2024
ರಾಜಕೀಯ

ಕರ್ನಾಟಕ ಬಿಜೆಪಿಗೆ ನೂತನ ಸಾರಥಿ: ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಯಡಿಯೂರಪ್ಪ ನೇಮಕ; ಉತ್ತಮ ಆಯ್ಕೆ.!

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಕಾಂಗ್ರೆಸ್ ಎದುರು ಸೋಲನ್ನು ಪ್ರದರ್ಶಿಸಿತು. ಸೋಲಿಗೆ ಹೊಣೆಹೊತ್ತ ಜಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆಯನ್ನು ಅಂಗೀಕರಿಸದೇ ವಿಳಂಬ ಮಾಡಿಬಂದ ಬಿಜೆಪಿ ವರಿಷ್ಠರು ಅದರ ಮೇಲೆ ಇದೀಗ ಕ್ರಮ ವಹಿಸಿದ್ದಾರೆ.

ಖಾಲಿಯಿದ್ದ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಬಸವನಗೌಡ ಪಾಟೀಲ ಯತ್ನಾಲ್, ಸಿ.ಟಿ.ರವಿ, ಶೋಭ ಕರಂದ್ಲಾಜೆ ಮುಂತಾದವರ ಹೆಸರುಗಳನ್ನು ಕೆಲವರು ತೇಲಿಬಿಟ್ಟಿದ್ದರು. ಅದರೂ ಕೇಂದ್ರದ ಬಿಜೆಪಿ ನಾಯಕರು ಮೌನವಾಗಿಯೇ ಇದ್ದರು. ಡಿಸೆಂಬರ್ 4 ರಿಂದ ಚಳಿಗಾಲದ ಅಧಿವೇಶನದ ದಿನಾಂಕ ನಿಗದಿಯಾಗಿರುವುದರಿಂದ ಎಚ್ಚೆತ್ತುಕೊಂಡ ಕೇಂದ್ರ ಬಿಜೆಪಿ ನಾಯಕರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವುದರ ಮೂಲಕ, ಬಿಜೆಪಿ ಪಕ್ಷವು ಲಿಂಗಾಯತರನ್ನು ಮೂಲೆಗುಂಪು ಮಾಡಿದೆ ಎಂಬ ಅಪಾವಾದಕ್ಕೆ ತೆರೆ ಎಳೆದಿದೆ. ನಿಧಾನವಾದರೂ ಯೋಚಿಸಿ, ಅಳೆದು ತೂಗಿ, ಈ ನೇಮಕವನ್ನು ಮಾಡಲಾಗಿದೆ. ಸಂಘಟನಾ ಚತುರ, ಕ್ರಿಯಾಶೀಲ, ಉತ್ಸಾಹಿ ನಾಯಕ ವಿಜಯೇಂದ್ರ ಯಡಿಯೂರಪ್ಪ ಅವರು ಉತ್ತಮವಾದ ಆಯ್ಕೆ ಎಂಬುದರಲ್ಲಿ ಎರಡು ಮಾತಿಲ್ಲ.

ನೂತನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ, “ಅಚಲ ವಿಶ್ವಾಸವಿಟ್ಟು ಪಕ್ಷ ಸಂಘಟನೆಯ ಬಹುದೊಡ್ಡ ಜವಾಬ್ದಾರಿ ವಹಿಸಿದ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್.ಸಂತೋಷ ಅವರುಗಳಿಗೆ ತುಂಬು ಹೃದಯದ ಕೃತಜ್ಞತೆಗಳು.

ಸಂಘದ ಹಾಗೂ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಸರ್ವರ ನಿರೀಕ್ಷೆ ಹಾಗೂ ಜನರ ಅಪೇಕ್ಷೆಗೆ ಪೂರಕವಾಗಿ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಗೆ ಹೊಸ ಚೈತನ್ಯ ತುಂಬಲು ಕಾರ್ಯಕರ್ತರೊಂದಿಗೆ ಕಾರ್ಯಕರ್ತನಾಗಿ ಅಹರ್ನಿಶಿ ದುಡಿಯುವ ಸಂಕಲ್ಪ ತೊಟ್ಟಿರುವೆ. ನಾಡಿನ ಜನರ ಆಶೀರ್ವಾದವೇ ನ್ನ್ಗೆ ಶ್ರೀರಕ್ಷೆ” ಎಂದು ಹೇಳಿದ್ದಾರೆ.

Related Posts