ಅತ್ಯಾಚಾರಿಯನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಪ್ರತಿಭಟನೆಗೆ ಮಮತಾ ಬ್ಯಾನರ್ಜಿ ಕರೆ! » Dynamic Leader
December 2, 2024
ದೇಶ

ಅತ್ಯಾಚಾರಿಯನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ ಪ್ರತಿಭಟನೆಗೆ ಮಮತಾ ಬ್ಯಾನರ್ಜಿ ಕರೆ!

“ಮಹಿಳೆಯರ ಮೇಲಿನ ಅಪರಾಧಗಳಿಗಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಣಿಪುರದ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿದ್ದಾರೆಯೇ” – ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಮಹಿಳಾ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಅಪರಾಧಿಯನ್ನು ಗಲ್ಲಿಗೇರಿಸುವಂತೆ ಒತ್ತಾಯಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಹೆಣಗಾಡುತ್ತಿರುವ ಬಿಜೆಪಿಗೆ ಪ್ರತಿಸ್ಪರ್ಧಿಯಾಗಿ ಮಮತಾ ಇದನ್ನು ಘೋಷಿಸಿದ್ದಾರೆ.

ಕೋಲ್ಕತ್ತಾದ ಆರ್‌.ಜಿ.ಕರ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದ 31 ವರ್ಷದ ಮಹಿಳಾ ಟ್ರೈನಿ ವೈದ್ಯೆಯನ್ನು ಆಗಸ್ಟ್ 9 ರಂದು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರ ಮತ್ತು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಪ್ರಮುಖ ಆರೋಪಿಯಾದ ಭದ್ರತಾ ಸ್ವಯಂಸೇವಕ ಸಂಜಯ್ ರಾಯ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಆಗ್ರಹಿಸಿ ಕೋಲ್ಕತ್ತಾದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವೆಡೆ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಮಮತಾ ಅವರನ್ನು ಖಂಡಿಸಿ ಬಿಜೆಪಿ 12 ಗಂಟೆಗಳ ಸಂಪೂರ್ಣ ಬಂದ್‌ಗೆ ಕರೆ ನೀಡಿದ್ದು, ರಾಜ್ಯದಲ್ಲಿ ಸಂಚಲನ ಮೂಡಿಸಿದೆ.

ಈ ಹಿನ್ನೆಲೆಯಲ್ಲಿ, ತೃಣಮೂಲ ಕಾಂಗ್ರೆಸ್ ಯುವ ಘಟಕದ ಸಭೆಯಲ್ಲಿ ಮಾತನಾಡಿದ ಮಮತಾ, “ನಾವು ವಿಧಾನಸಭೆ ಸಭೆಯನ್ನು ಕರೆದು, ಏಳು ದಿನಗಳಲ್ಲಿ ಅತ್ಯಾಚಾರಿಯನ್ನು ಗಲ್ಲಿಗೇರಿಸಲು ಕಾನೂನಿಗೆ ತಿದ್ದುಪಡಿ ತರುತ್ತೇವೆ. ಪ್ರತಿಭಟನೆ ನಡೆಸುತ್ತಿರುವ ಬಿಜೆಪಿಗೆ ನ್ಯಾಯ ಸಿಗುವುದರಲ್ಲಿ ಆಸಕ್ತಿ ಇಲ್ಲ. ರಾಜ್ಯವನ್ನು ಅವಮಾನಿಸುವ ಯತ್ನವನ್ನು ಮಾಡುತ್ತಿದೆ.

ಆಗಷ್ಟ್ 31 ರಂದು ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಪ್ರತಿಭಟನೆಗೆ ಪಕ್ಷ ಮುಂದಾಗಬೇಕು. ಮರುದಿನ ಮಹಿಳೆಯರು ಪ್ರತಿಭಟನೆ ನಡೆಸಬೇಕು. ಮಹಿಳೆಯರ ಮೇಲಿನ ಅಪರಾಧಗಳಿಗಾಗಿ ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಮಣಿಪುರದ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿದ್ದಾರೆಯೇ? ಎಂದು ಅವರು ಪ್ರಶ್ನಿಸಿದ್ದಾರೆ

Related Posts