ಬಿಜೆಪಿಗೆ ಆಘಾತ ನೀಡಿದ 165 ಕ್ಷೇತ್ರಗಳು? ಗಂಭೀರ ಸಮಾಲೋಚನೆಯಲ್ಲಿ ಬಿಜೆಪಿ ನಾಯಕರು! » Dynamic Leader
October 23, 2024
ರಾಜಕೀಯ

ಬಿಜೆಪಿಗೆ ಆಘಾತ ನೀಡಿದ 165 ಕ್ಷೇತ್ರಗಳು? ಗಂಭೀರ ಸಮಾಲೋಚನೆಯಲ್ಲಿ ಬಿಜೆಪಿ ನಾಯಕರು!

ಡಿ.ಸಿ.ಪ್ರಕಾಶ್ ಸಂಪಾದಕರು

ಲೋಕಸಭೆ ಚುನಾವಣೆಯಲ್ಲಿ 165 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಗಳ ಬಗ್ಗೆ ಬಿಜೆಪಿ ಆತಂಕಕ್ಕೆ ಒಳಗಾಗಿದೆ ಎಂಬ ಮಾಹಿತಿ ಸದ್ಯ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಸ್ವಂತ ಬಲದಿಂದ 370 ಕ್ಷೇತ್ರಗಳನ್ನು ಗೆಲ್ಲುವ ಗುರಿಯೊಂದಿಗೆ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ. ಮೈತ್ರಿ ಪಕ್ಷಗಳ ನೆರವಿನಿಂದ 400 ಕ್ಷೇತ್ರಗಳನ್ನು ವಶಪಡಿಸಿಕೊಳ್ಳಲು ಬಿಜೆಪಿ ಯೋಜನೆ ರೂಪಿಸಿದೆ. ಆದರೆ ಬಿಜೆಪಿಯ ಈ ಯೋಜನೆ ಎಷ್ಟರಮಟ್ಟಿಗೆ ಕಾರ್ಯಸಾಧ್ಯ ಎಂಬ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.

ಏತನ್ಮಧ್ಯೆ, ಬಿಜೆಪಿ ಖಾಸಗಿಯಾಗಿ ನಡೆಸಿದೆ ಎನ್ನಲಾದ ಸಮೀಕ್ಷೆಯಲ್ಲಿ ಪಕ್ಷದ ಗುರಿಯಿರುವ ಕ್ಷೇತ್ರಗಳ ಪೈಕಿ 165 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಕಡಿಮೆ ಎಂಬ ಅಂಶ ಬಹಿರಂಗವಾಗಿದೆ ಎಂದು ತಿಳಿದುಬಂದಿದೆ. ಈ ಕ್ಷೇತ್ರಗಳು ವಿಶೇಷವಾಗಿ ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒಡಿಶಾ, ಪಂಜಾಬ್ ಮತ್ತು ಹರಿಯಾಣದಲ್ಲಿವೆ ಎಂದು ದೆಹಲಿ ಮೂಲಗಳು ಹೇಳುತ್ತವೆ.

ಮಹಾರಾಷ್ಟ್ರದಲ್ಲಿ, ಶಿವಸೇನೆ (ಶಿಂಧೆ) ಮತ್ತು ಅಜಿತ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಬಿಜೆಪಿಗೆ ಇನ್ನೂ ವಿಶ್ವಾಸ ಮೂಡಿಬಂದಿಲ್ಲ. ಎರಡೂ ಪಕ್ಷಗಳು ಜನಪ್ರಿಯವಲ್ಲದ ಪಕ್ಷಗಳಾಗಿವೆ. ಇಬ್ಬರೂ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರಿಂದ ಪಕ್ಷವನ್ನು ಒಡೆದುಕೊಂಡು ಬಂದವರು. ಹಾಗಾಗಿ ಜನರು ಅವರ ಮೇಲೆ ಕೋಪಗೊಂಡಿದ್ದಾರೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ಗಮನಾರ್ಹ ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂಬುದು ಅವರ ಲೆಕ್ಕಾಚಾರವಾಗಿದೆ.

ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾ ದಳದೊಂದಿಗೆ ಬಿಜೆಪಿ ಮರು ಮೈತ್ರಿ ಮಾಡಿಕೊಂಡಿದೆ. ಈ ನಿರ್ಧಾರವು ಕೂಡ ಬಿಜೆಪಿಗೆ ಹಿನ್ನಡೆಯಾಗಿ ಪರಿಣಮಿಸಿದೆ. ನಿತೀಶ್ ಕುಮಾರ್ ಆಗಾಗ್ಗೆ ತಂಡವನ್ನು ಬದಲಾಯಿಸುತ್ತಿರುವುದರಿಂದ ಜನರು ಅವರ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ವರದಿಯಾಗಿದೆ. ಅದೇ ಸಂದರ್ಭದಲ್ಲಿ, “ಇಂಡಿಯಾ” ಮೈತ್ರಿಕೂಟವೂ ಅಲ್ಲಿ ಕ್ಷೇತ್ರ ಹಂಚಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಹೀಗಾಗಿ ಬಿಜೆಪಿಗೆ ಕಳೆದ ಬಾರಿ ಸಿಕ್ಕ ಸ್ಥಾನಗಳು ಈ ಬಾರಿಯೂ ಸಿಗುವುದೇ ಎಂಬ ಅನುಮಾನ ಕಾಡುತ್ತಿದೆ.

ಪಂಜಾಬ್‌ನಲ್ಲಿ ಬಿಜೆಪಿ, ಅಕಾಲಿದಳದೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಸೀಟು ಹಂಚಿಕೆ ಕುರಿತು ಯಾವುದೇ ಒಪ್ಪಂದಕ್ಕೆ ಬರದ ಕಾರಣ ಎರಡು ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ. ಹರಿಯಾಣದಲ್ಲಿ ಬಿಜೆಪಿ ಚೌತಾಲ ಪಕ್ಷದೊಂದಿಗೆ ಸಂಬಂಧ ಕಡಿದುಕೊಂಡಿದೆ. ಒಡಿಶಾದಲ್ಲೂ ಬಿಜು ಜನತಾ ದಳದೊಂದಿಗೆ ಸೀಟು ಹಂಚಿಕೆಯ ಮಾತುಕತೆ ವಿಫಲವಾಗಿದೆ.

ಪಶ್ಚಿಮ ಬಂಗಾಳದಲ್ಲಿ ಆಗಾಗ ಜಾರಿ ಅಧಿಕಾರಿಗಳನ್ನು ದಾಳಿಗೆ ಕಳುಹಿಸುತ್ತಿರುವುದರಿಂದ ಜನರಲ್ಲಿ ಕೊಂಚ ಅಸಮಾಧಾನವಿದೆ. ಅರವಿಂದ್ ಕೇಜ್ರಿವಾಲ್ ಮತ್ತು ಹೇಮಂತ್ ಸೊರನ್ ಅವರನ್ನು ಚುನಾವಣಾ ಸಮಯದಲ್ಲಿ ಬಂಧಿಸಿರುವುದು ಚುನಾವಣೆಯಲ್ಲೂ ಪ್ರತಿಧ್ವನಿಸುತ್ತದೆ ಎಂದು ಬಿಜೆಪಿ ಭಾವಿಸಲು ಪ್ರಾರಂಭಿಸಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ದಕ್ಷಿಣ ಭಾರತದಲ್ಲಿ ಕರ್ನಾಟಕ ಮಾತ್ರ ಬಿಜೆಪಿಗೆ ಸ್ವಲ್ಪ ಭರವಸೆ ನೀಡಿತ್ತು. ಆದರೆ ಇಲ್ಲಿಯೂ ಅತೃಪ್ತ ಅಭ್ಯರ್ಥಿಗಳು ಹಾಗೂ ಪಕ್ಷದ ಆಂತರಿಕ ಸಮಸ್ಯೆಯಿಂದ ಬಿಜೆಪಿಗೆ ಕಳೆದ ಬಾರಿ ಸಿಕ್ಕ ಸ್ಥಾನಗಳು ಸಿಗುವುದೇ ಎಂಬ ಅನುಮಾನ ಕಾಡುತ್ತಿದೆ. ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ಬಿಜೆಪಿಗೆ ಹೆಚ್ಚಿನ ವಿಶ್ವಾಸವಿಲ್ಲ.

ತಮಿಳುನಾಡಿನಲ್ಲಿ ಒಂದೋ ಎರಡೋ ಸ್ಥಾನ ಗೆಲ್ಲಬಹುದು ಎಂದು ಬಿಜೆಪಿ ಭಾವಿಸಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿಯೂ ಬಿಜೆಪಿ ಕಡಿಮೆ ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಒಟ್ಟು 165 ಕ್ಷೇತ್ರಗಳ ಬಗ್ಗೆ ಬಿಜೆಪಿಗೆ ಅನುಮಾನವಿದೆ ಎನ್ನುತ್ತಾರೆ.

ಈ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ನಿವಾಸದಲ್ಲಿ ಅಮಿತ್ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮಹತ್ವದ ಸಭೆ ನಡೆಸಿದ್ದಾರೆ. ಇದಲ್ಲದೆ, ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತ್ತು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಜೆ.ಪಿ.ನಡ್ಡಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಪರಿಸ್ಥಿತಿಯ ಬಗ್ಗೆ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ದುರ್ಬಲ ಕ್ಷೇತ್ರಗಳತ್ತ ಹೆಚ್ಚಿನ ಗಮನ ಹರಿಸಲು ಪ್ರಧಾನಿ ಮೋದಿ ಯೋಜಿಸಿದ್ದಾರೆ. ದೇಶಾದ್ಯಂತ ಬಿಸಿಲಿನ ತಾಪದಿಂದಾಗಿ ಚುನಾವಣಾ ಪ್ರಚಾರಕ್ಕೆ ಹಿನ್ನಡೆಯಾಗಿದೆ. ಉತ್ತರ ಪ್ರದೇಶದಂತಹ ಹಿಂದಿ ಮಾತನಾಡುವ ಉತ್ತರದ ರಾಜ್ಯಗಳ ಮೇಲೆ ಬಿಜೆಪಿ ಹೆಚ್ಚು ಅವಲಂಬಿತವಾಗಿದೆ ಎಂದು ಹೇಳಲಾಗುತ್ತಿದೆ.

Related Posts