ದೇಶ Archives » Page 19 of 53 » Dynamic Leader
October 24, 2024
Home Archive by category ದೇಶ (Page 19)

ದೇಶ

ಕ್ರೈಂ ರಿಪೋರ್ಟ್ಸ್ ದೇಶ

ಹರಿಯಾಣದಲ್ಲಿ ನಿಗೂಢ ಗ್ಯಾಂಗ್ ನಡೆಸಿದ ಗುಂಡಿನ ದಾಳಿಯಲ್ಲಿ ರಾಜಕೀಯ ಪಕ್ಷದ ಮುಖಂಡರೊಬ್ಬರು ಸಾವನ್ನಪ್ಪಿರುವುದು ಅಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿದೆ!

ಚಂಡೀಗಢ: ಭಾರತೀಯ ರಾಷ್ಟ್ರೀಯ ಲೋಕದಳ ನಾಯಕ ಹಾಗೂ ಮಾಜಿ ಶಾಸಕ ನಫೆ ಸಿಂಗ್ ರಾಠಿ ಅವರನ್ನು ಹರಿಯಾಣದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬಹದ್ದೂರ್ ಎಂಬಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ನಿಗೂಢ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಅವರ ಪಕ್ಷದ ಹಿರಿಯ ಮುಖಂಡ ಜೈಕಿಶನ್ ಕೂಡ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಗಾಯಗೊಂಡಿದ್ದ ಇನ್ನೂ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಮೀನು ವಿವಾದದಿಂದ ಈ ಗುಂಡಿನ ದಾಳಿ ನಡೆದಿರಬಹುದು ಎನ್ನಲಾಗಿದೆ.

ಹರಿಯಾಣದಲ್ಲಿ ನಿಗೂಢ ಗ್ಯಾಂಗ್ ನಡೆಸಿದ ಗುಂಡಿನ ದಾಳಿಯಲ್ಲಿ ರಾಜಕೀಯ ಪಕ್ಷದ ಮುಖಂಡರೊಬ್ಬರು ಸಾವನ್ನಪ್ಪಿರುವುದು ಅಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಿದೆ.

ದೇಶ

ಗುಜರಾತ್: ಮಾರ್ಚ್ 5 ರಂದು ನಡೆಯಲಿರುವ ತನ್ನ ಸೋದರಳಿಯನ ಮದುವೆಯಲ್ಲಿ ಪಾಲ್ಗೊಳ್ಳಲು ಬಿಲ್ಕಿಸ್ ಬಾನೋ ಪ್ರಕರಣದ ಅಪರಾಧಿ ರಮೇಶ್ ಚಂದನಾಗೆ ಗುಜರಾತ್ ಹೈಕೋರ್ಟ್ 10 ದಿನಗಳ ಪೆರೋಲ್ ನೀಡಿ ಆದೇಶಿಸಿದೆ.

ರಮೇಶ್ ಚಂದನಾ, ಕಳೆದ ವಾರ ಪೆರೋಲ್‌ಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಆದೇಶದ ನಂತರ ಜನವರಿ 21 ರಂದು ಗೋದ್ರಾ ಪಟ್ಟಣದ ಜೈಲಿಗೆ ಎಲ್ಲಾ 11 ಅಪರಾಧಿಗಳು ಶರಣಾದ ನಂತರ, ಪೆರೋಲ್ ಮಂಜೂರು ಮಾಡಿದ ಪ್ರಕರಣದಲ್ಲಿ ಎರಡನೇ ಅಪರಾಧಿ ಇವರಾಗಿದ್ದಾರೆ.

2002ರ ಗೋಧ್ರಾ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೋ ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಏಳು ಸದಸ್ಯರನ್ನು ಕೊಂದ ಪ್ರಕರಣದಲ್ಲಿ 11 ಅಪರಾಧಿಗಳನ್ನು ದೋಷಿಗಳೆಂದು ಘೋಷಿಸಲಾಗಿತ್ತು.

ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ದಿವ್ಯೇಶ್ ಜೋಶಿ ಅವರು ಶುಕ್ರವಾರ ಹೊರಡಿಸಿರುವ ತಮ್ಮ ಆದೇಶದಲ್ಲಿ, ‘ಈ ಅರ್ಜಿಯ ಮೂಲಕ, ಅಪರಾಧಿ-ಅರ್ಜಿದಾರನು ತನ್ನ ಸಹೋದರಿಯ ಮಗನ ಮದುವೆ ಸಮಾರಂಭದಲ್ಲಿ ಭಾಗವಹಿಸುವ ಆಧಾರದ ಮೇಲೆ ಪೆರೋಲ್ ರಜೆಗಾಗಿ ಪ್ರಾರ್ಥಿಸುತ್ತಾರೆ. ಈ ಅರ್ಜಿಯಲ್ಲಿ ಒತ್ತಾಯಿಸಿದ ಕಾರಣಗಳನ್ನು ಪರಿಗಣಿಸಿ, ಹತ್ತು ದಿನಗಳ ಅವಧಿಗೆ ಅರ್ಜಿದಾರ-ಆರೋಪಿಯನ್ನು ಪೆರೋಲ್ ರಜೆಯ ಮೇಲೆ ಬಿಡುಗಡೆ ಮಾಡಲು ಆದೇಶಿಸಲಾಗಿದೆ’ ಎಂದು ತಿಳಿಸಿದೆ.

ಇದಕ್ಕೂ ಮುನ್ನ, ಪ್ರಕರಣದ ಮತ್ತೊಬ್ಬ ಅಪರಾಧಿ ಪ್ರದೀಪ್ ಮೋಧಿಯಾ ಅವರ ಪೆರೋಲ್ ಅರ್ಜಿಯನ್ನು ಹೈಕೋರ್ಟ್ ಅನುಮತಿಸಿದ ನಂತರ ಫೆಬ್ರವರಿ 7 ರಿಂದ 11 ರವರೆಗೆ ಗೋಧ್ರಾ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ಗುಜರಾತ್ ಸರ್ಕಾರದ ಅಫಿಡವಿಟ್ ಪ್ರಕಾರ, ರಮೇಶ್ ಚಂದನಾ ಅವರು 2008ರಲ್ಲಿ ಸೆರೆವಾಸದಿಂದ 1,198 ದಿನಗಳವರೆಗೆ ಪೆರೋಲ್ ಮತ್ತು 378 ದಿನಗಳ ಫರ್ಲೋ ಅನುಭವಿಸಿದ್ದಾರೆ.

ಆಗಸ್ಟ್ 2022 ರಿಂದ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ 11 ಅಪರಾಧಿಗಳಿಗೆ, ಗುಜರಾತ್ ಸರ್ಕಾರವು 1992ರ ನೀತಿಗೆ ಅನುಗುಣವಾಗಿ ಅವರಿಂದ ಕ್ಷಮಾದಾನ ಅರ್ಜಿಗಳನ್ನು ಸ್ವೀಕರಿಸಿ, ತನ್ನ ವಿವೇಚನಾ ಅಧಿಕಾರವನ್ನು ಬಳಸಿ, ಜೈಲಿನಲ್ಲಿ ಅವರ ‘ಉತ್ತಮ ನಡತೆ’ಯನ್ನು ಪರಿಗಣಿಸಿ, ಅವರೆಲ್ಲರನ್ನು ಅವಧಿಗೆ ಮುನ್ನವೇ ಜೈಲಿನಿಂದ ಬಿಡುಗಡೆ ಮಾಡಿತು.

2002ರ ಪ್ರಕರಣದ ವಿಚಾರಣೆ ಮಹಾರಾಷ್ಟ್ರದಲ್ಲಿ ನಡೆದ ಕಾರಣ, ಅಪರಾಧಿಗಳಿಗೆ ಅವಧಿಪೂರ್ವ ಬಿಡುಗಡೆ ನೀಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಜನವರಿ 8 ರಂದು  ನೀಡಿದ ತೀರ್ಪು ಎಲ್ಲಾ 11 ಅಪರಾಧಿಗಳ ಬಿಡುಗಡೆಯನ್ನು ರದ್ದುಗೊಳಿಸಿತು.

14 ವರ್ಷಗಳ ಕಾಲ ಜೈಲಿನಲ್ಲಿದ್ದ ನಂತರ 2022ರಲ್ಲಿ ಸ್ವಾತಂತ್ರ್ಯ ದಿನದಂದು ಗೋಧ್ರಾ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾದ ಎಲ್ಲಾ ಅಪರಾಧಿಗಳನ್ನು ಎರಡು ವಾರಗಳಲ್ಲಿ ಜೈಲಿಗೆ ಹಿಂತಿರುಗುವಂತೆ ಸುಪ್ರೀಂ ಕೋರ್ಟ್ ಆದೇಶ ಮಾಡಿತು. ಅವರೆಲ್ಲರು ಜನವರಿ 21 ರಂದು ಗೋಧ್ರಾ ಜೈಲು ಅಧಿಕಾರಿಗಳ ಮುಂದೆ ಶರಣಾದರು.

ದೇಶ

ವಾರಣಾಸಿ: ‘ಸಣ್ಣ ಕುಶಲಕರ್ಮಿಗಳನ್ನು ಜನಪ್ರಿಯಗೊಳಿಸಲು ಸ್ಥಳೀಯ ಉತ್ಪನ್ನಗಳ ಪರವಾಗಿದ್ದೇನೆ. ಸಣ್ಣ ರೈತರು ಹಾಗೂ ಉದ್ಯಮಿಗಳ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ತಮ್ಮ ತವರು ಕ್ಷೇತ್ರ ವಾರಣಾಸಿಗೆ ಎರಡು ದಿನಗಳ ಪ್ರವಾಸವನ್ನು ಕೈಗೊಂಡಿದ್ದಾರೆ. ಬೆಳಗ್ಗೆ ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ, ನಂತರ ಸಂತ ಗುರು ರವಿದಾಸರ 647ನೇ ಜನ್ಮದಿನಾಚರಣೆ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ವಾರಣಾಸಿಯಲ್ಲಿ 13,000 ಕೋಟಿ ವೆಚ್ಚದ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದರು: ‘ವಾರಣಾಸಿಯಲ್ಲಿ ಕಳೆದ 10 ವರ್ಷಗಳಲ್ಲಿ ಬೆಳವಣಿಗೆ ಹಲವು ಪಟ್ಟು ಹೆಚ್ಚಾಗಿದೆ. ಈ ನಗರದ ಜನರ ಜೀವನಮಟ್ಟವನ್ನು ಹೆಚ್ಚಿಸಲು ನಾನು ಸಂಕಲ್ಪ ಮಾಡಿದ್ದೇನೆ.

ಸಣ್ಣ ಕುಶಲಕರ್ಮಿಗಳನ್ನು ಜನಪ್ರಿಯಗೊಳಿಸಲು ನಾನು ಸ್ಥಳೀಯ ಉತ್ಪನ್ನಗಳಿಗೆ ಧ್ವನಿ ನೀಡುತ್ತಿದ್ದೇನೆ. ಸಣ್ಣ ರೈತರು ಹಾಗೂ ಉದ್ಯಮಿಗಳ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮತ್ತು ಹೊಂದಾಣಿಕೆ ರಾಜಕಾರಣದಿಂದಾಗಿ ಉತ್ತರಪ್ರದೇಶ ಅಭಿವೃದ್ಧಿಯಲ್ಲಿ ಹಿಂದುಳಿದಿದೆ.

ಕಾಂಗ್ರೆಸ್ ಯುವರಾಜ, ಕಾಶಿ ಮತ್ತು ಉತ್ತರಪ್ರದೇಶ ಯುವಕರನ್ನು ಗುಲಾಮರು ಎಂದು ಕರೆಯುತ್ತಾರೆ. ಇದು ಯಾವ ರೀತಿಯ ವಿಮರ್ಶೆ? ಅವರು ಉತ್ತರಪ್ರದೇಶದ ಯುವಕರ ಮೇಲೆ ತಮ್ಮ ಹತಾಶೆಯನ್ನು ಹೊರಹಾಕುತ್ತಿದ್ದಾರೆ. ಆದರೆ ಯುವಕರು ತಮ್ಮದೇ ಆದ ರಾಜ್ಯವನ್ನು ಕಟ್ಟುತ್ತಿದ್ದಾರೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೇಶ

ಪಂಜಾಬ್: ರೈತರ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ, ದೆಹಲಿಯತ್ತ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್ ರೈತರನ್ನು ರಾಜ್ಯದ ಗಡಿಯಲ್ಲಿರುವ ಖನೌರಿ ಗಡಿಯಲ್ಲಿ ತಡೆದು ನಿಲ್ಲಿಸಲಾಗಿದೆ. ನಿನ್ನೆ, ರೈತರು ತಮ್ಮ ಪ್ರತಿಭಟನೆಯನ್ನು ಪುನರಾರಂಭಿಸಿದಾಗ, ಹರಿಯಾಣ ಪೊಲೀಸರು ರಬ್ಬರ್ ಬುಲೆಟ್‌ಗಳನ್ನು ಹಾರಿಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಆ ಸಮಯದಲ್ಲಿ ಪಂಜಾಬ್‌ನ 21 ವರ್ಷದ ರೈತ ಶುಭ ಕರಣ್ ಸಿಂಗ್ ಮೃತನಾದನು.

ಈ ಹಿನ್ನೆಲೆಯಲ್ಲಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು, ಮೃತ ರೈತ ಶುಭ ಕರಣ್ ಸಿಂಗ್ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಮತ್ತು ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ದೇಶ

ರೈತರ ಬೇಡಿಕೆಗಳನ್ನು ಪ್ರತಿಪಾದಿಸುವ ರೈತ ಸಂಘಟನೆಗಳ ಸಾಮಾಜಿಕ ಜಾಲತಾಣಗಳನ್ನು ಮತ್ತು ‘ಎಕ್ಸ್’ ಖಾತೆಗಳನ್ನು ನಿರ್ಬಂಧಿಸಲು ಬಿಜೆಪಿ ಸರ್ಕಾರ ಕಾನೂನು ಕ್ರಮ ಕೈಗೊಂಡಿದೆ ಎಂದು ಎಲಾನ್ ಮಸ್ಕ್ ಅವರ ‘ಎಕ್ಸ್’ ಕಂಪನಿ ಆರೋಪಿಸಿದೆ.

ಕೇಂದ್ರ ಸರಕಾರದ ಕೃಷಿ ವಿರೋಧಿ ನೀತಿಯ ಬಗ್ಗೆ ಜಗತ್ತಿನ ಜನತೆಗೆ ಅರಿವು ಮೂಡಿಸುವಲ್ಲಿ ಸಾಮಾಜಿಕ ಜಾಲತಾಣಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಅದರಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ಎಕ್ಸ್-ಜಾಲತಾಣ (twitter) ವಹಿಸುತ್ತಿದೆ.

ಅದರ ಆಧಾರದ ಮೇಲೆ, ರೈತ ಸಂಘಟನೆಗಳ ಪ್ರತಿನಿಧಿಗಳು, ಕೃಷಿ ತಜ್ಞರು ಮತ್ತು ಸಾರ್ವಜನಿಕರು ರೈತರ ಹೋರಾಟಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ‘ಎಕ್ಸ್’ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ರೈತರ ಹೋರಾಟಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹಂಚಿಕೊಂಡ ಪ್ರಮುಖ ಜಾಲತಾಣಗಳ ಖಾತೆಗಳನ್ನು ನಿರ್ಬಂಧಿಸಿದೆ.

ಈ ಬಗ್ಗೆ ‘ಎಕ್ಸ್’ ಗ್ರೂಪ್‌ನ ಅಧಿಕೃತ ಖಾತೆ ಗ್ಲೋಬಲ್ ಗವರ್ನಮೆಂಟ್ ಅಫೇರ್ಸ್ (Global Government Affairs) ಪ್ರಕಟಿಸಿದ ಪತ್ರಿಕಾ ಪ್ರಕಟಣೆಯಲ್ಲಿ, “ಒಂದು ನಿರ್ದಿಷ್ಟ ಘಟನೆಯ (ರೈತರ ಪ್ರತಿಭಟನೆ) ಕುರಿತು ಪೋಸ್ಟ್ ಮಾಡುವ ಎಲ್ಲಾ ಖಾತೆಗಳನ್ನು ನಿರ್ಬಂಧಿಸಲು ಭಾರತ ಸರ್ಕಾರವು ಕಾನೂನಾತ್ಮಕವಾಗಿ ವಿನಂತಿಸಿಕೊಂಡಿದೆ.

ಅವರ ಬೇಡಿಕೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿರುವುದರಿಂದ, ಅದರಲ್ಲಿ ನಮಗೆ ಒಪ್ಪಿಗೆಯಿಲ್ಲ. ಆದಾಗ್ಯೂ, ಅವರು ನಮ್ಮನ್ನು ಕಾನೂನಾತ್ಮಕವಾಗಿ ಸಂಪರ್ಕಿಸಿರುವುದರಿಂದ ನಾವು ಅದನ್ನು ನಿರಾಕರಿಸಲು ಸಾಧ್ಯವಿಲ್ಲ. ಅಲ್ಲದೆ, ಈ ಜಾಲತಾಣ ಖಾತೆಗಳ ನಿರ್ಬಂಧವನ್ನು ಭಾರತದಲ್ಲಿ ಮಾತ್ರ ಜಾರಿಗೊಳಿಸಲಾಗಿದೆ. ಇತರ ದೇಶಗಳಲ್ಲಿ ಈ ಖಾತೆಗಳ ಮೇಲೆ ಯಾವುದೇ ನಿಷೇಧವಿಲ್ಲ” ಎಂದು ಹೇಳಿದೆ.

ಈ ಮೂಲಕ ಕೇಂದ್ರ ಸರ್ಕಾರದ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ರಾಜಕಾರಣ ಭಾರತವನ್ನು ದಾಟಿ ಇಡೀ ಜಗತ್ತಿಗೆ ಬಹಿರಂಗವಾಗಿದೆ. ಇದುವರೆಗೆ ಜಗತ್ತಿನಾದ್ಯಂತ ಸುಮಾರು 30 ಲಕ್ಷ ಮಂದಿ ಈ ಪೋಸ್ಟ್ ನ್ನು ವೀಕ್ಷಿಸಿದ್ದಾರೆ. ‘ಮೋದಿಯವರ ಆಡಳಿತ ನೋಡಿ ಜಗತ್ತೇ ಬೆರಗಾಗುತ್ತಿದೆ’ ಎಂದು ಎರಡು ದಿನಗಳ ಹಿಂದೆ ಅಮಿತ್ ಶಾ ಹೇಳಿದ್ದನ್ನು ಸ್ಮರಿಸಬೇಕಿದೆ.

ದೇಶ

ಡಿ.ಸಿ.ಪ್ರಕಾಶ್ ಸಂಪಾದಕರು

ರಷ್ಯಾದಲ್ಲಿ ಕಟ್ಟಡದ ಸೆಕ್ಯುರಿಟಿ ಗಾರ್ಡ್‌ ಕೆಲಸ ಕೊಡಿಸುವುದಾಗಿ ನಂಬಿಸಿ ಏಜೆಂಟ್‌ಗಳ ಮೂಲಕ ಕರೆದೊಯ್ಯದ ಭಾರತೀಯರನ್ನು ಯುದ್ಧಭೂಮಿಗೆ ವರ್ಗಾಯಿಸಲಾಗುತ್ತಿದೆ ಎಂದು ಓವೈಸಿ ಆರೋಪಿಸಿದ್ದಾರೆ.

ಅಮೆರಿಕ ಸದಸ್ಯರಾಗಿರುವ ನ್ಯಾಟೋಗೆ ಸೇರುವ ಉಕ್ರೇನ್ ಪ್ರಸ್ತಾಪವನ್ನು ವಿರೋಧಿಸಿದ ರಷ್ಯಾ, ಅಧ್ಯಕ್ಷ ಪುಟಿನ್ ಅವರ ಆದೇಶದ ಮೇರೆಗೆ ಫೆಬ್ರವರಿ 24, 2022 ರಂದು ಉಕ್ರೇನ್ ಮೇಲಿನ ಯುದ್ಧ ಪ್ರಾರಂಭವಾಯಿತು. ಯುದ್ಧ ಪ್ರಾರಂಭವಾಗಿ ನಾಳೆಗೆ ಎರಡು ವರ್ಷ ಪೂರ್ಣಗೊಳ್ಳಲಿದೆ. ಆದರೂ ರಷ್ಯಾದ ದಾಳಿ, ಉಕ್ರೇನ್‌ನ ಪ್ರತಿರೋಧ ನಿರಂತರವಾಗಿದೆ. ಯುದ್ಧ ಪ್ರಾರಂಭವಾದಾಗಿನಿಂದ ಕನಿಷ್ಠ 3 ಲಕ್ಷದ 15 ಸಾವಿರ ಜನರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಗುಪ್ತಚರ ಇಲಾಖೆಯ ವರದಿಗಳು ಹೇಳುತ್ತವೆ.

ಆದಾಗ್ಯೂ, ಉಕ್ರೇನ್ ಸಂಪೂರ್ಣವಾಗಿ ರಷ್ಯಾಕ್ಕೆ ಶರಣಾದರೆ ಮಾತ್ರ ಪುಟಿನ್ ಯುದ್ಧವನ್ನು ನಿಲ್ಲಿಸುತ್ತಾರೆ ಎಂದು ಹೇಳಲಾಗುತ್ತದೆ. ಈ ಹಿನ್ನಲೆಯಲ್ಲಿ, ಉದ್ಯೋಗಕ್ಕಾಗಿ ಏಜೆಂಟ್‌ಗಳಿಂದ ರಷ್ಯಾಕ್ಕೆ ಕರೆದೊಯ್ಯಲ್ಪಟ್ಟ ಭಾರತೀಯರನ್ನು ಸೈನ್ಯಕ್ಕೆ ಸ್ವಯಂ ಸೇವಕರು ಎಂಬ ಹೆಸರಿನಲ್ಲಿ, ಆಯುಧಗಳನ್ನು ನಿರ್ವಹಿಸು ತರಬೇತಿ ನೀಡಿ, ಮಾರಿಯುಪೋಲ್, ಖಾರ್ಕಿವ್ ಮತ್ತು ಡೊನೆಟ್ಸ್ಕ್‌ನಲ್ಲಿ ಬಲವಂತಪಡಿಸಿ ಯುದ್ಧಭೂಮಿಗೆ ದೂಡಲಾಗುತ್ತಿದೆ ಎಂಬ ವರದಿಗಳಿವೆ.

ವ್ಲಾಡಿಮಿರ್‌ ಪುಟಿನ್‌

ಇದರಲ್ಲಿ, ವಿದೇಶದಲ್ಲಿ ಉದ್ಯೋಗ ಪಡೆಯುವುದು ಹೇಗೆ ಎಂಬ ವೀಡಿಯೋಗಳನ್ನು, ‘ಬಾಬಾ ವ್ಲಾಗ್ಸ್’ (Baba Vlogs) ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡುತ್ತಿರುವ ಫೈಸಲ್ ಖಾನ್ ಎಂಬಾತನೇ ಭಾರತೀಯರನ್ನು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಹಿನ್ನಲೆಯಲ್ಲಿ, ಎಐಎಂಐಎಂ (AIMIM) ನಾಯಕ ಮತ್ತು ಲೋಕಸಭಾ ಸದಸ್ಯ ಅಸಾದುದ್ದೀನ್ ಓವೈಸಿ, ಕೆಲಸದ ಹೆಸರಿನಲ್ಲಿ ರಷ್ಯಾಕ್ಕೆ ಕರೆದೊಯ್ಯಲಾದ ಭಾರತೀಯರನ್ನು ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಭಾಗವಹಿಸಲು ಕಡ್ಡಾಯಗೊಳಿಸಲಾಗುತ್ತಿದ್ದು, ಕೂಡಲೇ ಅವರನ್ನು ರಕ್ಷಿಸಿ ಅಲ್ಲಿಂದ ಕರೆತರಲು ನೆರವಾಗುವಂತೆ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಓವೈಸಿ, “ತೆಲಂಗಾಣ, ಗುಜರಾತ್, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶದಿಂದ ನಿರುದ್ಯೋಗಿ ಪುರುಷರನ್ನು ರಷ್ಯಾದಲ್ಲಿ ಕಟ್ಟಡ ಭದ್ರತಾ ಸಿಬ್ಬಂದಿಯ ಕೆಲಸ ಕೊಡಿಸುವುದಾಗಿ ನಂಬಿಸಿ, ಏಜೆಂಟ್‌ಗಳ ಮೂಲಕ ಕರೆದೊಯ್ಯಲಾಗಿದೆ. ಆದರೆ, ಅಲ್ಲಿ ಅವರನ್ನು ವಂಚಿಸಿ ಯುದ್ಧಭೂಮಿಗೆ ಕಳುಹಿಸಲಾಗಿದೆ.

ಅಸಾದುದ್ದೀನ್ ಓವೈಸಿ

ಅಲ್ಲಿ ಸಿಕ್ಕಿಬಿದ್ದವರಿಗೆ ಸಂಬಂಧಿಸಿದಂತೆ, ನನ್ನ ಬಳಿ ಸಹಾಯ ಕೇಳಿ ಬಂದ ಕುಟುಂಬಗಳನ್ನು ನಾನು ಕಳೆದ ಡಿಸೆಂಬರ್‌ನಲ್ಲಿ ಭೇಟಿಯಾದೆ. ಇದಾದ ಬಳಿಕ ಅಲ್ಲಿನ ಜನರನ್ನು ವಾಪಸ್ ಕರೆತರುವಂತೆ ವಿದೇಶಾಂಗ ಸಚಿವ ಜೈಶಂಕರ್ ಹಾಗೂ ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಅವರಿಗೆ ಪತ್ರ ಬರೆದಿದ್ದೇನೆ.

ದುಬೈನಲ್ಲಿರುವ ಫೈಸಲ್ ಖಾನ್, ಮುಂಬೈ ಮೂಲದ ಸುಫಿಯಾನ್ ಮತ್ತು ಭೋಜಾ ಎಂಬುವವರೊಂದಿಗೆ ಸೇರಿ ವಂಚಿಸಿದ್ದಾರೆ. ಅಲ್ಲಿ ಸಿಕ್ಕಿಬಿದ್ದು ಬಲವಂತವಾಗಿ ಯುದ್ಧಭೂಮಿಗೆ ದೂಡಲ್ಪಟ್ಟ ಒಬ್ಬ ಭಾರತೀಯನು ಸಾವನ್ನಪ್ಪಿದ್ದಾನೆ” ಎಂದು ಹೇಳಿದರು.

ಅಲ್ಲದೆ, ಜೈಶಂಕರ್‌ಗೆ ಓವೈಸಿ ಬರೆದಿರುವ ಪತ್ರದಲ್ಲಿ, “ಮೊಹಮ್ಮದ್ ಅಸ್ಫಾನ್, ಅರ್ಬಾಬ್ ಹುಸೇನ್ ಮತ್ತು ಜಹೂರ್ ಅಹ್ಮದ್ ಹೈದರಾಬಾದ್‌ಗೆ ಮರಳಲು ಸಹಾಯವನ್ನು ಎದುರು ನೋಡುತ್ತಿದ್ದಾರೆ. ಆದರೆ ಅವರನ್ನು ಭಾರತೀಯ ಏಜೆಂಟರು ದಾರಿ ತಪ್ಪಿಸಿ ಬಲವಂತವಾಗಿ ರಷ್ಯಾದ ಸೇನೆಗೆ ಸೇರಿಸಿದ್ದಾರೆ ಎಂಬ ಅಂಶವೂ ಬಹಿರಂಗವಾಗಿದೆ.

ವೊಲೊಡಿಮಿರ್ ಝೆಲೆನ್ಸ್ಕಿ

25 ದಿನಗಳಿಂದ ಅವರು ತಮ್ಮ ಕುಟುಂಬದವರನ್ನು ಸಂಪರ್ಕಿಸಿಲ್ಲ. ಅವರ ಕುಟುಂಬಗಳು ತುಂಬಾ ಚಿಂತಿತರಾಗಿದ್ದಾರೆ. ಅಲ್ಲದೆ, ಅವರ ಕುಟುಂಬದಲ್ಲಿ ಅವರೊಬ್ಬರೇ ಸಂಪಾದನೆ ಮಾಡುವವರಾಗಿದ್ದರು” ಎಂದು ನಮೂದಿಸಿದ್ದಾರೆ.

ಇದಕ್ಕೂ ಮೊದಲು, ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ವೀಡಿಯೊದಲ್ಲಿ, ಯುರೋಪಿಯನ್ ದೇಶಗಳ ಕೆಲಸದ ಪರವಾನಿಗೆ (Work Permit) ತನಗೆ ಸಿಕ್ಕಿರುವುದಾಗಿ ಹೇಳಿದ್ದ ಫೈಸಲ್ ಖಾನ್, ರಷ್ಯಾದ ಸೈನ್ಯದೊಂದಿಗೆ ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿದ್ದರು. ಮತ್ತೊಂದು ವೀಡಿಯೊದಲ್ಲಿ, ಏಳು ಜನರು ರಷ್ಯಾದಲ್ಲಿ ಕೆಲಸ ಮಾಡಲು ಅನುಮತಿ ಪಡೆದಿದ್ದಾರೆ ಎಂದು ಅವರು ಉಲ್ಲೇಖಿಸಿದ್ದರು ಎಂಬುದು ಗಮನಾರ್ಹ.   

ದೇಶ

ಬೆಂಗಳೂರು: ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ಫಾಲಿ ಎಸ್ ನಾರಿಮನ್ ಅವರ ನಿಧನದ ಸುದ್ದಿ ಕೇಳಿ ಆಘಾತವಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

“ದೇಶದ ಅತ್ಯಂತ ಶ್ರೇಷ್ಠ ನದಿ ನೀರಿನ ವಿವಾದ ತಜ್ಞರಾಗಿದ್ದ ನಾರಿಮನ್ ಅವರು ದಶಕಗಳ ಕಾಲ ಕರ್ನಾಟಕವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿನಿಧಿಸಿದ್ದರು. ಕೃಷ್ಞಾ, ಕಾವೇರಿ ನದಿಗಳ ಜಲಹಂಚಿಕೆ ವಿವಾದಗಳಲ್ಲಿ ಕರ್ನಾಟಕದ ರೈತರಿಗೆ ನ್ಯಾಯ ಸಿಕ್ಕಿದ್ದರೆ ಅದರಲ್ಲಿ ನಾರಿಮನ್ ಅವರ ದೊಡ್ಡ ಕೊಡುಗೆ ಇದೆ.

ಸುಪ್ರೀಂಕೋರ್ಟ್‌ನ ನ್ಯಾಯಪೀಠದ ಗೌರವಾದರಗಳಿಗೆ ಪಾತ್ರರಾಗಿದ್ದ ನಾರಿಮನ್ ಅವರಂತಹವರು ನ್ಯಾಯವಾದಿಯಾಗಿ ಸಿಕ್ಕಿದ್ದು ಕರ್ನಾಟಕದ ಪಾಲಿನ ಭಾಗ್ಯವಾಗಿತ್ತು. ವಕೀಲಿ ವೃತ್ತಿಯಿಂದ ಬಂದ ನನಗೆ ಅವರ ಬಗ್ಗೆ ವಿಶೇಷವಾದ ಅಭಿಮಾನ ಇತ್ತು.

ದೇಶದ ಖ್ಯಾತ ಮತ್ತು ಪ್ರತಿಭಾವಂತ ವಕೀಲರಾಗಿದ್ದ ನಾರಿಮನ್ ಅವರ ಜೊತೆಗೆ ನನ್ನದು ದೀರ್ಘಕಾಲದ ಒಡನಾಟ. ನೀರಾವರಿಗೆ ಸಂಬಂಧಿಸಿದ ಎಂತಹ ಜಟಿಲ ಸಮಸ್ಯೆಗಳು ಎದುರಾದರೂ ಉದ್ವೇಗಗೊಳ್ಳದೆ ಪರಿಹಾರದ ಕ್ರಮಗಳನ್ನು ಸೂಚಿಸುತ್ತಿದ್ದ ಅವರ ಕಸುಬುಗಾರಿಕೆ ಅನನ್ಯವಾದುದು.

ಆಂತರಿಕವಾದ ಸಭೆಯಲ್ಲಿ ಅವರು ನೀಡುತ್ತಿದ್ದ ಸಲಹೆಗಳು ಮತ್ತು ನ್ಯಾಯಾಲಯದಲ್ಲಿ ಮಂಡಿಸುತ್ತಿದ್ದ ವಾದಗಳಿಂದ ನೀರಾವರಿ ವಿಷಯದಲ್ಲಿ ನನ್ನ ಜ್ಞಾನವೃದ್ಧಿಯಾಗಿದೆ ಎನ್ನುವುದನ್ನು ಕೃತಜ್ಞತೆಯಿಂದ ನೆನಪು ಮಾಡಿಕೊಳ್ಳುತ್ತೇನೆ.

ನಾರಿಮನ್ ಅವರ ಅಗಲಿಕೆಯ ದು:ಖದಲ್ಲಿರುವ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು.‌ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಹೋಗಿ ಬನ್ನಿ ನಾರಿಮನ್ ಸಾಬ್, ಕನ್ನಡಿಗರ ಮನಸ್ಸಿನಲ್ಲಿ ನಿಮ್ಮ ನೆನಪು ಸದಾ ಹಸಿರಾಗಿರುತ್ತದೆ” ಎಂದು ಹೇಳಿದ್ದಾರೆ.

ದೇಶ

ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿಯೊಬ್ಬರು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ಹೋದಾಗ ನ್ಯಾಯಾಧೀಶರೇ ಲೈಂಗಿಕ ಕಿರುಕುಳ ನೀಡಿದ ಘಟನೆ ತೀವ್ರ ಆಘಾತವನ್ನುಂಟು ಮಾಡಿದೆ.!

ತ್ರಿಪುರಾ ರಾಜ್ಯದಲ್ಲಿ ನೆಲೆಸಿರುವ 26 ವರ್ಷದ ಯುವತಿಯೊಬ್ಬಳು ಮದುವೆಯಾಗಿ ತನ್ನ ಪತಿಯೊಂದಿಗೆ ವಾಸವಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ನಿಗೂಢ ವ್ಯಕ್ತಿಯೊಬ್ಬ ಆಕೆಯ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದನು. ಈ ಘಟನೆ ತೀವ್ರ ಆಘಾತವನ್ನುಂಟು ಮಾಡಿದ್ದರಿಂದ ಸಂತ್ರಸ್ತೆ ತನ್ನ ಪತಿಯ ಸಹಾಯದಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಂತೆ, ಫೆಬ್ರವರಿ 13 ರಂದು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಆ ಮಹಿಳೆ, ನ್ಯಾಯಾಧೀಶ ಬಿಶ್ವತೋಷ್ ಧರ್ (Bishwatosh Dhar) ಮುಂದೆ ಸಾಕ್ಷಿ ಹೇಳಲು ಹೋಗಿದ್ದಾರೆ. ಇದು ಲೈಂಗಿಕ ಪ್ರಕರಣವಾಗಿರುವುದರಿಂದ ನ್ಯಾಯಾಧೀಶರು ಪ್ರತ್ಯೇಕ ಕೊಠಡಿಯಲ್ಲಿ ಹೇಳಿಕೆ ತೆಗೆದುಕೊಳ್ಳುತ್ತಾರೆ. ಆ ಮೂಲಕ ನ್ಯಾಯಾಧೀಶರು ತಮ್ಮ ಖಾಸಗಿ ಕೋಣೆಯಲ್ಲಿ ಮಹಿಳೆಯಿಂದ ಹೇಳಿಕೆಯನ್ನು ಪಡೆಯಲು ಪ್ರಯತ್ನಿಸಿದ್ದಾರೆ.

ಬಳಿಕ ಕೊಠಡಿಯಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಹೊರಗೆ ಕಳುಹಿಸಿದ ನ್ಯಾಯಾಧೀಶರು, ವಿಚಾರಣೆಯ ಹೆಸರಿನಲ್ಲಿ ಆಸನದಿಂದ ಎಂದು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ತನ್ನ ಪತಿಗೆ ಘಟನೆಯ ಬಗ್ಗೆ ತಿಳಿಸಿದ್ದಾಳೆ.

ನಂತರ ಸಂತ್ರಸ್ತೆಯ ಪತಿ ಈ ಘಟನೆಗೆ ಸಂಬಂಧಿಸಿದಂತೆ ವಕೀಲರ ಸಂಘಕ್ಕೆ ಲಿಖಿತ ಪತ್ರ ನೀಡಿದ್ದಾರೆ. ಪ್ರಸ್ತುತ ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿಯೊಬ್ಬಳು ಹೇಳಿಕೆ ನೀಡಲು ಹೋದಾಗ, ನ್ಯಾಯಾಧೀಶರಿಂದಲೇ ಲೈಂಗಿಕ ಕಿರುಕುಳವನ್ನು ಅನುಭವಿಸಿದ ಘಟನೆ ಭಾರೀ ಆಘಾತವನ್ನುಂಟು ಮಾಡಿದೆ.

ದೇಶ

ನವದೆಹಲಿ: ರೈತರ ಪ್ರತಿಭಟನೆ ಕುರಿತು ಪೋಸ್ಟ್ ಮಾಡಿದ್ದ 177 ಸಾಮಾಜಿಕ ಮಾಧ್ಯಮ ಖಾತೆಗಳನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ನಿರ್ಬಂಧಿಸಿದೆ.

ಕೃಷಿ ಉತ್ಪನ್ನಗಳಿಗೆ ಶಾಸನಬದ್ಧ ಕನಿಷ್ಠ ಬೆಂಬಲ ಬೆಲೆ, ಸಾಲ ಮನ್ನಾ, ರೈತರ ಮೇಲಿನ ಮೊಕದ್ದಮೆ ಹಿಂಪಡೆಯುವುದು ಸೇರಿದಂತೆ ನಾನಾ ಬೇಡಿಕೆಗಳಿಗೆ ಒತ್ತು ನೀಡಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ರಾಜ್ಯಗಳ ರೈತರು ದೆಹಲಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.

ತರುವಾಯ ಕೇಂದ್ರ ಸರ್ಕಾರ ಹಾಗೂ ರೈತರೊಂದಿಗೆ ನಡೆಸಿದ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ. ನಾಳೆ (ಫೆಬ್ರವರಿ 21) ದೆಹಲಿ ಕಡೆಗೆ ರ‍್ಯಾಲಿಯನ್ನು ಪ್ರಾರಂಭಿಸುವುದಾಗಿ ರೈತ ಸಂಘಟನೆಗಳು ಘೋಷಿಸಿವೆ.

ಈ ಹಿನ್ನಲೆಯಲ್ಲಿ, ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ 42 ‘ಎಕ್ಸ್’ ಸಾಮಾಜಿಕ ಮಾಧ್ಯಮ ಖಾತೆಗಳಗಳು, 35 ಫೇಸ್‌ಬುಕ್‌ ಖಾತೆಗಳು ಮತ್ತು 14 ಇನ್‌ಸ್ಟಾಗ್ರಾಮ್ ಖಾತೆಗಳು ಸೇರಿದಂತೆ 177 ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂದಿಸಲಾಗಿದೆ.

ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿಯೂ ಈ ಆದೇಶ ಹೊರಡಿಸಲಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ದೇಶ

ಕೊಲ್ಕತ್ತ: ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಪಶ್ಚಿಮ ಬಂಗಾಳ ಸರ್ಕಾರ ನೀಡುತ್ತಿರುವ ಕಲ್ಯಾಣ ಯೋಜನೆಗಳನ್ನು ತಡೆಯಲು ಕೇಂದ್ರ ಸರ್ಕಾರ ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತರ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಈ ರೀತಿ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುತ್ತಿರುವ ಬಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ದೂರುಗಳು ಬಂದಿವೆ. ತಮ್ಮ ಸರ್ಕಾರದ ವಿವಿಧ ಸಮಾಜ ಕಲ್ಯಾಣ ಯೋಜನೆಗಳ ಲಾಭವನ್ನು ಸಾಮಾನ್ಯ ಜನರಿಗೆ ಸಿಗದಂತೆ ತಡೆಯಲು ಬಿಜೆಪಿಯು ರಾಜ್ಯದಲ್ಲಿ ಜನರ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಇಂದು ರಾಜ್ಯ ಸಚಿವಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಿದ್ದೇನೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆಗೆ ಮುನ್ನ ಅನೇಕ ಆಧಾರ್ ಕಾರ್ಡ್‌ಗಳನ್ನು ಏಕೆ ನಿಷ್ಕ್ರಿಯಗೊಳಿಸಲಾಯಿತು? ಬಹುತೇಕ ‘ಮಾಟುವಾ’ ಸಮುದಾಯದ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಎಸ್‌ಟಿ ಮತ್ತು ಅಲ್ಪಸಂಖ್ಯಾತರ ಕಾರ್ಡ್‌ಗಳನ್ನೂ ನಿಷ್ಕ್ರಿಯಗೊಳಿಸಲಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.