ಮಣಿಪುರದಲ್ಲಿ ಹಿಂಸಾಚಾರದಿಂದ ಸಂತ್ರಸ್ತರಾಗಿರುವ ಜನರು ಉದ್ವಿಗ್ನಗೊಂಡಿದ್ದಾರೆ ಮತ್ತು ಭಯಭೀತರಾಗಿದ್ದಾರೆ ಮತ್ತು ಸಹಾಯಕ್ಕಾಗಿ ಕಾಯುತ್ತಿದ್ದಾರೆ.
ಈ ವರ್ಷದ ಅಂತ್ಯದೊಳಗಾದರೂ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡಬೇಕು ಎಂದು ಇಂಡಿಯಾ ಮೈತ್ರಿಕೂಟಕ್ಕೆ ಸೇರಿದ ಆ ರಾಜ್ಯದ 10ಕ್ಕೂ ಹೆಚ್ಚು ರಾಜಕೀಯ ಪಕ್ಷದ ಮುಖಂಡರು ಒತ್ತಾಯಿಸಿದ್ದಾರೆ. ಈ ಕುರಿತು ಇಂಡಿಯಾ ಮೈತ್ರಿಕೂಟಕ್ಕೆ ಸೇರಿದ ಕಾಂಗ್ರೆಸ್ ಪಕ್ಷವೂ ಸೇರಿದಂತೆ ಮಣಿಪುರ ರಾಜ್ಯದ 10ಕ್ಕೂ ಹೆಚ್ಚು ರಾಜಕೀಯ ಪಕ್ಷದ ಮುಖಂಡರು, ಪ್ರಧಾನಿ ಮೋದಿ ಅವರಿಗೆ ಜಂಟಿ ಪತ್ರ ಬರೆದಿದ್ದಾರೆ.
ಇದರಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಘಟನೆಗಳಿಗೆ 2 ವರ್ಷಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಇಲ್ಲಿಯವರೆಗೆ ಒಮ್ಮೆಯಾದರೂ ಪ್ರಧಾನಿಯವರು ತಮ್ಮ ರಾಜ್ಯಕ್ಕೆ ಭೇಟಿ ನೀಡಿ ಸಹಜ ಸ್ಥಿತಿಗೆ ತರಲು ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಜಗತ್ತಿನ ಎಲ್ಲ ದೇಶಗಳಿಗೂ ಉತ್ಸಾಹದಿಂದ ಪ್ರಯಾಣ ಬೆಳೆಸುವ ತಾವುಗಳು, ಅನೇಕ ದೇಶಗಳ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುವುದಾಗಿ ಹೇಳಿಕೊಳ್ಳುವ ತಾವುಗಳು, ತಮ್ಮದೇ ದೇಶದ ರಾಜ್ಯವೊಂದು ಹಿಂಸಾಚಾರದಿಂದ ತೀವ್ರವಾಗಿ ನಲುಗಿದ್ದು, ಇದುವರೆಗೂ ಭೇಟಿ ನೀಡದಿರುವುದು ವಿಚಿತ್ರವಾಗಿದೆ ಎಂದು ಹೇಳಿದ್ದಾರೆ.
ಮಣಿಪುರದಲ್ಲಿ ಹಿಂಸಾಚಾರದಿಂದ ಸಂತ್ರಸ್ತರಾಗಿರುವ ಜನರು ಉದ್ವಿಗ್ನಗೊಂಡಿದ್ದಾರೆ ಮತ್ತು ಭಯಭೀತರಾಗಿದ್ದಾರೆ ಮತ್ತು ಸಹಾಯಕ್ಕಾಗಿ ಕಾಯುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಸಂತ್ರಸ್ತ ಜನರ ಪರಿಸ್ಥಿತಿಯನ್ನು ಪರಿಗಣಿಸಿ, ಪ್ರಧಾನಿಯವರು ಈ ವರ್ಷದ ಅಂತ್ಯದೊಳಗಾದರೂ ಮಣಿಪುರ ರಾಜ್ಯಕ್ಕೆ ಭೇಟಿ ನೀಡಿ, ಸಹಜ ಸ್ಥಿತಿಗೆ ತರಲು ಕ್ರಮಕೈಗೊಳ್ಳಬೇಕು ಮತ್ತು ಸಂತ್ರಸ್ತ ಜನರಿಗೆ ಕೇಂದ್ರ ಸರ್ಕಾರ ಎಲ್ಲಾ ನೆರವು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.