ನಾಳೆ ಕಾಂಗ್ರೆಸ್ ಸಂಸ್ಥಾಪನಾ ದಿನ: ಮಣಿಪುರದಿಂದ ಮುಂಬೈಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯಿಂದ ಎರಡನೇ ಹಂತದ ಯಾತ್ರೆ!
ನವದೆಹಲಿ: ಕಾಂಗ್ರೆಸ್ ಪಕ್ಷದ 138ನೇ ಸಂಸ್ಥಾಪನಾ ದಿನವನ್ನು ನಾಳೆ (ಡಿಸೆಂಬರ್ 28) ಆಚರಿಸಲಾಗುತ್ತಿದೆ. ಇದಕ್ಕಾಗಿ ನಾಗ್ಪುರದಲ್ಲಿ ಬೃಹತ್ ಸಾರ್ವಜನಿಕ ಸಭೆ ಹಾಗೂ ರ‍್ಯಾಲಿ ನಡೆಸಲು ಪಕ್ಷ ಮುಂದಾಗಿದೆ. ಇದರ ಬೆನ್ನಲ್ಲೇ ಜನವರಿ 14ರಿಂದ ಮಾರ್ಚ್ 20 ರವರೆಗೆ ಮಣಿಪುರದಿಂದ ಮುಂಬೈಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮುಂದಿನ ಹಂತದ ಯಾತ್ರೆ ಆರಂಭಿಸಲಿದ್ದಾರೆ ಎಂದು ಘೋಷಿಸಲಾಗಿದೆ.
ಕಾಂಗ್ರೆಸ್ ಪಕ್ಷವನ್ನು 28 ಡಿಸೆಂಬರ್ 1885 ರಂದು ಸ್ಥಾಪಿಸಲಾಯಿತು. ಆರಂಭದಲ್ಲಿ ವಿದ್ಯಾವಂತ ಭಾರತೀಯರಿಗೆ ರಾಜಕೀಯ ಸಬಲೀಕರಣವನ್ನು ಒದಗಿಸುವ ಗುರಿಯನ್ನು ಹೊಂದಿದ್ದ ಕಾಂಗ್ರೆಸ್ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಯಿತು. ಭಾರತದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾಂಗ್ರೆಸ್ ತನ್ನ 138ನೇ ಸಂಸ್ಥಾಪನಾ ದಿನವನ್ನು ಅದ್ಧೂರಿಯಾಗಿ ಆಚರಿಸಲು ಮುಂದಾಗಿದೆ. ಇದಕ್ಕಾಗಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜಿಸಿದೆ.
ಈ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಮತ್ತು ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ. ಈ ಕುರಿತು ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ಕೆ.ಸಿ.ವೇಣುಗೋಪಾಲ್ ಅವರು, “ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನವಾದ ನಾಳೆ ನಾಗ್ಪುರದಲ್ಲಿ ‘ನಾವು ಸಿದ್ಧರಿದ್ದೇವೆ’ ರ‍್ಯಾಲಿಯನ್ನು ಆಯೋಜಿಸಲಾಗಿದೆ. ಎಲ್ಲಾ ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಇದರಲ್ಲಿ ಭಾಗವಹಿಸುತ್ತಿದ್ದಾರೆ.
ರಾಹುಲ್ ಯಾತ್ರೆ:
2024ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಕೆಲಸಗಳೂ ನಡೆಯುತ್ತಿವೆ. ಜನವರಿ 14 ರಂದು ರಾಹುಲ್ ಮಣಿಪುರದಿಂದ ಮುಂಬೈಗೆ ಬಸ್ ಮೂಲಕ 6,200 ಕಿ.ಮೀ ದೂರದ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ. ‘ಭಾರತ್ ನ್ಯಾಯ ಯಾತ್ರ’ ಎಂಬ ಈ ಯಾತ್ರೆ ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಛತ್ತೀಸ್‌ಗಢ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ 14 ರಾಜ್ಯಗಳಲ್ಲಿ 66 ದಿನಗಳ ಕಾಲ (ಮಾರ್ಚ್ 20) ರಾಹುಲ್ ಗಾಂಧಿ ಬಸ್ಸಿನಲ್ಲಿ ಪ್ರಯಾಣ ಮಾಡಲಿದ್ದಾರೆ” ಎಂದು ಅವರು ಹೇಳಿದರು.