ಸನಾತನ ಕುರಿತು ಭಾಷಣ: ಬೆಂಗಳೂರು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದ ಉದಯನಿಧಿ ಸ್ಟಾಲಿನ್! » Dynamic Leader
October 22, 2024
ದೇಶ

ಸನಾತನ ಕುರಿತು ಭಾಷಣ: ಬೆಂಗಳೂರು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದ ಉದಯನಿಧಿ ಸ್ಟಾಲಿನ್!

ಬೆಂಗಳೂರು: ಸನಾತನ ಧರ್ಮ ಭಾಷಣದ ಆರೋಪಕ್ಕೆ ಸಂಬಂಧಿಸಿದಂತೆ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಇಂದು ಬೆಂಗಳೂರಿನ ಮೆಟ್ರೋಪಾಲಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸನಾತನ ವಿರೋಧಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದ ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಭಾರತದಾದ್ಯಂತ ಸಂಚಲನ ಮೂಡಿಸಿದ್ದರು. ‘ಸನಾತನ ಧರ್ಮ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಹಾಗಾಗಿ ಸನಾತನ ಧರ್ಮವನ್ನು ತೊಲಗಿಸಬೇಕು’ ಎಂದು ಉದಯನಿಧಿ ಸ್ಟಾಲಿನ್ ಮಾಡಿದ ಭಾಷಣವನ್ನು ಬಿಜೆಪಿ ಮತ್ತು ಬಲಪಂಥೀಯರು ತೀವ್ರವಾಗಿ ಖಂಡಿಸಿದ್ದರು ಮತ್ತು ಪ್ರತಿಭಟನೆಗಳನ್ನು ಸಹ ನಡೆಸಿದ್ದರು. ಈ ಬಗ್ಗೆ ಸ್ವತಃ ಪ್ರಧಾನಿ ಮೋದಿಯವರೇ ತಮ್ಮ ಸಂಪುಟದ ಸಚಿವರೊಂದಿಗೆ ಮಾತನಾಡಿದ್ದರು.

ಅಲ್ಲದೆ, ಸನಾತನ ಧರ್ಮದ ಕುರಿತು ಉದಯನಿಧಿ ಅವರ ಭಾಷಣದ ವಿರುದ್ಧ ನ್ಯಾಯಾಲಯಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದವು. ಆ ಮೂಲಕ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಪರಮೇಶ್ವರ್ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ನ್ಯಾಯಾಲಯ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಅಲ್ಲದೇ ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ ಉದಯನಿಧಿ, ಇಂದು ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರಾದರು.

ಉದಯನಿಧಿ ಕಡೆಯಿಂದ ಸನಾತನ ಭಾಷಣಕ್ಕೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಕ್ರೋಢೀಕರಿಸಿ ಒಂದೇ ಸ್ಥಳದಲ್ಲಿ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಪ್ರಕರಣದ ವಿಚಾರಣೆ ಬಾಕಿ ಇದೆ. ಈ ಬಗ್ಗೆ ದೂರುದಾರರು ಉತ್ತರ ನೀಡಬೇಕಾಗಿದೆ ಹೀಗಾಗಿ ವಿಚಾರಣೆಯನ್ನು ಮುಂದೂಡಬೇಕು ಎಂದು ಮನವಿ ಮಾಡಿದರು.

ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಆಗಸ್ಟ್ 8ಕ್ಕೆ ಮುಂದೂಡಿದರು. ಈ ಪ್ರಕರಣದಲ್ಲಿ ಉದಯನಿಧಿ ಸ್ಟಾಲಿನ್‌ಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಧೀಶರು 1 ಲಕ್ಷ ರೂಪಾಯಿ ಬಾಂಡ್ ಪಾವತಿಸುವಂತೆ ಆದೇಶಿಸಿದ್ದಾರೆ.

Related Posts