ಮತ್ತೆ ಹಿಂಸಾಚಾರ, ಕರ್ಫ್ಯೂ; ರಾಕೆಟ್, ಡ್ರೋನ್ ದಾಳಿ – ಮಣಿಪುರದಲ್ಲಿ ಏನಾಗುತ್ತಿದೆ?
ಹಿಂಸಾಚಾರ ಮತ್ತೆ ಬುಗಿಲೆದ್ದಿರುವುದನ್ನು ತೀವ್ರವಾಗಿ ಖಂಡಿಸಿರುವ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ (Biren Singh), ಇದನ್ನು “ಉಗ್ರವಾದ ಕೃತ್ಯಗಳು” ಎಂದು ಬಣ್ಣಿಸಿದ್ದಾರೆ.
ಭಾರತದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಕಳೆದ ವರ್ಷದಿಂದ, ಕುಕಿ ಮತ್ತು ಮೈತೇಯಿ ಜನರ ನಡುವೆ ಹಿಂಸಾಚಾರ ತೀವ್ರಗೊಂಡಿದೆ. ತಿಂಗಳಿಂದ ತಗ್ಗಿದ್ದ ಹಿಂಸಾಚಾರ ಮತ್ತೆ ಭುಗಿಲೆದ್ದಿದ್ದರಿಂದ ಶಿಕ್ಷಣ ಸಂಸ್ಥೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕರ್ಫ್ಯೂ ಜಾರಿ ಮಾಡಲಾಗಿದೆ.
ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶನಿವಾರ (ಇಂದು) ನಡೆದ ಘರ್ಷಣೆಯಲ್ಲಿ 5 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಮಲಗಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದಿದ್ದರು ಎಂಬ ಕಾರಣಕ್ಕೆ ಎರಡು ಕಡೆ (ಕುಕಿ ಮತ್ತು ಮೈತೇಯಿ) ನಡೆದ ಗುಂಡಿನ ದಾಳಿಯಲ್ಲಿ ಇನ್ನೂ 4 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿರಿಬಾಮ್ ಜಿಲ್ಲೆಯ ಗುಡ್ಡಗಾಡು ಗ್ರಾಮವೊಂದರಲ್ಲಿ ದಾಳಿ ನಡೆಸಲಾಗಿದೆ. ಎರಡು ಕಡೆಯ ನಡುವೆ ನಡೆದ ಘರ್ಷಣೆಯಲ್ಲಿ ‘ಗುಡ್ಡಗಾಡು ಮೂಲದ 3 ಉಗ್ರರು’ ಹತರಾಗಿದ್ದಾರೆ ಎಂದು ಹೇಳಲಾಗಿದೆ. ಹಿಂದಿನ ದಿನ ಬಿಷ್ಣುಪುರ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದರು ಮತ್ತು 5 ಮಂದಿ ಗಾಯಗೊಂಡಿದ್ದರು.
ಆ ದಾಳಿಯಲ್ಲಿ, ಸಶಸ್ತ್ರ ಗುಂಪುಗಳು ಹಳ್ಳಿಗಳ ಮೇಲೆ ರಾಕೆಟ್ ದಾಳಿಯನ್ನು ನಡೆಸಿದ್ದರು ಎಂದು ಹೇಳಲಾಗುತ್ತದೆ. ಈ ವಾರದ ಆರಂಭದಲ್ಲಿ ಪಶ್ಚಿಮ ಇಂಫಾಲ್‌ನಲ್ಲಿ ಡ್ರೋನ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು.
ಹಿಂಸಾಚಾರ ಮತ್ತೆ ಬುಗಿಲೆದ್ದಿರುವುದನ್ನು ತೀವ್ರವಾಗಿ ಖಂಡಿಸಿರುವ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್, ಇದನ್ನು “ಉಗ್ರವಾದ ಕೃತ್ಯಗಳು” ಎಂದು ಬಣ್ಣಿಸಿದ್ದಾರೆ.
“ಮಣಿಪುರ ಸರ್ಕಾರವು ಈ ಸ್ವಯಂಪ್ರೇರಿತ ದಾಳಿಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದೆ. ಬುಡಕಟ್ಟು ಜನರ ಮೇಲಿನ ಈ ಭಯೋತ್ಪಾದಕ ದಾಳಿಗಳಿಗೆ ನಾವು ಸೂಕ್ತ ಪ್ರತಿಕ್ರಿಯೆ ನೀಡುತ್ತೇವೆ” ಎಂದು ಅವರು ಹೇಳಿದ್ದಾರೆ.
ಹಿಂಸಾಚಾರದ ಘಟನೆಗಳಿಂದಾಗಿ ಸೆಪ್ಟೆಂಬರ್ 7 ರಂದು ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿತ್ತು. ಮಣಿಪುರದ ಕಣಿವೆ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಣಿಪುರ ಏಕೀಕರಣಕ್ಕಾಗಿ ಸಮನ್ವಯ ಸಮಿತಿ (COCOMI), ಅನಿರ್ದಿಷ್ಟ “ಸಾಮಾನ್ಯ ತುರ್ತುಸ್ಥಿತಿ” ಘೋಷಿಸಿದೆ.
ಕುಕಿ ಸಶಸ್ತ್ರ ಗುಂಪುಗಳ ನಿರಂತರ ದಾಳಿಗಳನ್ನು ಸೂಚಿಸಿ, ಜನರು ಮನೆಯೊಳಗೆ ಇರುವಂತೆ ಕೇಳಿಕೊಂಡಿದೆ. ಮಣಿಪುರದಲ್ಲಿ ಸಹಜ ಸ್ಥಿತಿ ಮರಳುವವರೆಗೆ ತುರ್ತು ಪರಿಸ್ಥಿತಿ ಮುಂದುವರಿಯಲಿದೆ ಎಂದು COCOMI ಹೇಳಿದೆ.